Wednesday, December 31, 2008

ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !

ಮಣಿ ಹೊಸದಾಗಿ ದಿನಪತ್ರಿಕೆ ವಿತರಣೆಯ ಏಜೆನ್ಸಿ ಕೊಂಡಿದ್ದನಾದ್ದರಿಂದ ಅವನಿಗೆ ಈ ಕೆಲಸ ಹೊಸತು. ಜೊತೆಗೆ ತುಂಬು ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಅವನು ಇಬ್ಬರು ಹುಡುಗರನ್ನು ತನ್ನ ವಿತರಣೆಯ ಕೆಲಸಕ್ಕೆ ಇಟ್ಟುಕೊಂಡಿದ್ದ. ಪ್ರತಿದಿನ ಹುಡುಗರ ಜೊತೆಯೇ ಬರುತ್ತಿದ್ದನು.


ಮೊದಲು ಟೈಮ್ಸ್ ಪತ್ರಿಕೆಯ ನೂರರ ಬಂಡಲ್ಲುಗಳನ್ನು ಹಾಗೂ ಅದರ ಸಪ್ಲಿಮೆಂಟರಿಗಳನ್ನು ತಂದು ಫುಟ್ ಪಾತಿನ ಒಂದು ಮೂಲೆಯಲ್ಲಿ ಇಟ್ಟು ತನ್ನ ಹುಡುಗರಿಗೆ ಆ ಸಪ್ಲಿಮೆಂಟರಿಗಳನ್ನು ಮೈನ್ ಶೀಟಿಗೆ ಸೇರಿಸಲು ಹೇಳಿ ಸ್ವಲ್ಪದೂರದಲ್ಲಿ ಇದ್ದ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಗ್ರೂಪಿನ ಪತ್ರಿಕೆಗಳನ್ನು ತರಲು ಹೋಗಿದ್ದ.


ಸಪ್ಲಿಮೆಂಟರಿ ಹಾಕುತ್ತಿದ್ದ ಹುಡುಗರು ಪಾಂಪ್ಲೆಟ್ಸ್ ಬಂದಿದೆ ಎಂದು ಯಾರೋ ಕೂಗಿದ್ದರಿಂದ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಆ ಕಡೆ ಓಡಿದರು.[ನಮ್ಮ ಹುಡುಗರಿಗೆ ಸಪ್ಲಿಮೆಂಟರಿ ಹಾಕುವುದಕ್ಕಿಂತ ಈ ರೀತಿ ಪಾಂಪ್ಲೆಟ್ಸ್ ಹಾಕುವುದಕ್ಕೆ ಇಷ್ಟ. ಇವನ್ನು ನೂರು ಪತ್ರಿಕೆಗಳಿಗೆ ಸೇರಿಸಿದರೆ ೧೦-೧೫ ರೂಪಾಯಿ ಕೊಡುತ್ತಾರೆ. ಆ ಕಾರಣಕ್ಕಾಗೆ ನಮ್ಮ ಬೀಟ್ ಹುಡುಗರಿಗೆ ಈ ಪಾಂಪ್ಲೆಟ್ಟಿನ ಮೇಲೆ ವಿಶೇಷ ಒಲವು].


ಅದುವರೆಗೂ ಎಲ್ಲಿತ್ತೋ ಆ ನಾಯಿ, ಎಲ್ಲಿ ಕುಳಿತು ಕಾಯುತ್ತಿತ್ತೋ, ಮತ್ತೆ ಎಷ್ಟು ಹೊತ್ತಿನಿಂದ ತಡೆದುಕೊಂಡು ಕುಂತಿತ್ತೋ ಮಣಿ ತಂದಿರಿಸಿದ್ದ ಅನಾಥವಾಗಿ ಪುಟ್ ಪಾತ್ ಮೇಲೆ ಬಿದ್ದಿದ್ದ ಟೈಮ್ಸ್ ಪತ್ರಿಕೆಯ ಸಪ್ಲಿಮೆಂಟರಿಗಳ ಮೇಲೆ ತನ್ನ ಹಿಂದಿನ ಒಂದು ಕಾಲೆತ್ತಿ ಮೂತ್ರವನ್ನು ಸುರಿಸಿಯೇ ಬಿಟ್ಟಿತ್ತು. ಮರುಕ್ಷಣದಲ್ಲಿ ದೂರದಲ್ಲಿ ಹೋಗಿ ಮರೆಯಾಗಿ ಯಾರಿಗೂ ಕಾಣದ ಹಾಗೆ ಕುಳಿತುಕೊಂಡುಬಿಟ್ಟಿತು.

[ಶಿವು ರಚಿಸಿದ ಮೊದಲ ರೇಖಾ ಚಿತ್ರ]

ಬೇರೆ ದಿನಪತ್ರಿಕೆ ತರಲು ಹೋಗಿದ್ದ ಮಣಿ ತಂದಿದ್ದ ಪೇಪರುಗಳನ್ನು ಕೆಳಗಿಟ್ಟು ಕೂತ. ಆ ಕತ್ತಲಲ್ಲಿ ಮೂಗಿಗೆ ಕೆಟ್ಟ ಮೂತ್ರದ ವಾಸನೆ ಬಡಿಯಿತು. "ಯಾರೋ ಬೋಳಿಮಗ ನಾವು ಇಲ್ಲಿ ಕೂತುಕೊಳ್ಳೋ ಜಾಗದಲ್ಲೇ ಗಲೀಜು ಮಾಡಿದ್ದಾನೆ" ಅಂತ ಬೈಯ್ಯುತ್ತಾ ಪಕ್ಕದಲ್ಲಿ ಕುಳಿತುಕೊಂಡ.


ತಕ್ಷಣ ಅವನಿಗನ್ನಿಸಿದೇನೆಂದರೆ ಈಗ್ಗೆ ೧೦ ನಿಮಿಷದ ಹಿಂದೆ ಬಂದಾಗ ಇಲ್ಲಿ ಯಾವ ಕೆಟ್ಟವಾಸನೆಯೂ ಇರಲಿಲ್ಲ. ಆದರೆ ಈಗ ನೋಡಿದರೆ ಈ ದರಿದ್ರ ಮೂತ್ರದ ವಾಸನೆ ಬರುತ್ತಿದೆಯಲ್ಲ.! ಅನ್ನುತ್ತಾ ಆ ಕತ್ತಲೆಯಲ್ಲೇ ಟೈಮ್ಸ್ ಪತ್ರಿಕೆಗೆ ಸಪ್ಲಿಮೆಂಟರಿ ಹಾಕಲು ಕೈಯಿಟ್ಟ! ಕೈಗೆ ದ್ರವರೂಪದ ಸ್ವಲ್ಪ ಆಂಟಾದ ನೀರು ಕೈಗೆ ತಾಗಿ ಅಸಹ್ಯವೆನಿಸಿತ್ತು.

[ಪ್ರಮೋದ್ ರಚಿಸಿದ ರೇಖಾ ಚಿತ್ರ]

ಇದು ಯಾರ ಕೆಲಸವೆಂದು ಅವನಿಗೆ ಗೊತ್ತಾಯಿತು.[ನಾಯಿಗಳು ಹಾಗಾಗ ಎಲ್ಲಾ ದಿನಪತ್ರಿಕೆ ವಿತರಣೆಯ ಸ್ಥಳಗಳಲ್ಲೂ ಈ ರೀತಿ ತಮ್ಮ ಪ್ರಸಾದ ಹಾಕಿ ಹೋಗುತ್ತಿರುತ್ತವೆ.] ಸುತ್ತಲು ನೋಡಿದ ಯಾವ ನಾಯಿಯೂ ಕಾಣಲಿಲ್ಲ.

"ಥೂ ಸೂಳೆಮಗಂದು ನಾಯಿ, ನನ್ನ ಪೇಪರುಗಳೇ ಬೇಕಾಗಿತ್ತ ಇದಕ್ಕೆ, ಸಿಕ್ಕಲಿ ನನಮಗಂದು ಕೈ ಕಾಲು ಮುರಿದುಹಾಕ್ತೀನಿ ಎಂದು ಜೋರಾಗಿ ಬೈಯ್ಯುತ್ತಾ ಸುತ್ತಮುತ್ತ ನೋಡಿದ. ಇನ್ನು ಬೆಳಕಾಗಿಲ್ಲವಾದ್ದರಿಂದ ಅವನ ಕಣ್ಣಿಗೆ ಆ ನಾಯಿ ಕಾಣಿಸಲಿಲ್ಲ.


ಸುತ್ತಲು ನೋಡಿದ! ತನ್ನ ಇಬ್ಬರು ಬೀಟ್ ಹುಡುಗರು ಕಾಣಿಸಲಿಲ್ಲ. ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ ಎನ್ನುವ ಹಾಗೆ ಮೂತ್ರ ಮಾಡಿದ ನಾಯಿಯ ಮೇಲಿನ ಕೋಪ ತನ್ನ ಬೀಟ್ ಹುಡುಗರ ಕಡೆ ತಿರುಗಿತ್ತು. ಆ ರೀತಿ ಆಗಲು ಕಾರಣವೂ ಇದೆ. ಆ ಹುಡುಗರು ಇಲ್ಲಿಯೇ ಇದ್ದು ನೋಡಿಕೊಂಡಿದ್ದರೇ ಆ ನಾಯಿ ಈಗೆ ಪೇಪರ್ ಮೇಲೆ ಗಲೀಜು ಮಾಡಿ ಹೋಗಲು ಸಾಧ್ಯವಿರಲಿಲ್ಲ.


ಆಷ್ಟರಲ್ಲಿ ಕೈ ತುಂಬಾ ಪಾಂಪ್ಲೆಟ್ಸ್ ಹಿಡಿದುಕೊಂಡು ಖುಷಿಯಿಂದ ಬರುತ್ತಿದ್ದ ಹುಡುಗರು ಕಾಣಿಸಿದರು.


"ಲ್ರೋ ಹೋಗಿದ್ರಿ?"


"ಅಣ್ಣಾ ಅಲ್ಲಿ ಪಾಂಪ್ಲೇಟ್ಸ್ ಕೊಡ್ತಾ ಇದ್ರು, ನಾವು ತಗೊಂಡು ಬರೋಣ ಅಂತ ಹೋಗಿದ್ವಿ".


"ನಿಮ್ಮ ಮುಂಡಾ ಮೋಚ್ತು, ಆ ಪಾಂಪ್ಲೆಟ್ಸ್ ಮನೆ ಹಾಳಾಗ, ನೋಡ್ರೋ ಇಲ್ಲಿ ಏನಾಯ್ತು ಅಂತ, ಟೈಮ್ಸ್ ಸಪ್ಲಿಮೆಂಟರಿ ಮೇಲೆಲ್ಲಾ ಯಾವುದೋ ನಾಯಿ ಉಚ್ಚೇ ಉಯ್ದು ಹೋಗಿದೆಯಲ್ರೋ, ನೀವು ಇಲ್ಲಿದ್ದು ಈ ಸಪ್ಲಿಮೆಂಟರಿ ಹಾಕ್ಕೊಂಡು ಕೂತಿದ್ರೆ, ಆ ನಾಯಿ ಇಲ್ಲಿಗೆ ಬಂದು ಈ ರೀತಿ ಮಾಡ್ತಿತ್ತೇನ್ರೋ? ನೋಡ್ರೋ ಈಗ ಏನು ಮಾಡೋದು ಇದನ್ನ ಹೇಗೋ ಮನೆಗಳಿಗೆ ಕಳಿಸೋದು?"


ಮಣಿ ಕೋಪದಿಂದ ಒಂದೇ ಸಮನೆ ಬೈಯ್ಯುತ್ತಿದ್ದ.


ತಮ್ಮ ಓನರ್ ತಮ್ಮನ್ನು ಉದ್ದೇಶಿಸಿ ಬೈಯ್ಯುತ್ತಿರುವುದು ಗೊತ್ತಾದರೂ, ಅದಕ್ಕೆ ಕಾರಣ ತಿಳಿದು ಆ ಇಬ್ಬರು ಹುಡುಗರಿಗೂ ನಗು ಬಂತು. ಆದರೆ ನಗುವಂತಿಲ್ಲ. ಮೊದಲೇ ಚಿಕ್ಕ ಹುಡುಗರು ಇನ್ನೂ ವಯಸ್ಸು ಹದಿನೈದು ದಾಟಿರಲಿಲ್ಲ, ಹುಡುಗುಬುದ್ಧಿ. ಈ ರೀತಿ ನಾಯಿ ದಿನಪತ್ರಿಕೆ ಮೇಲೆ ಉಚ್ಚೆ ಉಯ್ದು ಹೋಗಿದೆ ಇನ್ನುವುದು ಒಂದು ತಮಾಷೆ! ಅಂತದ್ದರಲ್ಲಿ ಈ ಹುಡುಗರನ್ನು ಕೇಳಬೇಕೆ! ನಗು ಹೊಟ್ಟೆಯೊಳಗಿಂದ ಒತ್ತರಿಸಿಕೊಂಡಿ ನುಗ್ಗು ಬಂದಾಗಲೂ ತಡೆದುಕೊಳ್ಳಲಿಕ್ಕೆ ಸಾಧ್ಯವೇ?

ಮಣಿ ಬೈಯ್ಯುತ್ತಿದ್ದರೂ ಕೂಡ ಆ ಹುಡುಗರಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಜೋರಾಗಿ ನಗಲಾರಂಭಿಸಿದರು.

ನಾನು ಬೈಯ್ಯುತ್ತಿದ್ದರೂ ನನ್ನ ಮಾತಿಗೆ ಬೆಲೆ ಕೊಡದೆ ನಗುತ್ತಿದ್ದಾರಲ್ಲ, ಮಣಿಗೆ ಮತ್ತಷ್ಟು ಸಿಟ್ಟು ಬಂತು.


"ತೊಲಗ್ರೋ, ನನ್ನ ಕಣ್ಣ ಮುಂದೆ ನಿಲ್ಲಬೇಡಿ" ಎಂದ. ಅವನ ಕೋಪವಿನ್ನು ಕಡಿಮೆಯಾಗಿರಲಿಲ್ಲ.


ಮರುಕ್ಷಣವೇ ಆ ಇಬ್ಬರೂ ಹುಡುಗರು ಕಣ್ಣಂಚಿನಲ್ಲೆ ಮಾತಾಡಿಕೊಂಡರು. ಇನ್ನು ಇಲ್ಲೇ ಇದ್ದರೇ ನಮಗೆ ಮತ್ತಷ್ಟು ಮಂಗಳಾರತಿ ಗ್ಯಾರಂಟಿ ಎಂದುಕೊಂಡು ಅವನ ಕಣ್ಣಿಂದ ಕೂಡಲೇ ಮರೆಯಾದರು.

ಮಣಿಯ ಕೋಪ ನಿದಾನವಾಗಿ ಕಡಿಮೆಯಾಯಿತು. ನಿದಾನವಾಗಿ ನಡೆದ ಘಟನೆಯನ್ನೆಲ್ಲಾ ಮತ್ತೊಮ್ಮೆ ಮೆಲುಕುಹಾಕಿದ. ನಾನು ಹುಡುಗರಿಗೆ ಬೈಯ್ದಿದ್ದು ತಪ್ಪೆಂದು ಅವನಿಗೆ ಅನಿಸಿತ್ತು. ಈ ನಾಯಿ ಹೀಗೆ ಮಾಡುತ್ತದೆ ಅಂತ ಅವರಿಗೇನು ಗೊತ್ತು? ಗೊತ್ತಿದ್ದರೇ ಈ ರೀತಿ ಬಿಟ್ಟುಹೋಗುತ್ತಿರಲಿಲ್ಲವಲ್ಲ ಎಂದುಕೊಂಡ.

ಇದು ನನಗಾಗದೆ ಬೇರೆಯವರಿಗೆ ಆಗಿದ್ದರೆ ಅಂದುಕೊಂಡ. ಅವನ ಸಿಟ್ಟೆಲ್ಲಾ ಮಾಯವಾಗಿ ನಗುಬಂತು. ತನ್ನ ಹುಡುಗರು ನಗುತ್ತಿದ್ದುದ್ದು ನಿನಪಾಗಿ ಮತ್ತಷ್ಟು ನಗು ಬಂತು. ದೂರದಿಂದ ನಿಂತು ನೋಡುತ್ತಿದ್ದ ಹುಡುಗರು ಈಗ ತನ್ನ ಓನರ್ ಕೋಪ ಇಳಿದಿರಬಹುದೆಂದುಕೊಂಡು ನಿದಾನವಾಗಿ ಮಣಿ ಬಳಿ ಬಂದು ಸಪ್ಲಿಮೆಂಟರಿ ಹಾಗೂ ಪಾಂಪ್ಲೆಟ್ಸ್ ಹಾಕತೊಡಗಿದರು.


ಮಣಿಯ ಇಬ್ಬರು ಹುಡುಗರಲ್ಲಿ ಒಬ್ಬನ ಹೆಸರು ವೇಲು. ಮತ್ತೊಬ್ಬನ ಹೆಸರು ವೇಡಿ. ವೇಡಿಯಂತೂ ಮಹಾನ್ ತರಲೇ. ಒಳ್ಳೇ ಕೆಲಸಗಾರನಾದರೂ ಏನಾದರೂ ತರಲೇ ಮಾತಾಡದಿದ್ದರೆ ಅವನಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಅದರಲ್ಲೂ ಇಂಥ ಘಟನೆಗಳು ಆದಾಗ ಬಿಡುತ್ತಾನೆಯೇ? !


ತನ್ನ ಓನರ್ ಮುಖ ನೋಡಿದ. ಮಣಿ ನಗುತ್ತಿರುವುದು ಕಾಣಿಸಿತ್ತು.

"ಅಣ್ಣಾ ನಾನೊಂದು ಮಾತು ಹೇಳಲಾ" ವೇಡಿ ಕೇಳಿದ.

"ಹೂ ಹೇಳು: ಮಣಿ ಅವನೆಡೆಗೆ ತಿರಸ್ಕಾರ ನೋಟದಿಂದ.

" ನೀನು ಮತ್ತೇ ಬಯ್ಯಲ್ಲಾ ಅಂತಂದ್ರೇ ಹೇಳ್ತೀನಿ"

ಮಣಿ ಮತ್ತೊಮ್ಮೆ ಅವನ ಮುಖವನ್ನು ನೋಡಿದ ಈ ಬಾರಿ ಬೈಯಬೇಕೆನಿಸಲಿಲ್ಲ.

"ಸರಿ ಬೈಯ್ಯಲ್ಲ ಹೇಳು"

ನಾವು ಸಂಬಳ ಕೇಳಿದಾಗಲೆಲ್ಲಾ ಸರಿಯಾಗಿ ಕಲೆಕ್ಷನ್ ಆಗಿಲ್ಲ, ಆ ಗಿರಾಕಿ ಕೊಟ್ಟಿಲ್ಲ, ಈ ಗಿರಾಕಿ ಕೊಟ್ಟಿಲ್ಲಾ ಅಂತಾ ಹೇಳ್ತಿರುತ್ತೀಯಲ್ಲವಾ?


" ಹೌದು. ಕೆಲವರಿರುತ್ತಾರೆ, ನಾವು ಇಷ್ಟು ಬೇಗ ಎದ್ದು ಹೀಗೆ ಕಷ್ಟಪಟ್ಟು ಚಳಿಯಲ್ಲಿ ಕೆಲಸಮಾದಿ ಬೆಳಿಗ್ಗೆ ೬ ಗಂಟೆಗೆ ೬-೩೦ರ ಒಳಗೆ ಅವರಿಗೆ ಪೇಪರ್ ಹಾಕಿಸಿದ್ರೂ, ಹಣ ವಸೂಲಿಗೆ ಹೋದ್ರೆ, " ಈಗ ಬಾ ಆಗ ಬಾ. ನಾಳೆ ಬಾ, ಸ್ನಾನ ಮಾಡ್ತೀದ್ದಾರೆ, ಪೂಜೆ ಆಗ್ತಿದೆ, ಟಾಯ್ಲೆಟ್ಟಿನಲ್ಲಿದ್ದಾರೆ ಅಂತ ಹತ್ತಾರು ಕಾರಣ ಹೇಳಿ ಕೇವಲ ನೂರಕ್ಕೂ ಕಡಿಮೆ ಹಣಕ್ಕೆ ಐದಾರು ಸಲ ಹೋಗಬೇಕು, ನಮ್ಮ ಬಗ್ಗೆ ಅವರು ಯೋಚನೆಯನ್ನೇ ಮಾಡೊಲ್ಲ, ಕೆಲವರು ತುಂಬಾ ಬೇಜಾರು ಮಾಡಿಬಿಡುತ್ತಾರೆ.

"ಅಣ್ಣಾ ಆಂತ ಕಷ್ಟಮರುಗಳು ಯಾರ್ಯಾರು ಹೇಳಿ"

"ಯಾಕೊ"

ಈ ನಾಯಿ ಉಚ್ಚೆ ಉಯ್ದಿರುವ ಸಪ್ಲಿಮೆಂಟರಿಗಳನ್ನು ಮೈನ್ ಸೀಟಿನಲ್ಲಿ ಹಾಕಿ ಅಂತವರ ಮನೆಗಳಿಗೆಲ್ಲಾ ಹಾಕಿಬಿಡೋಣ. ಆಗ ಅವರಿಗೆ ಬುದ್ದಿ ಬರುತ್ತೇ ಅಲ್ವ" ನಗುತ್ತಾ ಹೇಳಿದ.

ಹೌದು ಕಣೋ ಹಾಗೆ ಮಾಡಬೇಕು" ವೇಡಿಯ ಮಾತನ್ನು ವೇಲು ಸಮರ್ಥಿಸಿದ.

ಅವರ ಮಾತನ್ನು ಕೇಳಿ ಮಣಿಗೆ ನಗು ಬಂತು. ಇವರು ಹೇಳುವುದು ಸರಿಯಷ್ಟೇ. ಕೆಲವೊಂದು ಗಿರಾಕಿಗಳ ಮೇಲೆ ನಮಗೆ ಭಯಂಕರ ಸಿಟ್ಟು ಬಂದು ಬಿಡುತ್ತದೆ. ಅವರು ತಿಂಗಳಿಗೊಮ್ಮೆ ಕೊಡುವ ಹಣದಲ್ಲಿಯೇ ನಮ್ಮ ಜೀವನ ನಡೆಯುವುದು, ನಮ್ಮ ಬೀಟಿನ ಹುಡುಗರ ಸಂಬಳ ಕೊಡಲಿಕ್ಕಾಗುವುದು.


ನಮ್ಮ ಕಷ್ಟದ ಅರಿವಿಲ್ಲದೇ ಈ ರೀತಿ ಸತಾಯಿಸುವ ಗಿರಾಕಿಗಳಿಗೆ ಇಂಥ ಪೇಪರ್ ಕೊಡುವುದು ತಪ್ಪೇನಿಲ್ಲವೆಂದು ಅವನಿಗೂ ಅನ್ನಿಸಿದರೂ, ಮರುಕ್ಷಣವೇ ಛೇ ನಾನು ಆ ರೀತಿ ಯೋಚಿಸಬಾರದು, ನಮ್ಮ ಗ್ರಾಹಕರು ಎಂಥವರೇ ಆಗಿರಲಿ, ಅವರು ದೇವರಿದ್ದ ಹಾಗೆ, ದಿನಪತ್ರಿಕೆಯನ್ನು ಅವ್ರು ಕೊಂಡು ಓದದೇ ಇದ್ದಿದ್ದಿರೇ ನಮಗೆ ಈ ಪತ್ರಿಕೆ ಹಂಚುವ ಕೆಲಸವೇ ಸಿಗುತ್ತಿರಲಿಲ್ಲ. ಆ ಕೆಲಸದಿಂದಾಗಿಯೇ ನಮ್ಮ ಜೀವನ ಈಗ ತಕ್ಕ ಮಟ್ಟಿಗೆ ನಡೆಯುತ್ತಿದೆಯಲ್ಲ ಎಂದು ಮಣಿಗೆ ಅನಿಸಿತೇನೋ?

" ಲೋ ವೇಡಿ, ನೋಡೊ ಇಲ್ಲಿ ನಾವು ಆಗೆಲ್ಲಾ ಮಾಡಬಾರದು. ಅವ್ರು ನಮಗೆ ದೇವರಿದ್ದ ಹಾಗೆ. ಅವರ ಮನೆಗೆ ನೀನು ಪೇಪರ್ ಹಾಕುತ್ತಿಯಲ್ಲವ ಅದನ್ನು ಖುಷಿಯಿಂದ ಓದಿ, ನಾನು ಹಣ ವಸೂಲಿಗೆ ಹೋದಾಗ ಅವರು ಖುಷಿಯಿಂದ ಹಣಕೊಡುತ್ತಾರೆ. ಆದೇ ಖುಷಿಯಿಂದಲೇ ನಾನು ನಿನಗೆ ಸಂಬಳ ಕೊಡಲಿಕ್ಕೆ ಸಾಧ್ಯ! ಅದರ ಬದಲು ಈ ಗಲೀಜು ಪೇಪರ್ ಅವರಿಗೆ ಹಾಕಿದರೆ, ಅವರಿಗೆ ಗೊತ್ತಾಗದಿದ್ದರೂ, ನಮ್ಮಲ್ಲಿ ಒಂದು ರೀತಿ ಅಪರಾಧಿ ಮನೋಭಾವನೆ ಬಂದುಬಿಡುತ್ತದೆ, ಆಲ್ವೇ? ಎಂದು ಬುದ್ದಿವಾದ ಹೇಳಿದ ಮಣಿ,


" ನೋಡು ಆದಷ್ಟು ಪೇಪರನ್ನು ಬಿಸಾಡಿ ಬೇರೆ ಪೇಪರ್ ತಗೊಂಡು ಬಾ ಹೋಗು. ತಗೋ ದುಡ್ಡು ಎಂದು ಜೇಬಿನಿಂದ ದುಡ್ಡು ಕೊಟ್ಟು ಕಳಿಸಿದ. ಅವತ್ತು ನಾಯಿಯಿಂದಾಗಿ ಅಂದಾಜು ನೂರು ರೂಪಾಯಿ ಮಣಿಯ ಜೇಬಿನಿಂದ ಕೈ ಬಿಟ್ಟಿತ್ತು.


ಮರುದಿನವೂ ಮಣಿಯ ದುರಾದೃಷ್ಟಕ್ಕೇ ಆ ನಾಯಿ ಎಲ್ಲಿತ್ತೋ? ಅವರು ಯಾರು ಇಲ್ಲದಾಗ ಮತ್ತೆ ಉಚ್ಚೇ ಉಯ್ದು ಹೋಗಿತ್ತು. ಅ ನಂತರ ಮಾಯವಾಗಿಬಿಡುತ್ತಿತ್ತು ಆ ನಾಯಿ. ಈ ನಾಯಿಯ ಕಾರ್ಯಕ್ರಮ ಆಗಾಗ್ಗೆ ಮಣಿಯ ಪೇಪರಿನ ಮೇಲೆ ಆಗುತಿದ್ದರಿಂದ ಒಂದು ದಿನ ಮಣಿ ಮತ್ತು ಅವನ ಹುಡುಗರು ಕೈಗೆ ಸಿಕ್ಕಿದ ಕಲ್ಲು ಮತ್ತು ಇಟ್ಟಿಗೆ ಚೂರುಗಳನ್ನು ಹಿಡಿದು ಮರೆಯಲ್ಲಿ ಕಾಯುತ್ತಿದ್ದರು.


ಮತ್ತೇ ಬಂತಲ್ಲ ಅದೇ ನಾಯಿ! ತನ್ನ ಹಿಂದಿನ ಕಾಲೆತ್ತಿ ಇನ್ನೇನು ತನ್ನ ಜಲಭಾದೆ ತೀರಿಸಬೇಕು! ಅಷ್ಟರಲ್ಲಿ ವೇಡಿ "ಆಣ್ಣ ಬಂತು ನೋಡು ಎಂದು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಅದರೆಡೆಗೆ ಗುರಿಯಿಟ್ಟು ಬೀಸಿದ. ಹಿಂದೆಯೇ ವೇಲು ಎಸೆದ ಕಲ್ಲು ಗುರಿತಪ್ಪದೇ ನಾಯಿಯ ಸೊಂಟಕ್ಕೆ ಬಿದ್ದು ಕುಯ್ಯೋ ಮರ್ರೋ ಎಂದು ಓಡಿಹೋಯಿತು.


ಮೂವರು ಖುಷಿಯಿಂದ ಸದ್ಯ ಕಳ್ಳನನ್ ಮಗಂದು ಸರಿಯಾಗಿ ಬುದ್ಧಿ ಕಲಿಸಿದೆವು ಎನ್ನುತ್ತಾ ತಮ್ಮ ತಮ್ಮ ಗುರಿಗಳ ಬಗ್ಗೆ ವೇಲು ಮತ್ತು ವೇಡಿ ಒಬ್ಬರಿಗೊಬ್ಬರು ಪ್ರಶಂಸಿಸಿಕೊಳ್ಳುತ್ತಾ ಆ ನಾಯಿ ಮತ್ತೆಂದು ಈ ಕಡೆ ಬರುವುದಿಲ್ಲವೆಂದುಕೊಂಡು ತಮ್ಮ ಪಾಡಿಗೆ ಕೆಲಸ ಮುಂದುವರಿಸಿದರು.


ಮರುದಿನ ನಾಯಿ ಇವರು ಹೊಡೆದ ಕಲ್ಲಿನ ಏಟಿಗೆ ಸಿಟ್ಟಿನಿಂದ ಮೊಂಡುಬಿದ್ದಿತೆಂದು ಕಾಣುತ್ತದೆ. ಹೇಗೋ ಇವರ ಕಣ್ಣು ತಪ್ಪಿಸಿ ಮತ್ತೆರಡು ಆದೇ ಕೆಲಸವನ್ನು ಮಾಡಿ ಮಾಯವಾಗಿತ್ತು.


ಈ ಪ್ರತಿನಿತ್ಯ ಮಣಿ ದಿನಪತ್ರಿಕೆಯ ಮೇಲೆ ನಾಯಿ ತನ್ನ ಜಲಭಾದೆ ತೀರಿಸಿಕೊಳ್ಳುವ ಸುದ್ಧಿ ನಮಗೆಲ್ಲರಿಗೂ ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮತ್ತು ಈ ರೀತಿ ಮಣಿಯ ದಿನಪತ್ರಿಕೆಗಳಿಗೆ ಮೂತ್ರ ಮಾಡುತ್ತಿದ್ದ ನಾಯಿ ಯಾವುದೆಂದು ಹುಡುಕಿದಾಗ ಬೇರೊಂದು ವಿಚಾರ ನಮಗೆ ತಿಳಿಯಿತು.


ನಮ್ಮ ದಿನಪತ್ರಿಕೆ ವಿತರಣೆಗಳ ಚಟುವಟಿಕೆಗಳು ನಡೆಯುವುದು ಮಾಮೂಲಿ ಫುಟ್ ಪಾತಿನಲ್ಲಿ. ನಾವು ನಾಲ್ಕು ಗಂಟೆಗೆ ಹೋಗುವಾಗ ಆ ಫುಟ್ ಪಾತಿನಲ್ಲಿ ಕೆಲವು ನಾಯಿಗಳು ಮಲಗಿರುತ್ತವೆ. ನಾವು ನಮ್ಮ ಕೆಲಸಕ್ಕಾಗಿ ಅವುಗಳನ್ನು ಅಲ್ಲಿಂದ ಓಡಿಸಿ ಆ ಜಾಗದಲ್ಲೇ ನಮ್ಮ ಕೆಲಸ ಮಾಡುತ್ತಿರುತ್ತೇವೆ. ಕೆಲವು ದಿನ ನಮ್ಮ ವಿತರಕರು ಹಾಗೂ ಹುಡುಗರ ಕಾಟ ತಾಳಲಾರದೆ, ಬೊಗಳುವುದರ ಮೂಲಕ್ ಪ್ರತಿಭಟಿಸಿದವು. ಅದಕ್ಕೆ ಕೇರ್ ಮಾಡದೆ ಇದ್ದಾಗ ಅವು ನಮ್ಮ ದಿನಪತ್ರಿಕೆಗಳ ಮೇಲೆ ಮೂತ್ರ ಮಾಡುವುದರ ಮೂಲಕ ಸೇಡು ತೀರಿಸಿಕೊಳ್ಳಲಾರಂಭಿಸಿದವು.


ನಾವು ಒಂದು ಪತ್ರಿಕೆ ಬಂಡಲ್ ತಂದಿಟ್ಟು ಮತ್ತೊಂದು ತರಲಿಕ್ಕೆ ಹೋದಾಗ ಯಾವ ಮಾಯದಲ್ಲೋ ಬಂದು ತಮ್ಮ ಕೆಲಸ ಮುಗಿಸಿಬಿಟ್ಟು ಓಡುತ್ತಿದ್ದವು. ಪ್ರತಿದಿನವೂ ಯಾರ ಪತ್ರಿಕೆಗಳ ಮೇಲಾದರೂ ಅವುಗಳ ಸ್ಟಾಂಪ್ ಇದ್ದೇ ಇರುತ್ತಿತ್ತು. ನಾವು ಅವುಗಳನ್ನು ಓಡಿಸಲು ಮಾಡಿದ ಎಲ್ಲಾ ಉಗ್ರ ಪ್ರಯತ್ನಗಳು ವಿಫಲವಾಗಿ ಕೊನೆಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಕೊನೆಯ ಅಸ್ತ್ರವಾಗಿ ನಾವೇ ಒಂದು ಉಪಾಯ ಕಂಡು ಕೊಂಡೆವು.

ಶಿವು ರಚಿಸಿದ ಎರಡನೇ ರೇಖ ಚಿತ್ರ]


ಗೆಳೆಯರಾಗಿ ಅವುಗಳ ಜೊತೆ ಹೊಂದಿಕೊಂಡು ಅವುಗಳಿಗೆ ಪ್ರತಿದಿನ ಬಿಸ್ಕೆಟ್ಟು, ಬನ್ನು ಎಲ್ಲವನ್ನು ತಂದು ಹಾಕಿ ಅವುಗಳನ್ನು ಓಲೈಸಿ ಗೆಳೆಯರನ್ನಾಗಿ ಮಾಡಿಕೊಂಡೆವು. ಅದಾದ ನಂತರ ಮುಂದೆಂದು ಅವು ತಮ್ಮ ನಾಯಿ ಬುದ್ದಿ ತೋರದೆ ನಮಗೆ ನಿಯತ್ತಾಗಿದ್ದವು.

ಅದರೆ ಮಣಿಯ ಮೇಲೇಕೆ ಆ ನಾಯಿಯ ಕೆಟ್ಟ ದೃಷ್ಟಿ ಬಿತ್ತೆಂದು ನಾವೆಲ್ಲರೂ ಯೋಚಿಸಿದಾಗ ನಮಗೆ ಗೊತ್ತಾದದ್ದು ಏನೆಂದರೆ, ಮಣಿ ಇತ್ತೀಚೆಗೆ ಹೊಸದಾಗಿ ಏಜೆನ್ಸಿ ತೆಗೆದುಕೊಂಡಿದ್ದರಿಂದ ಅವನಿಗೆ ಇವೆಲ್ಲಾ ಗೊತ್ತಿರಲಿಲ್ಲ. ಪತ್ರಿಕೆಯ ಏಜೆನ್ಸಿ ನಡೆಸಲು ಈ ರೀತಿಯ ಕಷ್ಟ-ಕೋಟಲೆಗಳು ನಾಯಿಗಳಿಂದ ಬರುತ್ತದೆಂದು ಅರಿಯದ ಹೋದ ಅಮಾಯಕನಾಗಿದ್ದ. ಕೊನೆಗೆ ಅವನಿಗೆ ನಾವು ಮಾಡಿದಂತೆ ಒಂದಷ್ಟು ದಿನ ಬ್ರೆಡ್ಡು, ಬನ್ನು, ಬಿಸ್ಕೆಟ್ಟುಗಳನ್ನು ಹಾಕಿ ಅ ನಾಯಿಯ ಜೊತೆ ಗೆಳೆತನ ಮಾಡಿಕೊ ಎಲ್ಲಾ ಸರಿಹೋಗುತ್ತದೆ ಎಂದು ಬುದ್ಧಿವಾದ ಹೇಳಿದೆವು.


ಮಣಿ ನಾವು ಹೇಳಿದಂತೆ ಕೆಲವು ದಿನ ಮಾಡಿದ ನಂತರ ಅವನಿಗೆ ಪ್ರತಿದಿನ ಆಗುವ ನಷ್ಟವು ತಪ್ಪಿಹೋಗಿ ಮತ್ತಷ್ಟು ಹುರುಪು ಉಲ್ಲಾಸದಿಂದ ಕೆಲಸ ಮಾಡುತ್ತಿದ್ದಾನೆ.


[ಈ ಮೊದಲು ಈ ಲೇಖನವನ್ನು ಬ್ಲಾಗಿಗೆ ಹಾಕಿದಾಗ ನಾನು ಬ್ಲಾಗ್ ಲೋಕಕ್ಕೆ ಹೊಸಬನಾದ್ದರಿಂದ ಒಂದಿಬ್ಬರು ಬಿಟ್ಟರೆ ಯಾರು ಬಂದು ನೋಡಿರಲಿಲ್ಲ. ಮತ್ತು ನಾನು ಮತ್ತು ನನ್ನ ಮತ್ತೊಬ್ಬ ಬ್ಲಾಗ್ ಗೆಳಯ ಪ್ರೀತಿಯಿಂದ ನನ್ನ ಈ ಲೇಖನಕ್ಕೆ ರಚಿಸಿಕೊಟ್ಟ ರೇಖಾಚಿತ್ರಗಳ ಜೊತೆಗೆ ಮತ್ತೆ ಇದೇ ಲೇಖನವನ್ನು ತಿದ್ದಿ ತೀಡಿ ಚಿಕ್ಕ ಮತ್ತು ಚೊಕ್ಕ ಮಾಡಿ ಹಾಕಿದರೆ ಚೆನ್ನಾಗಿರುತ್ತದೆ ಎನಿಸಿತ್ತು. ಇದೊಂದು ಹೊಸ ಪ್ರಯತ್ನವೆನಿಸಿ ಇಲ್ಲಿ ಹಾಕಿದ್ದೇನೆ. ಮೊದಲು ನೋಡಿದವರೂ ಸಹಕರಿಸಿ. ]

ರೇಖಾ ಚಿತ್ರಗಳು : ಶಿವು ಮತ್ತು ಪ್ರಮೋದ್.

ಲೇಖನ :ಶಿವು.

Friday, December 26, 2008

ಕರೆಂಟ್ ಷಾಕ್ !!

ಡಿಸೆಂಬರ್ ಮೊದಲ ವಾರ ಬೆಳಗಿನ ಸಮಯ ಚಳಿ ಹೆಚ್ಚು. ಅವತ್ತು ಬೆಳಿಗ್ಗೆ ೯ ಗಂಟೆಯಾದರೂ ಸೂರ್ಯ ಮುಖ ತೋರಿಸಿರಲಿಲ್ಲ. ನಾನಂತೂ ಚಳಿಯಿಂದ ನನ್ನನ್ನು ಕಾಪಾಡಿಕೊಳ್ಳಲು ಸ್ವೆಟರು ಮತ್ತು ಚಳಿ ಟೋಪಿ ಹಾಕಿದ್ದೆ.


ಅದೊಂದು ಆಧುನಿಕ ಸುಂದರ ಆಪಾರ್ಟ್‌ಮೆಂಟು. ಮೂರನೆ ಮಹಡಿಯ ಮಾರ್ವಾಡಿ ಮನೆ. ಕಾಲಿಂಗ್ ಬೆಲ್ ಒತ್ತಿದೆ. ಕಿಟಕಿ ತೆರೆದು


"ಕೌನ್ ಹೈ " ಹೆಣ್ಣಿನ ದ್ವನಿ.


"ಪೇಪರ್ ವಾಲ ಮೇಡಮ್, ನ್ಯೂಸ್ ಪೇಪರ್ ಬಿಲ್ " ಕೇಳಿದೆ.


"ವೇಟ್ ಕರೋ, ಯಜಮಾನ್ ಹಾತಾಹೇ " ಹೇಳಿ ಒಳಗೋದಳು ಆಕೆ.


ಎರಡು ನಿಮಿಷದಲ್ಲಿ ಬಾಗಿಲು ತೆರೆಯಿತು. ಆತನಿಗೆ ಕನ್ನಡ ಬರುತ್ತದೆ. ಬಿಲ್ ಕೈಗೆ ಕೊಟ್ಟೆ. ಅವನು ಎಂದಿನಂತೆ ಒಂದಷ್ಟು ನನ್ನ ಹುಡುಗನ ಮೇಲೆ ಕಂಪ್ಲೆಂಟು ಹೇಳುವುದು, ಪೇಪರ್ ಇಂಥ ದಿನ ಬಂದಿಲ್ಲ ಎನ್ನುವುದು, ಅವನ ಮಾತಿಗೆಲ್ಲಾ "ಸರಿ ಸಾರ್, ಆಯ್ತು ಸಾರ್, ಹೇಳ್ತೀನಿ ಸಾರ್, ನಾಳೆಯಿಂದ ಸರಿಹೋಗತ್ತೆ ಸಾರ್" ನಾನು ಉತ್ತರಿಸಿ ರಾಜಕೀಯದವರ ತರ ಭರವಸೆ ನೀಡುವುದು, ಇದು ಪ್ರತಿ ತಿಂಗಳು ಚಾಲ್ತಿಯಲ್ಲಿರುತ್ತದೆ.


ಈ ವಿಚಾರದಲ್ಲಿ ಕಳೆದ ಐದು ವರ್ಷದಿಂದ ಇಬ್ಬರಲ್ಲೂ ಸ್ವಲ್ಪವೂ ಬದಲಾವಣೆಗಳಾಗಿಲ್ಲ, ಅದೇ ಪರಿಸ್ಥಿತಿ.


ನಮ್ಮಿಬ್ಬರ ನಡುವೆ " ಈ ಸಂಭಾಷಣೆ..........ನಮ್ಮ ಈ ಪ್ರೇಮ ಸಂಭಾಷಣೆ.............." ನಡೆಯುತ್ತಿರುವ ಸಮಯದಲ್ಲಿ ಅವನ ಐದು ವರ್ಷದ ಮಗ ಓಡಿ ಬಂದ.


ಕೈಯಲ್ಲಿ ಎಂಥದೊ ಸಿಗರೇಟ್ ಪ್ಯಾಕಿನ ಆಕಾರದ ಆಟದ ಸಾಮಾನು ಹಿಡಿದಿದ್ದ. ಹುಡುಗ ಮುದ್ದಾಗಿದ್ದ. ಮಾರ್ವಾಡಿ ಅಪ್ಪ ಮಗನನ್ನು ನೋಡಿ,


"ಅಂಕಲ್‌ಗೆ ಗುಡ್ ಮಾರ್ನಿಂಗ್ ಹೇಳು"


"ಹಲೋ ಗುಡ್ ಮಾರ್ನಿಂಗ್ ಆಂಕಲ್"


ಬಾಯಿಂದ ಮುತ್ತುಗಳು ಉದುರಿದಂತೆ ಬಂತು ತೊದಲು ಮಾತುಗಳು.


ನನಗೆ ಖುಷಿಯಾಗಿತ್ತು. ಪರ್ವಾಗಿಲ್ಲ, ಮಕ್ಕಳಿಗೆ ಹೊರಗಿನವರನ್ನು ಕಂಡರೆ ಗೌರವದಿಂದ ಮಾತಾಡಿಸುವುದನ್ನು ಕಲಿಸಿದ್ದಾರಲ್ಲ ಅಂತ.


"ಹಾಯ್ ಪುಟ್ಟ ಗುಡ್ ಮಾರ್ನಿಂಗ್, ಏನು ನಿನ್ನ ಹೆಸರು ? "

ಮಗು ಅಪ್ಪನ ಮುಖ ನೋಡಿತು.


"ಅಂಕಲ್‌ಗೆ ಹೆಸರು ಹೇಳು " ಮಗು ಹೇಳಿತು.


"ಶ್ರೇಯಸ್ ಮರ್ಲೇಚ... "


ತೊದಲು ನುಡಿ ಮುದ್ದಾಗಿ ಬಂತು. ಕೇಳಿ ಖುಷಿಯಾಯಿತು. ಮಗುವಿಗೆ ದೈರ್ಯ ಬಂತೇನೋ ,


"ಅಂಕಲ್ ಚಾಕ್‌ಲೇಟ್ ತಗೊಳ್ಳಿ"


ನನ್ನೆಡೆಗೆ ತನ್ನ ಪುಟ್ಟ ಕೈ ನೀಡಿತು. ಅದರಲ್ಲಿ ಸಿಗರೇಟ್ ಪ್ಯಾಕಿನಂತಿದ್ದ ಬಾಕ್ಸ್‌ನೊಳಗೆ ಉದ್ದದ್ದವಾಗಿ ಚಾಕ್‌ಲೇಟ್‌ಗಳು ಇದ್ದವು.


"ಬೇಡ ಮರಿ ನೀನೇ ತಿನ್ನು ಥ್ಯಾಂಕ್ಸ್"


" ಅಂಕಲ್ ಒಂದೇ ಒಂದು ತಗೊಳ್ಳಿ "


ಅದರ ಪ್ರೀತಿಯ ಮಾತಿಗೆ ಮನಸೋತರು ಮತ್ತೆ ಬೇಡವೆಂದೆ.


ನಮ್ಮಿಬ್ಬರನ್ನು ನೋಡುತ್ತಿದ್ದ ಮಾರ್ವಾಡಿ ನನಗೆ ದಿನಪತ್ರಿಕೆ ಹಣ ಕೊಡುತ್ತಾ,


" ಮಗು ಪಾಪ ಪ್ರೀತಿಯಿಂದ ಕೊಡುತ್ತಿದೆ ತೊಗೊಳ್ಳಿ" ಅಂದ.


ನನಗೆ ಮೊದಲಬಾರಿಗೆ ತುಂಬಾ ಖುಷಿಯಾಗಿತ್ತು. ಇಂಥ ಆಪಾರ್ಟ್‌ಮೆಂಟ್‌ಗಳಲ್ಲಿ ನಮ್ಮಂಥ ಆರ್ಡಿನರಿ ದಿನಪತ್ರಿಕೆಯವರಿಗೆ ಇವರು ಇಷ್ಟೊಂದು ಗೌರವ ಕೊಡುತ್ತಿದ್ದಾರಲ್ಲ! ಮತ್ತು ಮಗುವಿಗೂ ಅದೇ ಸಂಸ್ಕಾರ ಕಲಿಸಿದ್ದಾರೆ......... ಜನರಲ್ಲಿ ಇನ್ನೂ ಒಳ್ಳೆಯತನವಿದೆ ಅಂದುಕೊಂಡೆ.


" ತಗೊಳ್ಳಿ ಮಗು ಕೊಡ್ತಾ ಇದೆ, ಬೇಡ ಅನ್ನಬಾರದು "


ನಾನು ಮಾರ್ವಾಡಿಯ ಮುಖ ನೋಡಿದೆ. ಪ್ರೀತಿ ತುಂಬಿ ತುಳುಕುತ್ತಿದೆ. ಮಗುವಿನ ಕಡೆಗೆ ನೋಡಿದೆ. ಮುಗ್ದತೆಯ ಪ್ರತಿರೂಪವೇ ಆಗಿ ನನ್ನ ಕಡೆಗೆ ಕೈ ಚಾಚಿದೆ.


ಇಷ್ಟೆಲ್ಲಾ ಪ್ರೀತಿ ಗೌರವ ಇಬ್ಬರೂ ತೋರಿಸುತ್ತಿರುವಾಗ ನಾನು ಅದನ್ನು ತೆಗೆದುಕೊಳ್ಳದಿದ್ದಲ್ಲಿ ನನ್ನದೇ ಆಹಾಂಕಾರವೆನಿಸಬಹುದು. ಸರಿ ಆ ಚಾಕಲೇಟ್ ತೆಗೆದುಕೊಳ್ಳೋಣವೆಂದು ಕೈ ಚಾಚಿದೆ ಆಷ್ಟೇ,


ಹೊಡೆಯಿತು ಕರೆಂಟ್ ಷಾಕ್ !!


ಅಂತ ಚಳಿಯಲ್ಲಿ ಒಂದು ಕ್ಷಣ ಮೈಯಲ್ಲಾ ಜುಮ್ಮೆಂದಿತು.


ಮನೆಯಲ್ಲಿ ಗೊತ್ತಿಲ್ಲದೆ ಯಾವುದಾದರೂ ವಿದ್ಯುತ್ ತಂತಿ ಮುಟ್ಟಿದಾಗ ಅಥವಾ ಪ್ಲಗ್‌ಗಳನ್ನು ಮುಟ್ಟಿದಾಗ ಎಲೆಕ್ಟ್ರಿಕ್ ಷಾಕ್ ಆದರೆ ಹೇಗಾಗುತ್ತೋ ಆ ರೀತಿ ಆಗಿತ್ತು ನನ್ನ ಪರಿಸ್ಥಿತಿ.


ವಾಸ್ತವಕ್ಕೆ ಬರವಷ್ಟರಲ್ಲಿ ೫-೬ ಸೆಕೆಂಡುಗಳೇ ಬೇಕಾಯಿತು. ಎದುರಿಗಿದ್ದ ಅಪ್ಪ ಮಗನನ್ನು ನೋಡಿದೆ. ಕೇಕೆ ಹಾಕಿ ಜೋರಾಗಿ ನಗುತ್ತಿದ್ದರು !


" ಡ್ಯಾಡಿ ಎಂಗೆ " ಅಪ್ಪನತ್ತ ಕೈಚಾಚಿದ ಮಗ.


"ಸೂಪರ್ ಬೇಟ " ಅಪ್ಪ ಮಗನ ಪುಟ್ಟ ಕೈ ಕುಲುಕಿದ.

ಅದೊಂದು ರೀತಿಯ ಹೊಸ ಆಟದ ಸಾಮಾನು. ಹಿಂಭಾಗದಿಂದ ಹಿಡಿದುಕೊಂಡು ಹಿಂದಿನಿಂದ ಒಂದೆರಡು ಪೆನ್ಸಿಲ್ ಆಕಾರದ ಚಾಕ್‌ಲೇಟ್‌ಗಳನ್ನು ಮುಂದೆ ತಳ್ಳಿದ ಮೇಲೆ ಆ ಚಾಕ್‌ಲೇಟ್‌ಗಳನ್ನು ತೆಗೆದುಕೊಳ್ಳಲು ಯಾರು ಮುಟ್ಟುತ್ತಾರೋ ಅವರಿಗೆ ಕರೆಂಟ್ ಷಾಕ್ ಹೊಡೆಯುತ್ತದೆ !!


"!!ಮಾಡುವವರಿಗೆ ಅದು ಬಲು ಮಜ. ಮುಟ್ಟಿದವರಿಗೆ ಇಂಗು ತಿಂದ ಮಂಗನ ಸ್ಥಿತಿ ! "


ಒಂದು ನಿಮಿಷದ ಹಿಂದೆ ಮುಗ್ದತೆಯ ಪ್ರತಿರೂಪದಂತಿದ್ದ ಐದು ವರ್ಷದ ಮಗ, ಸಂಸ್ಕಾರದ ತದ್ರೂಪಿನ ಅಪ್ಪ ಇಬ್ಬರು ಇನ್ನೂ ನಗುತ್ತಿದ್ದರು........


ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ.

ಪ್ರೀತಿಯಿರಲಿ
ಶಿವು.

Saturday, December 20, 2008

ಟ್ರಿಣ್....ಟ್ರಿಣ್....ಟ್ರಿಣ್.......

ನನ್ನಾಕೆಯ ಮೊಬೈಲ್ ಬೆಳಗಿನ ಜಾವ ನಾಲ್ಕು ಗಂಟೆಗೆ ಅಲರಾಂ ಸದ್ದು ಮಾಡಿದಾಗ ನಿರೀಕ್ಷೆಯಂತೆ ಎಚ್ಚರವಾಯಿತು.

ಅರೆರೆ......ಇಷ್ಟು ಸುಲಭವಾಗಿ ಅಂತ ಗಾಡನಿದ್ರೆಯನ್ನು ನಿರಾಕರಿಸಿ ಎದ್ದುಬಿಟ್ಟೆ ಎಂದುಕೊಳ್ಳಬೇಡಿ. ಅದು ನನಗೂ ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿನಿತ್ಯ ಕಷ್ಟದ ಹಿಂಸೆಯ ಕೆಲಸ. ಆದರೇನು ಮಾಡುವುದು ನಾನು ಪ್ರತಿದಿನ ಮುಂಜಾವಿನಲ್ಲಿ ನನ್ನ ಕಾಯಕವಾದ ದಿನಪತ್ರಿಕೆ ವಿತರಣೆಗೆ ಹೋಗಲೇಬೇಕಲ್ಲ.!

ಅದಕ್ಕೆಂದೆ ನಾನು ಒಂದು ವಿಭಿನ್ನ ತಂತ್ರ ಕಂಡುಕೊಂಡಿದ್ದೇನೆ. ನನ್ನ ಮೊಬೈಲಿನಲ್ಲಿ ಬೆಳಗಿನ ಮೂರು ಗಂಟೆಗೆ ಅಲರಾಂ ಇಟ್ಟುಕೊಂಡು ನನ್ನ ಮಡದಿಯ ಮೊಬೈಲಿನಲ್ಲಿ ೪ ಗಂಟೆಗೆ ಅಲರಾಂ ಇಟ್ಟುಕೊಳ್ಳುತ್ತೇನೆ, ಅದು ನಂಬಿಕಸ್ತನಂತೆ ತಪ್ಪದೇ ಅಲರಾಂ ಹೊಡೆದು ನನ್ನನ್ನು ಎಚ್ಚರಗೊಳಿಸುತ್ತದೆ ಎನ್ನುವ ನಂಬಿಕೆ.

ಮೊದಲು ನನ್ನ ಮೊಬೈಲ್ ಮೂರು ಗಂಟೆಗೆ ಅಲರಾಂ ಹೊಡೆದಾಗ ನಿಜವಾಗಿ ಅವಾಗಲೇ ಸರಿಯಾದ ಗಾಢನಿದ್ರೆ. ಎದ್ದು ನನ್ನ ಮೊಬೈಲ್ ಆಲರಾಂ ಬಂದ್ ಮಾಡಿ ಮತ್ತೆ ಮಲಗುತ್ತೇನೆ. ಈಗ ಮೂರು ಗಂಟೆಯಿಂದ ನಾಲ್ಕು ಗಂಟೆಗೆ ಗಾಢನಿದ್ರೆಯ ಬದಲಾಗಿ ಸರಳ ನಿದ್ರೆ ಮಾಡುತ್ತೇನೆ.[ಮಾಡುತ್ತೇನೆ ಅಂದು ಕೊಳ್ಳುತ್ತೇನೆ.] ನಂತರ ನನ್ನಾಕೆಯ ಮೊಬೈಲ್ ನಾಲ್ಕು ಗಂಟೆಗೆ ಅಲಾರಾಂ ಹೊಡೆದಾಗ ಸರಳ ನಿದ್ರೆಯಲ್ಲಿರುವ ನನಗೆ ಎಚ್ಚರಗೊಳ್ಳುವುದು ಸುಲಭ.

ನಮಗೆ ಗಾಢನಿದ್ರೆ ಎಂದು ತಿಳಿಯುವುದು ಯಾವಾಗ ?

ಮೂರು ಗಂಟೆಗೆ ಹೊಡೆದ ಅಲಾರಾಂನಿಂದಾಗಿ ಗಾಢನಿದ್ರೆಯಿಂದ ಎದ್ದು ಎಂಥ ಗಾಢನಿದ್ರೆ ಎಂದುಕೊಂಡು ಹತ್ತೇ ಸೆಕೆಂಡುಗಳಲ್ಲಿ ಅಲಾರಾಂ ಬಂದ್ ಮಾಡಿ ಮತ್ತೆ ನಿದ್ರೆ ಹೋಗುವ ಸುಖ ! ಆಹಾ!! ಅದನ್ನು ಅನುಭವಿಸಿಯೋ ತೀರಬೇಕು.[ನಮಗೆ ಗಾಢನಿದ್ರೆ ಎಂದು ಅರಿವಾಗುವುದು ಯಾವಾಗ ? ನಾವು ಅಂಥ ನಿದ್ರೆಯಿಂದ ಎಚ್ಚರಗೊಂಡು ಮತ್ತೆ ಮಲಗಿದಾಗಲೇ ಅಲ್ಲವೆ ?] ]

ಬೇಕಾದರೆ ನೀವು ಈ ಪ್ರಯೋಗ ಮಾಡಬಹುದು.

ಬೆಳಗಿನ ಜಾವ ೭ ಗಂಟೆಗೋ ಅಥವಾ ೮ ಗಂಟೆವರೆಗೆ ಪೂರ್ತಿ ನಿದ್ರೆ ಮಾಡಿ ಎದ್ದುಬಿಟ್ಟರೆ ಏನು ಮಜಾ? ನಮಗೆ ನಿಜವಾದ ಗಾಢನಿದ್ರೆ ಯಾವ ಸಮಯದಲ್ಲಿತ್ತು ಎಂದು ತಿಳಿಯುವುದು ಹೇಗೆ ? ಅದಕ್ಕಾಗಿಯೇ ೩ ಗಂಟೆಗೋ, ನಾಲ್ಕು ಗಂಟೆಗೋ ಆಲಾರಾಂ ಹೊಡೆಸಿ ಎಚ್ಚರವಾಗಿ "ಎಂಥಾ ಗಾಢನಿದ್ರೆ" ಎಂದುಕೊಂಡು ಮತ್ತೆ ಮಲಗುವುದಿದೆಯಲ್ಲ ಅದು ನನ್ನಂತೆ ಅನುಭವಿಸಿದವರಿಗೆ ಗೊತ್ತು ಅದೆಂಥ ಸ್ವರ್ಗ ಸುಖ ಎಂದು.

ನಂತರ ಹಾಸಿಗೆಯಿಂದ ಮೇಲೆದ್ದು ಕೈಕಾಲು ಮುಖ ತೊಳೆದು ರೆಡಿಯಾಗಿ ಮೊದಲು ನನ್ನ ಸಹಾಯಕರಿಬ್ಬರಿಗೆ ಫೋನ್ ಮಾಡುತ್ತೇನೆ. ನಾನು ಫೋನ್ ಮಾಡಿದಾಗ ಅವರ ಮೊಬೈಲಿನಲ್ಲಿ ನನ್ನ ನಂಬರ್ ಮತ್ತು ಹೆಸರು ಬರುವುದು ಸಹಜ.

ಮೊದಲನೆಯವನಿಗೆ ರಿಂಗ್ ಮಾಡಿದಾಗ ಅವನ ಮೊಬೈಲ್ ರಿಂಗ್ ಟೋನ್

"ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.......

ಹಾಡೋಣ ನಾನು ನೀನು ಕುಚ್ಚಿ ಕುಚ್ಚಿ.........

ಹಾಡಿನ ಮಧುರ ಪಲ್ಲವಿ ಕಿವಿಗೆ ಬಿದ್ದು ನನಗೂ ಇನ್ನೊಂದಷ್ಟು ಹೊತ್ತು ಗುಬ್ಬಚ್ಚಿಯ ಹಾಗೆ ಗೂಡಿನಲ್ಲಿ ಮಲಗೋಣ ಎನಿಸಿ ಹಾಗೇ ಕಲ್ಪನಾ ಲೋಕದಲ್ಲಿ ತೇಲುತ್ತೇನೆ. ಮರುಕ್ಷಣವೇ ಎಚ್ಚೆತ್ತು ವಾಸ್ತವಕ್ಕೆ ಬಂದು ಕಾಯಕದ ಕರೆ ಬಂದಂತಾಗುತ್ತದೆ.

ಐದು ನಿಮಿಷ ಕಳೆದು ಮತ್ತೊಬ್ಬನಿಗೆ ರಿಂಗ್ ಮಾಡಿದಾಗ

"ಕನಸು ಕೇಳಲೆಂತೋ.........

ಮನಸು ಮಾಯವೆಂತೋ........

ಆಹಾ ಒಂಥರಾ..ತರಾ.....

ಹೇಳೊಲೊಂತರಾ....ತರಾ.....

ಕೇಳಲೊಂತರಾ....ತರಾ.....

ಮತ್ತೊಂದು ಮಧುರ ಹಾಡಿನ ಪಲ್ಲವಿ ಕಿವಿಗೆ ಇಂಪೆನಿಸಿ ಆ ತಂಪು ವಾತಾವರಣದಲ್ಲಿ ಕನಸಿನ ಲೋಕಕ್ಕೆ ಇಳಿಯಬೇಕೆನಿಸಿ ಮತ್ತೆ ಸಣ್ಣ ನಿದ್ರೆಗೆ ಜಾರಬೇಕೆನಿಸುತ್ತದೆ.

ಈ ರೀತಿಯಲ್ಲಾ ಆ ಬೆಳಗಿನ ಜಾವ ಅನ್ನಿಸುವುದಕ್ಕೆ ಅವರಿಗೆ ಧನ್ಯವಾದ ಹೇಳಬೇಕೆನಿಸುತ್ತದೆ. ಆದರೆ ಕೆಲವೊಮ್ಮೆ ಅವರಿಬ್ಬರ ಮೊಬೈಲುಗಳಿಂದ

" ದಿ ಏರ್‌ಟೆಲ್ ನಂಬರ್ ಯೂ ಆರ್ ಟ್ರೈಯಿಂಗ್ ಟು ರೀಚ್ ಇಸ್ ಟೆಂಪರೆರಿಲಿ ಔಟ್ ಆಫ್ ಸರ್ವೀಸ್" ಅಂತಲೋ ಅಥವಾ

"ನೀವು ಕರೆ ಮಾಡಿರುವ ಚಂದದಾರರು ಸ್ವಿಚ್ ಆಪ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಪ್ರಯತ್ನಿಸಿ"

ಎಂದು ಕೇಳಿಸಿದಾಗ ಮಗ್ಗುಲಿಗೆ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ಕಾರಣ ಯಾರ ಮೊಬೈಲಿನಿಂದ ಈ ಕರೆ ಕೇಳಿಸುವುದೋ ಆತ ಇಂದು ಬರುವುದಿಲ್ಲವೆಂದು ನಾನು ಅರ್ಥೈಸಿಕೊಳ್ಳುವಾಗ ಆ ತಂಪು ವಾತಾವರಣವೆಲ್ಲಾ ಬಿಸಿಯಾಗುತ್ತಿದೆಯೆನಿಸಿ, ಆತನ ಮೇಲೆ ಸಿಟ್ಟು ಬಂದು ಮೈ ಪಚಿಕೊಳ್ಳುವಂತಾಗುತ್ತದೆ.

ಇದೆಲ್ಲಾ ಮೊಬೈಲ್ ಆಟ ಮುಗಿಯುವ ಹೊತ್ತಿಗೆ ಸಮಯ ೪-೩೦ ಆಗಿರುತ್ತದೆ.[ಈಗ ಎಲ್ಲಾ ಕಡೆ ಮೊಬೈಲು ದರ್ ಕಾಡಿಮೆ ಇರುವುದರಿಂದ ನಮ್ಮೆಲಾ ಬೀಟ್ ಬಾಯ್ಸ್ ಮೊಬೈಲ್ ಇಟ್ಟಿದ್ದಾರೆ. ಮತ್ತು ಈ ಮೊಬೈಲ್ ಕರೆಗಳ ಆಟ ನನ್ನೊಬ್ಬನಿಗೆ ಸೀಮಿತವಾಗಿಲ್ಲ. ಎಲ್ಲಾ ದಿನಪತ್ರಿಕೆ ವಿತರಕರಿಗೂ ಇದು ಪ್ರತಿದಿನದ ಕತೆ].

ಆ ಕ್ಷಣ ವಾಸ್ತವಕ್ಕೆ ಬಂದು ನಾನು ಸ್ವೆಟರ್ ಹಾಕಿಕೊಂಡು ಹೊರಡಲು ಸಿದ್ದನಾಗುತ್ತೇನೆ. ನನ್ನ ಸ್ಕೂಟಿ ಏರಿ ನನ್ನ ದಿನಪತ್ರಿಕೆ ವಿತರಣೆ ಸ್ಥಳ ತಲುಪುವ ಹೊತ್ತಿಗೆ ೫ ನಿಮಿಷ ಬೇಕಾಗುತ್ತದೆ. ಆ ಐದು ನಿಮಿಷಗಳಲ್ಲಿ

"ಓಂ ಭೂಃರ್ಭುವಸ್ವಃ
ತತ್ಸವಿತೂರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್" ಗಾಯತ್ರಿ ಮಂತ್ರ ಅಥವಾ

"ತ್ರ್ಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿವರ್ಧನಂ
ಉರ್ವಾರುಕಮಿವ ಬಂಧರ್ನಾ
ಮೃತ್ಯೋರ್ಮುಕ್ಷೀಯ ಮಾಮೃತಾತ್ " ಮೃತ್ಯುಂಜಯ ಮಂತ್ರವನ್ನು ಮನಸ್ಸಿನಲ್ಲಿಯೇ ೯ ಸಲ ಹೇಳಿಕೊಂಡು ಸಾಗುತ್ತೇನೆ.

ಸಹಾಯಕರ ಮೊಬೈಲ್ ಸ್ವಿಚ್ ಆಪ್ ಅಗಿದ್ದ ದಿನ ಎಲ್ಲಾ ಕೆಲಸ ನಾನೇ ಮಾಡಬೇಕಲ್ಲ ಎಂಬ ಭಾವನೆ ಸಿಟ್ಟಿನ ಮೂಲಕ ನುಗ್ಗಿ ಬಂದು ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ ಎರಡಕ್ಕೂ ಜಾಗವಿಲ್ಲದೆ ಅವರನ್ನು ಮನಸ್ಸಿನಲ್ಲಿಯೇ ಬೈದುಕೊಳ್ಳುವ ಮಂತ್ರ ನನಗರಿವಿಲ್ಲದೇ ಬಂದುಬಿಡುತ್ತದೆ. ಹಾಗು ಅದು ೯ ಸಲಕ್ಕಿಂತ ಹೆಚ್ಚಾಗಿರುತ್ತದೆ.

ಇಷ್ಟೆಲ್ಲಾ ಕತೆ ಮುಗಿದು ನನ್ನ ದಿನಪತ್ರಿಕೆ ವಿತರಣೆ ಸ್ಥಳ ತಲುಪುವ ಹೊತ್ತಿಗೆ "ಅರೆರೆ....ಆಗಲೇ ೪-೪೫ ಆಗಿಹೋಯಿತಲ್ಲ ಎನಿಸಿ ಮುಂದಿನ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ.

ಇದರ ನಂತರದ ಚಟುವಟಿಕೆಗಳು ಮುಂದಿನ ಬಾರಿ ಹಾಕುತ್ತೇನೆ.

ಶಿವು.

Monday, December 15, 2008

ಹಾವೂ ಸಾಯಬಾರದು...ಕೋಲು ಮುರಿಯಬಾರದು...

ಅವತ್ತು ಮುಂಜಾನೆ ಖುಷಿಯಲ್ಲಿದ್ದೆ. ಇಂಥ ಚಳಿಗಾಲದಲ್ಲೂ ಬೇಗ ಬಂದು ತಮ್ಮ ತಮ್ಮ ಬೀಟುಗಳನ್ನು ಸೈಕಲ್ಲಿಗೇರಿಸಿಕೊಂಡು ಹೊರಟರಲ್ಲ ! ಅವತ್ತಿನ ಕೆಲಸ ಬೇಗ ಮುಗಿಯಿತಲ್ಲ ಅಂತ! ಸ್ವಲ್ಪ ಹೊತ್ತು ಅಲ್ಲೇ ಕುಳಿತು ಒಂದು ಸುತ್ತು ಎಲ್ಲಾ ಪೇಪರುಗಳ ಹೆಡ್‌ಲೈನ್ಸ್ ನೋಡುತ್ತಿದ್ದೆ.

ಒಂದರ್ಧ ಗಂಟೆ ಕಳೆದಿರಬಹುದು. ನನ್ನ ಮೊಬೈಲ್ ಫೋನು ರಿಂಗಾಯಿತು. "ತತ್, ನೆಮ್ಮದಿಯಾಗಿ ಪೇಪರ್ ಓದೊದಕ್ಕೂ ಬಿಡೋದಿಲ್ವಲ್ಲ ಈ ಫೋನು" ಅಂದು ಕೊಂಡು ನೋಡಿದರೆ ಚೆನ್ನಾಗಿ ಗೊತ್ತಿರುವ ಗ್ರಾಹಕನ ನಂಬರ್.

"ಹಲೋ ಹೇಳಿ" ಅಂದೆ.

"ಶಿವು ನಾನು ಕಣ್ರೀ.... ಸಂತೋಷ್ ಗೊತ್ತಾಯ್ತಾ.......

ನಾನು ಸ್ವಲ್ಪ ಯೋಚಿಸಿ, " ಗೊತ್ತಾಯ್ತು ಹೇಳಿ ಸಾರ್"

"ನೋಡ್ರಿ ಶಿವು. ನಿಮ್ಮ ಪೇಪರ್ ಹಾಕೊ ಹುಡುಗ ನನ್ನ ಹೊಸ ಚಪ್ಪಲಿಯನ್ನು ತಗೊಂಡು ಹೋಗಿಬಿಟ್ಟಿದ್ದಾನೆ. ಅದರ ಬೆಲೆ ೮೫೦ ರೂಪಾಯಿ ಕಣ್ರೀ.... ದಯವಿಟ್ಟು ಅವನು ಬಂದರೆ ಸ್ವಲ್ಪ ಬಂದರೆ ನೋಡ್ರೀ...."

ಅವರ ಮಾತು ಕೇಳಿ ನನಗೆ ಶಾಕ್!

ಇದೇನಪ್ಪ ಇದು ಬೆಳಿಗ್ಗೆ ಬೆಳಿಗ್ಗೆ ಇಲ್ಲದ "ತರಲೆ ತಾಪತ್ರಯ" ಅಂದುಕೊಂಡೆ ಬೇಸರದಿಂದ.

ಮರುಕ್ಷಣ ಸಾವರಿಸಿಕೊಂಡು,

"ನೋಡಿ ಸಾರ್ ನಮ್ಮ ಹುಡುಗ ಅಂತೋನಲ್ಲ, ನೀವೇನಾದ್ರು ಕನ್‌ಪ್ಯೂಸ್ ಆದ್ರಾ ನೋಡಿ "

ಹೀಗೆ ಇಬ್ಬರ ನಡುವೆ ಕೆಲವು ಮಾತುಕತೆ ನಡೆಯಿತು. ಕೊನೆಗೆ ಆತ ಖಚಿತವಾಗಿ ಸಾಕ್ಷಿ ಸಮೇತ ಹೇಳಿದ ಮೇಲೆ ನಾನು ನಂಬಲೇ ಬೇಕಾಯಿತು.

"ರ್ರೀ......ಶಿವು, ನನಗೆ ಬೆಳಿಗ್ಗೆ ಎದ್ದು ನಿಮ್ಮ ಹುಡುಗನ ಮೇಲೆ ಕಂಪ್ಲೆಂಟು ಹೇಳೋದು ಬಿಟ್ಟು ಬೇರೆ ಕೆಲಸ ಇಲ್ಲ ಆಂದುಕೊಂಡಿರೇನ್ರೀ..... ನೀವೆ ಬಂದು ಇಲ್ಲಿ ನೋಡಿ ಬೇಕಾದ್ರೆ, ನೀಟಾಗಿ ಅವನ ಹಳೇ ಚಪ್ಪಲಿ ಬಿಟ್ಟು ನಮ್ಮ ಹೊಸ ಚಪ್ಪಲಿ ಹಾಕ್ಕೊಂಡು ಹೋಗಿದ್ದಾನೆ" ಸ್ವಲ್ಪ ತಡೆದು ,

"ನಿಮ್ಮ ಆ ಹುಡುಗ ಬಂದ್ರೆ ಅವನ್ನ ನನ್ನ ಬಳಿ ಕಳಿಸ್ರೀ.......ನಾನು ಏನು ಮಾಡೊಲ್ಲ, ನಮ್ಮ ಚಪ್ಪಲಿ ಬಿಟ್ಟು ಹೋದ್ರೆ ಸಾಕು" ಎಂದ.

"ಸರಿ ಸಾರ್ ನೋಡ್ತೀನಿ...." ಎಂದಾಗಲೇ ಅವನು ಫೋನ್ ಕಟ್ ಆದದ್ದು.

ಹೀಗೇನು ಮಾಡುವುದು ? ಮತ್ತೆ ಪೇಪರ್ ಓದುವ ಮೂಡ್ ಇಲ್ಲ. ನನ್ನೊಳಗೆ ಇಲ್ಲದ ತಳಮಳಗಳು ಶುರುವಾದವು.

ನಮ್ಮ ಹುಡುಗ ನರಸಿಂಹ ಚಪ್ಪಲಿ ಕದ್ದಿದ್ದು ಸತ್ಯವಾದರೆ ಆ ಗಿರಾಕಿ ನನ್ನ ಕಡೆಯಿಂದ ಪೇಪರ್ ತರಿಸುವುದು ನಿಲ್ಲಿಸುತ್ತಾನೆ. ಜೊತೆಯಲ್ಲಿ ಇಂಥ ಹುಡುಗನಿಂದಾಗಿ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ ! ಆ ಗಿರಾಕಿ ಒರಟನಾದರೆ ಪೋಲಿಸ್........... ಕಂಪ್ಲೆಂಟು......... ಅದು ಇನ್ನೂ ಭಯವಾಯಿತು.

ನಂತರ ಆ ಹುಡುಗನನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ. ಆಷ್ಟಕ್ಕೂ ಮೀರಿ ನರಸಿಂಹನನ್ನೇ ಇಟ್ಟುಕೊಂಡರೆ ಅವನ ಕಳ್ಳತನಕ್ಕೆ ನಾನೇ ಸಪೋರ್ಟ್ ಮಾಡಿದಂತಾಗಿ ಇನ್ನಷ್ಟು ಇಂತ ಕೆಲಸಗಳಿಂದಾಗಿ ನಾನು ಕೆಲವು ಗಿರಾಕಿಗಳನ್ನು ಕಳೆದುಕೊಳ್ಳಬೇಕಾಗುತ್ತದಲ್ಲ!

ಮತ್ತೆ ನರಸಿಂಹನನ್ನು ತೆಗೆದುಹಾಕಿದರೆ........ ಮೊದಲೇ ನನಗೆ ಬೀಟು ಹುಡುಗರ ಕೊರತೆಯಿರುವುದರಿಂದ ಮುಂದೆ ನನಗೆ ಈ ದಿನಪತ್ರಿಕೆ ವಿತರಣೆ ಕೆಲಸ ಇನ್ನಷ್ಟು ತೊಂದರೆಗೊಳಗಾಗುವುದು ಖಂಡಿತ.

ಈಗೇನು ಮಾಡುವುದು ? ತಲೆನೋವು ಶುರುವಾಯಿತು.

ಆ ನರಸಿಂಹ ವಾಪಸು ಬರಲಿ..... ಮುಂದೇನಾಗುತ್ತದೊ ನೋಡೋಣ ಎಂದುಕೊಂಡು ಸುಮ್ಮನಾದೆ. ನನ್ನ ಇನ್ನೊಬ್ಬ ಹುಡುಗ ಮಾದೇಶನನ್ನು ಕರೆದು ನಡೆದ ವಿಷಯವನ್ನು ವಿವರಿಸಿ, "ಅವನು ಬಂದ ತಕ್ಷಣ ನಿನ್ನ ಜೊತೆ ಕಳುಹಿಸುತ್ತೇನೆ. ಆ ಕಷ್ಟಮರ್ ಮನೆಗೆ ಕರೆದು ಹೋಗು ಎಂದು ಹೇಳಿ ಅವನ ಕೈಗೆ ನನ್ನ ಸ್ಕೂಟಿಯ ಕೀ ಕೊಟ್ಟೆ.

ಆಗೋ ಬಂದ ನರಸಿಂಹ. ನನ್ನ ಕಣ್ಣು ನೇರವಾಗಿ ಅವನ ಪಾದದ ಕಡೆಗೆ........ಸಂಶಯವೇ ಇಲ್ಲ..........ಕಷ್ಟಮರ್ ಹೇಳಿದಂತೆ ಬ್ರೌನ್ ಕಲರಿನ ಹೊಸ ಚಪ್ಪಲಿ ಇವನ ಕಾಲಿನಲ್ಲೇ ಇದೆ!!.

ಈ ವಿಚಾರದಲ್ಲಿ ಹಾವು ಸಾಯಬಾರದು ಕೋಲು ಮುರಿಯಬಾರದು. ಅಂದರೆ ನನಗೆ ಗಿರಾಕಿಯೂ ಉಳಿಯಬೇಕು, ಈ ಬೀಟ್ ಹಾಕುವ ನರಸಿಂಹನನ್ನು ಉಳಿಸಿಕೊಳ್ಳಬೇಕಲ್ಲ ? ಏನು ಮಾಡೋದು ಕೊನೆಗೊಂದು ಐಡಿಯಾ ಹೊಳೆಯಿತು. ಮೊದಲು ಸರಳವಾಗಿ ಮಾತಾಡಿಸಬೇಕು.

"ಲೋ ನರಸಿಂಹ ಎಲ್ಲ ಸರಿಯಾಗಿ ಮುಗಿಯಿತೇನೊ " ಇದು ನನ್ನ ಪ್ರತಿನಿತ್ಯದ ಮಾತು.

"ಹೂಂ.. ಸಾರ್......" ನರಸಿಂಹನದೂ ಕೂಡ ನಿತ್ಯದ ಉತ್ತರ.

ಈಗ ನೇರ ಬಾಣ ಬಿಡಬೇಕು ಅಂದುಕೊಂಡು,

"ನೋಡು ನರಸಿಂಹ ನಿನ್ನ ಮೇಲೊಂದು ಕಂಪ್ಲೆಂಟು ಬಂದಿದೆ. ನೀನು ಗಿರಾಕಿಯ ಮನೆಯಿಂದ ಚಪ್ಪಲಿ ಹಾಕ್ಕೋಂಡು[ಕದ್ದು ಅಂತ ಹೇಳಲಾಗದೆ] ಬಂದಿದ್ದೀಯ ಅಂತ ಫೋನ್ ಮಾಡಿದ್ರೂ, ಅದಕ್ಕೆ ನೀನು ಅವರ ಮನೆಗೆ ಇವನ ಜೊತೆ ಮತ್ತೊಮ್ಮೆ ಹೋಗಿ "ನನಗೇನು ಗೊತ್ತಿಲ್ಲ ಎಂದು ಹೇಳಿಬಿಡು ಹೋಗು" ಅವನಿಗೆ ಮಾತನಾಡಲು ಅವಕಾಶ ಕೊಡದೆ ಒಂದೇ ಉಸುರಿಗೆ ಹೇಳಿದೆ.

"ಸಾರ್..... ನಾನು......ಇದು.....ನಾನು ಹೊಸದು ಹೋದ ವಾರ ತಗೊಂಡೆ ಸಾರ್....೪೦೦ ರೂಪಾಯಿ...." ಬಾಣ ಗುರಿ ಮುಟ್ಟಿತ್ತು.

" ಸರಿನಪ್ಪ ನೀನು ತಗೊಂಡಿಲ್ಲವೆಂದ ಮೇಲೆ ನಿನಗ್ಯಾಕೆ ಚಿಂತೆ, ಹೋಗು ದೈರ್ಯವಾಗಿ ನಾನು ಅಂತವನಲ್ಲ ಎಂದು ಹೇಳೀ ಬಾ" ಎಂದು ಅವನು ಮರುಮಾತಾಡಲು ಅವಕಾಶ ಕೊಡದೆ ಮತ್ತೊಬ್ಬ ಹುಡುಗ ಮಾದೇಶನ ಜೊತೆ ಕಳುಹಿಸಿದ್ದೆ.

ಗಿರಾಕಿ ಬಾಗಿಲಲ್ಲಿ ಕಾಯುತ್ತಿದ್ದ. ನರಸಿಂಹನನ್ನು ನೋಡಿದ ಕೂಡಲೇ

"ಹೆಚ್ಚು ಮಾತಾಡದೆ ಕಾಲಲ್ಲಿರುವ ನಮ್ಮ ಚಪ್ಪಲಿ ಬಿಟ್ಟು ಹೋಗು"

ಈ ಹುಡುಗ "ಇಲ್ಲಾ ಸಾರ್, ನಾನು ಹೋದ ವಾರ.............." ಮಾತಾಡಲೆತ್ನಿಸಿದ.

"ಸುಮ್ಮನೆ ಬಿಟ್ಟು ಹೋಗು, ಇಲ್ಲದಿದ್ದಲ್ಲಿ ಪೋಲಿಸ್‌ಗೆ ಕಂಪ್ಲೆಂಟ್ ಕೊಡಬೇಕಾಗುತ್ತೆ."

ನರಸಿಂಹ ಮರುಮಾತಾಡಲಾಗದೆ ಆ ಹೊಸ ಚಪ್ಪಲಿಯನ್ನು ಬಿಟ್ಟು ಬರಿಕಾಲಲ್ಲಿ ವಾಪಸ್ ನನ್ನ ಬಳಿ ಬಂದ.

"ಸಾರ್ ಏನ್ ಸಾರ್ ಬೆಳಿಗ್ಗೆನೇ ಇದು ತಲೆನೋವು, ನಾನು ಮನೆಗೆ ಹೋದರೆ ಚಪ್ಪಲಿ ಎಲ್ಲಿ ಅಂತ ನಮ್ಮನೆಯಲ್ಲಿ ಕೇಳಿ ಬೈಯ್ತಾರಲ್ಲಾ " ?

ತನ್ನ ತಪ್ಪನ್ನು ಮುಚ್ಚಿಹಾಕಲು ನರಸಿಂಹನ ಪ್ರಯತ್ನ.

"ನೋಡು ನರಸಿಂಹ ನೀನು ಬೆಳಿಗ್ಗೆ ಎದ್ದಾಗ ಯಾರ ಮುಖ ನೋಡಿದ್ಯೋ ಗೊತ್ತಿಲ್ಲ. ಇದು ಇಷ್ಟಕ್ಕೆ ಮುಗಿಯಿತಲ್ಲ ಅಂತ ಖುಷಿಪಡು. ಆ ಕಸ್ಟಮರು ಒಳ್ಳೆಯವನು. ಅದಕ್ಕೆ ಸುಮ್ಮನೆ ಕಳುಹಿಸಿದ. ಬೇರೆಯವನಾಗಿದ್ದರೆ ಪೋಲಿಸ್........ಕಂಪ್ಲೆಂಟು..........ನನ್ನ ಮಾತು ಮುಂದುವರಿಸುತ್ತಾ ಅವನ ಮುಖ ನೋಡಿದೆ.

ಮುಖದಲ್ಲಿ ಭಯದ ಸೂಚನೆಗಳು ಆವರಿಸುತ್ತಿದ್ದವು.

" ಹೋಗಲಿ ಬಿಡು. ತಗೋ ಈ ೩೦ ರೂಪಾಯಿ. ಮನೆಗೆ ಹೋಗುತ್ತಾ ದಾರಿಯಲ್ಲಿರುವ ಆಂಗಡಿಯಲ್ಲಿ ಹವಾಯಿ ಚಪ್ಪಲಿ ತಗೋ ಸದ್ಯಕ್ಕೆ. ಮುಂದಿನ ತಿಂಗಳ ಸಂಬಳಕ್ಕೆ ಮತ್ತೆ ಅಂತದ್ದೇ ತಗೊಳ್ಳುವಿಯಂತೆ....."

ಅವನು ಮಾತಾಡಲು ಅವಕಾಶ ನೀಡದೆ ಸಮಾಧಾನ ಮಾಡುವ ರೀತಿಯಲ್ಲಿ ತಿಪ್ಪೆ ಸಾರಿಸಿದೆ. ಮರು ಮಾತಾಡದೆ ಅವನು ಹೊರಟು ಹೋದ.

"ಶಿವು ಥ್ಯಾಂಕ್ಸ್ ಕಣ್ರೀ..... ನನ್ನ ಹೊಸ ಚಪ್ಪಲಿ ಹೋಯ್ತು ಅಂದುಕೊಂಡಿದ್ದೆ. ವಾಪಸ್ ಸಿಕ್ಕಿತಲ್ಲ ಅಷ್ಟೇ ಸಾಕು. ಇಂಥ ಹುಡುಗರ ಬಗ್ಗೆ ನೀವು ತುಂಬಾ ಹುಷಾರಾಗಿರಬೇಕು" ಕಷ್ಟಮರ್ ಸಂತೋಷ್‌ರವರಿಂದ ಮತ್ತೆ ಫೋನು.

"ಹೌದು ಸಾರ್, ನೋಡಿ ಹುಡುಗರು ಎಂಥ ಕೆಲಸಗಳನ್ನು ಮಾಡಿಬಿಡ್ತಾರೆ, ಇದು ಗೊತ್ತಾದರೂ ನಾವು ಅವರನ್ನು ಈ ಪೇಪರ್ ಕೆಲಸದಿಂದ ತೆಗೆದುಹಾಕೊಕ್ಕಾಗಲ್ಲ.....ಏಕೆಂದರೆ ಬೇರೆ ಹುಡುಗರು ತಕ್ಷಣ ಸಿಗುವುದಿಲ್ಲವಲ್ಲ ಸಾರ್, ನಮಗೆ ತುಂಬಾ ಲೇಬರ್ ಪ್ರಾಬ್ಲಂ ಇದೆ"

"ಸರಿ ಶಿವು ಆಯ್ತು" ಆತ ಫೋನಿಟ್ಟ.

ನನಗೆ ಈಗ ಸಮಾಧಾನವಾಗಿತ್ತು. ಆ ಕಷ್ಟಮರು ಉಳಿದುಕೊಂಡ. ಈ ಹುಡುಗನನ್ನು ಸದ್ಯಕ್ಕೆ ಉಳಿಸಿಕೊಂಡಂತೆ ಆಯ್ತು. ಆದರೂ ಈ ಹುಡುಗನನ್ನು ನಂಬುವಂತಿಲ್ಲ. ನಾಳೆಯಿಂದಲೇ ಹೊಸ ಹುಡುಗನನ್ನು ಹುಡುಕಬೇಕು. ಸಿಕ್ಕಿದ ಮೇಲೆ ಇವನನ್ನು ತೆಗೆದುಹಾಕಿದರಾಯಿತು ಎಂದುಕೊಂಡೆ.

ಮರುದಿನ ಮತ್ತೆ ಎಂದಿನಂತೆ ಸೈಕಲ್ಲೇರಿ ಬಂದ ನರಸಿಂಹ ತನ್ನ ಪೇಪರ್ ಬೀಟನ್ನು ತೆಗೆದುಕೊಂಡು ಹೋದ. ನನ್ನ ಮತ್ತು ಮಾದೇಶನ ಕಣ್ಣುಗಳು ಮಾತ್ರ ಆ ಸಮಯದಲ್ಲಿ ನರಸಿಂಹನ ಕಾಲಿನ ಕಡೆ ನೆಟ್ಟಿದ್ದವು. ಅವನು ಚಪ್ಪಲಿ ಹಾಕಿರಲಿಲ್ಲ. ಅವನು ಹೋದ ಮೇಲೆ ನಾವಿಬ್ಬರು ಮುಸಿಮುಸಿ ನಕ್ಕಿದ್ದವು. ಬೀಟ್ ಮುಗಿಸಿ ಬಂದ ನರಸಿಂಹ ಅದೇ ಮನೆಯ ಬಾಗಿಲಲ್ಲಿ ಬಿಟ್ಟಿದ್ದ ತನ್ನ ಹಳೇ ಚಪ್ಪಲಿ ಹಾಕಿಕೊಂಡು ಬಂದಿದ್ದನ್ನು ನೋಡಿ ನಾನು ಮಾದೇಶನಿಗೆ ಕಣ್ಸನ್ನೆ ಮಾಡಿದೆ. ಅದನ್ನು ಗಮನಿಸಿದ ಮಾದೇಶ "ನಾನೊಬ್ಬ ಕಳ್ಳನೂ ನಾನೊಬ್ಬ ಸುಳ್ಳನೂ ಬಲುಮೋಸಗಾರನು ಸರಿಯೇನು " ಎಂದು ಜೋರಾಗಿ ಹಾಡು ಹೇಳಲಾರಂಭಿಸಿದ.

ಆಗೂ ಹೀಗೂ ಒಂದು ತಿಂಗಳು ಕಳೆಯಿತು. ಹೊಸ ಹುಡುಗ ಆನಂದನನ್ನು ಆ ಬೀಟಿಗೆ ಕಳುಹಿಸಿ ನರಸಿಂಹನನ್ನು ಮನೆಗೆ ಕಳುಹಿಸಿದ್ದೆ.

ಒಂದು ವಾರದ ನಂತರ ಆದೇ ಕಷ್ಟಮರ್ ಸಂತೋಷ್‌ರವರಿಂದ ಫೋನ್ ಬಂತು.

" ಹಲೋ ಶಿವು, ಹೊಸ ಹುಡುಗ ಬಂದಿದ್ದಾನೆ. ಇವನು ಹೇಗೆ? ಅವನ ತರಾನಾ ಎಲ್ಲಾ ಬೇರೆ ತರಾನ...." ?

ಯಾಕ್ ಸಾರ್ ಏನಾದ್ರು ಮತ್ತೆ ಅದೇ ತರ ಇವನು ಏನಾದ್ರು........." ನನಗೆ ಮತ್ತೆ ದಿಗಿಲು ಶುರುವಾಗುತ್ತಿತ್ತು. ಆಷ್ಟರಲ್ಲಿ

"ಇನ್ನು ಹಾಗೇನು ಹಾಗಿಲ್ಲ. ಸುಮ್ಮನೆ ಕೇಳಿದೆ.. ಆಷ್ಟೇ.."

ಸಾರ್, ನೀವೊಂದು ಕೆಲ್ಸ ಮಾಡಿ, ಮತ್ತೊಂದು ಜೊತೆ ಹೊಸದಾದ ಚಪ್ಪಲಿಯನ್ನೋ ಶೂಗಳನ್ನೋ ಬಾಗಿಲ ಹೊರಗಿಟ್ಟು ನೋಡಿ " ಎಂದು ನಕ್ಕಿದ್ದೆ.
ನನ್ನ ಮಾತು ಕೇಳಿ ಸಂತೋಷ್ ಕೂಡ ಜೋರಾಗಿ ನಕ್ಕಿದ್ದರು.

Saturday, December 6, 2008

ಮುಂಜಾನೆ ಸಂತೆಯಲ್ಲೊಬ್ಬ ಹಿರಿಯಜ್ಜ.

ಹಿರಿಯಜ್ಜ
ಏ ತಾತ ನಿಂಗೇನ್ ಬೇರೆ ಕೆಲಸ ಇಲ್ವ? ಹೋಗ್, ಆಮೇಲೆ ಬಾ, ಎಂದು ಅಲ್ಲಿ ಸುರೇಶ ಜೋರಾಗಿ ಕೂಗಿ ಹೇಳುತ್ತಿದ್ದಾಗ, ನನಗೆ ಗೊತ್ತಾಯಿತು. ಅವನು ಯಾರ ಮೇಲೆ ಕೂಗಾಡುತ್ತಿದ್ದಾನೆಂದು.


ಸುಮಾರು ೭೦ ದಾಟಿರಬಹುದು ಆ ಹಿರಿಯಜ್ಜನಿಗೆ. ಒಂದು ದೊಡ್ಡ ಗೋಣಿಚೀಲದಲ್ಲಿ ರದ್ದಿ ಪೇಪರ್, ಪ್ಲಾಸ್ಟಿಕ್ ದಾರ, ಮಾಮೂಲಿ ಗೋಣಿ ದಾರ, ಬಂಡಲ್ಲಾಗಿ ಬರುವ ಪತ್ರಿಕೆಗಳ ಸುತ್ತ ಹಾಕಿರುವ ಪ್ಲಾಸ್ಟಿಕ್ ಪೇಪರ್ ಎಲ್ಲವನ್ನು ತುಂಬಿಸಿಕೊಳ್ಳುವಾಗ ಯಾರಾದರೂ ಆತನಿಗೆ ಖಚಿತವಾಗಿ ಹೀಗೆ ಬೈಯ್ಯುತ್ತಾರೆ.


ಆ ಹಿರಿಯಜ್ಜ ಅವನೆಲ್ಲಾ ತೆಗೆದುಕೊಂಡು ಹೋಗುತ್ತಾನೆಂದು ಬೈಯ್ಯುವುದಿಲ್ಲ. ಪತ್ರಿಕಾ ವಿತರಕರು ಕೆಲಸ ಮಾಡುವಾಗ ಈ ಹಿರಿಯಜ್ಜ ಅವರ ಬಳಿ ಇದ್ದ ದಾರ ಪೇಪರ್ ಇತ್ಯಾದಿಗಳಿಗೆ ಕೈ ಹಾಕಿದಾಗ ಅವರಿಗೆ ತಕ್ಷಣ ಕೋಪ ಬರುತ್ತದೆ. ಅದಲ್ಲದೇ ಅವರಿಗೆ ಹುಡುಗರಿಂದ ತೊಂದರೆಯುಂಟಾದರೂ ಆ ಸಿಟ್ಟನ್ನು ಈತನ ಮೇಲೆ ಪ್ರದರ್ಶಿಸುತ್ತಾರೆ.


ಈ ಹಿರಿಯಜ್ಜ ಅದಕ್ಕೆ ಏನು ಪ್ರತಿಕ್ರಿಯೆ ನೀಡದೆ, ದೊಡ್ಡ ನಾಯಿಯೊಂದು ತನ್ನ ಬೌಂಡರಿಯೊಳಗೆ ಬೇರೊಂದು ವಯಸ್ಸಾದ ನಾಯಿಯನ್ನು ಕಂಡು ಗುರುಗುಟ್ಟಿದಾಗ ಈ ವಯಸ್ಸಾದ ನಾಯಿ ಹೆದರಿ ಬಾಲಮುದುರಿಕೊಂಡು ಹಿಂದೆ ಸರಿಯುವಂತೆ ಹಿಂದಕ್ಕೋಗುತ್ತಾನೆ ಆತ.


ಮೊದಲಿಗೆ ಅವನ ಜೊತೆ ಅವನಷ್ಟೇ ವಯಸ್ಸಾದ ಹೆಂಡತಿಯು ಇದ್ದಳು. ಹಗಲು ಹೊತ್ತು ಎಲ್ಲಿಯೂ ಕಾಣದ ಆ ಹಿರಿಯಜ್ಜ ಮುಂಜಾನೆ ನಾಲ್ಕು ಗಂಟೆಗೆ ನಮ್ಮ ದಿನಪತ್ರಿಕಾ ವಿತರಣ ವಲಯದೊಳಗೆ ಹಾಜರಿರುತ್ತಾನೆ. ಸುಮಾರು ೧೦ ವರ್ಷಗಳಿಂದ ನಾನು ಆತನನ್ನು ನೋಡುತ್ತಿದ್ದೇನೆ. ಇದುವರೆಗೂ ಒಂದು ಪದವು ಆತನ ಬಾಯಿಂದ ಹೊರಬಿದ್ದಿಲ್ಲ.


ಅವನಿಗೆ ಮಾತಾಡಲು ಬರುವುದಿಲ್ಲವೋ, ಮಾತು ಬಂದರೂ ಮಾತಾಡಲು ಅವನಿಗೆ ಇಷ್ಟವಿಲ್ಲವೋ, ಅಥವಾ ನಮ್ಮ ಭಾಷೆ ಬರುವುದಿಲ್ಲವೋ ಒಂದು ತಿಳಿಯಲಾಗಿಲ್ಲ. ನಮ್ಮ ಈ ಕೆಲಸಗಳ ನಡುವೆ ಖುಷಿ, ತಮಾಷೆ, ಕೋಪ, ಜಗಳ ಗೊಂದಲ, ಹರಟೆಗಳೆಲ್ಲಾ ನಮ್ಮ ಮುಖಗಳಲ್ಲಿ ಹೊರಹೊಮ್ಮುತ್ತಿದ್ದರೂ, ಅದನ್ನೆಲ್ಲಾ ಆತ ನೋಡಿದರೂ ಯಾವುದೇ ಪ್ರತಿಕ್ರಿಯೆ ಆತನ ಮುಖದಲ್ಲಿ ವ್ಯಕ್ತವಾಗುವುದಿಲ್ಲ.


ನಾನೇನಾದರೂ ಬೈಯ್ದಾಗ ಅಥವಾ ಮಳೆಬಂದು ನಮಗೇ ಬೇಕೆಂದು ಆತ ತುಂಬಿಕೊಂಡ ರದ್ದಿ, ದಾರ ಇತ್ಯಾದಿಗಳನೆಲ್ಲಾ ಕಿತ್ತುಕೊಂಡಾಗ ಅವನ ಹೆಂಡತಿ ಮಾತ್ರ ಪ್ರತಿಕ್ರಿಯಿಸುತ್ತಿದ್ದಳು. ಅವಳಿಗೂ ಮಾತು ಬರುವುದಿಲ್ಲವೇನೋ. ಏಕೆಂದರೇ ಅವಳು ಕೂಡ ಇಷ್ಟು ದಿನಗಳಲ್ಲಿ ಒಂದು ಮಾತು ಆಡಿರಲಿಲ್ಲ. ಕೇವಲ ಕೂಗಾಟ ಕಿರುಚಾಟವಷ್ಟೇ. ಇವರಿಬ್ಬರಿಗೂ ಫುಟ್ ಪಾತ್ ಮೇಲೆ ಜೀವನ. ಮಳೆ, ಚಳಿ, ಗಾಳಿ, ಬಿಸಿಲು ಎಲ್ಲಾ ಸಮಯದಲ್ಲೂ ಇವರದು ಮೂಕ ಪ್ರೀತಿ. ಸಂಸಾರ.


ಕೆಲವು ದಿನಗಳ ಹಿಂದೆ ಈ ಅಜ್ಜನ ಹೆಂಡತಿ ಕಾಣಲಿಲ್ಲ. ಬಹುಶಃ ಸತ್ತುಹೋಗಿರಬಹುದು. ಆತ ತನ್ನ ಜೊತೆ ಹೆಂಡತಿ ಇದ್ದಾಗ ಮುಖದಲ್ಲಿ ಯಾವುದೇ ಭಾವನೆ ವ್ಯಕ್ತಪಡಿಸದೆ ಶೂನ್ಯ ಭಾವದಲ್ಲಿ ಇದ್ದನೋ, ತನ್ನ ಹೆಂಡತಿ ಸತ್ತ ಮರುದಿನವೂ ಆದೇ ಮುಖ ಭಾವ. ನಮ್ಮಿಂದ ಬೈಸಿಕೊಳ್ಳುವುದು, ಬಾಲ ಸುಟ್ಟ ನಾಯಿಯಂತೆ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವುದು ನಡೆದೇ ಇತ್ತು.


ನಮ್ಮ ಸ್ವಸ್ತಿಕ್ ವೃತ್ತದ ಬಳಿ ಒಂದು ದೊಡ್ಡ ಕಟ್ಟಡ ಕಟ್ಟುತ್ತಿದ್ದಾರೆ. ಅಲ್ಲಿ ಕೆಲಸ ಮಾಡುವವರೆಲ್ಲಾ ದೂರದ ಬಿಹಾರಿನಿಂದ ಬಂದವರು. ಅದರ ಪಕ್ಕದಲ್ಲೇ ನಮ್ಮ ಡಿಸ್ಟ್ರಿಬ್ಯೂಶನ್ ಸೆಂಟರ್ ಇದೆ. ಆ ಕಟ್ಟಡದಲ್ಲಿ ಕೆಲಸ ಮಾಡುವವನೊಬ್ಬ ನಮ್ಮ ಪತ್ರಿಕಾ ವಲಯದೊಳಗೆ ಕಾಣಿಸಿಕೊಂಡ. ಹಗಲುಹೊತ್ತಿನಲ್ಲಿ ಆ ಕಟ್ಟಡ ಕೆಲಸ ಮಾಡುವಾಗ ಯಾವ ತರದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದನೋ ಗೊತ್ತಿಲ್ಲ. ಆದರೆ ಬೆಳಗಿನ ಆ ಸಮಯದಲ್ಲಿ ಒಂದು ಜುಬ್ಬ ಹಾಗೂ ಬರ್ಮುಡ, ಜೇಬಿನಲ್ಲೊಂದು ಮೊಬೈಲು, ಅದಕ್ಕೆ ತಗುಲಿಸಿದ ಇಯರ್ ಫೋನನ್ನು ಕಿವಿಗಿಟ್ಟುಕೊಂಡಿದ್ದ.


ದಿನನಿತ್ಯ ಇಂಥ ನೂರಾರು ಜನರು ಅಲ್ಲಿ ಓಡಾಡುತ್ತಾರೆ, ಪೇಪರ್ ಕೊಳ್ಳಲು ಬರುತ್ತಾರೆ, ಹಾಗೂ ಎಫ಼್ ಎಮ್ ರೇಡಿಯೊ ಕೇಳುತ್ತಾ ವಾಕಿಂಗ್ ಮಾಡುತ್ತಾರೆ ಅಂದುಕೊಳ್ಳುತ್ತೇವೆ. ಅದರಿಂದ ನಾವ್ಯಾರು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.


ಆದರೆ ನಮ್ಮ ಊಹೆಯೆಲ್ಲಾ ತಪ್ಪಾಗಿ, ಆತನ ಕೈಯಲ್ಲಿ ಒಂದು ಚಿಕ್ಕ ಗೋಣಿ ಚೀಲ ಹಿಡಿದುಕೊಂಡು ಈ ಹಿರಿಯಜ್ಜನಿಗೆ ಪ್ರತಿಸ್ಪರ್ಧಿಯಾಗಿ ರದ್ದಿ, ದಾರ ಎಲ್ಲಾ ತುಂಬಿಕೊಳ್ಳಲಾರಂಭಿಸಿದ. ಮಧ್ಯ ವಯಸ್ಕನಿರಬಹುದು. ದಪ್ಪಗಿದ್ದ. ಹೊಟ್ಟೆ ಸ್ವಲ್ಪ ಜಾಸ್ತಿಯಾಗೇ ಇತ್ತು. ಈ ಬಿಹಾರಿ[ನನ್ನ ಗೆಳೆಯ ಆ ಕಟ್ಟಡದ ಕೆಲಸ ಮಾಡುವವರನ್ನು ವಿಚಾರಿಸಿದಾಗ ಅವರು ಬಿಹಾರದಿಂದ ಬಂದವರೆಂದು ಹೇಳಿದ್ದರು] ಆ ಹಿರಿಯಜ್ಜನ ಹಾಗೆ ಆತುರ ಪಡದೆ ನಾವೆಲ್ಲಾ ನಮ್ಮ ಜಾಗಬಿಟ್ಟು ಎದ್ದಮೇಲೆ ನಾವು ಉಳಿಸಿಬಿಟ್ಟ ದಾರ ಪ್ಲಾಸ್ಟಿಕ್ ಪೇಪರ್, ರದ್ದಿ ಕಾಗದವನ್ನೆಲ್ಲಾ ತನ್ನ ಗೋಣಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ನಾವೆಲ್ಲರೂ ಅಲ್ಲಿಂದ ಜಾಗ ಕಾಲಿ ಮಾಡುವವರೆಗೂ ಆತ ಯಾವುದೇ ಚಿಂತೆಯಿಲ್ಲದೇ ಎಫ್ ಎಮ್ ಕೇಳುತ್ತಾ ಓಡಾಡುತ್ತಿದ್ದ.


ಬೆಳಗಿನ ರದ್ದಿ ಪೇಪರಿನಿಂದಲೇ ತನ್ನ ಜೀವನ ಸಾಗಿಸುತ್ತಿದ್ದ ಹಿರಿಯಜ್ಜನಿಗೆ ಈ ಬಿಹಾರಿ ನುಂಗಲಾರದ ತುತ್ತಾಗಿದ್ದ. ಏನು ಮಾಡುವುದು? ಆ ತಾತ ಪ್ರತಿಭಟಿಸುತ್ತಾನ ಎಂದುಕೊಂಡರೆ ೧೦ ವರ್ಷದಿಂದ ಒಂದೂ ಮಾತಾಡದವನು, ತನ್ನ ಹೆಂಡತಿ ಸತ್ತ ಮರುದಿನವೂ ಏನೊಂದೂ ಭಾವನೆಯನ್ನು ವ್ಯಕ್ತಪಡಿಸದವನು, ಇನ್ನು ನಿಜಕ್ಕೂ ಪ್ರತಿಭಟಿಸುತ್ತಾನಾ? ಸಾಧ್ಯವೇ ಇಲ್ಲ.


ನಾನು ಇದನ್ನು ಸೂಕ್ಷ್ಮವಾಗಿ ಗಮನಿಸಿದರೂ ಕೇಳುವುದು ಹೇಗೆ? ಮೊದಲಾದರೆ ಈ ಅಜ್ಜ ಹತ್ತಿರ ಬಂದರೂ ಸಾಕು ಕಾರಣವಿಲ್ಲದೇ ಬೈಯ್ಯುತ್ತಿದ್ದ ನಾವೆಲ್ಲಾ ಈಗ ಆ ಬಿಹಾರಿಬಾಬು ರದ್ದಿ ದಾರವೆಲ್ಲಾ ತುಂಬಿಕೊಂಡು ಹೋಗುತ್ತಿದ್ದರೂ ಯಾರೂ ಕೂಡ ಅವನನ್ನು ಕೇಳಲಿಲ್ಲವೇಕೆ.? ಅವನ ದೇಹಾಕಾರಕ್ಕೆ ಹೆದರಿದೆವೊ? ಇಲ್ಲಾ ಅವನ ಮೊಬೈಲು ಬಟ್ಟೆಗಳ ಔಟ್ ಲುಕ್ ನೋಡಿ ಬೆರಗಾಗಿ ಏನು ಮಾತಾಡದಂತಾದೆವೋ? ಒಟ್ಟಿನಲ್ಲಿ ಯಾರು ಈ ವಿಚಾರವಾಗಿ ಯೋಚಿಸುತ್ತಿರಲಿಲ್ಲ. ಕೊನೆಗೊಂದು ದಿನ ನಾನೆ ಕೇಳಿ ಬಿಡಬೇಕೆಂದುಕೊಂಡರೂ ಏನೆಂದು ಕೇಳುವುದು? ಕೇಳಿದರೆ ಅವನ ಪ್ರತಿಕ್ರಿಯೆ ಏನು? ನಾವು ಹಿರಿಯಜ್ಜನ ಪರವಾಗಿ ಮಾತನಾಡಿದರೆ ಅವನೇನು ಹೇಳಬಹುದು? ಹೀಗೆ ನನ್ನೆಲ್ಲಾ ಕೆಲಸಗಳ ಮಧ್ಯೆ ಈ ವಿಚಾರ ಪ್ರತಿದಿನ ಗೊಂದಲದಲ್ಲಿತ್ತು.


ಈ ಮಧ್ಯೆ ನರೇಂದ್ರ ಎನ್ನುವ ನನ್ನ ವೃತ್ತಿ ಭಾಂದವನಿಗೆ ಯಾವುದೋ ಸರ್ಕಾರಿ ಕಛೇರಿಗೆ ಸುಮಾರು ೭೦ ವಿವಿಧ ದಿನಪತ್ರಿಕೆಗಳನ್ನು ಸರಬರಾಜು ಮಾಡುವ ಅವಕಾಶ ಸಿಕ್ಕಿತಂತೆ. ಅದರೆ ಒಂದು ಷರತ್ತು ಏನೆಂದರೆ ಆಷ್ಟು ಪೇಪರುಗಳನ್ನು ಜೋಡಿಸಿ ಅದರ ಸುತ್ತಾ ಮತ್ತೊಂದು ಪ್ಯಾಕಿಂಗ್ ಪೇಪರ್ ಹಾಕಿ, ದಾರವನ್ನು ಅದರ ಸುತ್ತಾ ಕಟ್ಟಿ ಬಂಡಲ್ಲು ಮಾಡಿ ಕಳುಹಿಸಬೇಕಿತ್ತು.


ಅವನಿಗೆ ಹೊಸ ಆರ್ಡರ್ ಸಿಕ್ಕಿತೆಂಬ ಸಂತೋಷ ಒಂದು ಕಡೆಯಾದರೆ, ಈ ರೀತಿ ಪ್ರತಿದಿನ ಬಂಡಲ್ ಕಟ್ಟಲು ದೊಡ್ಡ ಪೇಪರ್ ಎಲ್ಲಿಂದ ತರೋದು ಎನ್ನುವ ಚಿಂತೆ ಮತ್ತೊಂದು ಕಡೆ. ಆಗ ಅವನ ಕಣ್ಣಿಗೆ ಬಿತ್ತು ಸಂಯುಕ್ತ ಕರ್ನಾಟಕ ಪತ್ರಿಕೆ ಹಾಗೂ ತರಂಗ ವಾರಪತ್ರಿಕೆಗಳ ಪ್ಯಾಕಿಂಗ್ ಪೇಪರುಗಳು. ಸಾಕಷ್ಟು ದೊಡ್ಡದಾಗಿರುತ್ತಿದ್ದವು. ಆವುಗಳನ್ನು ಬಿಚ್ಚಿ ಪತ್ರಿಕೆಗಳನ್ನು ಜೋಡಿಸಿದ ಮೇಲೆ ಆ ದೊಡ್ಡ ಪ್ಯಾಕಿಂಗ್ ಪೇಪರುಗಳನ್ನು ನೆಲಕ್ಕೆ ಹಾಸಿ ಅದರ ಮೇಲೆ ಕುಳಿತುಬಿಡುತ್ತಿದ್ದರು ಅದರ ವಿತರಕರು.


ಅವರ ಕೆಲಸವೆಲ್ಲಾ ಮುಗಿದಮೇಲೆ ಅವರು ಮತ್ತೆ ಅಲ್ಲಿಂದ ಎದ್ದೇಳುವ ಹೊತ್ತಿಗೆ ಅಲ್ಲಿಗೆ ಅಜ್ಜ ಮತ್ತು ಬಿಹಾರಿ ಇಬ್ಬರೂ ಹಾಜರಾಗಿಬಿಡುತ್ತಿದ್ದರು. ಇದೊಂದೆ ಅಲ್ಲ ಎಲ್ಲಾ ಪತ್ರಿಕೆಗಳ ಬಂಡಲ್ಲುಗಳನ್ನು ಬಿಚ್ಚಿ ದಾರ, ರದ್ದಿ, ಕವರ್ ತೆಗೆಯುವ ಸಮಯಕ್ಕೆ ಸರಿಯಾಗಿ ಹಾಜರಾಗಿಬಿಡುತ್ತಿದ್ದರು. ಯಾವಾಗ ನನ್ನ ಗೆಳೆಯ ನರೇಂದ್ರನ ಕಣ್ಣು ಆ ಪ್ಯಾಕಿಂಗ್ ಪೇಪರ್ ಮೇಲೆ ಬಿತ್ತೋ ಅವನು ನನಗೆ ಪ್ರತಿದಿನ ಕೊಡಬೇಕೆಂದು ಆ ವಿತರಕನಿಗೆ ಮೊದಲೇ ಹೇಳಿಬಿಟ್ಟಿದ್ದ. ಹಾಗೂ ಅದನ್ನು ತರಲು ತನ್ನ ಹುಡುಗರನ್ನು ಕಳುಹಿಸುತ್ತಿದ್ದ.


ನಾವೆಲ್ಲ ನಮ್ಮ ಕೆಲಸ ಮುಗಿದ ಮೇಲೆ ಅಲ್ಲಿನ ಸನ್ನಿವೇಶ ನೋಡಿ ನರೇಂದ್ರನಿಗೆ " ನೀನು ಇವರಿಗೆ ಕಾಂಫಿಟೇಷನ್ನ " ಅಂತ ರೇಗಿಸುತ್ತಿದ್ದೆವು.


ಒಮ್ಮೆ ನರೇಂದ್ರನೇ ಆ ಪ್ಯಾಕಿಂಗ್ ಪೇಪರ್ ತೆಗೆದುಕೊಳ್ಳುತ್ತಿದ್ದಾಗ ಆ ಬಿಹಾರಿ ಬಾಬು


"ಸಾರ್ ಅದು ನಿಮಗೆ ಬೇಕಾ" ಅವನ ಮಾತಿನಲ್ಲಿ ವಿನಯತೆ ಇತ್ತು.


"ಹೌದು ನಮಗೆ ಆಫೀಸಿಗೆ ಬಂಡಲ್ ಮಾಡಲು ಬೇಕು"


ನರೇಂದ್ರನ ಮಾತಿನಲ್ಲಿ ಸ್ವಲ್ಪ ಗತ್ತು ಇತ್ತು. ಯಾಕೆಂದರೆ ಈ ನಮ್ಮ ಬೆಳಗಿನ ಕೆಲಸದಲ್ಲಿ ಹೊರಗಿನವನು ಯಾರೊ ಒಬ್ವ ಬಂದು ನಮಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟಿದರೂ ನಮ್ಮ ಹಕ್ಕುಗಳನ್ನೂ ಯಾರೋ ಚ್ಯುತಿಗೊಳಿಸುತ್ತಿದ್ದಾರೆನ್ನುವಂತೆ ಭಾವಿಸಿ ಅದರ ಪ್ರತಿಭಟನೆಯನ್ನು ಈ ರೀತಿ ಗತ್ತಿನಿಂದ ಮಾತಾಡುವುವದರ ಮೂಲಕ ವ್ಯಕ್ತಪಡಿಸಿದ್ದನು.


"ಸರಿ ತಗೊಳ್ಳಿ ಸಾರ್" ಎಂದು ಮತ್ತಷ್ಟು ವಿನಯದಿಂದ ಹೇಳಿ ಪಕ್ಕದಲ್ಲಿದ್ದ ಚಿಕ್ಕ ಚಿಕ್ಕ ವೇಷ್ಟ್ ಪೇಪರ್ ತೋರಿಸಿ "ಇದೂ ಬೇಕಾಗುತ್ತಾ ಸಾರ್" ಎಂದ. ಅವನ ವಿನಯತೆ ನೋಡಿ ನರೇಂದ್ರನ ಗತ್ತು ಮತ್ತಷ್ಟು ಹೆಚ್ಚಾಗಿ ಅವನೆಡೆಗೆ ತಿರಸ್ಕಾರದಿಂದ "ಬೇಡ ತಗೊಳ್ಳಿ' ಎಂದ.


ಆತ ನರೇಂದ್ರನಿಗೆ ಬೇಡದ ವೇಷ್ಟು ಪೇಪರುಗಳನ್ನು ತನ್ನ ಗೋಣಿಚೀಲದಲ್ಲಿ ತುಂಬಿಕೊಂಡ. ಹೀಗೆ ಅವನ ಹುಡುಗರು ಪ್ರತಿದಿನ ಅವರಿಗೆ ಬೇಕಾದ ದೊಡ್ದ ಪ್ಯಾಕಿಂಗ್ ಪೇಪರುಗಳನ್ನು ತೆಗೆದುಕೊಂಡ ನಂತರ, ಉಳಿದ ರದ್ದಿ ಪೇಪರ್, ದಾರ, ಪ್ಲಾಸ್ಟಿಕ್ ಎಲ್ಲವನ್ನು ಆ ಬಿಹಾರಿಬಾಬು ತುಂಬಿಕೊಳ್ಳುತ್ತಿದ್ದ. ಇದನೆಲ್ಲಾ ದೂರದಿಂದ ನಿಂತು ನೋಡುತ್ತಿದ್ದ ಹಿರಿಯಜ್ಜ ಅಸಹಾಯಕತೆಯಿಂದ.


ಪ್ರತಿದಿನ ಇದನೆಲ್ಲಾ ನೋಡುತ್ತಿದ್ದ ನನಗೆ ಕುತೂಹಲ ಹೆಚ್ಚಾಗಿ ಕೊನೆಗೊಂದು ದಿನ ಕೇಳಿಯೇ ಬಿಟ್ಟೆ. ರೀ ನೀವು ಬಿಹಾರದಿಂದ ಬಂದು ಇಲ್ಲಿ ಈ ಬಿಲ್ಡಿಂಗಿನಲ್ಲಿ ಕೂಲಿ ಕೆಲಸ ಮಾಡುತ್ತೀರ ನಿಮಗೆ ಕನ್ನಡ ಚೆನ್ನಾಗೆ ಬರುತ್ತಲ್ರೀ!


ನನ್ನ ಮಾತಿಗೆ " ಹೌದು ಸಾರ್ ನಾನು ಬೆಂಗಳೂರಿಗೆ ಬಂದು ಮೂರು ವರ್ಷ ಆಯ್ತು. ಇಲ್ಲಿ ಸೆಟಲ್ ಆದ ಮೇಲೆ ಕನ್ನಡ ಕಲೀಬೇಕಲ್ವ ಸಾರ್?" ಅವನೇ ನನಗೆ ಮರು ಪ್ರಶ್ನೆ ಹಾಕಿದ.


ಅಲ್ಲ ರೀ ನಿಮಗ್ಯಾಕ್ರೀ ಇದೆಲ್ಲಾ ಆ ತಾತ ಬಂದು ರದ್ಧಿ ತಗೊಂಡು ಹೋಗಿ ಮಾರಿ ಜೀವನ ಮಾಡುತ್ತಿದ್ದ. ನೀವು ಅ ಮುದುಕನ ಹೊಟ್ಟೆಯ ಮೇಲೆ ಹೊಡೆದಾಗಲ್ಲವೇನ್ರೀ?" ಇಲ್ಲಾ ಸಾರ್ ನಾನೆಲ್ಲಿ ಹಾಗೆ ಮಾಡಿದೆ, ಬೆಳಗಿನ ಹೊತ್ತು ಸುಮ್ಮನಿರಬೇಕಲ್ಲ ಅಂತ ಈ ರೀತಿ ಇದೆಲ್ಲಾ ಆರಿಸಿ ಹೋಗಿ ಖರ್ಚಿಗೆ ಕಾಸು ಮಾಡಿಕೊಳ್ತೀನಿ. ಬಿಲ್ಡಿಂಗಲ್ಲಿ ಮಾಡೊ ಕೆಲಸದ ಸಂಪಾದನೆ ಎನಕ್ಕೂ ಸಾಲಲ್ಲ ಸಾರ್. ಮತ್ತೆ ನಾನೇ ಎಲ್ಲಾನು ತಗೊಂಡು ಹೋಗಲ್ಲ ಸಾರ್, ಆ ಮುದುಕನಿಗೂ ಬಿಡ್ತೀನಿ ನೋಡಿ, ನಾನು ಆ ಕಡೆ ಹೋಗೊಲ್ಲ ಅಲ್ಲಿರೋದನೆಲ್ಲಾ ಅವನೇ ತುಂಬಿಕೊಳ್ತಾನೆ ನೋಡಿ"


ಅವನ ಮಾತಿಗೆ ನಾನು ಏನು ಹೇಳದಾದೆ.


ಅನಂತರ ನನ್ನ ಬಳಿ ನರೇಂದ್ರ ಬಂದು "ನೋಡೋ ಎಲ್ಲೆಲ್ಲಿಂದನೋ ಬರುತ್ತಾರೆ ಇಲ್ಲಿ ಎಲ್ಲಾ ಕೆಲಸ ಮಾಡುತ್ತಾರೆ ಜೀವನ ಮಾಡ್ತಾರೆ, ಅವರಿಗೆ ಇಂಥ ಕೆಲಸ ಅಂತ ಕೆಲಸ ಅಂತ ಅಂದುಕೊಳ್ಳದೆ ಕಣ್ಣಿಗೊತ್ತಿಕೊಂಡು ಮಾಡ್ತಾರೆ, ನಂತರ ಒಳ್ಳೇ ಬಟ್ಟೆ ಹಾಕಿ ಮೊಬೈಲು ಇಟ್ಟುಕೊಂಡು ಎಫ್ ಎಮ್ ಕೇಳುತ್ತಾ ಸೋಕಿ ಮಾಡಿದ್ರೂ ಈ ರದ್ದಿ ಪೇಪರ್ ಅಯ್ತರಲ್ರೀ, ನಾವು ಇದ್ದೀವಿ ನೋಡು ಕನ್ನಡದವರು ಎಲ್ಲಿಗೂ ಹೋಗಲ್ಲ. ಇಲ್ಲೇ ಇರಬೇಕಂತೀವಿ, ನಮಗೆ ಇಂಥ ಕೆಲಸಾನೆ ಬೇಕಂತೀವಿ. ನಮಗೆ ಮೈ ಬಗ್ಗಲ್ಲ ನೋಡು" ಅಂದಿದ್ದ.


ಕೆಲವು ದಿನಗಳ ನಂತರ ಅಲ್ಲಿ ಕಟ್ಟುತ್ತಿದ್ದ ಬಿಲ್ಡ್ಂಗ್ ಕೆಲಸ ಮುಗಿದು ನಂತರ ಆ ಬಿಹಾರಿ ಕಾಣಲಿಲ್ಲ. ಆತ ಮತ್ಯಾವ ಬಿಲ್ಡಿಂಗ್ ಕೆಲಸ ಹುಡುಕಿ ಹೊರ್‍ಅಟನೊ. ಆದಾದ ಒಂದು ವಾರದಲ್ಲೇ ನರೇಂದ್ರ ದಿನಪತ್ರಿಕೆಗಳನ್ನು ಪ್ಯಾಕ್ ಮಾಡಿ ಕಳುಹಿಸುತ್ತಿದ್ದ ಕಛೇರಿಯ ಕೆಲವು ಕಮೀಷನರುಗಳು ಬೇರೆ ಬೇರೆ ಕಡೆ ವರ್ಗವಾಗಿ ಹೋದರಂತೆ.


ಇದೇ ಸಮಯವೆಂದು ಅವನು ಅಲ್ಲಿಗೆ ಕಳುಹಿಸುವ ಪತ್ರಿಕೆಗಳನ್ನು ಪ್ಯಾಕಿಂಗ್ ಪೇಪರ್ ಹಾಕದೇ ಕೇವಲ ದಾರವನ್ನು ಮಾತ್ರ ಕಟ್ಟಿ ಕಳುಹಿಸುವ ಅಬ್ಯಾಸ ಮಾಡಿದ್ದ. ಮತ್ತು ಕಛೇರಿಗೆ ವರ್ಗವಾಗಿ ಬಂದ ಹೊಸ ಸಿಪಾಯಿಗಳು, ಗುಮಾಸ್ತರೆಲ್ಲಾ ಮೊದಲಿನಿಂದಲೂ ಇದೇ ವ್ಯವಸ್ಥೆ ಇತ್ತೇನೋ ಎಂದು ಅವರಿಗೂ ಅನ್ನಿಸಿರಬೇಕು. ಅವರು ಏನು ಕೇಳದೇ ಸುಮ್ಮನಾದರು. ಮುಂದೆ ಅವನಿಗೆ ಆ ರದ್ದಿ ಪೇಪರ್ ಕಡೆಗೆ ಹೋಗುವ ಪ್ರಮೇಯವೇ ಬರಲಿಲ್ಲ.


ನರೇಂದ್ರ ಹಾಗೂ ಬಿಹಾರಿಯ ಪ್ರತಿದಿನದ ರದ್ದಿ ಪೇಪರಿನ ಆಟವನ್ನು ದಿನವೂ ನೋಡುತ್ತಾ ನಿಸ್ಸಾಹಾಯಕನಾಗಿ ಹೋಗಿದ್ದ ಹಿರಿಯಜ್ಜನಿಗೆ ಮುಂದೊಂದು ದಿನ ಆ ಬಿಹಾರಿಯೂ ಕಾಣದಾಗಿ, ನರೇಂದ್ರನಿಗೂ ಆ ಪ್ಯಾಕಿಂಗ್ ಪೇಪರ್ ಬೇಡವಾಗಿ ಆ ಕಡೆ ಸುಳಿಯದಾದಾಗ ಮತ್ತೆ ಹಿರಿಯಜ್ಜನಿಗೆ ಹುಲ್ಲುಗಾವಲು ಅವನದೇ, ಅದನ್ನು ಮೇಯುವ ಕುದುರೆಯೂ ಅವನದೇ ಅನ್ನುವಂತಾಯಿತು.


ಇಂಥ ಆಟಗಳನ್ನೆಲ್ಲಾ ನೋಡಿಯೂ ಆ ಹಿರಿಯಜ್ಜನ ಕಣ್ಣುಗಳಲ್ಲಿನ ನಿರ್ಲಿಪ್ತತೆ, ವಿಷಾದ, ಮುಖದ ಕೆನ್ನೆ ಮೇಲಿನ ಅನುಭವದ ಸುಕ್ಕುಗಳು ಎಲ್ಲಾ ಜೀವನಾನುಭವವನ್ನು ಅನುಭವಿಸಿ, ಜೀವನವೆಂದರೆ ಇಷ್ಟೇ. ಇಂಥ ಜೀವನಕ್ಕೆ ಇವರು ಯಾಕೆ ಹೀಗೆ ಹಾರಾಡುತ್ತಾರೆ ಎನ್ನುವ ಶೂನ್ಯತೆಯ ನೋಟ ನಾವು ಚಿಕ್ಕ ಚಿಕ್ಕ ವಿಷಯಗಳಿಗೂ ಆ ಸಮಯದಲ್ಲಿ ಅತಿರಥ ಮಹಾರಥರಂತೆ ಪ್ರದರ್ಶಿಸುವ ಪ್ರತಿಭೆಗಳನ್ನು ಆಣಕಿಸುತ್ತಿತ್ತು.

ಲೇಖನ : ಶಿವು.

Wednesday, November 26, 2008

ಅಡ್ಡ ಹೆಸರುಗಳು

ಪ್ರತಿಯೊಂದು ಕೆಲಸಕ್ಕೂ ನೆನಪಿಟ್ಟುಕೊಳ್ಳುವುದು ಅಥವ ಗುರುತಿಟ್ಟುಕೊಳ್ಳುವುದು ಅಂತ ಇದ್ದೇ ಇರುತ್ತದೆ. ಉದಾಹರಣೆಗೆ ಅಡುಗೆಮನೆಯಲ್ಲಿ ಯಾವ ಯಾವ ಮಸಾಲೆ, ಮೆಣಸು, ಉಪ್ಪು, ಸಕ್ಕರೆ ಇತರೆ ವಸ್ತುಗಳು ಯಾವ ಯಾವ ಬಾಕ್ಸಿನಲ್ಲಿರುತ್ತವೆ ಅಂತ ಗುರುತಿಸಿಟ್ಟುಕೊಳ್ಳುವುದು, ಹಾಗೆ ಕಂಪ್ಯೂಟರಿನಲ್ಲಿ ಇರುವ ದಾಖಲೆಗಳು ಯಾವ ಯಾವ ಫೋಲ್ಡರಿನಲ್ಲಿ ಇರುತ್ತವೆ ಎನ್ನುವುದನ್ನು ನೆನಪಿಸಿಕೊಳ್ಳುವುದು.

ಇದೇ ರೀತಿ ನಮ್ಮ ದಿನಪತ್ರಿಕೆ ವಿತರಣೆ ಕೆಲಸದಲ್ಲೂ ಒಂದು ಏರಿಯಾದಲ್ಲಿರುವ ಅನೇಕ ರಸ್ತೆಗಳು, ಆ ರಸ್ತೆಗಳಲ್ಲಿ ನಾವು ಪ್ರತಿದಿನ ದಿನಪತ್ರಿಕೆ ಹಾಕುವ ಮನೆಗಳನ್ನು ನಾವು ಏಜೆಂಟರು ಮತ್ತು ನಮ್ಮ ಬೀಟ್ ಹುಡುಗರು ನೆನಪಿಟ್ಟುಕೊಳ್ಳಬೇಕು. ಇದನ್ನು ನಾವು ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ.

ಈ ರೀತಿ ನಮ್ಮ ಗ್ರಾಹಕರ ಮನೆಗಳನ್ನು ನಾವು ಗುರುತಿಟ್ಟುಕೊಂಡು ಹೋಗಿ ಪ್ರತಿತಿಂಗಳು ಹಣ ವಸೂಲಿ ಮಾಡುವ ರೀತಿ ನೀತಿಗಳು, ನಮ್ಮ ಹುಡುಗರು ಮನೆಗಳನ್ನು ಗುರುತಿಟ್ಟುಕೊಳ್ಳುವ ವಿಧಾನ, ಅದಕ್ಕೇ ಅವರ್‍ಎ ನಾಮಕರಣ ಮಾಡಿಕೊಂಡ ಅಡ್ಡ ಹೆಸರುಗಳು, ತಮಾಷೆ ಪದಗಳು, ಆ ಕ್ಷಣಕ್ಕೆ ಬಲು ಮೋಜೆನಿಸಿದರೂ ಅದು ನನಗೂ ಮತ್ತು ನನ್ನ ಬೀಟ್ ಹುಡುಗರಿಗೂ ತುಂಬಾ ಮುಖ್ಯವಾಗಿರುತ್ತದೆ. ಮತ್ತು ಸುಲಭವೂ ಆಗಿರುತ್ತದೆ.

ಈ ವಿಚಾರವಾಗಿ ನಮ್ಮಲ್ಲಿ ನಡೆಯುವ ಮಾತುಕತೆ ಸನ್ನಿವೇಶಗಳಲ್ಲಿ ಕೆಲವನ್ನು ನಾನಿಲ್ಲಿ ಪ್ರತಿಬಿಂಬಿಸಲು ಪ್ರಯತ್ನಿಸುತ್ತೇನೆ.

ಆತ ತಮಿಳು ಹುಡುಗ ಸೇಬು. [ಅದು ಅಡ್ಡ ಹೆಸರು, ನಿಜ ಹೆಸರು ಶರತ್ ಅಂತ. ಶರತ್ ಅಂತ ಕೂಗಿದಾಗ ತಿರುಗಿನೋಡದೆ ಸೇಬು ಎಂದಾಗ ಚಕ್ಕನೆ ತಿರುಗುವಷ್ಟು ಒವರ್ ಟೇಕ್ ಮಾಡಿದೆ ಅವನ ಅಡ್ಡ ಹೆಸರು]. ಒಂದು ದಿನ ಯಾವುದೋ ಒಂದು ಮನೆಗೆ ಪತ್ರಿಕೆ ಹಾಕದೆ ತಪ್ಪಿಸಿದ್ದ. ಎಂದಿನಂತೆ ಆ ಗ್ರಾಹಕ ನನಗೆ ಫೋನ್ ಮಾಡಿ ನಮ್ಮ ಮನೆಗೆ ಇವತ್ತಿನ ಪೇಪರ್ ಬಂದಿಲ್ಲವೆಂದು ಹೇಳಿದರು. ಮರುದಿನ ಇವನು ಬಂದಾಗ ನಾನು ಕೇಳಿದೆ.

"ಹೇ ಸೇಬು, ಗಣೇಶ ದೇವಸ್ಥಾನದ ರಸ್ತೆಯಲ್ಲಿರೋ ಅಜ್ಜಿ ಮನೆಗೆ ಯಾಕೋ ನಿನ್ನೆ ಕನ್ನಡಪ್ರಭ ಹಾಕಲಿಲ್ಲ ? " ತುಸು ಕೋಪಗೊಂಡವನಂತೆ ನನ್ನ ಪ್ರಶ್ನೆ.

ತಕ್ಷಣ ಅವನಿಗೆ ಗಾಬರಿಯಾದರೂ ಅವನ ಮುಖದಲ್ಲಿ ಅದನ್ನು ತೋರಗೊಡದೆ "ಯಾವ ಮನೆ ಸಾರ್".

"ಆದೇ ಕಣೋ ಅಜ್ಜಿ ಮನೆ"

"ಯಾವುದು ಅಜ್ಜಿ ಮನೆ ಸಾರ್? "

ಅವನಿಗೆ ಇದನ್ನು ಗುರುತಿಸಲು ಏನು ಮಾಡುವುದು?

ನಮ್ಮಲ್ಲಿ ಒಂದು ಪದ್ದತಿ ಇದೆ. ನಮಗೆ ಬೇಕಾದ ಮನೆ ಬಹುಶಃ ಐದನೆಯದು ಆಗಿದ್ದರೆ ಅದರ ಹಿಂದಿನ ಮನೆಗಳ ಗುರುತುಗಳನ್ನು ಹೇಳಿಕೊಂಡು ಅವನಿಗೆ ಒಂದೊಂದಾಗಿ ನೆನಪಿಸುತ್ತಾ ಹೇಳಿಕೊಂಡು ಬರಬೇಕು. ಹಾಗೆ ನಾನು ಅವನಿಗೆ ಕೇಳಿದೆ.

ನಿನಗೆ ಆರನೇ ಮನೆ ಗೊತ್ತಿಲ್ಲವೇನೊ?

ಇಲ್ಲಾ ಸಾರ್,

ಸರಿ ಮೊದಲನೆ ಮನೆ ಹೇಳು ?

ಅವನು ಮನಸಿನಲ್ಲೇ ನೆನೆಸಿಕೊಂಡು, ಕನ್ನಡದಲ್ಲಿ ಮಗ್ಗಿ ಹೇಳುವಂತೆ ಗೊಣಗತೊಡಗಿದ.

ಪ್ರಜಾವಾಣಿ, ನಂತರ ನಾಯಿಮನೆ, ೩ನೇ ಮಹಡಿ ಟೈಮ್ಸ್ , ದೊಡ್ಡ ಗೇಟು ಕನ್ನಡಪ್ರಭ, ಹಸುಮನೆ, ಕಾವ್ಯ ಮನೆ...... ಸಾರ್ ಅದು ಕಾವ್ಯ ಮನೆ"

ಯಾವ ಕಾವ್ಯನೋ ?

ಅದೇ ಸಾರ್ ಹಸು ಮನೆ ಆದಮೇಲೆ ಸಿಗೋ ಮನೆ"

ಲೋ ಅದು ಅಜ್ಜಿ ಮನೆ ಅಲ್ಲವೇನೋ,

ಇಲ್ಲ ಸಾರ್, ಅದು ಕಾವ್ಯ ಮನೆ.

ಯಾರದು ಕಾವ್ಯ ?

ಕಾವ್ಯ ಆ ಮನೆ ಹುಡುಗಿ ಸಾರ್, ದಿನಾ ಆ ಹುಡುಗಿ ಕಾಲೇಜಿಗೆ ಹೊರಡೋದು ನಾನು ಪೇಪರ್ ಹಾಕೊ ಸಮಯದಲ್ಲೇ ಸಾರ್,

ನಿನಗೇಗೊ ಗೊತ್ತು ? ಆ ಹುಡುಗಿ ಹೆಸರು ಕಾವ್ಯ ಅಂತ ?

ಇದೇನ್ ಸಾರ್ ನೀವು ಹೀಗೆ ಕೇಳ್ತೀರಾ ? ಆ ಮನೆ ಕಾಂಪೊಂಡಲ್ಲಿ ಬರೆದಿದೆಯಲ್ಲ ! ಅದಲ್ಲದೇ ಅವರಮ್ಮ ಪ್ರತಿದಿನಾ ಆ ಹುಡುಗಿ ಹೊರಡೋ ಅವಸರದಲ್ಲಿ ಏನಾದರೂ ಬಿಟ್ಟು ಹೋಗುವಾಗ ಅವರಮ್ಮ " ಹೇ ಕಾವ್ಯ ಪೆನ್ನು ಬಿಟ್ಟಿದ್ದಿಯಲ್ಲೇ, ಬುಕ್ ಬಿಟ್ಟಿದ್ದಿಯಲ್ಲೇ" ಎಂದು ಕೂಗಿ ಹೇಳ್ತಾರೆ. ಅದರಿಂದ ನನಗೆ ಗೊತ್ತಾಯ್ತು ಅವಳ ಹೆಸರು ಕಾವ್ಯ ಅಂತ ! ಅಂತ ಹೇಳಿ ಹಲ್ಲು ಕಿರಿದ.

ಎಲಾ ಫಟಿಂಗನೇ ಎಷ್ಟು ಚೆನ್ನಾಗಿ ಎಲ್ಲಾ ಗಮನಿಸಿದ್ದಾನೆ ! ನಾನೇ ಒಂದು ದಿನವೂ ಆ ಹುಡುಗಿಯನ್ನು ನೋಡಿಲ್ಲ. ನಾನು ಹಣ ವಸೂಲಿಗೆ ಹೋದಾಗ ಆ ಮನೆಯ ವಯಸ್ಸಾದ ಅಜ್ಜಿ ಬಂದು ದುಡ್ಡು ಕೊಡುತ್ತಿದ್ದರು. ಆ ಕಾರಣಕ್ಕಾಗಿ ನಾನು ಅಜ್ಜಿ ಮನೆ ಎಂದು ಗುರುತಿಟ್ಟುಕೊಂಡಿದ್ದೆ. ಆದರೆ ಇವನಿಗೆ ಅಜ್ಜಿಮನೆಯೆಂದರೆ ಗೊತ್ತಾಗಲಿಲ್ಲವಲ್ಲ ! ಆ ಮನೆಯಲ್ಲಿ ಕಾಲೇಜಿಗೆ ಹೋಗುವ ಸುಂದರ ಹುಡುಗಿ ಕಾವ್ಯ ಇರುವಾಗ ಇವನಿಗೆ ಅಜ್ಜಿ ಏಕೆ ಬೇಕು ?

ಹೀಗೆ ನಾವು ಮನೆಯನ್ನು ಗುರುತಿಟ್ಟುಕೊಳ್ಳುವ ವಿಧಾನಗಳು ಚಾಲ್ತಿಯಲ್ಲಿರುತ್ತವೆ. ಇನ್ನು ಕೆಲವು ಬಲು ಮೋಜೆನಿಸುತ್ತವೆ.

ಮಂಜ ಅವತ್ತು ಬೇಗ ಬಂದಿದ್ದ ನನ್ನ ಒತ್ತಡಕ್ಕೆ. ಅವನು ಎದ್ದ ತಕ್ಷಣ ಟಾಯ್ಲೆಟ್ಟಿಗೆ ಹೋಗಬೇಕೆನ್ನುವುದು ಅವನ ಅಭ್ಯಾಸ. ಜೊತೆಗೆ ಅವನಿಗೆ ಅದು ಸಮಸ್ಯೆಯೂ ಕೂಡ. ಅವನು ಲೇಟಾಗಿ ಬಂದಾಗ ಯಾಕೋ ಲೇಟು ಅಂದರೆ " ಇಲ್ಲಾರಿ ನಾನು ಬೇಗನೆ ಎದ್ದಿದ್ದೆ. ಆದರೆ ಟಾಯ್ಲೆಟ್ಟಿಗೆ ಅವಸರವಾಯ್ತು. ಅಲ್ಲಿ ಕೂತವನು ಅಲ್ಲೇ ನಿದ್ದೆ ಮಾಡಿಬಿಟ್ಟಿದ್ದೆ" ಎಂದು ಹೇಳುತ್ತಿದ್ದ.

ಅವತ್ತು ಬೇಗ ಬಂದವನು "ರ್ರೀ ನನಗೆ ಬೇಗ ಬೀಟ್ ಪೇಪರ್ ಜೋಡಿಸಿಕೊಡಿ" ಅಂದ. ಯಾಕೋ ಅಂದೆ. ಅವನು "ಆ ತಾತ ಕಾಯ್ತಾ ಇರ್ತಾರೆ ಅಮೇಲೆ ಆನೆ ಗೇಟು, ಬ್ರೀಗೇಡ್ ಲಿಂಕ್ಸ್ ಕಾಂಪ್ಲೆಕ್ಸಿನಲ್ಲಿ ಅಜ್ಜಿ, ಬೆಕ್ಕು ಹೌಸ್[ ಆ ಮನೆಯಲ್ಲಿ ಮರಿಗಳ ಸಮೇತ ೧೨ ಬೆಕ್ಕುಗಳ ಸಂಸಾರವಿದೆ]ನಲ್ಲಿ ಮುಸ್ಲಿಮ್, ನಂತರ ಎಸ್.ಎಲ್. ಆಪಾರ್ಟ್‌ಮೆಂಟಿನಲ್ಲಿ ಮಲೆಯಾಳಿ ಅಂಟಿ, ಭೂತ ಬಂಗ್ಲೆ[ಹಳೇ ಕಾಲದ ಮನೆಗೆ ನಾವಿಟ್ಟ ಹೆಸರು]ಯಲ್ಲಿ ವಾತನ ಗಡ್ಡದ ಬುಡ್ಡ. ಶ್ರೀಪುರಂನಲ್ಲಿ ಪುರಿ ಮೂಟೆ ಆಂಟಿ, ಇವರೆಲ್ಲರೂ ಬೇಗ ಪೇಪರ್ ಕೇಳ್ತಾರೆ, ಇದೆಲ್ಲದಕ್ಕಿಂತ ಮೊದಲು ಅರ್ಜೆಂಟ್ ಅಪಾರ್ಟ್‌ಮೆಂಟ್[ಅದಕ್ಕೂ ನಾವಿಟ್ಟ ಹೆಸರು. ಪೂರ್ತಿ ಅಪಾರ್ಟ್‌ಮೆಂಟಿನವರೆಲ್ಲಾ ಬೆಳಿಗ್ಗೆ ಆರು ಗಂಟೆಗೆ ಎದ್ದು ಪೇಪರಿಗಾಗಿ ಕಾಯುತ್ತಾರೆ]ನಲ್ಲಿ ಮೊದಲ ಮಹಡಿಯ ಬಲಬಾಗದ ಬಾಗಿಲಲ್ಲಿ ಆರ್ಜೆಂಟ್ ಆಂಟಿ ಮತ್ತು ಅಂಕಲ್ ಕಾಯುತ್ತಿರುತ್ತಾರೆ. ಅವರಿಗೆಲ್ಲಾ ಅರ್ಜೆಂಟಾಗಿ ಪೇಪರ್ ಹಾಕಿ ನಾನು ಮನೆಗೆ ಹೋಗಿ ಅರ್ಜೆಂಟಾಗಿ ಟಾಯ್ಲೆಟ್ಟಿಗೆ ಹೋಗಬೇಕು, ಬೇಗ ಕೊಡಿ" ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದ್ದ. ಅವನ ಮಾತನ್ನು ಕೇಳಿ ನಾನು ಸೇರಿದಂತೆ ಉಳಿದ ಹುಡುಗರೆಲ್ಲಾ ಚೆನ್ನಾಗಿ ನಕ್ಕಿದ್ದೆವು.

ಒಂದಷ್ಟು ದಿವಸ ಈ ವಿಚಾರದಲ್ಲಿ ಅವನನ್ನು ಚೆನ್ನಾಗಿ ಗೇಲಿ ಮಾಡಿದ್ದೆವು. ಇಷ್ಟೆಲ್ಲಾ ಅಡ್ಡ ಹೆಸರಿನಲ್ಲಿ ಗುರುತಿಟ್ಟುಕೊಳ್ಳುವ ಮಂಜನಿಗೆ "ಮಚ್ಚುಕೊಟ್ಟೈ" [ಮಚ್ಚು ಕೊಟ್ಟೈ ಅಂದರೆ ತಮಿಳುಭಾಷೆಯಲ್ಲಿ ಸಿಪ್ಪೆ ಬಿಡಿಸಿದ ಅವರೆ ಕಾಯಿ] ಅಂತ ಆಡ್ಡ ಹೆಸರಿದೆ !

ಸೇಬುವಿನಂತೆ[ಶರತ್] ವಯಸ್ಸಾದವರನ್ನು ಬಿಟ್ಟು ಹುಡುಗಿಯರ ಮನೆಗಳನ್ನು ಗುರುತಿಟ್ಟುಕೊಳ್ಳುವಂತ ಹುಡುಗರು ಎಲ್ಲಾ ವಿತರಣಾ ಕೇಂದ್ರದಲ್ಲೂ ಹೆಚ್ಚಿಗೆ ಇರುತ್ತಾರೆ.

ನಾವು ಕೆಲವು ಬಾರಿ ನಮ್ಮ ಒಂದು ಬಡಾವಣೆಯ ಗಿರಾಕಿಗಳ ಮನೆಗಳು ದೂರವಿದ್ದರೆ ನಮಗೆ ಹತ್ತಿರವಿರುವ ಗಿರಾಕಿಗಳನ್ನು ಇತರ ವೃತ್ತಿಭಾಂದವರ ಜೊತೆ ಬದಲಿಸಿಕೊಳ್ಳುತ್ತೇವೆ. ಇದರಿಂದ ಇಬ್ಬರಿಗೂ ಅನುಕೂಲವಾಗುತ್ತದೆ. ನಮ್ಮ ದೂರದ ಗಿರಾಕಿಗಳು ಅವರಿಗೆ ಹತ್ತಿರ, ಹಾಗೂ ಅವರ ದೂರದ ಗಿರಾಕಿಗಳು ನಮಗೆ ಹತ್ತಿರ ಸಿಗುವಂತಾಗುತ್ತಾರೆ.

ಇಂಥ ಬದಲಾವಣೆಯ ಕೆಲಸದಲ್ಲಿ ತೊಡಗಿದ್ದ ನಾನು ಬಾಲ್ಡಿ ಮಂಜ ಇಬ್ಬರೂ ಕೂತು ಒಂದೊಂದು ಕಾಲಿ ಪೇಪರಿನಲ್ಲಿ ನಮ್ಮ ಗಿರಾಕಿಗಳ ಪಟ್ಟಿ ಮಾಡತೊಡಗಿದೆವು. ನಮ್ಮ ಭಾಷೆಯಲ್ಲಿ ಅವು ೧೦ ಮನೆಗಳಿದ್ದರೆ

೧. ಟೈಮ್ಸ್ - ಮೊದಲ ಮಹಡಿ.
೨. ಕನ್ನಡಪ್ರಭ- ಕಾರ್ನರ್ ಮನೆ
೩. ಪ್ರಜಾವಾನಿ - ಬ್ಲಾಕ್ ಗೇಟು
೪. ಡೆಕ್ಕನ್ - ಆಪಾರ್ಟ್‌ಮೆಂಟಿನ ಮೂರನೆ ಮಹಡಿ
೫. ಟೈಮ್ಸ್ - ಅಜ್ಜಿ ಮನೆ......

ಹೀಗೆ ಮುಂದುವರಿಯುತ್ತದೆ. ನಂತರ ಅವನ ಗಿರಾಕಿಗಳನ್ನು ನಮ್ಮ ಹುಡುಗರಿಗೆ ಹಾಗೂ ನನ್ನ ಗಿರಾಕಿಗಳನ್ನು ಅವನ ಹುಡುಗರಿಗೆ ತೋರಿಸಿದ ನಂತರ ಹುಡುಗರು ಅವರಿಗಷ್ಟ ಬಂದಂತೆ ಆ ಮನೆಗಳಿಗೆ ಆಡ್ಡ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ.

ಮುಂದೆ ನಮಗಲ್ಲದಿದ್ದರೂ ಅವರಿಗಾಗಿ ನಾವು ಬದಲಾಯಿಸಿಕೊಂಡ ಗಿರಾಕಿಗಳ ಮನೆಗಳನೆಲ್ಲಾ ಆಡ್ಡ ಹೆಸರುಗಳಿಗೆ ಬದಲಿಸಿಕೊಡಬೇಕು. ಈ ಮೂಲಕ ನಾವು ಬಹು [ಅಡ್ಡ ಹೆಸರಿನ] ಭಾಷಾ ತಜ್ಞರಾಗಬೇಕು !

ನಂತರ ಹೊಸ ಹಾಗೂ ಹಳೆಯ ಗಿರಾಕಿಗಳ ಪೇಪರುಗಳನ್ನು ಜೋಡಿಸಿ ಕಳಿಸಿದರೆ ಈ ರೀತಿ ಅಡ್ಡ ಹೆಸರು ಇಡುವುದರಲ್ಲಿ ಪ್ರವೀಣನಾದ ಚಂದ್ರ ರನ್ನ ಬೀಟಿನ ಒಂದು ಆಪಾರ್ಟ್‌ಮೆಂಟಿನಲ್ಲಿ ಹೊಸ ಗಿರಾಕಿಗಳಿಗೆಲ್ಲಾ ಹಾಕಿ ಅವರ ಪಕ್ಕದ ಮನೆಗಳಾದ ಹಳೆಯ ಗಿರಾಕಿಗೆ ಹಾಕದೆ ಮರೆತು ಬಂದಿದ್ದ ಭೂಪ !

ನಮ್ಮ ಹುಡುಗರು ಪ್ರತಿದಿನ ಒಂದಾದರೂ ಮನೆಗೆ ದಿನಪತ್ರಿಕೆ ತಪ್ಪಿಸುತ್ತಿರುತ್ತಾರೆ. "ಯಾಕೊ ಹೀಗೆ ಮರೆತುಹೋಗುತ್ತೀಯ ಅವರೇನು ಹೊಸಬರಲ್ಲವಲ್ಲ, ಹಳಬರಿಗೆ ಈ ರೀತಿ ತಪ್ಪಿಸುತ್ತೀಯಲ್ಲೋ" ಅಂದರೆ "ಮರೆತುಹೋಯ್ತು" ಅಂತಾರೆ.

ಅದ್ಯಾಗೋ ಸಾಧ್ಯ, ನೀನು ಊಟ ಮಾಡೋದು ಮರೆಯೊಲ್ಲ ತಾನೆ, ಹಾಗೆ ಇಲ್ಲೂ ನೀನು ಹಾಕೊ ಗಿರಾಕಿಗಳ ಮನೆಯನ್ನು ಹೇಗೆ ಮರೀತೀಯೋ ಎಂದು ಕೇಳಿದರೆ ಉತ್ತರ ನೀಡದೆ ನಗುತ್ತಾರೆ.

ನಿಜವಾಗಿ ಅವನು ತಪ್ಪಿಸಬಾರದೆಂದುಕೊಂಡರೂ ಒಂದೇ ಮನೆಗೆ ಅಗಾಗ ತಪ್ಪಿಸುತ್ತಿದ್ದರೆ ಆ ಮನೆಗೆ ಅಡ್ಡ ಹೆಸರಿಟ್ಟಿರುವುದಿಲ್ಲ. ಇದೇ ಕಾರಣಕ್ಕೆ ಆ ಹುಡುಗನಿಗೆ ಅದು ಚೆನ್ನಾಗಿ ಮನದಟ್ಟಾಗುವುದಿಲ್ಲ.

ದಿನತಂತಿ ಎಣಿಸಿಕೊಡುವ ಭಗಿನಾಳ ಶೆಟ್ಟಿಯಂತೂ "ಮಗ್ಗಿರಾಜ"ನೆಂದೇ ಪ್ರಸಿದ್ಧಿ. ಶೆಟ್ಟರೇ ೨೦ ದಿನ ತಂತಿ ಕೊಡಿ ಎಂದರೆ ಸಾಕು. "ಐದೊಂದಲ ಐದು, ಐದ್ ಎರಡ್ಲಾ ಹತ್ತು.......ಐದು ಮೂರ್ಲ ಹದಿನೈದು, ಐದು ನಾಲ್ಕಲಿ ಇಪ್ಪತ್ತು" ಹೀಗೆ ಎಣಿಸುತ್ತಾನೆ. ದುಡ್ಡು ಕೊಡಬೇಕಾದರೂ ಪಡೆಯಬೇಕಾದರೂ ಎರಡೊಂದಲಿ ಎರಡು............ಶುರುವಾಗುತ್ತದೆ.

ಶೆಟ್ಟರೆ ಒಂದು ಕ್ಯಾಲಿಕ್‌ಲೇಟರ್ ಇಟ್ಟುಕೊಳ್ಳೀ ಎಂದರೆ ಸಾಕು. ಆತನಿಗೆ ಸರ್ರನೇ ಕೋಪ ಬಂದು ಬಿಡುತ್ತದೆ. ಎದುರಿಗೆ ನಿಂತಿದ್ದವನನ್ನು ದುರ್ವಾಸ ಮುನಿಯಂತೆ ದಿಟ್ಟಿಸಿ "ನಾನು ಈ ಕೆಲಸದಲ್ಲಿ ನಲವತ್ತು ವರ್ಷದಿಂದ ಇದ್ದೀನಿ. ಒಂದು ದಿನ ಕೂಡ ಲೆಕ್ಕ ತಪ್ಪಿಲ್ಲ. ಇಲ್ಲಿ ಇರೋ ಯಾರನ್ನಾದ್ರೂ ಕೇಳಿಕೊಂಡು ಬಂದುಬಿಡು ನಾನೇನಾದ್ರು ಲೆಕ್ಕ ತಪ್ಪು ಹೇಳಿದ್ರೆ, ನೀನು ಕೇಳಿದ್ದು ಕೊಟ್ಟು ಬಿಡ್ತೀನಿ. ನಾನು ಈ ಲೈನಿಗೆ ಬಂದಾಗ ನೀನು ಹುಟ್ಟೇ ಇರಲಿಲ್ಲ. ನಿನ್ನ ವಯಸ್ಸಿಗಿಂತ ಜಾಸ್ತಿ ಸರ್ವಿಸ್ ನನಗೆ ಈ ಕೆಲಸದಲ್ಲಿ ಆಗಿದೆ.

ಅವತ್ತಿನಿಂದ ಕ್ಯಾಲಿಕ್‌ಲೇಟರ್ ಉಪಯೋಗಿಸಲಿಲ್ಲ ಗೊತ್ತಾ ! ಅದೆಲ್ಲಾ ನಿನ್ನಂತೋರಿಗೆ" ಮುಂಗೋಪಿಯು, ಸಂಪ್ರದಾಯವಾದಿಯೂ ಆದ ಶೆಟ್ಟಿ ಹೀಗೆ ಒಂದೇ ಸಮನೆ ದಬಾಯಿಸುತ್ತಿದ್ದ.

ನಮ್ಮಲ್ಲಿ ಯಾರಾದರೂ ಲೆಕ್ಕಚಾರದಲ್ಲಿ ತಪ್ಪು ಮಾಡಿದಾಗ "ಹೋಗು ಮಗ್ಗಿ ರಾಜನ ಹತ್ತಿರ ಮಗ್ಗಿ ಕಲಿತುಕೊಂಡು ಬಾ ಸರಿಯಾಗುತ್ತೀಯಾ " ಎಂದು ರೇಗಿಸುತ್ತಿದ್ದವು.

ಅವತ್ತೊಂದು ದಿನ ಬೆಳಗಿನ ಜಾವದಲ್ಲೇ ಈ ಮಗ್ಗಿರಾಜನ ೫೦ ಪೇಪರುಗಳಿರುವ ನಾಲ್ಕು ಬಂಡಲುಗಳು ಕಳುವಾಗಿಬಿಟ್ಟಿದ್ದವು. ಇದು ದೊಡ್ಡ ಸುದ್ಧಿಯಾಗಿಬಿಟ್ಟಿತ್ತು. ನಾವೆಲ್ಲಾ ಆತನಿಗೆ ಸಮಾಧಾನ ಮಾಡಲು, ಸಂತೈಸಲು ಆತ್ಮೀಯವಾಗಿ ಎಷ್ಟು ಹೋಗಿದೆ ಎಂದರೆ "ಐವತ್ತೊಂದು ಐವತ್ತು, ಐವತ್ತೆರಡಲಿ ನೂರು, ಐವತ್ತು ಮೂರ್ಲಿ ನೂರೈವತ್ತು, ಐವತ್ತು ನಾಲ್ಕಲಿ ಇನ್ನೂರು ಎನ್ನಬೇಕೆ !

ಇಷ್ಟಕ್ಕೆ ಮುಗಿಯುವುದಿಲ್ಲ ಈ ಅಡ್ಡ ಹೆಸರಿನ ಕತೆ. ಗಿರಾಕಿಗಳಿಗೆ ಮತ್ತು ಅವರ ಮನೆಗಳಿಗೆ ಇಟ್ಟಿರುವ ಅಡ್ಡ ಹೆಸರುಗಳು ಒಂದು ತೂಕವಾದರೆ ನಾವು ವೆಂಡರ್‌ಗಳು, ಹುಡುಗರು ಒಬ್ಬರಿಗೊಬ್ಬರು ಇಟ್ಟುಕೊಂಡಿರುವ ಅಡ್ಡ ಹೆಸರುಗಳು ಮತ್ತೊಂದು ತೂಕ. ಈ ವಿಚಾರದಲ್ಲೂ ನಾವು ಪಕ್ಕ ವೃತ್ತಿಪರರೆಂದೇ ಹೇಳಬಹುದು.

ನನ್ನ ಬಳಿ ಇರುವ ಹುಡುಗರಲ್ಲಿ ಬೆಳಿಗ್ಗೆ ಎದ್ದು ಬಂದು ಎಲ್ಲಾ ಕೆಲಸ ಮುಗಿದು ಒಂದೆರಡು ಗಂಟೆ ಕಳೆದರೂ ಕುಂಬಕರ್ಣನಂತೆ ನಿದ್ರೆ ಮೂಡಿನಲ್ಲಿರುವ ವೇಲು ಮುರುಗನ್ ಎನ್ನುವ "ನಿದ್ರಾ ರಾಜ", ಯಾವಾಗಲು ಮೂಗಿನ ಮೇಲೆ ಕೋಪವಿರುವ ಸುದೀರ್ ಎನ್ನುವ "ಷಾರ್ಟ್ ಟೆಂಪರ್", ಹೇಳದೆ ಕೇಳದೆ ರಜಾ ಹಾಕುವ ಸಿದ್ದ "ಚಕ್ಕರ್ ಮಲ್ಲ", ತೂಕ ಹಾಕಿದರೆ ೪೦ ಕೆಜಿ ತೂಗುವ ೬ ಆಡಿ ಎತ್ತರದ ಆನಂದ್ ಎನ್ನುವ "ಸ್ಟ್ರಾಂಗ್ ಮ್ಯಾನ್" ಪೇಪರ್ ಕೆಲಸ ಮುಗಿದ ತಕ್ಷಣ ಕಾಲೇಜಿನ ಹುಡುಗಿಯರನ್ನು ನೋಡಲು ಹಾ ತೊರೆಯುವ ಮಾದೇಶನೆಂಬ "ರೋಮಿಯೋ". ಸದಾ ಹಲ್ಲು ಗಿಂಜುತ್ತಾ ಬರುವ ಜಿಪುಣ ಇಂದರ್ ಎಂಬ "ಮಾರ್ವಾಡಿ" ಸಪ್ಲಿಮೆಂಟರಿ ಹಾಕದೆ ಕದ್ದು ಹೋಗಿ ಸಿಗರೇಟು ಸೇದುವ ಆಶೋಕ ಎಂಬ "ಸೋಂಬೈರಿ" ಇದ್ದಾರೆ.

ಇನ್ನು ಇತರ ವೃತ್ತಿ ಭಾಂದವರ ಹುಡುಗರ ಹೆಸರುಗಳು ಅವರವರ ಗುಣಗಳಿಗೆ ತಕ್ಕಂತೆ ಅಡ್ಡ ಹೆಸರು ಸದಾ ಚಾಲ್ತಿಯಲ್ಲಿರುತ್ತವೆ.

ಈ ವಿಚಾರದಲ್ಲಿ ನಾವು ತಪ್ಪಿಸಿಕೊಳ್ಳುವ ಆಗಿಲ್ಲ. ಸದಾ ಕಾಲ ಮತ್ತಿನಲ್ಲಿರುವ ಕೆ.ಸಿ.ರಾಜನಿಗೆ "ನೈಂಟಿ", ತಮಿಳು ಏಜೆಂಟ್ ಶರವಣನ್‌ಗೆ "ಕಾಟ್", ಈ ವೃತ್ತಿ ಜೊತೆಗೆ ಬಡ್ಡಿ ವ್ಯವಹಾರ ಮಾಡುವ ಬಾಲಕೃಷ್ಣನಿಗೆ "ಮೀಟರ್", ಚಿಕ್ಕ ಅಂಗಡಿ ಇಟ್ಟುಕೊಂಡು ಚಿಲ್ಲರೆ ಸಾಮಾನು ಜೊತೆಗೆ ದಿನಪತ್ರಿಕೆ ಮಾರುವ ನೂರಕ್ಕೂ ಹೆಚ್ಚು ಕೆಜಿ ತೂಗುವ ಗಿಡ್ಡ ಆಕಾರದ ಶಾಮಪ್ಪನಿಗೆ " ಉಪ್ಪಿನ ಮೂಟೆ". ಅಂತಲೂ, ಸದಾ ಸಿಗರೇಟು ಸೇದುತ್ತಾ ಹಿಂದೂ ದಿನಪತ್ರಿಕೆಯ ಇತರೆ ಪತ್ರಿಕೆಗಳನ್ನು ಸರಿಯಾಗಿ ಎಣಿಸಿಕೊಡುವ ೬೦ ವರ್ಷದ ರಾಧಕೃಷ್ಣರಿಗೆ "ಮಿ. ಕುಚೇಲನ್" ಅಂತಲೂ, ಕೆಲವೊಮ್ಮೆ ಗಡಿಬಿಡಿಯಿಂದಲೋ ಕೋಪದಿಂದಲೋ, ಕಡಿಮೆ ಎಣಿಸಿಕೊಟ್ಟುಬಿಟ್ಟರೆ "ತಾತ" ಅಂತಲೂ, ನಲವತ್ತು ವರ್ಷ ದಾಟಿದರೂ ಮದುವೆಯಾಗದ ಕೃಷ್ಣನಿಗೆ "ಬ್ಯಾಚುಲರ್", ರೇಸ್‌ಕೋರ್ಸಿನಲ್ಲಿ ಕೆಲಸ ಮಾಡುವ ಸುರೇಶನಿಗೆ "ಪಂಟರ್" ಇನ್ನೊಬ್ಬ ಕೆ. ಟಿ. ಕುಮಾರನಿಗೆ "ಜಾಕಿ" ಅಂತಲೂ, ಹಾಗೂ ಮತ್ತೊಬ್ಬ ರಮೇಶ್ ಎಣ್ಣೆ ಅಂಗಡಿ ಯಲ್ಲಿ ಕೆಲಸಮಾಡುವುದರಿಂದ ಆತನಿಗೆ "ಆಯಿಲ್ ರಾಜ" ಹೀಗೆ ಇನ್ನೂ ಅನೇಕ ಅಡ್ಡ ಹೆಸರುಗಳು ಬೆಳಗಿನ ಈ ನಮ್ಮ ಚಟುವಟಿಕೆಯಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ.

ಹಾಗೆ ನಾನು ಫೋಟೊಗ್ರಾಪರ್ ಕೂಡ ಆಗಿರುವುದರಿಂದ ನನ್ನನ್ನೂ "ಫೋಟೊದವನು" ಅಂತಲೇ ಅಡ್ಡ ಹೆಸರು ಚಾಲ್ತಿಯಾಗಿ ಜೊತೆಗೆ ಬ್ರಾಂಡೆಡ್ ನೇಮುಗಳಾದ "ಓಸಿ ರಾಜ, ಓಳು ಮುನಿಸ್ವಾಮಿ, ಟೆನ್ಷನ್ ಮ್ಯಾನ್, ಕಂಜೂಸ್, ಮುಂತಾದ ಅಡ್ಡ ಹೆಸರುಗಳು ಎಲ್ಲಾ ವಿತರಣಾ ಕೇಂದ್ರಗಳಲ್ಲಿ ಶೇಕಡವಾರು ಲೆಕ್ಕ ಅಧಿಕವಾಗಿ ಇದ್ದೇ ಇರುತ್ತಾರೆ.

ಕಪ್ಪು ಬಣ್ಣದವನಿಗೆ ಕರಿಯಾ ಎಂದರೆ ಸಿಟ್ಟಾಗುತ್ತಾನೆಂದು ಅದನ್ನೇ ಮತ್ತಷ್ಟು ಮೇಲ್ದರ್ಜೆಗೇರಿಸಿ "ಬ್ಲಾಕಿ" ಅಂತಲೂ ಕರೆದಾಗ ಮುಖವರಳಿಸಿ ಓಗೊಡುವ ನನ್ನ ಗೆಳೆಯನ ಬೀಟ್ ಹುಡುಗ, ಹೀಗೆ ಅಡ್ಡ ಹೆಸರು ನಿರಂತರವಾಗಿ ಸಾಗುತ್ತದೆ. ಈ ಪ್ರತಿಯೊಂದು ಅಡ್ಡ ಹೆಸರಿನ ಹಿಂದೆ ಅದನ್ನು ಕರೆಸಿಕೊಂಡವರು ಹೆಸರಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆನ್ನುವುದು ಸತ್ಯ.

ಅಶ್ಲೀಲ ಪದಗಳ, ಏ ಸರ್ಟಿಫಿಕೇಟು, ಮರ್ಮಾಂಗಗಳ ತತ್ಸಮಾನ ಪದಗಳು, ಅವಾಚ್ಯ, ಪೋಲಿ ಹೆಸರುಗಳು ಅಡ್ಡ ಹೆಸರುಗಳಾಗಿ ಇಲ್ಲಿ ಬಹು ಚಾಲ್ತಿಯಲ್ಲಿರುತ್ತವೆ.

ಕೊನೆಯದಾಗಿ ಹಾಗೂ ಅತಿ ಮುಖ್ಯವಾಗಿ, ಬ್ಲೇಡ್, ಅನಾಸಿನ್, ಮೆಂಟಲ್ ಈ ಮೂರು ಬಹು ಮುಖ್ಯ ಬ್ರಾಂಡೆಡ್ ಅಡ್ಡ ಹೆಸರುಗಳನ್ನು ಹೊಂದಿರುವ ಪ್ರತಿಭಾವಂತರು ಎಲ್ಲಾ ವಿತರಣ ಕೇಂದ್ರಗಳಲ್ಲೂ ಸದಾ ಕಾಲ ಚಾಲ್ತಿಯಲ್ಲಿದ್ದೆ ಇರುತ್ತಾರೆ.
ಶಿವು.ಕೆ

Thursday, November 6, 2008

ಭ್ರಮಾಲೋಕದಲ್ಲಿ.

ವಾರದ ಏಳು ದಿನಗಳಲ್ಲಿ ಸೋಮವಾರ, ಮಂಗಳವಾರ, ಮತ್ತು ಗುರುವಾರ ದಿನಪತ್ರಿಕೆಗಳಲ್ಲಿ ಉಳಿದ ದಿನಗಳಿಗಿಂತ ಕಡಿಮೆ ಸಪ್ಲಿಮೆಂಟರಿ ಬರುವುದರಿಂದ ಸೇರಿಸುವುದು ಸುಲಬ. ಅದು ಹುಡುಗರಿಗೂ ಗೊತ್ತಿರುವುದರಿಂದ ಅವತ್ತು ಅವರು ಬೇಗ ಬಂದು, ಇರುವ ಕಡಿಮೆ ಕೆಲಸದಲ್ಲಿ ನಮಗೆ ಸಹಾಯಮಾಡಿ ಬಲು ದೊಡ್ಡ ಉಪಕಾರ ಮಾಡಿದೆವೆಂದು ಪೋಸು ಕೊಡುತ್ತಾರೆ.

ಇನ್ನಿತರ ದಿನಗಳಲ್ಲಿ ಸಪ್ಲಿಮೆಂಟರಿ ಹೆಚ್ಚಾಗಿ ಬರುತ್ತದೆ ಅಂತ ಅವರಿಗೆ ಗೊತ್ತಾಗಿ ಬೇಗ ಹೋದರೆ ಅದನ್ನೆಲ್ಲಾ ಹಾಕುವ ಕೆಲಸ ಪೂರ್ತಿ ನಮಗೇ ಹಚ್ಚಿಬಿಡುತ್ತಾರೆ ಅಂತ ಅವರಿಗೆ ಗೊತ್ತು.

ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ? ನಾವು ಏಜೆಂಟುಗಳೇ ಸಪ್ಲಿಮೆಂಟರಿ ಹಾಕಿ ಮುಗಿಸಿದ ಮೇಲೆ ಹೋದರೆ ಆಗ ಸುಲಭವಾಗಿ ನಮ್ಮ ಬೀಟ್ ಪೇಪರುಗಗಳನ್ನು ತಗೊಂಡು ಹೋಗಬಹುದು ಎನ್ನುವುದು ಲೆಕ್ಕಾಚಾರ. ಅದರಲ್ಲೂ ಶನಿವಾರ, ಭಾನುವಾರಗಳಂದು ಈ ರೀತಿ ಕಳ್ಳಬೀಳುತ್ತಾರೆ.

ಯಾಕ್ರೋ ಲೇಟಾಗಿ ಬರ್ತೀರಾ" ಎಂದು ಕೇಳಿದರೆ

ನೀವೊಂದು ಸುಮ್ಮನಿರಿ, ಇವತ್ತು ವಾರಕ್ಕೊಂದು ಭಾನುವಾರ ನಮ್ಮ ಗಿರಾಕಿಗಳೆಲ್ಲಾ ನೆಮ್ಮದಿಯಾಗಿ ಮಲಗಿರುತ್ತಾರೆ. ಎದ್ದೇಳೋದೆ ೮ ಗಂಟೆ-೯ ಗಂಟೆ ಆದಮೇಲೆ. ನಾವು ಪೇಪರನ್ನ ಅವರ ಬಾಗಿಲಿಗೆ ಬಿಸಾಕಿ ಶಬ್ದ ಮಾಡಿ, ಅವರಿಗೆ ಡಿಸ್ಟರ್ಬ್ ಮಾಡೋದು ಬೇಡ, ಆರಾಮವಾಗಿ ಹಾಕೋಣ ಬಿಡಿ ಬಾಸ್" ಎಂದು ಅಪರೂಪಕೊಮ್ಮೆ ನಮ್ಮ ಗ್ರಾಹಕರ ಪರವಾಗಿ ಮಾತಾಡಿದಾಗ ನಾವೆ ಬೆರಗಾಗಿ ಬೆಡಬೇಕು.

ಅವತ್ತು. ಮಂಗಳವಾರ. ಕೆಲಸ ಬೇಗ ಮುಗಿದಿತ್ತು. ಎಲ್ಲಾ ಏಜೆಂಟರ ಹುಡುಗರು ಅಂದು ಬೆಳಿಗ್ಗೆ ‍೬ ಗಂಟೆಗೆ ಮೊದಲೇ ಪೇಪರುಗಳನ್ನು ಸೈಕಲ್ಲಿಗೇರಿಸಿಕೊಂಡು ಹೋಗಿದ್ದರು. ನಾನು ಮತ್ತು ರಂಗನಾಥ ಮಾಮೂಲಿನಂತೆ ನಮ್ಮ ಪ್ರತಿದಿನದ ಅಡ್ಡವಾದ ಶ್ರೀಸಾಗರ್ ಹೋಟಲಿನಲ್ಲಿ ಕಾಫಿ ಕುಡಿಯುತ್ತಾ, ಅವತ್ತಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆವು. ಲೋಕಾಭಿರಾಮವಾಗಿ ಅವತ್ತಿನ ಪತ್ರಿಕೆಯಲ್ಲಿ ಹೆಚ್ಚಾಗಿ ಕಳ್ಳತನದ ವಿಚಾರವೇ ಬಂದಿರುವುದರ ಬಗ್ಗೆ ಹರಟುತ್ತಿರುವಾಗ ನಮ್ಮ ವೃತ್ತಿಭಾಂಧವ ಬಾಲ್ಡಿ ಮಂಜ ಬಂದ.

ಅವನಿಗೆ ಮದುವೆಗೆ ಮೊದಲೇ ತಲೆಯ ಮುಂದಿನ ಅರ್ಧ ಭಾಗ ಕೂದಲು ಉದುರಿ ಮರಗಿಡಗಳಿಲ್ಲದ ರಾಮನಗರದ ಹೆಬ್ಬಂಡೆಗಳ ಹಾಗೆ ಮುಂಭಾಗ ಹಾಗೂ ಅಕ್ಕ ಪಕ್ಕ ಪೂರ್ತಿ ಬೋಳಾಗಿತ್ತು. ಹಿಂಭಾಗ ಮಾತ್ರ ಸ್ವಲ್ಪ ಕೂದಲಿದ್ದುದರಿಂದ ನಾವೆಲ್ಲಾ ಬಾಲ್ಡಿ ಮಂಜ ಅಂತಲೇ ಆಡ್ಡ ಹೆಸರು ಕರೆಯುವುದು ರೂಢಿ.

ಯಾವಾಗಲು ತನ್ನ ಮೋಟರು ಬೈಕಿನಲ್ಲಿ ಬರುತ್ತಿದ್ದವನು, ಇವತ್ತು ನಡೆದುಕೊಂಡು ಬರುತ್ತಿದ್ದಾನಲ್ಲ ಅನ್ನಿಸಿ ಇಬ್ಬರೂ ಅದನ್ನೇ ಮಾತಾಡಿಕೊಂಡೆವು.

"ಮಂಜ ಕಾಫಿ ಕುಡಿತಿಯೇನೋ?" ಮುಖದಲ್ಲಿ ಆತ್ಮೀಯತೆ ನಟಿಸುತ್ತಾ ರಂಗ ಕೇಳಿದ.

"ಬೇಡ ಕಣೋ ಈಗ ಆಯ್ತು, ಆದಿತ್ಯ ಹೋಟಲಿನಲ್ಲಿ ಕುಡಿದು ಬಂದೆ." ಬಾಲ್ಡಿ ಮಂಜನ ಉತ್ತರ. ಈ ಮಾತು ಅವನಿಗೆ ಪ್ರತಿದಿನದ ಬಾಯಿಪಾಠ. ಹಾಗಂತ ಕೊಡಿಸಿದರೇ ಕುಡಿದೇ ಕುಡಿಯುತ್ತಾನೆ.

"ಪರ್ವಾಗಿಲ್ಲ ಇಲ್ಲೊಂದು ಸ್ವಲ್ಪ ಕುಡಿಯೋ" ನಾನು ಮತ್ತಷ್ಟು ಅವನ ಕಡೆಗೆ ಕಾಳಜಿ ತೋರಿಸುವವನಂತೆ.

ಮತ್ತೊಂದು ಸುತ್ತು ಕಾಫಿ ಬಂತು. ಬಾಲ್ಡಿ ಮಂಜ ಯಾಕೋ ಮಂಕಾಗಿದ್ದಂತೆ ಕಂಡ.

ನಮ್ಮ ಚಟುವಟಿಕೆಯ ಸಮಯದಲ್ಲಿ ಯಾರಾದರೂ ಡಲ್ಲಾಗಿದ್ದರೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಆ ದಿನ ಬೀಟ್ ಹುಡುಗರು ಬರದೇ ಸರಿಯಾಗಿ ಕೈ ಕೊಟ್ಟು ಎಲ್ಲಾ ಕೆಲಸ ನಮ್ಮ ತಲೆ ಮೇಲೆ ಬಿದ್ದಿದೆಯಲ್ಲ ಅಂತಲೋ, ಅಥವ ಅವತ್ತಿನ ಕೆಲಸ ನಿಭಾಯಿಸಲು ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದ್ದಾಗ ಅವರ ಮುಖದ ಭಾವನೆಗಳು ಕೋಪ ಅಥವ ಚಿಂತೆಗೆ ಬದಲಾಗಿರುತ್ತವೆ.

ನನಗೆ ಹುಡುಗರು ತಪ್ಪಿಸಿಕೊಂಡಾಗ ಚಿಂತೆಗಿಂತ ಕೋಪವೇ ಹೆಚ್ಚಾಗಿ ಬರುವುದುಂಟು. ನನ್ನ ಮುಖ ನೋಡಿದವರು ಆ ಸಮಯದಲ್ಲಿ " ಯಾಕೋ ಹುಡುಗ್ರೂ ಬಂದಿಲ್ವಾ?" ಎಷ್ಟು ಜನ ಅಂತ ಪ್ರಶ್ನಿಸುತ್ತಾರೆ. ಅದೇ ರೀತಿ ಮಂಜ,ಸುರೇಶ, ಮಣಿ ರಂಗನಾಥ ಇನ್ನೂ ಕೆಲವರ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿರುತ್ತವೆ. ಆಗಲೂ ಇದೇ ಕಾರಣವನ್ನೇ ಅವರಿಗೂ ನಾವು ಕೇಳುವುದು. ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ.

ಇಲ್ಲೂ ಮಂಜನ ಮುಖದಲ್ಲಿ ಚಿಂತೆ ಅವರಿಸಿರುವುದನ್ನು ಕಂಡು

"ಯಾಕೋ ಹುಡುಗ್ರೂ ಬಂದಿಲ್ವಾ? ಇಲ್ಲಾ ಇಂಡೆಂಟು ಕಟ್ಟಿಲ್ವಾ" ರಂಗ ಕೇಳಿದ.

ಅದ್ಯಾವುದಕ್ಕೂ ಇವತ್ತು ತೊಂದರೆ ಆಗಿಲ್ಲವೋ" ಬಾಲ್ಡಿ ಮಂಜ ಬೇಸರದ ಮುಖದಲ್ಲೇ ಹೇಳಿದ.

'ಮತ್ಯಾಕೊ ಮುಖ ಆಂಗೆ ಮಾಡಿಕೊಂಡಿದ್ದೀಯಾ? ಮನೆಯಲ್ಲಿ ಏನಾದರೂ ತೊಂದರೆನಾ?' ನಾನು ಕೇಳಿದೆ.

"ಏನು ಇಲ್ವೋ"

ಮತ್ಯಾಕೆ ಇಂಗಿದ್ದೀಯಾ ಬೆಳಿಗ್ಗೆ ಬೆಳಿಗ್ಗೆ"

ನಮ್ಮ ಹುಡುಗ ಗೋಫಿ ಕೈಯಲ್ಲಿ ನನ್ನ ಬೈಕ್ ಕೊಟ್ಟು "ಒಬ್ಬ ಕಸ್ಟಮರ್ ಆರ್ಜೆಂಟ್ ಮಾಡುತ್ತಾರೆ ಹೋಗಿ ಅವರ ಮನೆಗೆ ಪೇಪರ್ ಹಾಕಿ ಬಾ ಅಂತ ಕಳಿಸಿದ್ದೆ. ಇನ್ನೂ ಬಂದಿಲ್ಲ ಕಣೋ"

"ಅಯ್ಯೋ ಅದಕ್ಯಾಕೆ ಚಿಂತೆ ಮಾಡ್ತೀಯಾ ಬರ್ತಾನೆ ಬಿಡು"

" ಅದಲ್ಲ ಕಣೋ, ಅವನು ಹೋಗಿ ಒಂದು ಗಂಟೆ ಆಯ್ತು"

"ಆ ಕಷ್ಟಮರ್ ಮನೆ ದೂರ ಏನೋ?'

ಹೇ ಇಲ್ಲಾ ಕಣೋ ಇಲ್ಲೇ ಕುಮಾರಪಾರ್ಕಲ್ಲಿ".

"ಹತ್ತಿರದ ಕುಮಾರ ಪಾರ್ಕಲ್ಲಿ ಒಂದು ಪೇಪರ ಹಾಕಿ ಬರೋದಕ್ಕೆ ಒಂದು ಗಂಟೆ ಬೇಕೇನೋ, ಐದೇ ನಿಮಿಷ ಸಾಕಪ್ಪ"

ಆದೇ ಕಣೋ ನನಗೂ ಚಿಂತೆ ಆಗಿರೋದು, ಐದು ನಿಮಿಷದ ಕೆಲಸಕ್ಕೆ ಒಂದು ಗಂಟೆಯಾದ್ರು ಬರಲಿಲ್ಲವಲ್ಲ!

ನಾವು ಮೂವರು ಈ ವಿಚಾರ ಮಾತಾಡುತ್ತಿರುವಾಗಲೇ ಮಂಜನ ಇನ್ನಿಬ್ಬರು ಹುಡುಗರು ಬೀಟ್ ಮುಗಿಸಿ ಅಲ್ಲಿಗೆ ಬಂದರು. ತಕ್ಷಣ

"ಲೋ ನಿಮ್ಮ ಪ್ರೆಂಡು ಗೋಪಿನೇನಾದ್ರು ನೋಡಿದ್ರೇನೋ?'

"ಇಲ್ಲಾ ಯಾಕಣ್ಣ?"

ಒಂದು ಪೇಪರ್ ಹಾಕಿ ಬರಲಿಕ್ಕೆ ನಿಮ್ಮ ಓನರ್ ಬೈಕ್ ಕೊಟ್ಟು ಕಳಿಸಿದ್ರೆ ಇನ್ನೂ ಬಂದಿಲ್ಲ ಕಣೋ, ಹೋಗಿ ಒಂದು ಗಂಟೆ ಮೇಲಾಯ್ತು.

ಇಬ್ಬರು ಹುಡುಗರು ಮುಖ ಮುಖ ನೋಡಿಕೊಂಡರು. ನಂತರ

ಆಣ್ಣಾ ಅವನ ಕೈಲಿ ಯಾಕಣ್ಣ ಗಾಡಿ ಕೊಟ್ರೀ?

ಯಾಕ್ರೋ ಏನಾಯ್ತು?"

ಅವನು ಸರಿ ಇಲ್ಲಣ್ಣಾ, ಯಾರಾದ್ರು ಅವನಿಗೆ ಬೈಕ್ ಕೊಟ್ರೆ ಆಷ್ಟೇ ಮುಗೀತು. ಇರೋ ಪೆಟ್ರೋಲೆಲ್ಲಾ
ಖಾಲಿಯಾಗೋವರೆಗೂ ವಾಪಸು ಬರೋಲ್ಲ.

ಆ ಹುಡುಗರ ಮಾತು ಕೇಳಿ ರಂಗ ಮತ್ತು ನನಗೂ ಇದು ನಿದಾನವಾಗಿ ಗಂಭೀರ ರೂಪ ಪಡೆದುಕೊಳ್ಳುತ್ತಿರುವ ವಿಚಾರವೆನಿಸಿತ್ತು. ಆ ಹೋಟಲಿಂದ ಹೊರಬಂದು ನಮ್ಮ ಮಾತುಕತೆ ಮುಂದುವರಿಯುತ್ತಿದ್ದಾಗ ನನ್ನ ಇಬ್ಬರೂ ಹುಡುಗರು, ರಂಗನ ಹುಡುಗರು ಅಲ್ಲಿಗೆ ಬಂದರು. ಅವರಿಗೂ ಮತ್ತೊಮ್ಮೆ ಎಲ್ಲಾ ವಿಚಾರ ತಿಳಿಸಿದ ಮೇಲೆ ಅವರಲ್ಲೇ ಗುಸು ಗುಸು ಪ್ರಾರಂಭವಾಯಿತು.

"ರ್ರೀ ನೀವು ಅವನಿಗೆ ಗಾಡಿ ಕೊಡಬಾರದಿತ್ತು.! ನನ್ನ ಬೀಟ್ ಹುಡುಗ ಮಾದೇಶ ಹೇಳಿದ ಮಾತಿಗೆ ಬಾಲ್ಡಿ ಮಂಜನ ಮುಖದಲ್ಲಿ ಮತ್ತಷ್ಟು ಆತಂಕ ಹೆಚ್ಚಾಯಿತು.

ಇದ್ಯಾಕೋ ಇಲ್ಲದ ವಿಕೋಪಕ್ಕೆ ಹೋಗುತ್ತದೆ ಅಂತ ನನಗನ್ನಿಸಿ ಗೋಪಿಯ ಆಪ್ತಗೆಳೆಯನಾದ ನಾಣಿಗೆ " ನೀನು ಗೋಪಿಗೆ ಕ್ಲೋಸ್ ಪ್ರಂಡ್ ಅಲ್ಲವೇನೋ?" ಅವನ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು. ನೀನೇ ಹೇಳು." ಕೇಳಿದೆ.

ಆಣ್ಣಾ ಅವನು ಮೊದಲು ಕ್ಲೋಸ್ ಪ್ರಂಢು ಆಗಿದ್ದ. ಇವಾಗ ಅವನು ತುಂಬಾ ಕೆಟ್ಟು ಹೋಗಿದ್ದಾನೆ, ಸಿಗರೇಟು ಸೇದ್ತಾನೆ, ಡ್ರಿಂಕ್ಸ್ ಮಾಡ್ತಾನೆ ತುಂಬಾ ಕೆಟ್ಟುಹೋಗಿದ್ದಾನೆ. ಅವಾಗಿಂದ ನನಗೂ ಅವನಿಗೂ ಆಷ್ಟಕಷ್ಟೇ"

ನಾಣಿ ಗೋಪಿಯ ಇತ್ತೀಚಿನ ಕ್ಯಾರೆಕ್ಟರ್ ಸರ್ಟಿಫಿಕೇಟು ಕೊಡುವುದರ ಜೊತೆಗೆ ತಾನು ಒಳ್ಳೇ ಹುಡುಗ ಅಂತಲೂ ಪರೋಕ್ಷವಾಗಿ ತಿಳಿಸಿ ಈ ವಿಚಾರದಲ್ಲಿ ಜಾರಿಕೊಂಡುಬಿಟ್ಟ.

"ಅಯ್ಯೋ ಹೋದವಾರ ಯಾರದೋ ಬೈಕ್ ತಗೊಂಡು ಕುಣಿಗಲ್ಲಿಗೆ ಹೋಗಿಬಿಟ್ಟಿದ್ದನಂತೆ ವಾಪಸು ಬಂದಾಗ ಮದ್ಯಾಹ್ನ ಆಗಿತ್ತು." ಮಾದೇಶ ನಾಣಿಯ ಮಾತಿನ ಪರವಾಗಿ ಪರೋಕ್ಷವಾಗಿ ಈ ರೀತಿ ಹೇಳಿ ಗೋಪಿ ವಿರುದ್ಧ ಪ್ರಬಲ ಸಾಕ್ಷಿ ನೀಡಿದ.

ರಂಗನಿಗೆ ಈ ಹುಡುಗರ ಮಾತು ಕೇಳಿ ನಿದಾನವಾಗಿ ಗೋಪಿಯ ಮೇಲೆ ಸಂಶಯ ಬರತೊಡಗಿತು. ಬೈಕನ್ನೇನಾದರೂ ಕದ್ದು ತಗೊಂಡುಹೋಗಿ ಯಾರಿಗಾದ್ರೂ ಗುಜರಿಯವರಿಗೆ ಕೊಟ್ಟು ಬಿಟ್ರೆ, ಅದರ ಪಾರ್ಟುಗಳನ್ನೆಲ್ಲಾ ಬೇರೆ ಬೇರೆ ಮಾಡಿ ಮಾರಿಬಿಡ್ತಾರೆ. ಯಾರಿಗೂ ಗೊತ್ತಾಗೋದೆ ಇಲ್ಲ. ರಂಗನ ಈ ರೀತಿಯ ಅಲೋಚನೆಗೆ ಅವತ್ತಿನ ಪೇಪರಿನ ತುಂಬಾ ಬಂದಿರುವ ಬರೀ ಕಳ್ಳತನದ ವಿಷಯಗಳು ಅವನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಾರಂಭಿಸಿದವು.

ನನಗೂ ಇದೇ ರೀತಿಯ ಹಳೆಯ ಘಟನೆಗಳು ನೆನಪಾಗತೊಡಗಿದವು. ನನ್ನ ಸ್ಕೂಟಿಯನ್ನು ನಮ್ಮ ಹುಡುಗರು ೫ ನಿಮಿಷ ಎಂದು ಹೇಳಿ ತೆಗೆದುಕೊಂಡು ಹೋಗಿ ಮರೆತು ಅವರ ಮನೆಗೆ ಹೋಗಿ ಅರ್‍ಆಮವಾಗಿ ಇದ್ದು ಬಿಡುವುದು, ಅಥವಾ ಅವರ ಮನೆಯ ಕೆಲಸಕ್ಕೆ ಅಂತ ಬಳಸುವುದು, ಗೆಳೆಯರು ಸಿಕ್ಕಾಗ ಹೀರೊಗಳಂತೆ ಮೈಮರೆತು ಎಲ್ಲೋ ಹರಟೆಹೊಡೆಯುತ್ತಾ ನಿಂತುಬಿಡುವುದು, ಇವರೆಲ್ಲರ ವಯಸ್ಸು ೧೬-೨೦ ರವರೆಗೆ ಇರುವುದರಿಂದ ಅವರವರ ಓನರುಗಳ ಟೂ ವೀಲರುಗಳು, ಮೋಟರ್ ಬೈಕನ್ನು ಐದೇ ನಿಮಿಷದಲ್ಲಿ ಬರುತ್ತೇನೆ ಎಂದು ಕೇಳಿ ಪಡೆದುಕೊಂಡು ಎಲ್ಲರೂ ಒಟ್ಟಾಗಿ ಕಾಲೇಜು ಹುಡುಗಿಯರ ನೋಡುತ್ತಾ ನಿಲ್ಲುವುದು, ನಾವೆಲ್ಲಾ ಇವರು ಎಲ್ಲಿ ಹೋದರು ಅಂತ ಚಿಂತೆಗೊಳಗಾಗುವುದು, ಇವೆಲ್ಲಾ ನೆನಪಾಗಿ, ಮಂಜನಿಗೆ ಇದೆಲ್ಲಾ ಹೇಳಿ ಈ ರೀತಿ ಏನಾದ್ರೂ ಆಗಿರಬಹುದು ನೋಡು" ಎಂದೆ.

"ಸಾರ್ ನೀವೊಂದು ಅವನಿಗೆ ಕಾಲೇಜಿನ ಮುಂದೆ ನಿಲ್ಲೋ ಸೋಕಿ ಇಲ್ಲ, ಯಾಕಂದ್ರೇ ಅವನು ಸೇರೋ ಹುಡುಗ್ರಾ ಸಹವಾಸ ಸರಿಯಿಲ್ಲ. ಎಲ್ಲಾ ಕೆಟ್ಟ ಕೆಲಸ ಕಲಿತಿದ್ದಾನೆ ಗೊತ್ತಾ! ನಾಣಿ ಖಚಿತವಾಗಿ ನೋಡಿರುವವನಂತೆ ಹೇಳಿದ.

"ನೀನು ಸುಮ್ಮನಿರೋ" ಎಂದು ಅವನ ಬಾಯಿ ಮುಚ್ಚಿಸಿ "ರಂಗ ನಿನ್ನ ಗಾಡಿನ ಇವನ ಕೈಯಲ್ಲಿ ಕಳಿಸು ಗೋಪಿ ಮನೆಗೆ ಹೋಗಿ ನೋಡಿಕೊಂಡು ಬರಲಿ, ರವಿ ನೀನು ನನ್ನ ಗಾಡಿ ತಗೊಂಡು ಹೋಗಿ ಕಾಲೇಜು, ಅಕ್ಕ ಪಕ್ಕ ಹೋಟಲ್ ಎಲ್ಲಾ ನೋಡಿಕೊಂಡು ಬಾ, ಮಾದೇಶ ನೀನು ನಿನ್ನ ಸೈಕಲ್ಲಲ್ಲಿ ಅವನು ಪೇಪರ್ ಹಾಕಿಲಿಕ್ಕೆ ಹೋಗಿದ್ದಾನಲ್ಲ ಆ ಆಪಾರ್ಟುಮೆಂಟು ಒಳಗೆ ನೋಡಿ ಬಾ ಮೂವರನ್ನು ಕಳುಹಿಸಿದೆವು.

ಆಷ್ಟರಲ್ಲಿ ಈ ವಿಚಾರ ದೊಡ್ಡದಾಗಿ ಮೊಬೈಲು ಫೋನು ಮುಖಾಂತರ ಎಲ್ಲಾ ಏಜೆಂಟರಿಗೂ, ಬೀಟ್ ಬಾಯ್ಸುಗಳಿಗೂ ಹರಡಿತ್ತು. ಮತ್ತಷ್ಟು ನಮ್ಮ ಗೆಳೆಯರು ಕೆಲವು ಹೊರಗಿನವರು ಅಲ್ಲಿಸೇರಲಾರಂಭಿಸಿದರು. ಕೆಲವರು ಬಾಲ್ಡಿ ಮಂಜನಿಗೆ ಫೋನ್ ಮಾಡಿ ಈ ವಿಚಾರವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಅವನಿಗೆ ಮತ್ತಷ್ಟು ದಿಗಿಲು ಹುಟ್ಟಿಸಿದರು.

ಮಂಜ ಈ ವಿಚಾರದಲ್ಲಿ ಅದೆಷ್ಟು ಭಾವುಕನಾದನೆಂದರೆ, "ತನ್ನ ಮೋಟರ್ ಬೈಕನ್ನು ಗೋಪಿ ಕದ್ದುಕೊಂಡು ಹೋಗಿಬಿಟ್ಟಿದ್ದಾನೆ. ಮುಂದೆ ಅವನು ಯಾರಿಗೂ ಕಾಣುವುದಿಲ್ಲ ಅನಂತರ ಯಾರಿಗೋ ಗುಜರಿಯವರಿಗೆ ಮಾರಿಬಿಡುತ್ತಾನೆ. ತೆಗೆದುಕೊಂಡವರು ನಂತರ ಅವರು ಅರ್ಧಗಂಟೆಯಲ್ಲಿ ಒಬ್ಬ ಬೈಕಿನ ಎಲ್ಲಾ ಭಾಗಗಳನ್ನು ಬಿಡಿ ಬಿಡಿ ಮಾಡಿದ ಮೇಲೆ ಯಾರ್ಯಾರೋ ಬಂದು ದುಡ್ಡು ಕೊಟ್ಟು ತಮಗೆ ಬೇಕಾದ ಭಾಗಗಳನ್ನು ತಗೊಂಡು ಹೋದಂತೆ ಸಿನಿಮಾ ರೀತಿಯ ದೃಶ್ಯಗಳು ಕಾಣಲಾರಂಭಿಸಿದವು.

ಹತ್ತು ನಿಮಿಷ ಕಳೆಯಿತು. ನಾವು ಗೋಪಿಯನ್ನು ಹುಡುಕಿಕೊಂಡು ಬರಲು ಕಳುಹಿಸಿದ್ದ ಎಲ್ಲಾ ಹುಡುಗರು ಅವನು ಸಿಗಲಿಲ್ಲವೆಂದು ವಾಪಸ್ಸು ಬಂದರು. ಮಾದೇಶನೂ ಅಪಾರ್ಟುಮೆಂಟಿನ ಪಾರ್ಕಿಂಗ್ ಜಾಗದಲ್ಲಿ ಯಾವ ಮಂಜನ ಬೈಕು ಕಾಣಲಿಲ್ಲವೆಂದು ಹೇಳಿದ.

"ಮಂಜು ನೀನು ಈಗಲೆ ಇನ್ಸೂರೆನ್ಸಿಗೆ ಕ್ಲೈಮ್ ಮಾಡು, ಈ ವಿಚಾರದಲ್ಲಿ ತಡ ಮಾಡಬೇಡ!"
ಹತ್ತಿರದಲ್ಲೇ ನಿಂತಿದ್ದ ಸುರೇಶ ತನ್ನ ಆಮೂಲ್ಯ ಸಲಹೆ ಕೊಟ್ಟ.

"ಹೌದು ಗುಡ್ ಐಡಿಯಾ!" ಸುರೇಶನ ಪಕ್ಕದಲ್ಲಿದ್ದ ಲೋಕಿ ಆಶ್ಚರ್ಯಚಕಿತನಾಗಿ ಹೇಳಿದ.

" ಮಂಜು ಆಕ್ಷಿಡೆಂಟ್ ರಿಲೀಫ್ ಫಂಡ್ ಮಾಡಿಸಿದ್ದಾನಾ?" ಯಾರೋ ಕೇಳಿದರು.

"ಹೇ ಅವನು ಅದನ್ನು ಮಾಡಿಸಿದ್ರು ಅದು ಮಂಜುಗೆ ಆಕ್ಷಿಡೆಂಟ್ ಆದ್ರೆ ಮಾತ್ರ ಕೊಡೋದು, ಯಾಕೆಂದ್ರೆ ಅವನು ಫಸ್ಟ್ ಪಾರ್ಟಿ, ಅವನ ಹುಡುಗ ಗೋಪಿ ಯಾರೊ ಥರ್ಡ್ ಪಾರ್ಟಿಯಾಗ್ತಾನಾದ್ದರಿಂದ ಈ ಐಡಿಯಾ ವರ್ಕ್ ಹೌಟ್ ಆಗೊಲ್ಲ" ಮತ್ತೊಬ್ಬರು ಕೇಳಿದವನಿಗೆ ಸಮಾಧಾನದ ಉತ್ತರ ನೀಡಿದರು.

"ಪೋಲಿಸ್ ಕಂಪ್ಲೆಂಟ್ ಕೊಟ್ಟರೆ ಹೇಗೆ?" ಮತ್ತೊಬ್ಬನ ಮಾತು

"ಹೌದು ಕರೆಕ್ಟ್!" ಮಗದೊಬ್ಬನಿಗೆ ಜ್ಜಾನೋದಯವಾಯಿತು.

"ಹೇ ಹೋಗೊ ಅದೆಲ್ಲಾ ವೇಷ್ಟು"

"ಯಾಕೋ? "

"ಮತ್ತೇನು, ಇವನು ಹೋಗಿ ಕಂಪ್ಲೆಂಟು ಕೊಟ್ಟರೂ ಅವರು ಆಯ್ತು ಹೇಳಿ ಕಳಿಸುತ್ತೀವಿ ಅಂತಾರೆ ಆಷ್ಟೇ"

ಮತ್ತೇನು ಮಾಡುವುದು? ಎಲ್ಲರೂ ತಮ್ಮ ತಮ್ಮ ಆಲೋಚನೆಯಲ್ಲಿ ಮುಳುಗಿದರು. ನನಗೂ ಇದೇ ರೀತಿಯ ನಾನ ಯೋಚನೆಗಳು ತಲೆಯಲ್ಲಿ ಹರಿದಾಡಿದವು.

ಮಂಜನಂತೂ ಎಲ್ಲಾರ ಮಾತುಗಳನ್ನೂ ಕೇಳಿ ಅವರು ಹೇಳಿದ್ದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ಮತ್ತಷ್ಟು ತನ್ನ ಮೋಟರು ಬೈಕು ತನ್ನ ಕಣ್ಣಳತೆಯಿಂದ ನಿದಾನವಾಗಿ ದೂರ ಸಾಗಿ ಶೂನ್ಯದಲ್ಲಿ ಮರೆಯಾಗಿ ಹೋಗುತ್ತಿರುವಂತೆ ಮತ್ತೆಂದು ತನ್ನ ಕೈಗೆ ಸಿಗುವುದಿಲ್ಲವೆನ್ನುವುದನ್ನು ಗಾಢವಾಗಿ ಕಲ್ಪಿಸಿಕೊಳ್ಳತೊಡಗಿದ.

ಆಷ್ಟು ಹೊತ್ತಿಗಾಗಲೇ ನಾವೆಲ್ಲರೂ ಸೇರಿ ೨ ಗಂಟೆ ಕಳೆದಿತ್ತು.

"ಗೋಪಿ ಹತ್ರ ಮೊಬೈಲ್ ಫೋನಿದ್ರೆ ಅವನಿಗೆ ಫೋನ್ ಮಾಡಿ" ಯಾರೊ ಐಡಿಯಾ ಕೊಟ್ಟ.

ಅರೇರೆ... ಹೌದಲ್ವ! ನಮಗೆ ಇದು ಹೊಳೆಯಲಿಲ್ಲವಲ್ಲ" ಎಲ್ಲರಿಗೂ ಅನ್ನಿಸಿತು. ಐಡಿಯಾ ಕೊಟ್ಟವನನ್ನು ಹೊಗಳಿದರು. ಈ ಮಾತು ಕೇಳಿ ಮಂಜನ ಮುಖ ಸ್ವಲ್ಪ ಗೆಲುವಾಯಿತು. ತನ್ನ ಮೊಬೈಲಿಂದ ಗೋಪಿಗೆ ಪೋನ್ ಮಾಡಿದ.

ಆ ಕಡೆಯಿಂದ ಸ್ವಿಚ್ ಆಫ್!!

ಯಾರೋ ಕೊಟ್ಟ ಐಡಿಯಾದ ಪಠಾಕಿ ಟುಸ್ಸಾಗಿತ್ತು.

ಎಲ್ಲರೂ ಕೊನೆಗೆ ತಮ್ಮದೇ ಬೈಕು ಕಳೆದುಹೋಯಿತೇನೋ ಎಂಬಂತೆ ಶೋಕದ ಕಳೆಹೊತ್ತು ಒಬ್ಬರಿಗೊಬ್ಬರೂ ಸಾಂತ್ವಾನ ಹೇಳುತ್ತಾ ಕೊನೆಯಲ್ಲಿ ಬಾಲ್ಡಿ ಮಂಜನಿಗೆ ಸಾಂತ್ವಾನ ಹೇಳಿ ವಿಷಾದ ಭಾವವನ್ನು ಮುಖದಲ್ಲಿ ನಟಿಸುತ್ತಾ ಗಂಭೀರವದನರಾಗಿ ಒಬ್ಬೊಬ್ಬರಾಗಿ ಜಾಗ ಕಾಲಿ ಮಾಡಿದರು.

ಕೊನೆಗೆ ಉಳಿದಿದ್ದು ಮಂಜ ನಾನು ಮತ್ತು ರಂಗ.
ನಾವಿಬ್ಬರೂ ಕೊನೆಯದಾಗಿ ಮಂಜನಿಗೆ ಸಮಾಧಾನ ಹೇಳುತ್ತಾ ಚಿಂತೆ ಮಾಡಬೇಡ ಹೋಗಿದ್ದು ಗಾಡಿ ತಾನೆ, ಜೀವವೇನು ಹೋಗಿಲ್ಲವಲ್ಲ. ನೀನು ಚೆನ್ನಾಗಿದ್ರೆ ಇಂಥ ನೂರು ಬೈಕ್ ತಗೋಬಹುದು, ಇನ್ನು ವಯಸ್ಸಿನ ಹುಡುಗ ನೀನು ಹೆದರಬೇಡವೆಂದು ಹೇಳಿ ಅವನ ಯವ್ವೌನವನ್ನು ನೆನಪಿಸಿ {ನಮಗೆ ಅವನಿಗಿಂತ ಹೆಚ್ಚಾಗಿ ಜೀವನಾನುಭವವಿದೆ ಎಂದು ನಟಿಸಿ} ಚಿಂತೆಯನ್ನು ಮರೆತು ಹೊಸ ಹುಮ್ಮಸ್ಸು ತುಂಬಿ ಅವನನ್ನು ಕಳುಹಿಸಿಕೊಟ್ಟೆವು.

ಮರುದಿನ ನಮಗೆಲ್ಲಾ ಆಶ್ಚರ್ಯ ಕಾದಿತ್ತು.

ಹಿಂದಿನ ದಿನದ ಚರ್ಚೆಗಳೆಲ್ಲವನ್ನೂ ಸಗಣಿಯಿಂದ ಸಾರಿಸಿ, ನಂತರ ಕಸಪೊರಕೆಯಿಂದ ಗುಡಿಸಿ ಹೊರಗೆಸೆಯುವಂತೆ ಬಾಲ್ಡಿ ಮಂಜ ನಾವೆಲ್ಲರೂ ಕಳುವಾಯಿತೆಂದುಕೊಂಡ ಬೈಕಿನಲ್ಲಿ ಬಂದಿದ್ದ. ನಿನ್ನೆಯಲ್ಲಾ ಅಷ್ಟೊಂದು ಗೊಂದಲ ಆತಂಕ ಸೃಷ್ಟಿಸಿದ್ದ ಹುಡುಗ ಗೋಪಿಯು ಅಲ್ಲೇ ಅವನ ಪಕ್ಕದಲ್ಲಿ ಕುಳಿತು ಸಪ್ಲಿಮೆಂಟರಿ ಹಾಕುತ್ತಿದ್ದಾನೆ!!

ಕೊನೆಗೆ ನಿಜವಾಗಿ ನಡೆದದ್ದು ಏನೆಂದರೇ, ಬೆಳಿಗೆ ೬ ಗಂಟೆಗೆ ಗೋಪಿ ಅವನ್ ಓನರ್ ಬಾಲ್ಡಿಮಂಜ ಹೇಳಿದಂತೆ ಕುಮಾರಪಾರ್ಕಿನಲ್ಲಿರುವ ಆಪಾರ್ಟುಮೆಂಟಿಗೆ ಒಂದು ಪೇಪರ್ ಹಾಕಲು ಹೋಗಿದ್ದಾನೆ. ಆಪಾರ್ಟುಮೆಂಟಿನಲ್ಲಿ ಲಿಫ್ಟ್ ಒಳಗೆ ಹೋಗಿ ಐದನೇ ಮಹಡಿಯ ಬಟನ್ ಒತ್ತಿದ್ದಾನೆ. ಮೇಲೆ ಹೋಗುತ್ತಿದ್ದ ಲಿಫ್ಟ್ ತಕ್ಷಣ ಕರೆಂಟು ಹೋದ ಪರಿಣಾಮ ೩ ಮತ್ತು ೪ ನೇ ಮಹಡಿಯ ಮದ್ಯೆ ನಿಂತುಬಿಡಬೇಕೆ!. ಮತ್ತೊಂದು ವಿಷಯವೆನೆಂದರೆ ಸರ್ವ ಸಾಮಾನ್ಯವಾಗಿ ಆಪಾರ್ಟುಮೆಂಟುಗಳಲ್ಲಿ ಲಿಫ್ಟು ವ್ಯವಸ್ಥೆಗೆ ಜನರೇಟರ್ ಇಟ್ಟಿರುತ್ತಾರೆ. ಇಲ್ಲಿ ಗೋಪಿಯ ದುರಾದೃಷ್ಟಕ್ಕೇ ಅದು ಹೊಸ ಆಪಾರ್ಟುಮೆಂಟು ಆಗಿದ್ದರಿಂದ ಇನ್ನೂ ಜನರೇಟರ್ ವ್ಯವಸ್ಥೆ ಮಾಡಿರಲಿಲ್ಲವಂತೆ. ಆ ತಕ್ಷಣ ಗಲಿಬಿಲಿಗೊಂಡ ಗೋಪಿ ಏನು ಮಾಡೋದು ತಿಳಿಯದೆ ಹೋದನಂತೆ. ಮೊಬೈಲಿಂದ ಫೋನ್ ಮಾಡೋಣವೆಂದರೇ ಅವನ ಲಡಕಾಶಿ ಫೋನ್ ಹಿಂದಿನ ದಿನ ಬ್ಯಾಟರಿ ಚಾರ್ಜ್ ಮಾಡಿಲ್ಲದ ಕಾರಣ ಡೆಡ್ ಆಗಿಬಿಟ್ಟಿದೆ!. ಎಲ್ಲಾ ವಿಷಯದಲ್ಲೂ ಅತಿ ಬುದ್ಧಿವಂತಿಕೆ ತೋರಿಸುತ್ತಿದ್ದ ಗೋಪಿಗೆ ಆ ಕ್ಷಣದಲ್ಲಿ ಏನು ತಿಳಿಯದೆ ಕೊನೆಗೆ ಜೋರಾಗಿ ಕಿರುಚಿದ್ದಾನೆ. ಮೊದಲೇ ಹೊಸ ಆಪಾರ್ಟುಮೆಂಟು ಅಲ್ಲೊಂದು ಇಲ್ಲೊಂದು ಪ್ಲಾಟುಗಳಿಗೆ ಮಾತ್ರ ಜನ ವಸತಿಗೆ ಬಂದಿದ್ದಾರೆ. ಜೊತೆಗೆ ಪ್ಲಾಟುಗಳಲ್ಲಿ ಎದುರುಮನೆಯವರಿಗೋ ಅಥವಾ ಪಕ್ಕದ ಮನೆಯವರಿಗೋ ಏನಾದರೂ ತೊಂದರೆಯಾದರೂ ಗಮನಿಸುವುದಿಲ್ಲ. ಪಕ್ಕದಲ್ಲಿ ಭೂಕಂಪವಾದರೆ ಅಥವ ಎದುರುಮನೆಯಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದು ಇವರಿಗೆ ತಿಳಿಯುವುದು ಮರುದಿನ ಪೇಪರ್ ನ್ಯೂಸಿನಲ್ಲೋ ಅಥವಾ ಸಂಜೆ ಟಿ.ವಿ. ನ್ಯೂಸ್ ನಲ್ಲಿ ನೋಡಿದಾಗ ಮಾತ್ರ. ಅಂತದ್ದರಲ್ಲಿ ಇವನು ಕೂಗಿದರೆ, ಕಿರುಚಿದರೆ ಬಂದು ನೋಡುತ್ತಾರೆಯೇ? ಕೊನೆಗೆ ಗೋಪಿಗೆ ಇನ್ನು ಕರೆಂಟು ಬರುವವರೆಗೂ ನಾನಿಲ್ಲಿ ಬಂಧಿಯಾಗಿರುವುದು ಖಚಿತವೆನಿಸಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ವಿದ್ಯುತ್ ಕೇಳಬೇಕೆ! ಲೋಡ್ ಸೆಡ್ಡಿಂಗ್ ಅನ್ನೋ ಹೆಸರಿನಲ್ಲಿ ಯಾವಾಗ ಬೇಕೋ ಆವಾಗ ವಿದ್ಯುತ್ ತೆಗೆದುಹಾಕುತ್ತಾರೆ.

ಅವತ್ತು ೨ ಗಂಟೆಗಿಂತ ಹೆಚ್ಚಾಗಿ ಕರೆಂಟು ಇರಲಿಲ್ಲವಾದ್ದರಿಂದ ಗೋಪಿಗೆ ಜೈಲಿನಲ್ಲಿದ್ದೇನೆ ಎನ್ನುವ ಭ್ರಮೆಗೆ ಒಳಗಾಗಿ ಮಂಕಾಗಿ ಹೆದರೆಕೆಗೆ ಅಲ್ಲೇ ನಿದ್ದೆ ಮಾಡಿದ್ದಾನೆ. ಎಚ್ಚರವಾದಾಗ ಕರೆಂಟು ಬಂದು ಲಿಫ್ಟ್ ಕೆಳಹೋಗುವುದು ಅರಿವಾಗಿದೆ. ಕೊನೆಗೆ ಅವನು ಲಿಫ್ಟಿನಲ್ಲಿ ೨ ಗಂಟೆ ಬಂದಿಯಾಗಿದ್ದು ಪ್ಲಾಟಿನವರಿಗೆಲ್ಲಾ ಗೊತ್ತಾಗಿ ಆಶ್ಚರ್ಯವಾಯಿತಂತೆ!

ಈ ಮಧ್ಯೆ ಹುಡುಗ ಗೋಪಿ ಲಿಫ್ಟಿನಲ್ಲಿ ಸಿಕ್ಕಿಹಾಕಿಕೊಂಡನಲ್ಲ ಅದೇ ಸಮಯಕ್ಕೆ ಆ ಪ್ಲಾಟಿನ ವಾಚ್ ಮೆನ್ ಗೋಪಿ ತಂದಿದ್ದ ಟೂ ವೀಲರನ್ನು ಅದೇ ಫ್ಲಾಟಿನವರ ಕಾರಿಗೆ ದಾರಿ ಮಾಡಿ ಕೊಡಲು ತೆಗೆದು ಪಕ್ಕಕ್ಕೆ ಕಾಣದ ಜಾಗಕ್ಕೆ ನಿಲ್ಲಿಸಿದ್ದಾನೆ ಬೇರೆ ಹುಡುಗರು ಇಲ್ಲಿ ಬಂದು ನೋಡಿದಾಗ ಬೈಕ್ ಕಾಣಸಿದದಿರುವುದು ನೋಡಿ ಗೋಪಿ ಇಲ್ಲಿಲ್ಲವೆಂದುಕೊಂಡು ಹೋಗಿದ್ದಾರೆ.

ಅಲ್ಲಿಂದ ಹೊರಬಂದರೂ ಅವನಿಗೆ ಆ ಭ್ರಮೆಯಿಂದ ಹೊರಬರಲಿಕ್ಕೆ ಸುಮಾರು ಹೊತ್ತೇ ಆಗಿದೆ. ನಂತರ ಪಬ್ಲಿಕ್ ಕಾಯಿನ್ ಬೂತಿನಿಂದ ತನ್ನ ಬಾಲ್ಡಿ ಮಂಜನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ. ಬೈಕನ್ನು ತನ್ನ ಓನರಿಗೆ ತಲುಪಿಸಿ ಮೇಲೆ ಅವನಿಗೆ ಯಾವುದೋ ಹುಲಿ ಗುಹೆಯಿಂದ ಹೊರಬಂದಂತೆ ಅನ್ನಿಸಿತಂತೆ.

ಇದು ಯಾವುದು ತಿಳಿಯದೆ ಹಿಂದಿನ ದಿನ ನಾನು ಸೇರಿದಂತೆ ರಂಗ, ಅವನ ಹುಡುಗರು ಸೇರಿದಂತೆ ಎಲ್ಲರೂ ಗೋಪಿಯ ಹಿಂದಿನ ತರಲೆ ಆಟ, ಬೇಜವಾಬ್ದಾರಿ ಗುಣ, ಸ್ವಲ್ಪ ಹುಡುಗು ಬುದ್ದಿಯ ಸ್ವಭಾವಕ್ಕೆ ತಾಳೆ ಹಾಕಿ, ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಆ ಸಮಯದಲ್ಲಿ ಪ್ರತಿಯೊಬ್ಬರೂ ಆಡಿದ ಮಾತುಗಳ ಪ್ರಭಾವಕ್ಕೆ ಸಿಲುಕಿ, ಒಂದು ರೀತಿಯ ಸಮೂಹ ಸನ್ನಿಗೆ ಒಳಗಾಗಿ ಗೋಪಿಯ ವಿರುದ್ಧದ ಭ್ರಮೆಗೊಳಗಾಗಿದ್ದು ನಿಜ.
ಶಿವು.ಕೆ.

Sunday, October 19, 2008

ಮೊಬೈಲ್ ಫೋನು ಮತ್ತು ಗ್ರಾಹಕರು

ಹತ್ತು ವರ್ಷದ ಹಿಂದಿನ ಘಟನೆ. ಇದನ್ನು ಶುರು ಮಾಡಿದಾಗಲೇ ನಿಮ್ಮ ಆಲೋಚನೆಯನ್ನು ಹತ್ತು ವರ್ಷಗಳ ಹಿಂದಕ್ಕೆ ಓಡಿಸಬೇಕಾಗುತ್ತದೆ. ನಮ್ಮ ದಿನಪತ್ರಿಕೆ ವಿತರಣೆ ಕೆಲಸದಲ್ಲಿ ನಮ್ಮ ಹುಡುಗರು ಯಾವತ್ತಾದರೂ ಒಂದು ದಿನ ಅಥವ ೨-೩ ದಿನ ಪತ್ರಿಕೆಗಳನ್ನು ಯಾವುದಾದರೂ ಒಂದು ಅಥವ ಎರಡು ಮನೆಗೆ ಹಾಕದೆ ತಪ್ಪಿಸಿಬಿಟ್ಟಿದ್ದರೆ ನಮಗೆ ತಿಳಿಯುತ್ತಿದ್ದುದ್ದು, ನಾವು ಒಂದು ತಿಂಗಳಾದ ಮೇಲೆ ಅವರ ಮನೆಗೆ ಹಣ ವಸೂಲಿಗೆ ಹೋದಾಗ ಮಾತ್ರ. ಅಥವಾ ತಪ್ಪಿಸಿದ್ದ ಹುಡುಗನೇ ಮರುದಿನ ನಾನು ಇಂಥ ಮನೆಗೆ ಪೇಪರ್ ಹಾಕಿಲ್ಲಣ್ಣ ಎಂದು ಹೇಳಿದಾಗ ಮಾತ್ರ ನಮಗೆ ಗೊತ್ತಾಗುತ್ತಿತ್ತು. ಆಗ ಗ್ರಾಹಕರು ನಮ್ಮ ಬಳಿ ಆ ಸಮಯದಲ್ಲಿ ಮಾತಾಡುತ್ತಿದ್ದುದ್ದು ಹೀಗೆ.
" ಸಾರ್ ನ್ಯೂಸ್ ಪೇಪರ್ ಬಿಲ್ಲು."
"ಓ ಬನ್ನಿ ಒಳಗೆ ಬನ್ನಿ, ಕೂತುಕೊಳ್ಳಿ. ಹೇಗಿದ್ದೀರಿ? ಹೇಗೆ ನಡೆಯುತ್ತಿದೆ ನಿಮ್ಮ ಕೆಲಸ.?"
ಚೆನ್ನಾಗಿದೆ ನಡೆಯುತ್ತಿದೆ ಸಾರ್. ಪರವಾಗಿಲ್ಲ".
"ಏನು ಈ ಸಾರಿ ಲೇಟಾಗಿ ಬಂದಿದ್ದೀರಿ ಕಲೆಕ್ಷನ್ನಿಗೆ"
ಹೌದು ಸಾರ್, ಈ ಸಲ ಲೇಟಾಯ್ತು. ನಿಮಗೆ ಗೊತ್ತಲ್ಲ. ಇದೊಂದೆ ಕೆಲಸದಲ್ಲಿ ಹೊಟ್ಟೆ ತುಂಬಲ್ಲ. ಬೇರೆ ಕೆಲಸಕ್ಕೆ ಹೋಗ್ತೀನಲ್ಲ ಸಂಜೆ ಬರೋದು ತಡವಾಗುತ್ತೆ. ಅದಕ್ಕಾಗಿ ಕಲೆಕ್ಷನ್ ಸರಿಯಾದ ಟೈಮಿಗೆ ಮಾಡೋಕ್ಕೆ ಆಗೊಲ್ಲ."
ಆಷ್ಟರಲ್ಲಿ ಅವರ ಶ್ರೀಮತಿ ಕಾಫಿ ಕೊಡುತ್ತಾರೆ. ನಾನು ಸಂಕೋಚದಿಂದಲೇ ಕುಡಿಯುತ್ತೇನೆ.
ಬಿಲ್ ಎಷ್ಟಾಯ್ತಪ್ಪ?
"ತಗೊಳ್ಳಿ ಸಾರ್ ಪ್ರಜಾವಾಣಿ ಬಿಲ್ಲು ೩೩-೦೦ ರೂಪಾಯಿ"
"ಏನಪ್ಪ ಜಾಸ್ತಿ ಹಾಕಿದ್ದೀಯ?"
"ಇಲ್ಲಾ ಸಾರ್. ನಾವು ಎಲ್ಲಿ ಜಾಸ್ತಿ ಹಾಕಲಿಕ್ಕೆ ಸಾಧ್ಯ. ಈ ತಿಂಗಳಿಂದ ೧೦ ಪೈಸೆ ಜಾಸ್ತಿ ಆಫೀಸಿನಿಂದಲೇ ಮಾಡಿದ್ದಾರೆ. ಅದಕ್ಕೆ ಮೂರು ರೂಪಾಯಿ ಜಾಸ್ತಿ ಆಗಿದೆ ಸಾರ್. ಮೊದಲು ೩೦ ರೂಪಾಯಿ ತಗೊತಿದ್ದೆನಲ್ಲಾ ಸಾರ್"
ಏನೋಪ್ಪ ಇವರು ಅವಾಗಾವಗ ಈ ರೀತಿ ಜಾಸ್ತಿ ಮಾಡಿದ್ರೆ ಹೆಂಗಪ್ಪ? ನಮಗೂ ಈ ರೀತಿ ಸಂಬಳ ಜಾಸ್ತಿ ಆಗೊಲ್ಲವಲ್ಲಪ"
ಅವರು ತಮ್ಮ ಕಷ್ಟ_ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಹಣವನ್ನು ಕೊಡುತ್ತಾ,
"ನಿಮ್ಮ ಹುಡುಗನಿಗೆ ಸ್ವಲ್ಪ ಹೇಳಪ್ಪ, ಅವಾಗಾವಾಗ ಯಾವಾತ್ತಾದ್ರೂ ಒಂದೊಂದು ದಿನ ಪೇಪರ್ ಹಾಕೊದನ್ನ ತಪ್ಪಿಸಿಬಿಡುತ್ತಾನೆ. ದಿನಾ ಬೆಳಗಾದ್ರೆ ನಮಗೆ ಪೇಪರ್ ಬೇಕೆ ಬೇಕಪ್ಪ. ನಮಗೆ ನಮ್ಮ ಹೊರಗಿನ ಪ್ರಪಂಚದ ನ್ಯೂಸ್ ಎಲ್ಲಾ ಸರಿಯಾಗಿ ಗೊತ್ತಾಗೋದು ಈ ಪೇಪರಿನಿಂದಲೇ ಅಲ್ವೇ! ಅದು ಅಲ್ದೇ ನಮ್ಮ ಆಕಾಶವಾಣಿಯಲ್ಲಿ ಅವಾಗಾವಾಗ ವಾರ್ತೆ ಕೇಳ್ತಿದ್ರು ಅದು ತುಂಭಾ ಚುಟುಕಾಗಿರುತ್ತೆ, ಇನ್ನೂ ಆ ಟಿ.ವಿ. ನ್ಯೂಸನ್ನು ನೋಡಬೇಕಂದ್ರೆ ರಾತ್ರಿ ೯ ಗಂಟೆಯವರೆಗೆ ಕಾಯಬೇಕಲ್ವ, ಏನೇ ಆದ್ರೂ ಪೇಪರಿನಲ್ಲಿ ನಿದಾನವಾಗಿ ಓದೋ ಮಜಾನೇ ಬೇರೆ ಬಿಡಪ್ಪ"
"ಸರಿ ಸಾರ್ ನಮ್ಮ ಹುಡುಗನಿಗೆ ಹೇಳ್ತೀನಿ, ಬರ್ತೀನಿ ಸಾರ್."
ಒಂದು ನಿಮಿಷ ಇರು, ನಾಡಿದ್ದು ಭಾನುವಾರ ಸಂಜೆ ಮನೆಗೆ ಬಾಪ್ಪ. ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದೇವೆ. ನೀನು ತಪ್ಪದೇ ಬರಬೇಕು. ನಿಮ್ಮ ಮನೆಯವರನ್ನು ಕರೆದುಕೊಂಡು ಬಾ ಆಯ್ತಾ."
"ನನಗಿನ್ನೂ ಮದುವೆಯಾಗಿಲ್ಲಾ"
"ಹೋ ಹೌದಾ, ಬೇಗ ಒಂದು ಮದುವೆ ಮಾಡಿಕೊಳ್ಳೋದು ತಾನೆ. ನೀನು ಭಾನುವಾರ ತಪ್ಪದೇ ಬರಬೇಕು".
ಆ ಮನೆಯಿಂದ ಹೊರಬರುತ್ತಾ ನನ್ನ ಸ್ಕೂಟಿಯನ್ನು ಸ್ಟಾರ್ಟ್ ಮಾಡಿದೆ. ಎಂಥ ಒಳ್ಳೇ ಗ್ರಾಹಕರು ಇವರು. ಎಷ್ಟು ಪ್ರೀತಿಯಿಂದ ಮಾತಾಡಿಸ್ತಾರೆ, ವಿಚಾರಿಸುತ್ತಾರೆ ಎನ್ನಿಸಿತ್ತು. ಹಾಗೆ ಮುಂದೆ ಹೋಗಿ ಇನ್ನೊಂದು ಮನೆಯ ಕಾಲಿಂಗ್ ಬೆಲ್ ಹೊತ್ತಿದೆ. ಬಾಗಿಲು ತೆಗೆಯಲಿಲ್ಲ. ಬದಲಾಗಿ ಕಿಟಕಿ ತೆರೆಯಿತು. ಒಳಗಿನಿಂದ ಒಂದು ಹುಡುಗಿ ಇಣುಕಿನೋಡಿ,
" ಯಾರು ?"
"ನಾನು ನ್ಯೂಸ್ ಪೇಪರ್ ಬಿಲ್ ಕಲೆಕ್ಟ್ ಮಾಡಲಿಕ್ಕೆ ಬಂದಿದ್ದೀನಿ."
"ಒಂದು ನಿಮಿಷ ಇರಿ" ಒಳಗೆ ಹೋಯಿತು ಹುಡುಗಿ.
"ಅಪ್ಪಾ ನ್ಯೂಸ್ ಪೇಪರಿನವರು ಬಂದಿದ್ದಾರೆ".
"ನಾನು ಸ್ನಾನ ಮಾಡಿ ಮಡಿಲಿದ್ದೀನಿ ಅರ್ದ ಗಂಟೆ ಬಿಟ್ಟು ಬರಲಿಕ್ಕೆ ಹೇಳಮ್ಮ" ಅದು ನನಗೂ ಕೇಳಿಸಿತ್ತು. ಆ ಹುಡುಗಿ ಬಂದು ಹೇಳುವ ಮೊದಲೇ " ಸರಿ ಆಯ್ತು." ನಾನು ಅಲ್ಲಿಂದ ಹೊರಟೆ/ ಹೊರಡುವಾಗ ಅನ್ನಿಸಿತು, ಸ್ನಾನ ಮಾಡಿ ಮಡಿಯಲ್ಲಿದ್ದರೆ ದುಡ್ಡು ಮಡಿಯಲ್ಲಿರುತ್ತಾ, ಮನಸ್ಸಿನಲ್ಲಿ ಅಸಮಧಾನವಿತ್ತು. ಒಂದಷ್ಟು ಸುತ್ತು ಹಾಕಿಕೊಂಡು ಮತ್ತೆ ಅದೇ ಮನೆಗೆ ಹೋದೆ. ಮತ್ತೆ ಕಾಲಿಂಗ್ ಬೆಲ್, ಹುಡುಗಿ, ಅದೇ ಮಾತು, ಸರಿ ಈ ಬಾರಿ " ಕೊಡ್ತೀನಿ ಐದು ನಿಮಿಷ ಇರಲಿಕ್ಕೆ ಹೇಳು" ನನಗೂ ಕೇಳಿಸಿತು ಆ ಮಾತು.
ಐದು ನಿಮಿಷ ಇರು ಎಂದರೆ ಎಲ್ಲಿ ಇರಬೇಕು? ನಾನು ನಿಂತಿದ್ದು ಅವರ ಮುಚ್ಚಿದ ಬಾಗಿಲ ಮುಂದೆ, ಸರಿ ನಿಂತು ಏನು ಮಾಡುವುದು? ಬೇಸರವಾಯ್ತು. ಸರಿ ಐದು ನಿಮಿಷ ತಾನೆ ನಿಲ್ಲೋಣ ಎಂದು ನನಗೆ ನಾನೆ ಸಮಾಧಾನ ಮಾಡಿಕೊಂಡೆ.
ಐದು ನಿಮಿಷವಾಯ್ತು. ಆತ ಬರಲಿಲ್ಲ. ಹತ್ತು ನಿಮಿಷವಾಯ್ತು. ನನಗೆ ತಡೆಯಲಾಗದ ಸಿಟ್ಟು ಬಂತು. ಹತ್ತು ನಿಮಿಷ ಮುಚ್ಚಿದ ಬಾಗಿಲ ಮುಂದೆ ಆ ಬಾಗಿಲನ್ನು ನೋಡುತ್ತಾ ನಿಲ್ಲಲು ಸಾಧ್ಯವೇ? ಅದರಲ್ಲೂ ಸುಮ್ಮನೆ ನಿಲ್ಲುವುದು ನನ್ನ ಸ್ವಭಾವಕ್ಕೆ ಸಾಧ್ಯವೇ? ಈ ಮನೆಯವ ಮೊದಲು ಬಂದಾಗ ಮಡಿ, ಪೂಜೆ ಎಂದ. ಅವಾಗಲೇ ಜೇಬಿನಿಂದಲೋ, ಬೀರುವಿನಿಂದಲೋ ಹಣ ತೆಗೆದು ಒಂದು ನಿಮಿಷದಲ್ಲಿ ಕೊಟ್ಟು ಬಿಡಬಹುದಿತ್ತು. ಹೋಗಲಿ ಈಗಲಾದರೂ ಕೊಡುತ್ತಾನಾ ಎಂದರೇ ೫ ನಿಮಿಷ ಎಂದ, ಆಗಲೇ ಹತ್ತು ನಿಮಿಷ ಕಳೆಯಿತು. ನಾವು ಎಂದಾದರೂ ಒಂದು ದಿನ ಪೇಪರ್ ಲೇಟಾಗಿ ಕೊಟ್ಟರೆ, ಸೂರೆ ಕಿತ್ತುಹೋಗುವಂತೆ ಕೂಗಾಡುತ್ತಾನೆ. ಈಗ ಹಣ ಕೊಡಲು ಎಷ್ಟು ಹೊತ್ತು ಬಾಗಿಲ ಮುಂದೆ ನಿಲ್ಲಿಸುತ್ತಾನೆ ಈತ?,

ನನ್ನ ಸಿಟ್ಟು ನೆತ್ತಿಗೇರಿತ್ತು. ಅದರೆ ಏನು ಮಾಡುವುದು ? ನಾನು ಸಿಟ್ಟು ಮಾಡಿಕೊಳ್ಳುವಂತಿಲ್ಲ. ಆತ ನನ್ನ ಗ್ರಾಹಕ. ಅವನು ದಿನಪತ್ರಿಕೆ ಕೊಂಡರೇ ಅದರ ಲಾಭದಲ್ಲಿ ನನ್ನ ಜೀವನ ನಡೆಯುವುದು.

ಹೀಗೆ ಯೋಚಿಸುತ್ತಿರುವಾಗ ನನಗೆ ಅದುವರೆಗೂ ಕಟಕಟೆಯಲ್ಲಿ ನಿಂತ ಆನುಭವ. ಆತನೋ ಜಡ್ಜ್ ಸಾಹೇಬನಂತೆ ಕಾಣುತ್ತಿದ್ದಾನೆ{ಅನ್ನಿಸುತ್ತಿದ್ದಾನೆ} ಆತ ಬಂದ ಮೇಲೆ ಏನೇನು ಹೇಳುತ್ತಾನೆ ಎಂಬ ಭಯ ಹೀಗೆ ಯೋಚಿಸುತ್ತಿರುವಾಗಲೇ ಕೊನೆಗೂ ಕಿಟಕಿ ತೆರೆಯಿತು.

ಜಡ್ಜ್ ಸಾಹೇಬರ ದರ್ಶನವಾದಂತೆ ಕಿಟಕಿಯಲ್ಲಿ ಆತನ ದರ್ಶನವಾಯಿತು. ಕೈಯಲ್ಲೊಂದು ಕ್ಯಾಲೆಂಡರ್ ಹಿಡಿದಿದ್ದ. ಆತ. ಕಿಟಕಿಯ ಒಳಗೆ ಆತ. ನಾನು ಹೊರಗೆ ಕಟಕಟೆಯಲ್ಲಿ ನಿಂತಂತೆ.

"ಇಲ್ಲಿ ನೋಡಿ ಮಾರ್ಚ್ ೬ನೇ ತಾರೀಖು, ಮತ್ತೆ ೧೫, ೧೯, ಒಟ್ಟು ಮೂರು ದಿನ ಪೇಪರ್ ಬಂದಿಲ್ಲ. ನೋಡಿ ಇಲ್ಲಿ ಮಾರ್ಕ್ ಮಾಡಿದ್ದೇನೆ. ಸಾಕ್ಷಿ ಸಮೇತ ತೋರಿಸಿದ್ದ.

ಅವನ ಮಾತಿಗೆ "ಇಲ್ಲಾ ಸಾರ್ ನಮ್ಮ ಹುಡುಗ ಸರಿಯಾಗಿ ಹಾಕಿರ್ತಾನೆ ನೋಡಿ"
"ಹಾಗಾದರೆ ನಾನು ಇಲ್ಲಿ ಸುಮ್ಮನೆ ಬರೀತೀನೇನ್ರೀ? ನಮಗೆ ಪೇಪರು ಬರದಿದ್ದ ದಿನ ಈ ಕ್ಯಾಲೆಂಡರಲ್ಲಿ ಗುರುತು ಹಾಕಿಬಿಡ್ತೀನಿ. ಗೊತ್ತಾ! ನಾನು ಈ ಕ್ಯಾಲೆಂಡರ್ ತರಿಸೋದೆ ಹಾಲು ಪೇಪರು ಇನ್ನೂ ಏನೇನೋ ಬರದಿದ್ರೆ ಗುರುತು ಹಾಕಿಕೊಳ್ಳಲಿಕ್ಕೆ ಗೊತ್ತಾ. ಸರಿ ಎಷ್ಟಾಯ್ತು ಹೇಳಿ ಪೇಪರ್ ಬಿಲ್?

ಆತ ಹೇಳಿದ ದಿನಗಳನ್ನು ಕಳೆದು ಒಂದು ಮೊತ್ತ ಬಿಲ್ಲಿನಲ್ಲಿ ಬರೆದುಕೊಟ್ಟೆ. ಬಿಲ್ ತೆಗೆದುಕೊಂಡವನು ಮತ್ತೆ ಒಳಗೆ ಹೋಗಿ ಕ್ಯಾಲಿಕುಲೇಟರ್ ತಂದು "ದಿನದ ಪೇಪರ್ ರೇಟು ಎಷ್ಟು?"

ನಾನು "೧ ರೂಪಾಯಿ ೧೦ ಪೈಸೆ ಸಾರ್" ಎಂದೆ.

ಆತ ಲೆಕ್ಕ ಹಾಕಿ "೨೯-೭೦ ಆಗುತ್ತಲ್ಲರೀ ನೀವು ೩೦ ರೂಪಾಯಿ ಹಾಕಿದ್ದೀರಿ,"
"ಚಿಲ್ಲರೇ ಇರೋದಿಲ್ಲವಲ್ಲ ಸಾರ್ ಅದಕ್ಕೆ"

ನಾನು ಕೊಡ್ತೀನ್ರೀ ಚಿಲ್ರೆ" ಎಂದು ತನ್ನ ಮಗಳನ್ನು ಕರೆದು ತನ್ನ ದೇವರ ಮನೆಯ ಹುಂಡಿಯಲ್ಲಿದ್ದ ಚಿಲ್ಲರೆ ತರಲು ಹೇಳಿ, "ತಗೋಳ್ರೀ" ಎಂದು ೨೯ ರೂಪಾಯಿ ನೋಟುಗಳನ್ನು ಕೊಟ್ಟು, ನಾಲ್ಕಾಣೆಯ ೨ ಕಾಯಿನ್ ಮತ್ತು ೧೦ ಪೈಸೆಯ ೨ ಕಾಯಿನ್ ಕೊಟ್ಟು, "ಸರಿಯಾಯ್ತ?" ಕೇಳಿದ.

ನನಗೇ ಮನದಲ್ಲಿಯೇ ಕೋಪ. ಈತ ಸರಿಯಾಗಿ ಊಟ ಮಾಡುತ್ತಾನ ಅಂತ? "ಸರಿ ಸಾರ್" ಎಂದು ಹೇಳುವಷ್ಟರಲ್ಲಿ ಕಿಟಕಿ ದಡ್ ಎಂದು ಮುಚ್ಚಿಕೊಂಡಿತು. ಆತ ಕೊಟ್ಟ ನೋಟು, ಚಿಲ್ಲರೆಯಿಂದಲೋ ಅಥವಾ ಅಷ್ಟು ಹೊತ್ತು ಆ ಮುಚ್ಚಿದ ಬಾಗಿಲ ಮುಂದೆ ನಿಂತಿದ್ದಕ್ಕೋ ಅಲ್ಲಿಂದ ನಿರ್ಗಮಿಸುವಾಗ ಮನಸ್ಸು ಭಾರವಾಗಿತ್ತು.

ಅಲ್ಲಿಂದ ಮತ್ತೊಂದು ಮನೆ, ಮಗದೊಂದು ಮನೆ ಹೀಗೆ ಒಂದೊಂದು ಮನೆಯ ಮುಂದೆಯೂ ನನಗಾದ ಅನುಭವಗಳು ನೂರಾರು. ಕೆಲವು ಮನೆಗೆ ಹೋದಾಗ ಅವರು ತಕ್ಷಣಕ್ಕೆ ಹಣ ಕೊಡುತ್ತಾರೆ. ಒಂದು ನಿಮಿಷವೂ ನಿಲ್ಲಿಸುವುದಿಲ್ಲ. ಅವರಿಗೆ ನಮ್ಮ ಕಷ್ಟ-ಸುಖಗಳು ಗೊತ್ತಿರಬಹುದು. ಹಾಗೂ ತಿಂಗಳಿಗೊಮ್ಮೆ ಕೊಡುವ ಹಣಕ್ಕೆ ಏತಕ್ಕೆ ಸತಾಹಿಸಬೇಕು? ಅವರಾಗಲಿ ಅವರ ಹುಡುಗರಾಗಲಿ ತಿಂಗಳಾನುಗಟ್ಟಲೆ ಬೆಳಿಗ್ಗೆ ಎದ್ದು ಚಳಿ, ಮಳೆ, ಗಾಳಿ ಎನ್ನದೇ ನಮಗೆ ಪೇಪರುಗಳನ್ನು ಕೊಡುತ್ತಾರೆನ್ನುವ ಭಾವನೆಯಿಂದಲೋ ನಾವು ಬಿಲ್ ಕೊಟ್ಟ ತಕ್ಷಣ ಹಣ ಕೊಡುತ್ತಾರೆ.

ಇನ್ನೂ ಕೆಲವರಿರುತ್ತಾರೆ. ಅವರ ಬಳಿ ಹೋದಾಗ ಮಲಗಿದ್ದಾರೆ ಎಂದೋ, ಸ್ನಾನಕ್ಕೆ ಹೋಗಿದ್ದಾರೆ, ಪೂಜೆ ಮಾಡುತ್ತಿದ್ದಾರೆ , ಹೊರಗೆ ಹೋಗಿದ್ದಾರೆ ಎಂದು ಹೇಳಿ ನಮ್ಮನ್ನು ಸಾಗಹಾಕುತ್ತಾರೆ. ಇನ್ನೂ ಕೆಲವೊಂದು ಮನೆಗಳ ಅನುಭವ ಮತ್ತಷ್ಟು ವಿಭಿನ್ನ.
ನಾನು ಎಂದಿನಂತೆ ಕಾಲಿಂಗ್ ಬೆಲ್ ಮಾಡಿ,
"ಸಾರ್ ನ್ಯೂಸ್ ಪೇಪರ್ ಬಿಲ್"
ಬಾಗಿಲು ತೆರೆಯಿತು. ಮನೆಯ ಯಜಮಾನ ಬಂದ. ಬಿಲ್ ಕೈಗೆ ಕೊಟ್ಟೆ. ಆತ ತಕ್ಷಣ
"ಓ ನ್ಯೂಸ್ ಪೇಪರ್ ಬಿಲ್ಲ, ಐದು ನಿಮಿಷ ಮೊದಲು ಬರಬಾರದ?"
"ಯಾಕೆ ಸಾರ್ ಏನಾಯ್ತು?"
"ನಮ್ಮೆಂಗಸ್ರು ಟಾಯ್ಲೆಟ್ಟಿಗೆ ಹೋದರಲ್ಲರೀ"
ಆ ಮಾತನ್ನು ಹೇಳುವಾಗ ಅವನ ಮುಖದಲ್ಲಿ ಯಾವ ಭಾವನೆಯು ಇರಲಿಲ್ಲ.
"ಅರೆರೆ.... ಈತನ ಹೆಂಡತಿ ಟಾಯ್ಲೆಟ್ಟಿಗೆ ಹೋಗುವುದಕ್ಕೂ ನಾನು ಪೇಪರ್ ಕಲೆಕ್ಷನ್ ಮಾಡಲಿಕ್ಕೂ ಏನು ಸಂಭಂದ?, ಹಾಗೆ ಇವನ ಹೆಂಡತಿಗೆ ಐದು ನಿಮಿಷಕ್ಕೆ ಮೊದಲು ಟಾಯ್ಲೆಟ್ಟಿಗೆ ಹೋಗುವುದಕ್ಕೆ ಪ್ರಶ್ಶರ್[ಒತ್ತಡ] ಪ್ರಾರಂಭವಾಗಿದೆಯೆಂದು ಮೊದಲೇ ತಿಳಿದು ನಾನು ಅವರ ಬಳಿ ಹೋಗಬೇಕಾಗಿತ್ತೆಂದು ನನಗೆ ಗೊತ್ತಾಗಲಿಕ್ಕೆ ನಾನೇನು ತ್ರಿಕಾಲ ಜ್ಜಾನಿಯೇ? ಬೇರೆ ಸಮಯವಾಗಿದ್ದರೇ ತಕ್ಷಣ ನಗು ಬರುತ್ತಿತ್ತೇನೋ! ಆದರೆ ಈಗ ನಗುವಿನ ಬದಲು ಅತನ ಮೇಲೆ ಸಿಟ್ಟೇ ಬಂತು.

ನನ್ನ ಹಣ ವಸೂಲಿಗೂ, ಆಕೆ ಟಾಯ್ಲೆಟ್ಟಿಗೆ ಹೋಗುವುದಕ್ಕೂ, ಈ ಮನೆ ಯಜಮಾನ ಸಂಭಂದ ಕಲ್ಪಿಸುತ್ತಿದ್ದಾನಲ್ಲ! ಇಷ್ಟಕ್ಕೂ ಅವನ ಹೆಂಡತಿ ಮಹಾರಾಣಿಯಂತೆ ಟಾಯ್ಲೆಟ್ಟಿನಲ್ಲಿರಲಿ!! ಅದರ ಸುಖ ನೆಮ್ಮದಿ ಅನುಭವಿಸಲಿ! ಆದರೆ ಇವನಿಗೇನು ದಾಡಿ ಹಣ ಕೊಡಲಿಕ್ಕೆ? ನನ್ನಲ್ಲಿ ಪ್ರಶ್ನೆ ಮೂಡಿತ್ತು.

"ಅದಕ್ಕೇನಂತೆ ಹೋಗ್ಲಿಬಿಡಿ, ನೀವೆ ದುಡ್ಡು ಕೊಡಬಹುದಲ್ಲವೇ ಸಾರ್" ಕೇಳಿದೆ.
"ಛೇ ಹಾಗೆಲ್ಲಾದರೂ ಉಂಟೇ!, ನಾನು ಆ ವಿಚಾರಕ್ಕೆ ತಲೆ ಹಾಕಲ್ಲ! ನನ್ನದೇನಿದ್ರೂ ತಿಂಗಳಿಗೊಂದು ಸಲ ಸಂಬಳ ತಂದು "ನಮ್ಮೆಂಗಸ್ರ" ಕೈಗೆ ಕೊಟ್ಟುಬಿಟ್ಟರೆ ಮುಗೀತು. ಅವರೇ ಹಾಲು, ಪೇಪರ್, ದಿನಸಿ, ಮನೆಖರ್ಚು ಎಲ್ಲಾ ನೋಡಿಕೊಳ್ಳೋದು. ನನಗ್ಯಾಕ್ರಿ ಬೇಕು ಈ ಉಸಾಬರಿ, ನೀವೊಂದು! ಎಂದು ನಕ್ಕ ತನ್ನ ಬೋಳು ತಲೆ ಸವರಿಕೊಳ್ಳುತ್ತಾ, "ಐದು ನಿಮಿಷ ಇರಿ ಬರ್ತಾರೆ" ಎಂದು ಹೇಳಿ ರೂಮಿಗೆ ಹೋಗೆಬಿಟ್ಟ.

ಮತ್ತೆ ಐದು ನಿಮಿಷ ನಿಲ್ಲಬೇಕೆ, ಅದು ತೆರೆದ ಬಾಗಿಲ ಮುಂದೆ! ಇದಕ್ಕೆ ಮೊದಲು ಹೋಗಿದ್ದ ಮನೆಯ ಮುಚ್ಚಿದ ಬಾಗಿಲ ಮುಂದೆ ಸುಮಾರು ಹೊತ್ತು ನಿಂತ ಅನುಭವವೇ ಇನ್ನೂ ಹಚ್ಚ ಹಸಿರಾಗಿರುವಾಗ ಮತ್ತೊಮ್ಮೆ ಈಗ ತೆರೆದ ಬಾಗಿಲ ಮುಂದೆ ಆತನ "ನಮ್ಮೆಂಗಸ್ರೂ' ಟಾಯ್ಲೆಟ್ಟ್ ರೂಮಿನಿಂದ ಹೊರಬರುವವರೆಗೂ ಇಲ್ಲೇ ನಿಂತಿರಬೇಕು!

ಸರಿ. ನಿಂತು ಏನು ಮಾಡಲಿ, ಮತ್ತೊಮ್ಮೆ ನಾಳೆ ಬರುತ್ತೇನೆ ಎಂದು ಹೇಳೋಣವೆಂದರೆ ಮನೆಯ ಯಜಮಾನ ಇದೆಲ್ಲಾ ಉಸಾಬರಿ ನನಗೇಕೆ ಎಂದು ಹೇಳಿ ರೂಮು ಸೇರಿಬಿಟ್ಟ. ಈಗೇನು ಮಾಡಲಿ?

ಹೋಗಲಿ ಒಂದೈದು ನಿಮಿಷ ತಾನೆ ಆಯ್ತು ಬಿಡು ಎಂದು ನನ್ನಷ್ಟಕ್ಕೆ ನಾನೇ ಸಮಾಧಾನ ಮಾಡಿಕೊಂಡು ಅವರ ಮನೆಯ ಒಳಗೆಲ್ಲಾ ನೋಡತೊಡಗಿದೆ. ಒಳಗೇನಿದೆ, ಅದೇ ಫೋಟೋ, ಸೋಫಾ, ಷೋಕೇಸ್, ಲೈಟು ಪ್ಯಾನು ಟಿ.ವಿ. ಒಂದು ಟಿಪಾಯ್, ಅದರ ಮೇಲೆ ನಾವೇ ತಂದು ಹಾಕಿದ ದಿನಪತ್ರಿಕೆ. ಇದನ್ನೇ ನಾನು ಪ್ರತಿದಿನಕ್ಕೆ ಸರಾಸರಿ ೧೫-೨೦ ಮನೆಗಳಂತೆ ಒಂದು ತಿಂಗಳಲ್ಲಿ ಕಡಿಮೆಯೆಂದರೂ ೬೦೦ ಮನೆಗಳಂತೆ, ಅಜಮಾಸು ೧೫ ವರ್ಷಗಳಿಂದ ನೋಡುತ್ತಾ ಬಂದಿರುವ ನನಗೇ ಮತ್ತೇ ಅದನ್ನೇ ನೋಡಬೇಕಾದ ಕರ್ಮಕಾಂಡಕ್ಕೆ ನನ್ನನ್ನೇ ನಾನು ಬೈದುಕೊಂಡರೂ, ನನಗಿಂತ ದೊಡ್ಡದಾಗಿ ೧೦೦೦ ಸಾವಿರ ಮನೆಗಳು, ೧೫೦೦ ಮನೆಗಳಷ್ಟು ಗ್ರಾಹಕರನ್ನು ಹೊಂದಿರುವ ವಿತರಕರನ್ನು ನೆನೆದು ನಾನೆ ಪರ್ವಾಗಿಲ್ಲವೆಂದು ಸಮಾಧಾನ ಮಾಡಿಕೊಳ್ಳಬೇಕಾಯಿತು.

ಇದರ ಮದ್ಯೆ ಬೇಡ ಬೇಡವೆಂದರೂ ಈ ಮನೆಯಾಕೆಯ ಟಾಯ್ಲೆಟ್ಟಿನ ವಿಚಾರ ಪದೇ ಪದೇ ನೆನಪಾಗಿ ಅಲ್ಲಿ ನಿಂತ ೧೦-೧೫ ನಿಮಿಷಗಳ ಕಾಲ ನಾನು ಅನುಭವಿಸಿದ ಯಾತನೆ ಬಹುದಿನದವರೆಗೆ ಕಾಡುತ್ತಿತ್ತು.

ಇಂಥ ಸಾವಿರಾರೂ ಅನುಭವಗಳು ನಾನು ಈ ವೃತ್ತಿಗೆ ಬಂದಾಗಿನಿಂದ ಸಿಗುತ್ತವೆ. ಇದರಲ್ಲಿ ನನಗೆ ಗೊತ್ತಾದ ವ್ಯತ್ಯಾಸವೆಂದರೆ ಆ ದಿನಗಳಿಗೂ ಇಂದಿನ ಈ ದಿನಗಳಿಗೂ ನಡುವೆ ಈಗ ಪ್ರತಿಯೊಬ್ಬರ ಕೈಯಲ್ಲೂ ಇರುವ ಮೊಬೈಲ್ ಫೋನ್. ಆಗ ಇದೇ ರೀತಿ ನಮ್ಮ ಕೆಲಸ ನಡೆಯುತ್ತಿತ್ತು. ಆಗಿನ ಕಾಲಕ್ಕೆ ರೂಪಾಯಿ ಬೆಲೆ ಕಡಿಮೆ ಇದಂತೆ ಅದಕ್ಕೆ ತಕ್ಕಂತೆ ದಿನಪತ್ರಿಕೆಗಳ ಬೆಲೆಯೂ ಕಡಿಮೆ ಇರುತ್ತಿತ್ತು.

ಮತ್ತೊಂದು ಅನುಕೂಲವೆಂದರೆ ಜನರ ಜೀವನ ಮಟ್ಟ ಕೆಳಗಿದ್ದುದರಿಂದ ನಮ್ಮ ವೃತ್ತಿಯಲ್ಲಿ ಹುಡುಗರು ದಾರಾಳವಾಗಿ ಸಿಗುತ್ತಿದ್ದರು. ಆಗ ಅವರಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಪ್ರಮಾಣಿಕತೆಯಿತ್ತು. ಈಗಿನಷ್ಟು ಅನುಕೂಲಗಳಿಲ್ಲದಿದ್ದರೂ ಇರುವುದರಲ್ಲೇ ಅವರು ತೃಪ್ತಿ ಹೊಂದಿರುತ್ತಿರುದ್ದರು. ನಮ್ಮ ಹಾಗೂ ಗ್ರಾಹಕರ ನಡುವಿನ ಭಾಂಧವ್ಯಗಳು ಚೆನ್ನಾಗೆ ಇದ್ದವು.

ನಮಗೂ ಗ್ರಾಹಕರ ನಡುವೆ ಸಂವಾದಗಳಾಗಲಿ, ಪ್ರೀತಿ ವಿಶ್ವಾಸದ ಮಾತುಗಳಾಗಲಿ, ಜಿಪುಣತನದ ಲೆಕ್ಕಚಾರವಾಗಲಿ, ಇದ್ದ ಆತ್ಮೀಯತೆ, ತಿರಸ್ಕಾರ, ಕೃತಜ್ಜತೆ, ಬೇಸರ, ಸಿಟ್ಟುಗಳಾಗಲಿ ನಡೆಯುತ್ತಿದ್ದುದ್ದು ತಿಂಗಳಿಗೊಮ್ಮೆ ಮಾತ್ರ.

ಆಗ ಬಂತು ನೋಡಿ ಮೋಬೈಲು. ಇದು ನಮ್ಮ ಹಾಗೂ ಗ್ರಾಹಕರ ನಡುವೆ ತಂದಿಟ್ಟ ಅನುಕೂಲ, ಆನಾನುಕೂಲ, ಆತ್ಮೀಯತೆ, ಅತಂಕ, ತಿರಸ್ಕಾರ, ಪರಸ್ಪರ ತಪ್ಪು ತಿಳಿವಳಿಕೆಗಳು, ಜಗಳ ದೂರುಗಳು ಒಂದೇ ಎರಡೇ, ಸಾವಿರಾರು.

ಆಗ ತಾನೆ ಹೊಸದಾಗಿ ಮೊಬೈಲ್ ಫೋನು ತಗೊಂಡಿದ್ದೆ. ನಾನು ಕೊಳ್ಳುವುದಕ್ಕೂ ಮೊದಲೇ ಈ ವಸ್ತು ಬಂದಿತ್ತಾದರೂ ನನಗೆ ಹೊಸದಾಗಿ ಕೊಂಡಾಗ ಏನೋ ಸಂಭ್ರಮ. ಎಲ್ಲರಿಗೂ ಇದ್ದಂತೆ. ಸಿಕ್ಕ ಸಿಕ್ಕ ಗೆಳೆಯರಿಗೆಲ್ಲಾ ನನ್ನ ಫೋನ್ ನಂಬರ್ ಕೊಟ್ಟು ಮಾತಾಡುವುದೇ ಒಂದು ಆನಂದ. ಅದು ರಿಂಗಾಗುತ್ತಿದ್ದಂತೆ ನನ್ನೊಳಗೆ ಏನೋ ಒಂದು ವರ್ಣಿಸಲಾಗದ ಕುತೂಹಲ ಇತ್ತು. ಆಗ ಒಳಬರುವ ಕರೆಗಳಿಗೂ ಹಣ ಕಟ್ಟಬೇಕಿದ್ದರೂ ಖುಷಿಯಿಂದ ಮಾತಾಡುತ್ತಿದ್ದೆ. ಕೆಲವೇ ದಿನಗಳ ನಂತರ ಮೊಬೈಲ್ ಫೋನಿನ ಒಳಬರುವ ಕರೆಗಳಿಗೆ ಹಣ ಕಟ್ಟುವಂತಿಲ್ಲವೆಂದಾಗ ನನಗೆ ಆಕಾಶ ಕೈಗೆ ಎಟುಕಿದಷ್ಟು ಆನಂದ.

ಪ್ರತಿ ತಿಂಗಳು ನಾವು ಹಣ ವಸೂಲಿಗೆ ಹೋದಾಗ ಗ್ರಾಹಕರು, ನಮ್ಮ ಹುಡುಗರು ಮಾಡುವ ತಪ್ಪುಗಳ ಬಗ್ಗೆ, ಪೇಪರ್ ತಪ್ಪಿಸುವ ಬಗ್ಗೆ ಪುಟಗಟ್ಟಲೆ ನಮಗೆ ಹೇಳುತ್ತಿದ್ದರು. ಬಹುಶಃ ಒಂದು ತಿಂಗಳಿಗಾಗುವಷ್ಟು ದೂರುಗಳನ್ನು ಸೇರಿಸಿಡುತ್ತಿದ್ದರೇನೋ. ಇದನ್ನೆಲ್ಲಾ ತಪ್ಪಿಸಲು ನಮಗೆ ಏನಾದರೂ ಮಾಡಬೇಕೆನ್ನಿಸುವ ಸಮಯದಲ್ಲಿ ಸಿಕ್ಕಿತಲ್ಲ ನಮಗೆ ಮೊಬೈಲು ಫೋನಿನ ಉಚಿತ ಒಳಬರುವ ಕರೆಗಳು!

ನಮ್ಮ ಎಲ್ಲಾ ಗ್ರಾಹಕರಿಗೂ ನನ್ನ ಮೊಬೈಲ್ ಫೋನ್ ನಂಬರ್ ಕೊಟ್ಟುಬಿಡೋಣ. ನಮ್ಮ ಹುಡುಗರು ಮಾಡುವ ತಪ್ಪುಗಳಾದ ಮಳೆಬಂದಾಗ ಪೇಪರನ್ನು ನೀರಲ್ಲಿ ಹಾಕಿಬಿಡುವುದು, ಸಜ್ಜೆ ಮೇಲೆ ಬೀಳಿಸುವುದು, ಹರಿದು ಹಾಕಿದ ಪೇಪರ್ ಹಾಕಿಬಿಡುವುದು, ಸಪ್ಲಿಮೆಂಟರಿ ತಪ್ಪಿಸುವುದು, ತಡವಾಇ ಹಾಕುವುದು, ಇವುಗಳನ್ನೆಲ್ಲಾ ತಕ್ಷಣಕ್ಕೆ ನಮ್ಮ ಟಿ.ವಿ. ನ್ಯೂಸ್ ನಂತೆ ಲೈವ್ ಕವರೇಜ್ ರೀತಿ, ಅವರು ಫೋನ್ ಮಾಡಿದ ತಕ್ಷಣ ಹೋಗಿ ಸರಿಪಡಿಸಿಬಿಡಬಹುದು ಎಂದು ಖುಷಿಯಾಯಿತು.

ಆಗಲೇ ನಮ್ಮ ಹಣ ವಸೂಲಿ ರಸೀತಿಯ ಮೇಲೆಲ್ಲಾ ನನ್ನ ಮೊಬೈಲ್ ಫೋನ್ ನಂಬರು ರಾರಾಜಿಸುತ್ತಿತ್ತು. ಈಗ ನನ್ನ ಗ್ರಾಹಕರು ಏನೇ ತೊಂದರೆಗಳಿಗೂ ತಿಂಗಳುಗಳವರೆಗೆ ಕಾಯುವಂತಿಲ್ಲ. ಈ ಕ್ಷಣ ಕರೆ ಮಾಡಿದರೆ ಅರ್ದ ಗಂಟೆ, ಒಂದು ಗಂಟೆ ಹೆಚ್ಚೆಂದರೆ ಅವತ್ತೇ ಪರಿಹರಿಸಬಲ್ಲೆನು ಎನ್ನುವ ಆತ್ಮವಿಶ್ವಾಸ ಮೂಡಿತ್ತು.

ಪ್ರಾರಂಭದ ಒಂದೆರಡು ವರ್ಷಗಳು ಇದು ತುಂಬಾ ಚೆನ್ನಾಗಿತ್ತು. ಇದು ಎಷ್ಟು ನೇರ ಪರಿಣಾಮ ಬೀರಿತ್ತೆಂದರೇ ನಮ್ಮ ಹಾಗೂ ಗ್ರಾಹಕರ ನಡುವೆ ಅತ್ಯುತ್ತಮ ಭಾಂಧವ್ಯ ಬೆಳೆದಿತ್ತು. ನಮ್ಮ ಸೇವೆಗಳಿಗೂ ಅವರು ಸಂತೃಪ್ತಗೊಂಡಿದ್ದರು. ಹೊಸದಾದ ತಂತ್ರಜ್ಜಾನ ಸಿಕ್ಕಾಗ ಆಗುವ ಬೆಳವಣಿಗೆಗೆ ಅದ್ಬುತವೆನಿಸಿದರೂ, ನಂತರ ನಿದಾನವಾಗಿ ಅದರ ಆಡ್ಡ ಪರಿಣಾಮ ಆದಾಗ ಏನೇನು ಆನಾಹುತಗಳು ಆಗುತ್ತವೆ ಎನ್ನುವ ಸಾವಿರಾರು ಉದಾಹರಣೆಗಳು ಇರುವಂತೆ ಈ ಮೊಬೈಲು ಕೂಡ ನಮ್ಮ ಹಾಗೂ ಗ್ರಾಹಕರ ನಡುವೆ ನಂತರದ ದಿನಗಳಲ್ಲಿ ಆಡ್ಡ ಪರಿಣಾಮ ಬೀರಲು ಪ್ರಾರಂಭಿಸಿದ್ದವು.

ಒಂದು ದಿನ ಮದ್ಯಾಹ್ನ ಊಟ ಮುಗಿಸಿ ಆರಾಮವಾಗಿ ಅಂದಿನ ಪತ್ರಿಕೆ ಓದುತ್ತಿದ್ದೆ. ಸಮಯ ೩ ಗಂಟೆಯಾಗಿರಬಹುದು. ಆಗ ನನ್ನ ಮೊಬೈಲು ರಿಂಗ್ ಆಯಿತು. ನಾನು
"ಹಲೋ ಯಾರು?" ಎಂದೆ.
'ನಾನು ಜತಿನ್ ಷಾ"
ಹೇಳಿ ಏನಾಗಬೇಕು"
"ನಮ್ಮ ಮನೆಗೆ ಇವತ್ತು ನ್ಯೂಸ್ ಪೇಪರ್ ಬಂದಿಲ್ಲವಲ್ಲರೀ?"
ಎಲ್ಲಿ ಸಾರ್ ನಿಮ್ಮ ಮನೆ"
ಏನ್ರೀ ನಮ್ಮ ಮನೆ ಗೊತ್ತಿಲ್ವಾ?
"ಇಲ್ಲಾ ಸಾರ್, ನನಗೆ ಹೇಗೆ ಗೊತ್ತಾಗುತ್ತೆ ಹೇಳಿ, ನನ್ನ ೬೦೦ ಜನ ಕಷ್ಟಮರುಗಳಲ್ಲಿ ನಿಮ್ಮದು ಯಾವುದು ಅಂತ ತಿಳಿದುಕೊಳ್ಳಲಿ"
ಆತನಿಗೆ ನನ್ನ ತೊಂದರೆ ಆರ್ಥವಾಯಿತೆಂದು ತಿಳಿಯುತ್ತದ್ದೆ.
"ನಮ್ಮ ಮನೆ ನಂ. ೨೨/ಇ, ೪ ನೇ ಕ್ರಾಸ್, ಕುಮಾರ ಪಾರ್ಕ ವೆಸ್ಟ್ ಎಂದು ಹೇಳಿದ.
ಅವನು ನನ್ನನ್ನು ಕಂಪ್ಯೂಟರ್ ಅಂತಲೋ, ಅಥವಾ ಡಾಟಾ ಸ್ಟೋರೇಜೆ ಬಾಕ್ಸ್ ಎಂದೋ, ಇಲ್ಲಾ ಆತನೊಬ್ಬನೇ ನನಗೇ ಕಷ್ಟಮರು, ಬೇರಾರು ಇಲ್ಲ, ಈ ರೀತಿ ವಿಳಾಸ ಹೇಳಿದ ತಕ್ಷಣ ನನಗೆ ಗೊತ್ತಾಗಿಬಿಡುತ್ತದೆ ಎಂದು ಅವನಿಗೆ ಅನ್ನಿಸಿರಬೇಕು.
ನನಗಿನ್ನೂ ಗೊತ್ತಾಗಿಲ್ಲ ಸಾರ್, ನಿಮ್ಮ ಮನೆಯ ಹತ್ತಿರ ಯಾವುದಾದ್ರು ಲ್ಯಾಂಡ್ ಮಾರ್ಕ್ ಹೇಳಿದ್ರೆ ಗೊತ್ತಾಗುತ್ತೆ.;
ನಾವು ನಮ್ಮ ಗಿರಾಕಿಗಳ ಪ್ರತಿಯೊಂದು ಮನೆಯನ್ನು ಅಕ್ಕ-ಪಕ್ಕ ಎದುರಿಗೆ, ಇಲ್ಲವೇ ಮೇಲೆ-ಕೆಳಗೆ, ಅಥವಾ ಯಾವುದಾದರೂ ಆಂಗಡಿ ಕಛೇರಿ, ಬೋರ್ ವೆಲ್, ಮನೆಗೆ ಹೊಡೆದಿರುವ ಬಣ್ಣ ಹೀಗೆ ಯಾವುದಾದರೂ ಒಂದು ಆದಾರವಾಗಿಟ್ಟುಕೊಂಡು ನಾನಾಗಲಿ, ನನ್ನ ಇತರ ಗೆಳೆಯರಾಗಲಿ ಅಥವ ನಮ್ಮ ಬೀಟ್ ಹುಡುಗರಾಗಲಿ ಮನೆಗಳನ್ನು ಗುರುತಿಟ್ಟುಕೊಳ್ಳುತ್ತೇವೆ.
"ನೋಡ್ರಿ ನಮ್ಮ ಮನೆ ಪಕ್ಕ ಸತ್ಯಂ ಕಂಪ್ಯೂಟರ್ಸ್ ಅಂತ ಆಫೀಸಿದೆಯಲ್ಲಾ ಅದರ ಬಲಕ್ಕಿರೋದೆ ನಮ್ಮ ಮನೆ.
ಓಹ್ ಆ ಮನೇನಾ ಹೇಳಿ ಸಾರ್ ಏನಾಗಬೇಕು?
ನಮ್ಮನೆಗೆ ಇವತ್ತು ಪೇಪರು ಹಾಕಿಲ್ವಲ್ಲ ಯಾಕೆ?
ಇಲ್ಲಾ ಸಾರ್ ನಾವು ಸರಿಯಾಗಿ ಕಳುಹಿಸಿರುತ್ತೇವೆ. ಬಾಲ್ಕನಿಯಲ್ಲಿರುವ ಮೂಲೆಯಲ್ಲೇನಾದ್ರೂ ಸೇರಿಕೊಂಡಿದೆಯಾ ನೋಡಿ ಸಾರ್" [ಕೆಲವೊಮ್ಮೆ ನಮ್ಮ ಹುಡುಗರು ಮೇಲೆ ಎಸೆದ ಪೇಪರುಗಳು ಈ ರೀತಿ ಬಾಲ್ಕನಿಯ ಮೂಲೆಯಲ್ಲಿ ಹೋಗಿ ಬಚ್ಚಿಟ್ಟುಕೊಂಡಿರುತ್ತವೆ. ಎಷ್ಟೋ ಕಷ್ಟಮರುಗಳು ಪೇಪರ್ ಬಂದಿಲ್ಲ ಎಂದು ಹೇಳಿದ ದಿನ ಬಾಲ್ಕನಿಗೆ ಹೋಗಿ ನೋಡಿರುವುದಿಲ್ಲ. ಸುಲಭವಾಗಿ ಫೋನು ಕೈಗೆ ಸಿಗುತ್ತದಲ್ಲ ಎಂದು ತಕ್ಷಣ ನಮಗೆ ಫೋನು ಮಾಡುತ್ತಾರೆ. ನಾವು ಈ ರೀತಿ ಹೇಳಿದಾಗ ಬಾಲ್ಕನಿಗೆ ಹೋಗಿ ನೋಡಿ ಅಲ್ಲಿದ್ದ ಪೇಪರ್ ಹುಡುಕಿ "ಸಿಕ್ಕಿತು ಸಾರಿ" ಎನ್ನುತ್ತಾರೆ]
ಎಲ್ಲಾ ನೋಡಿ ಆಯ್ತು ರ್ರೀ ಇವತ್ತು ಪೇಪರ್ ಬಂದಿಲ್ಲ".
ಸರಿ ಸಾರ್ ನಾನು ನಾಳೆ ಬೆಳಿಗ್ಗೆ ನಮ್ಮ ಹುಡುಗನಿಗೆ ಕೇಳ್ತೀನಿ. ಅವನಿಗೆ ಏನೋ ಕನ್ ಪ್ಯೂಸ್ ಆಗಿರಬೇಕು, ವಿಚಾರಿಸಿ ನಾಳೆ ಸರಿಯಾಗಿ ಪೇಪರ್ ಹಾಕಲಿಕ್ಕೆ ಹೇಳ್ತೀನಿ.
"ಆದ್ರೆ ನನಗೆ ಇವಾಗ ಪೇಪರ್ ಬೇಕಲ್ಲ?"
"ನಿಮಗೆ ಪೇಪರ್ ಬೇಕು ಒಪ್ಪಿಕೋತೀನಿ, ಆದ್ರೆ ಈಗ ಮೂರು ಗಂಟೆ ಆಗಿದೆ. ಈಗ ಕೇಳಿದ್ರೆ ಹೇಗೆ ಸಾರ್?"
"ಅರೆ ನಾವು ಪೇಪರ್ ನೋಡೋದು ಇವಾಗ್ಲೆ ರೀ, ನಮಗೆ ಇವಾಗ ಪೇಪರ್ ಬೇಕಲ್ವ?"
ಇಲ್ನೋಡಿ ಸಾರ್, ನಮ್ಮ ಈ ಪೇಪರ್ ಕೆಲಸ ಬೆಳಿಗ್ಗೆ ಮುಗಿದುಹೋಗುತ್ತೆ. ಹೆಚ್ಚೆಂದರೆ ನಮ್ಮ ಹುಡುಗರು ೭ ಗಂಟೆ ಅಥವಾ ೭-೩೦ರ ಒಳಗೆ ತಮ್ಮ ಕೆಲಸ ಮುಗಿಸಿ ಹೋಗಿಬಿಡುತ್ತಾರೆ. ಆಷ್ಟಾದರೂ ನಾನು ೮ ಗಂಟೆಯವರೆಗೆ ಇದ್ದು ಯಾರಿಗಾದ್ರು ತಪ್ಪಿಸಿದ್ರೆ ಹೋಗಿ ಕೊಟ್ಟುಬಿಟ್ಟು ಮನೆಗೆ ಹೋಗಿಬಿಡ್ತೀನಿ"
ಅದೆಲ್ಲಾ ನನಗೆ ಗೊತ್ತಿಲ್ಲಾರೀ, ನನಗೆ ಈಗ ಪೇಪರ್ ಬೇಕಲ್ವ್?"
ಇಷ್ಟುಹೊತ್ತಿಗೆಲ್ಲಾ ನಾವು ಪೇಪರ್ ಕೊಡೋಕ್ಕಾಗಲ್ಲ. ಈಗ ಕೊಡೋದು ಏನಿದ್ರೂ ಸಂಜೆ ಪತ್ರಿಕೆ. ನಾನು ಸಂಜೆ ಪತ್ರಿಕೆ ಸಪ್ಲೇ ಮಾಡೋಲ್ಲ ಸಾರ್.
"ಏನ್ರೀ ನೀವು ಹೀಗೆ ಹೇಳ್ತೀರಿ, ನಿಮ್ಮ ಹುಡುಗರು ತಪ್ಪಿಸಿದ್ರೆ ನೀವು ತಂದುಕೊಡೋದು ನಿಮ್ಮ ಜವಬ್ದಾರಿ ತಾನೆ!"
"ಖಂಡಿತ ನಿಮ್ಮ ಮಾತು ಒಪ್ಪಿಕೋತೀನಿ, ನೀವೆ ಹೇಳಿದ ಹಾಗೆ ನಮ್ಮ ಜವಾಬ್ದಾರಿ ಬೆಳಿಗ್ಗೆ ಮಾತ್ರ, ನೀವು ಬೆಳಿಗ್ಗೆ ಫೋನ್ ಮಾಡಿದ್ರೆ ನಾನೇ ತಂದು ಕೊಡುತಿದ್ದೆ".
ಆ ಕಡೆಯಿಂದ ಆತ ಒಪ್ಪಿಕೊಳ್ಳುವಂತೆ ಕಾಣಲಿಲ್ಲ. ಅವನು ಪಟ್ಟು ಬಿಡದೇ ನನಗೇ ನನಗೆ ಸಿಟ್ಟು ಬಂತು.
"ನನಗೆ ಈಗ ತಂದುಕೊಡೋಕ್ಕೆ ಆಗೋಲ್ಲ"
ಈ ಮಾತನ್ನು ಕೇಳಿ ಅವನ ಇಗೋಗೆ ಪೆಟ್ಟುಬಿದ್ದಂತಾಯಿತೇನೋ ಅವನು ಮತ್ತಷ್ಟು ಹಠದಿಂದ,
"ಯಾಕ್ರೀ ತಂದುಕೊಡೋಲ್ಲ? ನಿಮ್ಮ ಡ್ಯೂಟಿ ಅದು, ತಂದುಕೊಡಬೇಕು".
ಇದುವರೆಗೂ ತಾಳ್ಮೆಯಿಂದ ಮಾತಾಡಿದ್ದ ನನಗೂ ಕೋಪ ಬಂತು. ನನ್ನಲ್ಲೂ ಆ ಕ್ಷಣದಲ್ಲಿ ಇಗೋ ಸೆಟೆದುನಿಂತಿತೆಂದು ಕಾಣುತ್ತದೆ.[ನಾನು ಸುಮಾರು ೧೫ ವರ್ಷಗಳಿಂದ ಏಜೆಂಟ್ ಆಗಿ ಇಂತಹ ಗಿರಾಕಿಗಳನ್ನು ನೋಡಿದ್ದರಿಂದ ಹಾಗೂ ಇದರಲ್ಲೇ ನಾನು ಚೆನ್ನಾಗಿ ಅನುಕೂಲಕರ ಜೀವನ ಮಾಡುತ್ತಿದ್ದುದರಿಂದ ಹಾಗೂ ಇಂತ ಒಬ್ಬ ಗಿರಾಕಿ ಇಲ್ಲದಿದ್ದರೆ ನನಗೇ ಬೇಡುವ ಪರಿಸ್ಥಿತಿ ಬರುವುದಿಲ್ಲವೆನಿಸಿ, ನನ್ನಲ್ಲೂ ಸ್ವಲ್ಪ ಇಗೋ ಬೆಳಿದಿತ್ತು].

ಇಲ್ಲಾ ತಂದುಕೊಡೋದಿಕ್ಕೆ ಆಗೊಲ್ಲ. ಇದೇ ರೀತಿ ಬ್ಯಾಂಕಿನಲ್ಲೋ, ಇನ್ಯಾವುದೋ ಆಫೀಸಿಗೆ ಹೋಗಿ, ಅವರ ಡ್ಯೂಟಿ ಅವರ್ ಮುಗಿದ ಮೇಲೆ ನಮ್ಮ ಕೆಲಸ ಮಾಡಿಕೊಡಿ ಅಂತ ಕೇಳಿನೋಡಿ ಅವರು ಮಾಡಿ ಕೊಡ್ತಾರ?"

ನೀವು ಬ್ಯಾಂಕ್, ಆಫೀಸೆಲ್ಲಾ ಹೇಳಬ್ಯಾಡ್ರೀ.. ಅದಕ್ಕೂ ಇದಕ್ಕೂ ಸಂಭಂಧವಿಲ್ಲ. ಅವರ ಮಟ್ಟಕ್ಕೆ ಹೋಲಿಸಬೇಡ್ರೀ..

ಹಾಗಾದರೆ ಅವರೆಲ್ಲಾ ಮನುಷ್ಯರು, ನಾವೆಲ್ಲಾ ಗುಲಾಮರು ಅಂತ ಅಂದುಕೊಂಡಿದ್ದೀರಿ ಅನಿಸುತ್ತೆ". ಆವರು ಎ.ಸಿ.ರೂಮಿನಲ್ಲಿ ಕೂತು ಟೈ, ಸೂಟು-ಬೂಟು ಹಾಕಿಕೊಂಡು ಸಾವಿರಗಟ್ಟಲೇ ಸಂಬಳ ಎಣಿಸುತ್ತಾರೆ. ಅದಕ್ಕೆ ಅವರ ಬಗ್ಗೆ ನಿಮಗೆ ಗೌರವ. ನಾವು ಕೇವಲ ದಿನಪತ್ರಿಕೆ ಕೋಡೋರು ಅಂತ ನಮ್ಮ ಬಗ್ಗೆ ತಾತ್ಸಾರ".
"ಆಗೇನಿಲ್ಲಪ್ಪಾ".

ಮತ್ತೇನ್ ಸಾರ್, ಅವರೂ ಊಟ ತಿಂಡಿ ಮಾಡ್ತಾರೆ, ನಾವೂ ಮಾಡ್ತೀವಿ. ಅವರಷ್ಟೇ ಸ್ವಾಭಿಮಾನ ನಮಗೂ ಇದೆ. ಇದನ್ನು ನೀವು ತಿಳಿಯದೆ, ಬೆಳಗಿನ ಪೇಪರನ್ನು ನೀವು ಮದ್ಯಾಹ್ನ ಮೂರು ಗಂಟೆಗೆ ನೋಡಿಕೊಂಡಿದ್ದು ನಿಮ್ಮ ಪ್ರಾಬ್ಲಮ್ಮು, ಅದು ಅಲ್ಲದೇ ಈಗ ತಂದು ಕೊಡಿ ಅಂದ್ರೆ, ನಿಮಗೆ ನಮ್ಮ ಮೇಲೆ ಗುಲಾಮಗಿರಿಯ ಭಾವನೆಯಲ್ಲದೇ ಮತ್ತೇನು ಬರಲಿಕ್ಕೆ ಸಾಧ್ಯ ಹೇಳಿ ಸಾರ್?"

ನನ್ನ ಮಾತಿಗೆ ಆತನಲ್ಲಿ ಉತ್ತರವಿರಲಿಲ್ಲ. ಕೊನೆಗೆ
"ಕೊನೆಗೆ ಹೀಗೇನು ಮಾಡೋಣ,"
"ಏನಿ ಮಾಡಬೇಕಿಲ್ಲ ಸಾರ್, ನಿಮಗೆ ಇವತ್ತಿನ ಪೇಪರ್ ಬಂದಿಲ್ಲವಲ್ಲ. ಮುಂದಿನ ತಿಂಗಳು ದುಡ್ಡು ಕೊಡುವಾಗ ಅದರ ಹಣ ಮುರಿದು ಕೊಡಿ. ನಿಮಗೆ ಆಷ್ಟಕ್ಕೂ ಈಗ ಪೇಪರ್ ಬೇಕೆಬೇಕು ಅನಿಸಿದ್ರೆ, ನಿಮ್ಮ ರಸ್ತೆಯ ಬಲ ಮೂಲೆ ಅಂಗಡಿಯಲ್ಲಿ ಎಲ್ಲಾ ಪೇಪರುಗಳು ಸಿಕ್ಕುತ್ತೆ. ಹೋಗಿ ತಗೋಬಹುದಲ್ವ ಸಾರ್"

"ಸರಿಯಪ್ಪ ಮತ್ತೆ ಹೀಗೆ ಮಾಡಬೇಡ ಅಂತ ನಿಮ್ಮ ಹುಡುಗನಿಗೆ ಹೇಳು. ಮತ್ತೆ ಹೀಗೆ ಆದ್ರೆ ನಾನು ಪೇಪರ್ ನಿಲ್ಲಿಸಿಬಿಡ್ತೀನಿ. ಆಯ್ತಾ!
ಆಯ್ತು ಸಾರ್.

ಈ ಫೋನ್ ಸಂಭಾಷಣೆ ಸುಮಾರು ೧೫ ನಿಮಿಷದವರೆಗೆ ಸಾಗಿತ್ತು. ಇಷ್ಟು ಮಾತಾಡಲು ನಿಮಿಷಕ್ಕೆ ಒಂದು ರೂಪಾಯಿಯಂತೆ ೧೫ ರೂಪಾಯಿ ಫೋನಿಗೆ ಖರ್ಚು ಮಾಡುವ ಬದಲು ಎದುರಿನ ಆಂಗಡಿಯಲ್ಲಿ ೩ ರೂಪಾಯಿ ಕೊಟ್ಟು ಅವನ ದಿನಪತ್ರಿಕೆ ತೊಗೊಬಹುದಿತ್ತಲ್ಲ ಎನಿಸಿತ್ತು.

ಇದು ಸುಲಭವಾಗಿ ಕೈಗೆ ಸಿಕ್ಕ ಮೊಬೈಲಿನಲ್ಲಿ ನಡೆದ ಸಂಭಾಷಣೆ. ಕೆಲವು ಕಷ್ಟಮರುಗಳು ರಾತ್ರಿ ೮ ಗಂಟೆಗೆ ಇವತ್ತಿನ ಪೇಪರ್ ಬಂದಿಲ್ಲವೆಂದು ಹೀಗೆ ಸುಮಾರು ಹೊತ್ತು ಮಾತಾಡಿದವರಿದ್ದಾರೆ. ಆಗ ತಿಂಗಳಿಗೊಮ್ಮೆ ನನ್ನ ಗಿರಾಕಿಗಳ ನಡುವೆ ಮುಖಾಮುಖಿ ಸಂಭಾಷಣೆ ನಡೆದರೆ, ಈಗ ಈ ಮೊಬೈಲಿನಿಂದಾಗಿ ಪ್ರತಿದಿನ ಇಂಥ ಸಂಭಾಷಣೆಗಳು ನಡೆದು ಕೊಲವೊಮ್ಮೆ ಈ ಉದ್ಯೋಗದ ಮೇಲು ಬೇಸರವಾಗಿದ್ದಿದೆ.

ಈ ಮೊಬೈಲಿನಿಂದ ಇಷ್ಟೆಲ್ಲಾ ಅಡ್ಡ ಪರಿಣಾಮ ಎಂದು ಸ್ವಿಚ್-ಆಪ್ ಮಾಡಿದರೆ, ನನಗೆ ಅದರಿಂದ ಬೇರೆ ರೀತಿಯ ನಷ್ಟವಾಗುವ ಸಾಧ್ಯತೆಗಳುಂಟು. ನಾನು ದಿನಪತ್ರಿಕೆ ಉದ್ಯೋಗವನ್ನು ಬೆಳಗಿನ ಹೊತ್ತು ಮುಗಿಸಿದ ಮೇಲೆ ಉಳಿದ ಸಮಯದಲ್ಲಿ ಫೋಟೋಗ್ರಫಿ ಮಾಡುತ್ತೇನೆ.

ನಾನು ಯಾವುದೇ ಸ್ಟುಡಿಯೋ ಇಟ್ಟಿಲ್ಲವಾದ್ದರಿಂದ ನನಗೆ ನನ್ನ ಗೆಳೆಯರು, ಸಂಭಂದಿಕರು, ಗಿರಾಕಿಗಳಿಂದ ಮದುವೆ, ಮುಂಜಿ ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೂ ನನ್ನ ಮೊಬೈಲಿಗೆ ಫೋನ್ ಮಾಡಿ ಬುಕ್ ಮಾಡುತ್ತಾರೆ. ನಾನು ಫೋನ್ ಸ್ವಿಚ್-ಆಪ್ ಮಾಡಿದರೆ ಅವರಿಂದ ಸಿಗುವ ಫೋಟೋಗ್ರಫಿ ಕೆಲಸ ಬೇರೆಯವರ ಪಾಲಾಗಿಬಿಡಬಹುದು. ಆ ಕಾರಣದಿಂದಾಗಿ ನಾನೆಂದು ಮೊಬೈಲು ಸ್ವಿಚ್-ಆಪ್ ಮಾಡುವುದಿಲ್ಲ.

ಇಷ್ಟೆಲ್ಲಾ ಅನಾನುಕೂಲ ನಮ್ಮ ವೃತ್ತಿಯಲ್ಲಿ ಮೊಬೈಲಿನಿಂದ ಆಗಿದ್ದರೂ, ಕೆಲವು ಅನುಕೂಲಗಳಂತೂ ಇದ್ದೇ ಇದೆ. ಕೆಲವು ಗಿರಾಕಿಗಳಿಗೆ ನಮ್ಮ ಬಗ್ಗೆ ಆದೆಷ್ಟು ಗೌರವವೆಂದರೇ ಅವರೇನಾದರೂ ಮನೆ ಖಾಳಿ ಮಾಡಿ ಹೋಗುವಾಗ ಅಥವಾ ಬದಲಿಸುವಾಗ, ನಮಗೆ ಕರೆ ಮಾಡಿ ವಿಷಯ ತಿಳಿಸಿ ಹಣ ತೆಗೆದುಕೊಂಡು ಹೋಗಲು ಹೇಳುತ್ತಾರೆ. ಇದರಿಂದಾಗಿ ನಾವು ಅಲ್ಲಿಯವರೆಗೆ ಹಾಕಿದ ದಿನಪತ್ರಿಕೆಯ ಹಣ ನಷ್ಟವಾಗದೇ ನಮಗೆ ತಲುಪುತ್ತದೆ. ಮತ್ತು ಅದೇ ಗಿರಾಕಿಗೆ ಹೊಸ ವಿಳಾಸಕ್ಕೂ ನಾವೇ ಕೊಡುವಂತಾದರೆ ಆ ಗ್ರಾಹಕ ನಮ್ಮ ಕೈ ತಪ್ಪಿಹೋಗದಂತಾಗುತ್ತದೆ.

ಕೆಲವೊಮ್ಮೆ ನಾನು ಊರಿಗೆ ಹೋದರೆ ಅಥವ ಇನ್ನಿತರ ಕೆಲಸದ ಮೇರೆಗೆ ಬೆಂಗಳೂರು ಬಿಟ್ಟು ದೂರ ಹೋಗಿದ್ದರೂ ನನ್ನ ಸಹಾಯಕ ನನ್ನ ಮೊಬೈಲಿಗೆ ಮಿಸ್ಡ್ ಕಾಲ್ ಮಾಡುತ್ತಾರೆ. ಕಾರಣ ಅವರ ಫೋನಿನಲ್ಲಿ ಕರೆನ್ಸಿ ಹೆಚ್ಚು ಇರುವುದಿಲ್ಲ. ಮತ್ತೆ ನಾನೇ ಅವರಿಗೆ ಫೋನ್ ಮಾಡಿ ಯಾರ್ಯಾರು ಹುಡುಗರು ಅವತ್ತು ಬಂದಿಲ್ಲವೆಂದು ತಿಳೀದು ಅವರಿಗೆಲ್ಲಾ ಫೋನ್ ಮಾಡಿ ಎಚ್ಚರಗೊಳಿಸಿ ಪತ್ರಿಕೆ ಹಂಚುವ ಕೆಲಸಕ್ಕೆ ಕಳುಹಿಸುತ್ತೇನೆ. ಈ ರೀತಿ ನಾನು ಸ್ಥಳದಲ್ಲಿ ಇಲ್ಲದಿದ್ದರೂ ಕೇವಲ ಮೊಬೈಲು ಫೋನ್ ಮೂಲಕವೇ ನನ್ನ ಕೆಲಸಗಳನ್ನು ಮಾಡಿಸುವಷ್ಟರ ಮಟ್ಟಿಗೆ ಈ ಮೊಬೈಲ್ ಫೋನ್ ಸಹಾಯಕವಾಗಿದೆ.
ಇನ್ನು ಕೆಲವೊಮ್ಮೆ ನಾನೆಲ್ಲೋ ದೂರದ ಊರಿನಲ್ಲಿದ್ದರೆ ಅಲ್ಲಿ ಮೊಬೈ ನೆಟ್ ವರ್ಕ್ ಸಿಗುವುದಿಲ್ಲ. ಆಗ ಈ ಸಾಧನ ಕೆಲಸಕ್ಕೆ ಬಾರದಂತಾಗುತ್ತದೆ.

ಇನ್ನು ಈ ಮೊಬೈಲಿನಿಂದ ಅನೇಕ ಪರಿಣಾಮಗಳಿವೆ. ನನ್ನ ಕುಂಬಕರ್ಣನಂತಹ ಹುಡುಗರನ್ನು ಮೊದಲಿಗೆ ಅವರ ಮನೆಗಳಿಗೆ ಪ್ರತಿದಿನ ಹೋಗಿ ಎದ್ದೇಳಿಸಿ ಬರಬೇಕಿತ್ತು. ಈಗ ಈ ಫೋನಿನಿಂದಾಗಿ ಕುಳಿತಲ್ಲಿಂದಲೇ ಒಂದು ಮಿಸ್ಡ್ ಕಾಲ್ ಮಾಡಿದರೆ ಸಾಕು ಅವರು ಎಚ್ಚರವಾಗಿ ಎದ್ದು ಬರುತ್ತಾರೆ. ಈ ಅನುಕೂಲಗಳ ಜೊತೆಯಲ್ಲಿಯೇ ನಮ್ಮ ಫಠಿಂಗ ಹುಡುಗರು ಸ್ವಿಚ್-ಅಪ್ ಮಾಡುವುದು ಬ್ಯಾಟಾರಿ ಲೋ ಎನ್ನುವುದು, ಹೀಗೆ ಅನೇಕ ಅಡ್ಡ ಪರಿಣಾಮ ಸೃಷ್ಠಿಸುವುದನ್ನು ಈ ಮೊದಲ ಲೇಖನದಲ್ಲಿ ಬರೆದಿದ್ದೇನೆ.

ಇನ್ನೂ ತರಹೇವಾರಿ ಪರಿಣಾಮಗಳನ್ನು ಉಂಟು ಮಾಡುವ ಈ ಮೊಬೈಲಿನ ಫೋನು ತಿಂಗಳಿಗೊಮ್ಮೆ ಬರುವ ಫೋಸ್ಟ್ ಪೇಯಿಡ್ ಬಿಲ್ಲೋ ಅಥವಾ ಪ್ರಿ ಪೇಯಿಡ್ ಕರೆನ್ಸ್ಯೋ ೫೦೦-೧೦೦೦ ಸಾವಿರವೋ ಮುಟ್ಟಿ ನಮ್ಮ ಜೇಬು ಮತ್ತಷ್ಟು ತೂತಾಗುತ್ತದೆ.

ನಮ್ಮ ಮಗು ಏನೇ ಗಲಾಟೆ ಮಾಡಿದರೂ ನಾವದನ್ನು ಪ್ರೀತಿ ವಾತ್ಸಲ್ಯದಿಂದ ಮುದ್ದಿಸುವ ಹಾಗೆ, ಈ ಮೊಬೈಲ್ ಕೂಡ ನಮ್ಮ ಉದ್ಯೋಗದಲ್ಲಿ ಎಲ್ಲಾ ರೀತಿಯ ಪರಿಣಾಮಗಳನ್ನು ಬೀರಿದರೂ ನನ್ನ ಜೇಬಿನಲ್ಲಿ ಮುದ್ದಿನ ಮಗು ತಾನೆ!
ಶಿವು.ಕೆ.

Saturday, September 27, 2008

ಮುಂಜಾನೆ ಸಂತೆ

ಜಗತ್ತೇ ಮಲಗಿರುವಾಗ ಬುದ್ದನೊಬ್ಬ ಎದ್ದ. ಎನ್ನುವ ಮಾತು ಹಳೆಯದು. ಈಗ ಜಗತ್ತೇ ಮಲಗಿರುವಾಗ ನಾವು ದಿನಪತ್ರಿಕೆ ಹಂಚುವವರು[ಜೊತೆಗೆ ಹಾಲಿನವರು] ಎದ್ದಿರುತ್ತೇವೆ. ಎನ್ನುವುದು ಇಂದಿನ ಮಾತು.

ಬೆಳಗಿನ ನಾಲ್ಕು ಗಂಟೆಗೆ ಪ್ರಾರಂಭವಾಗುವ ನಮ್ಮ ದಿನಪತ್ರಿಕೆ ಹಂಚುವ ಕೆಲಸ ಎಲ್ಲಾ ಮುಗಿಯುವ ಹೊತ್ತಿಗೆ ೭ ಗಂಟೆ ದಾಟಿರುತ್ತದೆ. ಒಂದು ರೀತಿ ಇಡೀ ಪ್ರಪಂಚವೇ ನೆಮ್ಮದಿಯಾಗಿ ನಿದ್ರಿಸುವ ಸಮಯದಲ್ಲಿ ನಾವು ಬ್ಯುಸಿ ಬೀಗಳಂತೆ ಚಟುವಟಿಕೆಯಿಂದ ನಮ್ಮ ಪೇಪರುಗಳ ಬಂಡಲ್ಲುಗಳನ್ನು ತರುವುದು, ಸಪ್ಲಿಮೆಂಟರಿ[ಮುಖ್ಯಪತ್ರಿಕೆಯ ಜೊತೆಯಲ್ಲಿ ದಿನಕ್ಕೊಂದು, ಎರಡು ಹೆಚ್ಚಿನ ಪುಟಗಳು ಉದಾಹರಣೆಗೆ "ಮೆಟ್ರೋ, ಸಾಪ್ತಾಹಿಕ, ವಾಣಿಜ್ಯ, ಲೈಫ್ ಸ್ಟೈಲ್, ಕ್ಲಾಸಿಫೈಡ್, ಉದ್ಯೋಗ,ಇತ್ಯಾದಿ ಇವುಗಳನ್ನು ಸಪ್ಲಿಮೆಂಟರಿಗಳು ಅನ್ನುತ್ತೇವೆ]ಗಳನ್ನು ತರುವುದು, ಒಂದೊಂದು ಏರಿಯಾದ ಸುಮಾರು ೫೦-೮೦ ಮನೆಗಳಿಗೆ ಒಬ್ಬೊಬ್ಬ ಹುಡುಗನು ನಿಗದಿಪಡಿಸಿದ ಪತ್ರಿಕೆಗಳನ್ನು ತನ್ನ ಸೈಕಲ್ಲಿಗೇರಿಸಿಕೊಂಡು ಹೋಗಿ ಮನೆಗಳಿಗೆ ತಲುಪಿಸುವುದು, ಹಣ ಕೊಡುವುದು, ಪಡೆಯುವುದು, ಚಿಲ್ಲರೆಗಾಗಿ ಮಾತು, ರೇಗಾಟ, ಹೀಗೆ ನೂರಾರು ಸಂಗತಿ ಸನ್ನಿವೇಶಗಳೆಲ್ಲಾ ಸೇರಿದ ಒಂದು ಸಣ್ಣ ಸಂತೆ. ಕೇವಲ ೨-೩ ಗಂಟೆಗಳಲ್ಲಿ ಫುಟ್ ಪಾತ್ ಎನ್ನುವ ವೇದಿಕೆ ಮೇಲೆ ೨೦-೨೦ ಕ್ರಿಕೆಟ್ಟಿಗಿಂತ ವೇಗವಾಗಿ, ಚುರುಕಾಗಿ ನಸುಕಿನಲ್ಲಿ ನಡೆಯುವ ಇಲ್ಲಾ ನವರಸಗಳ, ಎಲ್ಲಾ ವಯೋಮಾನದವರ ರಂಗಪ್ರಯೋಗವೆನ್ನಿ. ಇಲ್ಲಾ ದಿನಪತ್ರಿಕೆಗಳ ಸಂತೆ ಎನ್ನಿ.

ಅಂದಹಾಗೆ ನಮ್ಮ ಈ ಕೆಲಸ ಮಹಾನ್ ಸಾಧನೆ ಎಂದಾಗಲಿ, ನಾವೆಲ್ಲರೂ ತುಂಬಾ ನಿಯತ್ತಿನವರು, ನಮ್ಮ ದಿನಪತ್ರಿಕೆ ಹಂಚುವ ಹುಡುಗರಾಗಲಿ, ನಾವಾಗಲಿ ಕಾಯಕವೇ ಕೈಲಾಸ, ನಮ್ಮ ಗ್ರಾಹಕರಿಗೆ ಒಳ್ಳೆಯ ಸೇವೆ ಕೊಡಬೇಕು, ಕೊಡುತ್ತಿದ್ದೇವೆ ಎಂದೆಲ್ಲಾ ಹೇಳಿ ನಿಮಗೆ ಬೋರು ಹೊಡಿಸುವುದಿಲ್ಲ.

ಅದೆಲ್ಲವನ್ನು ಬಿಟ್ಟು ನೀವೆಂದು ಕಂಡಿರದ, ನೋಡಿರದ, ಕೇಳಿರದ, ಕೊನೆಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ಹೊಸ ಹೊಸ ನಿಜ ಚಿತ್ರಗಳನ್ನು ಈ ಲೇಖನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತೇನೆ.

ನಾನು ಈ ವೃತ್ತಿಗೆ ಬರುವ ಮೊದಲು ಸುಮಾರು ೨೦ ವರ್ಷಗಳ ಹಿಂದೆ ಈ ದಿನಪತ್ರಿಕೆಗಳನ್ನು ಮನೆ-ಮನೆಗೆ ತಲುಪಿಸುವ ಬೀಟ್ ಬಾಯ್ ಆಗಿದ್ದೆ. ಆಗ ನನ್ನ ಎಸ್.ಎಸ್.ಎಲ್.ಸಿ ಮುಗಿದು ಕಾಲೇಜಿಗೆ ಸೇರಿದ್ದ ದಿನಗಳು. ಅಲ್ಲಿಯವರೆಗೆ ಬೆಳಸಿ ಓದಿಸಿದ್ದ ಅಪ್ಪ ಅಮ್ಮನ ಬಳಿ ಇನ್ನು ಮುಂದೆ ನನ್ನ ಸಣ್ಣ ಪುಟ್ಟ ಖರ್ಚುಗಳಾದ ಪೆನ್ನು ಪುಸ್ತಕ ಇತರೆ ವೆಚ್ಚಗಳನ್ನು ಕೇಳದೆ ನಾನೇ ಯಾವುದಾದರೂ ಪಾರ್ಟ್ ಟೈಂ ಕೆಲಸದ ಸಂಪಾದನೆಯಿಂದ ಸರಿದೂಗಿಸುವಂತೆ ನನ್ನ ಸ್ವಾಭಿಮಾನಿ ಮನಸ್ಸು ಹೇಳುತ್ತಿತ್ತು.

ನನ್ನ ಪಕ್ಕದ ಮನೆಯ ಹುಡುಗ ಬೆಳಿಗ್ಗೆ ಎದ್ದು ದಿನಪತ್ರಿಕೆ ಹಂಚಲು ಹೋಗುತ್ತಿದ್ದ. ಅವನಿಗೆ ನಾನು ಬರುತ್ತೇನೆ ನಿನ್ನ ಜೊತೆ ಕರೆದುಕೊಂಡು ಹೋಗ್ತೀಯ ಎಂದೆ. ಆಯ್ತು ಬಾ ಎಂದು ಅವರ ಓನರ್ ಬಳಿ ನನ್ನನ್ನು ಕರೆದೊಯ್ದ. ಆ ಓನರ್ ಒಂದು ಏರಿಯಾದ ೫-೬ ರಸ್ತೆಗಳಲ್ಲಿರುವ ಸುಮಾರು ಐವತ್ತು ಮನೆಗಳನ್ನು ತೋರಿಸಿ ಪ್ರತಿದಿನ ಆ ಮನೆಗಳಿಗೆ ದಿನಪತ್ರಿಕೆ ಹಂಚುವ ಕೆಲಸ ಕೊಟ್ಟರು.

ಎಲ್ಲಾ ಸರಿ, ಆದರೆ ಪತ್ರಿಕೆ ಹಂಚಲು ಸೈಕಲ್ ಬೇಕಲ್ಲ. ಏನು ಮಾಡುವುದು? ನನ್ನ ತಂದೆಗೆ ಸೈಕಲ್ಲು ಕೊಡಿಸುವಷ್ಟು ಚೈತನ್ಯವಿರಲಿಲ್ಲ. ನನ್ನ ಗೆಳೆಯನ ಬಳಿ ಮತ್ತೊಂದು ಸೈಕಲ್ ಇತ್ತು. ಆ ಸೈಕಲನ್ನು ನಾನು ತಿಂಗಳಿಗೆ ೨೦ ರೂಪಾಯಿ ಬಾಡಿಗೆ ಎಂದು ನಿಗದಿಪಡಿಸಿಕೊಂಡು ನನ್ನ ಜೀವನದ ಮೊದಲನೆ ಕೆಲಸವನ್ನು ಬೀಟ್ ಬಾಯ್ ಆಗಿ ಪ್ರಾರಂಭಿಸಿದೆ. ಆಗ ನನಗೆ ಮೊದಲ ತಿಂಗಳ ಸಂಬಳ ಅಂತ ಬಂದಿದ್ದು ೪೦ ರೂಪಾಯಿ.

ಅದರಲ್ಲಿ ಸೈಕಲ್ ಬಾಡಿಗೆ ಅಂತ ೨೦ ರೂಪಾಯಿ ಹೋಗಿಬಿಡುತ್ತಿತ್ತು. ಉಳಿದ ೨೦ ರೂಪಾಯಿಯನ್ನು ನಾನು ನನ್ನ ತಿಂಗಳು ಪೂರ್ತಿ ಖರ್ಚಿಗಾಗಿ ಇಟ್ಟುಕೊಳ್ಳುತ್ತಿದ್ದೆ. ಅಲ್ಲಿಂದ ಸಾಗಿದ ಈ ದಾರಿ ೬ ವರ್ಷಗಳ ನಂತರ ಬೀಟ್ ಆಗಿ ಪಡೆದಿದ್ದ ಅನುಭವ, ಈ ವೃತ್ತಿಯ ಲೆಕ್ಕಚಾರ, ಲಾಭ-ನಷ್ಟಗಳು ನಿದಾನವಾಗಿ ತಿಳಿಯತೊಡಗಿತು. ಆಷ್ಟು ಹೊತ್ತಿಗೆ ನನ್ನ ಬಿ.ಕಾಂ ಪದವಿ ಮುಗಿದಿತ್ತು. ಮುಂದೆ ಓದುವುದೊ ಇಲ್ಲ ಯಾವುದಾದರೂ ಉದ್ಯೋಗ ಹುಡುಕುವುದೋ ಎನ್ನುವ ಗೊಂದಲದಲ್ಲಿದ್ದವನಿಗೆ ಒಳ್ಳೇ ಉದ್ಯೋಗ ಸಿಗುವವರೆಗೆ ಸ್ವಲ್ಪ ಉಳಿಸಿಟ್ಟ ಹಣದಲ್ಲಿ ನಾನೇ ಏಜೆನ್ಸಿ ತೆಗೆದುಕೊಂಡು ನಡೆಸಿದರೆ ತಾತ್ಕಾಲಿಕವಾಗಿ ಜೀವನಾಧಾರವಾಗುತ್ತದೆ ಅನ್ನಿಸಿತ್ತು.

ಆಗ ತೆಗೆದುಕೊಂಡ ತೀರ್ಮಾನದಿಂದಾಗಿ, ಹಾಗೂ ಯಾರ ಕೈ ಕೆಳಗೂ ಕೆಲಸಮಾಡದೇ ನಾನೆ ಸ್ವಂತ ಏನಾದರೂ ಮಾಡಬೇಕೆನ್ನುವ ನನ್ನ ಹಂಬಲದಿಂದಾಗಿ ಇದೇ ಮುಖ್ಯ ಜೀವನಾಧಾರದ ಕೆಲಸವಾಗಿಬಿಟ್ಟಿತ್ತು. ಒಂದೆರಡು ಸರ್ಕಾರಿ ಉದ್ಯೋಗಗಳು , ಖಾಸಗಿ ಕೆಲಸಗಳು ಸಿಕ್ಕರೂ ಬೇಡವೆಂದ ಕಾರಣಕ್ಕೆ ಮನೆಯವರಿಂದ ಬೈಸಿಕೊಂಡರೂ ನನಗಿಷ್ಟವಾದ ರೀತಿ ಬದುಕಬಹುದಲ್ಲ ಎಂದು ಖುಷಿಯಿತ್ತು.

ಈ ವೃತ್ತಿಯಲ್ಲಿ ಇಲ್ಲಿಯವರೆಗೆ ಬಂದ ದಾರಿಯಲ್ಲಿ ಆದ ಅನುಭವಗಳು ಸಾವಿರಾರು. ನಡುವೆ ನಡೆದ ತರಲೆ ತಾಪತ್ರಯಗಳು ಕಷ್ಟ-ಕೋಟಲೆಗಳು, ಚಿಕ್ಕ ಚಿಕ್ಕ ಸಂತೋಷದ ಸಂಗತಿಗಳು, ನೋವು, ತಮಾಷೆಗಳು ಎಲ್ಲಾ ಅನುಭವಿಸಿದ ನನಗೆ ನಮ್ಮ ಮುಂಜಾವಿನ ಬದುಕಿನಲ್ಲಿ ನಡೆದ ಕೆಲವು ವಿಭಿನ್ನ ಛಟನೆಗಳನ್ನು, ದೃಶ್ಯಾವಳಿಗಳನ್ನು, ನಿಮಗೆ ತೋರಿಸಬಯಸುತ್ತೇನೆ. ಇದಲ್ಲದೇ ಹವ್ಯಾಸ ಹಾಗೂ ವೃತ್ತಿಯಾಗಿ ಸ್ವೀಕರಿಸಿದ ಛಾಯಾಗ್ರಹಣ ಕಲೆಯು ನನಗೆ ಪ್ರಪಂಚವನ್ನು ಬೇರೊಂದು ರೀತಿಯಲ್ಲಿ ನೋಡುವ ಕಲೆಯನ್ನು ಕಲಿಸಿಕೊಟ್ಟಿತು.

ನಿಮಗೆ ಗೊತ್ತಿರುವಂತೆ ಬೆಳಿಗ್ಗೆ ಯಾರೋ ಒಬ್ಬ ಹುಡುಗ ನಿಮ್ಮ ಮನೆಗೆ ನಿಮಗೆ ಬೇಕಾದಂತ ಪೇಪರ್ ಹಾಕಿಹೋಗುತ್ತಾನೆ. ನಂತರ ತಿಂಗಳಿಗೊಮ್ಮೆ ಯಾರೋ ಒಬ್ಬ ಏಜೆಂಟ್ ಅಥವ ವಿತರಕ[ವೆಂಡರ್ ಎನ್ನುವುದು ನಮ್ಮ ವೃತ್ತಿಯ ನಿಜವಾದ ಹೆಸರು] ನಿಮ್ಮ ಮನೆಗೆ ಬಂದು ಹಣ ವಸೂಲಿ ಮಾಡುತ್ತಾನೆ. ಇದು ಬಿಟ್ಟರೆ ಯಾವುದೋ ರಸ್ತೆ ಬದಿಯ ಪೆಟ್ಟಿಗೆ ಆಂಗಡಿಗಳಲ್ಲಿ ಅಥವಾ ಬೆಳಗಿನ ಸಮಯ ಫುಟ್ ಪಾತಿನಲ್ಲಿ ಮಾರುವ ದಿನಪತ್ರಿಕೆಗಳು ನಿಮಗೆ ಕಾಣಸಿಗುಬಹುದು.

ಇದೆಲ್ಲವನ್ನೂ ಬಿಟ್ಟು ಈ ನಮ್ಮ ಸಣ್ಣ ಸಂತೆಯಲ್ಲಿ ನೀವೆಂದೂ ಕಾಣದ ಹೊಸ ಹೊಸ ದೃಶ್ಯಾವಳಿಯನ್ನು ಚಿತ್ರಗಳನ್ನು ಕಟ್ಟಿಕೊಡಲು ಪ್ರಯತ್ನಿಸುತ್ತೇನೆ. ಈ ಧೀರ್ಘಾವಧಿಯಲ್ಲಿ ಆದ ಎಲ್ಲಾ ಅನುಭವಗಳನ್ನು ಹೇಳಲು ಸಾಧ್ಯವಾಗದಿದ್ದರೂ ಕೆಲವು ತುಣುಕುಗಳನ್ನಾದರೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಮತೊಂದು ವಿಚಾರ ನಿಮಗೇ ಹೇಳಲೇಬೇಕು. ನನ್ನ ಈ ಲೇಖನಗಳಲ್ಲಿ ಪತ್ರಿಕೆ, ದಿನಪತ್ರಿಕೆ, ಪೇಪರು, ಬೀಟ್ ಬಾಯ್ಸ್, ಏಜೆಂಟ್, ವಿತರಕ, ಗಿರಾಕಿಗಳು, ಗ್ರಾಹಕರು, ವೃತ್ತಿಭಾಂಧವ ಸಪ್ಲಿಮೆಂಟರಿಗಳು, ಪಾಂಪ್ಲೆಟ್ಸ್ ಇತ್ಯಾದಿ ಪದಗಳೆಲ್ಲಾ ಅಲ್ಲಲ್ಲಿ ರಸ್ತೆಯ ಆಂಪ್ಸ್ ಗಳಂತೆ ಸ್ವಲ್ಪ ಜಾಸ್ತಿಯಾಗಿಯೇ ಬರುವುದರಿಂದ ನಿಮ್ಮ ಓದುವ ಓಟದ ವೇಗಕ್ಕೆ ಅಲ್ಲಲ್ಲಿ ಆಡ್ಡಿಯುಂಟು ಮಾಡಬಹುದು. ಆದರೇನು ಮಾಡಲಿ ನಾನು ಹೇಳಬಯಸಿರುವುದು ಇದೇ ವಿಚಾರವಾದ್ದರಿಂದ, ನೀವು ಸಹಿಸಿಕೊಳ್ಳುತ್ತೀರೆಂದುಕೊಳ್ಳುತ್ತೇನೆ.

ಶಿವು.ಕೆ

Friday, September 26, 2008

ರಬ್ಬರ್ ಬ್ಯಾಂಡ್ ಮತ್ತು ದಾರ

ಎಂದಿನಂತೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮುಖ ತೊಳೆಯುತ್ತಿದ್ದೆ. ಆದೇ ಸಮಯಕ್ಕೆ ನನ್ನ ಮೊಬೈಲ್ ರಿಂಗ್ ಆಯಿತು. ಮೊದಲೇ ನಿದ್ದೆಗಣ್ಣಿನಲ್ಲಿದ್ದ ನನಗೆ ಆ ಸಮಯದಲ್ಲಿ ಮೊಬೈಲ್ ರಿಂಗ್ ಆದರೆ ಸಂಪೂರ್ಣ ಅಲರ್ಟ್ ಆಗಿಬಿಡುತ್ತೇನೆ. ನನ್ನ ನಿದ್ದೆಯೆಲ್ಲಾ ಮಾಯವಾಗಿಬಿಡುತ್ತದೆ.

ಏಕೆಂದರೆ ಅ ಸಮಯದಲ್ಲಿ ಫೋನ್ ಬಂದರೆ ಒಂದೋ ಹುಡುಗರು "ನಾನು ಇವತ್ತು ಬರುವುದಿಲ್ಲ" ಎಂದು ಹೇಳಲಿಕ್ಕೆ ಫೋನ್ ಮಾಡುತ್ತಾರೆ. ಅಥವ ನನ್ನ ಬಳಿ ಸೈಕಲಿಲ್ಲ ನೀವು ಬರುವ ದಾರಿಯಲ್ಲಿ ಕಾಯುತ್ತಿದ್ದೇನೆ. ನನ್ನ ಪಿಕಪ್ ಮಾಡಿ ಎಂದು ಹೇಳಲು ಫೋನ್ ಮಾಡುತ್ತಾರೆ. ಈ ರೀತಿ ಹೇಳುವವರೆಲ್ಲಾ ನನ್ನ ಪ್ರಕಾರ ಒಳ್ಳೆಯ ಹುಡುಗರು[ನನ್ನ ಕೆಲಸದ ದೃಷ್ಟಿಯಿಂದ]. ನಾವೇ ಫೋನ್ ಮಾಡಿ ಕೇಳಿದಾಗ ನಾನು ಬರುವುದಿಲ್ಲ ರಜಾ ಬೇಕು ಅಂತಲೋ ಅಥವಾ ಸ್ವಿಚ್-ಆಫ್ ಮಾಡಿ ನಾನು ಇವತ್ತು ನಿಮ್ಮ ಕೆಲಸಕ್ಕೆ ಬರುವುದಿಲ್ಲ ಎಂದು ನಾವೇ ಅರ್ಥಮಾಡಿಕೊಳ್ಳುವಂತೆ ಮಾಡುವ ಹುಡುಗರು ಬೇಜವ್ಬಾರಿ ಬಾಯ್ಸ್.

ಈ ಹುಡುಗ ರಮೇಶ ಹಾಗೆ ಫೋನ್ ಮಾಡಿದಾಗ ನನಗೆ ಪೂರ್ತಿ ನಿದ್ರೆಯಿಂದ ಎಚ್ಚೆತ್ತ ಹಾಗಾಯಿತು. " ಸಾರ್ ನನ್ನ ಸೈಕಲ್ ಪಂಚರ್ ಆಗಿದೆ, ಇಲ್ಲಿ ಕಾಯುತ್ತಿದ್ದೇನೆ ಎಂದ. ಸರಿ ನಾನು ಬರುತ್ತೇನೆ ಇರು, ನಿನ್ನ ಪಿಕಪ್ ಮಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದೆ. ನಾನು ಪೇಪರ್ ಏಜೆನ್ಸಿ ಸೆಂಟರಿಗೆ ಹೋಗುವ ದಾರಿಯಲ್ಲಿಯೇ ಆ ಹುಡುಗನ ಮನೆ ಇತ್ತು.

ಅವನು ಕಾಯುತ್ತಿದ್ದ. ನನ್ನ ಸ್ಕೂಟಿಯಲ್ಲಿ ಅವನನ್ನು ಹಿಂದೆ ಕೂರಿಸಿಕೊಂಡು ಹೊರಟೆ. ಹಾಗೆ ನೋಡಿದರೆ ಈ ಹುಡುಗ ಪ್ರಾಮಾಣಿಕ ಹಾಗೂ ಬುದ್ಧವಂತ, ಅದೆಲ್ಲಕ್ಕಿಂತ ಇತರರಿಗಿಂತ ಒಳ್ಳೆಯವನು. ಅವತ್ತು ನಾನು ಮತ್ತು ಆ ಹುಡುಗ ಇಬ್ಬರೇ ಇದ್ದೆವು. ನನ್ನ ಇತರೆ ಹುಡುಗರು ಇನ್ನೂ ಬಂದಿರಲಿಲ್ಲ. ಸರಿ ಅವರಿಗೆ ಕಾಯುವುದಕ್ಕಿಂತ ನಾವಿಬ್ಬರೇ ಎಲ್ಲಾ ಪತ್ರಿಕೆಗಳನ್ನು ತಗೊಂಡು ಸಪ್ಲಿಮೆಂಟರಿಗಳನ್ನು ಹಾಕಿ ರೆಡಿ ಮಾಡೋಣ ಎಂದುಕೊಂಡು ಕೆಲಸ ಶುರುಮಾಡಿದೆವು.

ಇದ್ದಕ್ಕಿದ್ದಂತೆ ಆ ಹುಡುಗ "ಸಾರ್ ನಾನೊಂದು ಐಡಿಯಾ ಕೊಡಲಾ" ಎಂದ. ನಾನು ತಕ್ಷಣ "ಬೇಡಪ್ಪ ನಿನ್ನ ಐಡಿಯ ನನಗೆ ಗೊತ್ತು ಚಳಿಯಾಗ್ತಿದೆ, ಕಾಫಿ ತರಿಸಿ ಅಂತೀಯ ಅಲ್ಲವೆ" ಅವನ ಮಾತಿಗೆ ಉತ್ತರಿಸಿದೆ. ನನ್ನ ಉಳಿದ ತರಲೇ ಬೀಟ್ ಬಾಯ್ಸ್ ಕಾಫಿ ತರಿಸಲು ಇದೇ ರೀತಿ ಪೀಠಿಕೆ ಹಾಕುತ್ತಿದ್ದುದ್ದು ಸಹಜವಾಗಿದ್ದುದರಿಂದ, ಇವನು ಹಾಗೆ ಪೀಠಿಕೆ ಹಾಕುತ್ತಿರಬಹುದೆಂದು ನಾನು ಊಹಿಸಿದ್ದೆ.

"ಅಲ್ಲ ಸಾರ್ ನನ್ನ ಮಾತು ಒಂದು ನಿಮಿಷ ಕೇಳಿ, ಈಗ ನೀವು ನಮಗೆಲ್ಲಾ ಪೇಪರ್ ಹಾಕಲು ರಬ್ಬರ್ ಬ್ಯಾಂಡ್ ಯಾಕೆ ತಂದುಕೊಡಬಾರದು? ಕೇಳಿದ.

ನನಗೆ ಅವನು ಏನು ಹೇಳುತ್ತಿದ್ದಾನೆಂದು ತಿಳಿಯದೆ ಕೋಪದಿಂದ "ಬೇರೇನು ಕೆಲಸವಿಲ್ವ ನಿನಗೆ, ರಬ್ಬರ್ ಬ್ಯಾಂಡ್ ಯಾಕೊ ಬೇಕು ನಿನಗೆ ಅದು ಹುಡುಗಿಯರಿಗೆ ತಲೆಗೂದಲಿಗೆ ಹಾಕ್ಕೊಳಕ್ಕೆ ಇರೋದು ಅದರಿಂದ ನಿನಗೇನು ಉಪಯೋಗ?' ರೇಗಿದೆ.

"ಸಾರ್ ನನ್ನ ಮಾತು ಕೇಳಿ ಸ್ವಲ್ಪ ತಾಳ್ಮೆಯಿಂದ ಕೇಳಿ, ಈಗ ನೀವು ನನಗೆ ನಾಳೆ ಒಂದತ್ತು ರಬ್ಬರ್ ಬ್ಯಾಂಡ್ ತಂದುಕೊಡಿ, ಆಮೇಲೆ ನೋಡಿ ನಾನು ಏನು ಮಾಡ್ತೀನಂತ, ಹಾಗೆ ಅದರಿಂದ ನಿಮಗೂ ತುಂಬಾ ಉಪಯೋಗ ಆಗುತ್ತೆ. ಬೇಕಾದರೆ ನೀವೇ ಪರೀಕ್ಷೆ ಮಾಡಬಹುದು" ಎಂದ.

ಅವನ ಮಾತಿನಲ್ಲಿ ನನಗೆ ಆತ್ಮವಿಶ್ವಾಸ ಕಾಣಿಸಿತು. ಹಾಗೂ ನನಗೂ ಕುತೂಹಲ ಉಂಟಾಯಿತು. ನೋಡೋಣ ಇವನೇನು ಮಾಡುತ್ತಾನೆ ಎಂದುಕೊಂಡು ಮರುದಿನವೇ ನನ್ನ ಶ್ರೇಮತಿಯ ಬಳಿ ಕೇಳಿ ಪಡೆದುಕೊಂಡಿದ್ದ ರಬ್ಬರ್ ಬ್ಯಾಂಡುಗಳನ್ನು ಅವನ್ ಕೈಗೆ ಕೊಟ್ಟೆ. ಅದನ್ನು ಪಡೆದುಕೊಂಡ ಆ ಹುಡುಗ "ನಿಮ್ಮ ಕೈಗಡಿಯಾರದಲ್ಲಿ ಟೈಮೆಷ್ಟು" ಎಂದ.

ನಾನು ಕೈ ಗಡಿಯಾರ ನೋಡಿ ೬-೦೫ ಎಂದೆ. "ಸರಿ ಸಾರ್ ಎಂದವನೇ ತನ್ನ ಬೀಟ್ ಪೇಪರಗಳನ್ನು ತನ್ನ ಸೈಕಲ್ಲಿನ ಕ್ಯಾರಿಯರ್ರಿಗೆ ಜೋಡಿಸಿಕೊಂಡು ಹೊರಟೇ ಬಿಟ್ಟ.

ನಾನು ಉಳಿದ ಹುಡುಗರ ಬೀಟ್[ಒಬ್ಬ ಹುಡುಗ ಒಂದು ಬಡಾವಣೆಯ ಅನೇಕ ರಸ್ತೆಗಳಲ್ಲಿರುವ ೫೦-೬೦ ಮನೆಗಳಿಗೆ ದಿನಪತ್ರಿಕೆ ಹಾಕುವುದಕ್ಕೆ ಒಂದು ಬೀಟ್ ಎನ್ನುತ್ತೇವೆ]ಪೇಪರ್ ಜೋಡಿಸಿ ಕಳುಹಿಸುವ ಹೊತ್ತಿಗೆ ೬ -೧೫ ದಾಟಿತ್ತು. ಕೊನೆಗೂ ಎಲ್ಲಾ ಹುಡುಗರು ಹೋದರಲ್ಲ ಎಂದುಕೊಂಡು ಉಳಿದ ಪತ್ರಿಕೆಗಳಲ್ಲೊಂದನ್ನು ತೆಗೆದುಕೊಂಡು ಆರಾಮವಾಗಿ ಓದತೊಡಗಿದೆ. ಒಂದಿಪ್ಪತ್ತು ನಿಮಿಷ ಕಳೆದಿರಬಹುದು., "ಸಾರ್ ನನ್ನ ಕೆಲಸ ಮುಗೀತು, ಈಗ ಟೈಮೆಷ್ಟು?"

ಎಂದು ೬-೦೫ ಕ್ಕೆ ಟೈಮ್ ಕೇಳಿ ಹೋದ ಹುಡುಗ ವಾಪಸ್ಸು ಬಂದು ಕೇಳಿದಾಗಲೇ ನನ್ನ ಪೇಪರ್ ಓದುವ ಗಮನದಿಂದ ಅವನ್ ಕಡೆಗೆ ಹರಿದಿದ್ದು. ನಾನು ನನ್ನ ಕೈಗಡಿಯಾರ ನೋಡಿ "೬-೪೦" ಎಂದೆ. ಆ ಹುಡುಗ ಖುಷಿಯಿಂದ " ನೋಡಿದ್ರಾ ನಾನು ಇವತ್ತು ೧೦ ನಿಮಿಷ ಉಳಿಸಿದೆ. ಪ್ರತಿದಿನ ನಾನು ನನ್ನ ಬೀಟನ್ನು ಮುಗಿಸಲು ೫೦-೫೫ ನಿಮಿಷ ತೊಗೊತಿದ್ದೆ. ಇವತ್ತು ನೀವು ರಬ್ಬರ್ ಬ್ಯಾಂಡ್ ಕೊಟ್ಟಿದ್ದರಿಂದ ೧೦ ನಿಮಿಷ ಬೇಗನೇ ಮುಗಿಸಿ ಬಂದೆ". ಎಂದ.

ಅವನ ಮುಖದಲ್ಲಿ ಏನೋ ಹೊಸ ಸಾಧನೆ ಮಾಡಿದ ಖುಷಿ ಕಾಣಿಸುತ್ತಿತ್ತು. ನನಗೂ ಅವನ್ ಮಾತು ಕೇಳಿ " ಹೌದಲ್ಲವಾ!" ಎನಿಸಿತು. ಹಾಗೂ ಕುತೂಹಲ ಸಹಜವಾಗಿಯೇ ಹೆಚ್ಚಾಯಿತು.

"ಲೋ ಇದು ಹೇಗೆ ಸಾಧ್ಯ" ಎಂದೆ ನಾನು ಆಶ್ಚರ್ಯದಿಂದ. ಅದಕ್ಕವನು,

"ನೋಡಿ ಸಾರ್ ನಾನು ನನ್ನ ರೂಟಿನ ಬೀಟ್ ಮುಗಿಸಲು ೫೦ ನಿಮಿಷ ಆಗುತ್ತಿತ್ತು. ನೀವು ಒಂದತ್ತು ರಬ್ಬರ್ ಬ್ಯಾಂಡ್ ಕೊಟ್ಟಿದ್ದರಿಂದ ನಾನು ಒಂದನೇ -ಎರಡನೇ ಮಹಡಿ ಮನೆಗಳಿಗೆಲ್ಲಾ ಮೆಟ್ಟಿಲೇರಿ ಹೋಗದೇ, ನೀವು ಕೊಟ್ಟ ರಬ್ಬರ್ ಬ್ಯಾಂಡಿನಿಂದ ನ್ಯೂಸ್ ಪೇಪರನ್ನು ಮಸಾಲೆದೋಸೆಯಂತೆ ಸುರುಳಿ ಸುತ್ತಿ ಆದಕ್ಕೆ ರಬ್ಬರ್ ಬ್ಯಾಂಡ್ ಹಾಕಿ ಸರಿಯಾಗಿ ಎಸ್ತ್ದೆ. ಇದರಿಂದ ನಾನು ಮೆಟ್ಟಿಲು ಹತ್ತುವ-ಇಳಿಯುವ ಪ್ರಮೇಯವೇ ಬರಲಿಲ್ಲ. ಅದರಿಂದ ಒಂದತ್ತು ನಿಮಿಷ ಉಳಿಯಿತು" ಎಂದ. ನನಗೆ ಅವನ್ ಮಾತು ಕೇಳಿ ಖುಷಿಯಾಯಿತು.

ಅವನು ಹೇಳುತ್ತಿರುವುದು ನಿಜ ಎನಿಸಿತು. ಈ ರೀರಿ ಸಮಯ ಉಳಿಯುವುದರಿಂದ ನನ್ನ ಗ್ರಾಹಕರು ನನ್ನ ಪತ್ರಿಕೆ ವಿತರಣೆ ಲೇಟು ಎಂದು ಹೇಳುವುದು ತಪ್ಪುತ್ತಲ್ಲ ಎನಿಸಿತು.

ಇದೇ ರೀತಿ ನನ್ನ ಉಳಿದೆಲ್ಲಾ ಹುಡುಗರಿಗೂ ಸ್ವಲ್ಪ ರಬ್ಬರ್ ಬ್ಯಾಂಡ್ ತಂದು ಕೊಟ್ಟರೆ ಅವರು ಕೂಡ ದಿನಪತ್ರಿಕೆ ಹಂಚುವ ಕೆಲಸವನ್ನು ಸರಾಗವಾಗಿ ಬೇಗನೇ ಮುಗಿಸಲು ಸಾಧ್ಯವಾಗುತ್ತದಲ್ಲ ಎನಿಸಿತ್ತು.

"ಸಾರ್ ಏನು ಯೋಚ್ನೇ ಮಾಡ್ತಿದ್ದೀರಿ ದಿನಾ ರಬ್ಬ ಬ್ಯಾಂಡ್ ತಂದು ಕೊಟ್ಟರೆ ಖರ್ಚು ತುಂಬಾ ಆಗಬಹುದು ಅಂತ ಚಿಂತೆ ಮಾಡಬೇಡಿ, ನನಗೆ ದಿನ್ ಹತ್ತು ರಬ್ಬರ್ ಬ್ಯಾಂಡ್ ಬೇಕು. ಹಾಗೆ ಉಳಿದ ನಮ್ಮ ೮ ಜನ್ ಬೀಟ್ ಹುಡುಗರಿಗೆ ತಲಾ ೧೦-೧೨ ರಬ್ಬರ್ ಬ್ಯಾಂಡ್ ಕೊಟ್ಟರೇ ಅವರು ಇದೇ ರೀತಿ ನನ್ನ ಹಾಗೆ ಬೀಟ್ ಬೇಗ ಮುಗಿಸುತ್ತಾರೆ, ಸಮಯ ಉಳಿಯುತ್ತೇ ಸಾರ್" ಎಂದ.

"ಅದು ಸರಿಯಪ್ಪ ನಾನೇನೋ ನೀನು ರಬ್ಬರ್ ಬ್ಯಾಂಡ್ ಏತಕ್ಕೋ ತಮಾಷೆಗೆ ಕೇಳ್ತೀದ್ದೀಯ, ನೋಡೋಣ ಏನು ಮಾಡ್ತೀಯ ಎನ್ನುವ ಕುತೂಹಲಕ್ಕೆ ನನ್ನ ಶ್ರೀಮತಿ ಕಡೆಯಿಂದ ಕೇಳಿ ತಗೊಂಡು ಬಂದೆ. ಈಗ ನೋಡಿದ್ರೆ ನೀನು ನನ್ನ ಉಳಿದ ಬೀಟ್ ಹುಡುಗರಿಗೂ ತಂದುಕೊಡಿ, ಪ್ರತಿದಿನ ಸರಾಸರಿ ೮೦-೯೦ ರಬ್ಬರ್ ಬ್ಯಾಂಡ್ ಬೇಕು ಅಂತ ನೀನೆ ಲೆಕ್ಕಚಾರ ಮಾಡಿ ಹೇಳಿದ್ದೀಯ, ಖಂಡಿತವಾಗಿ ನನ್ನ ಎಲ್ಲಾ ಹುಡುಗರು ನೀನು ಹೇಳಿದಂತೆ ಮೊದಲಿಗಿಂತ ಸ್ವಲ್ಪ ಬೇಗ ಮನೆಗಳಿಗೆ ಪತ್ರಿಕೆ ಹಂಚುತ್ತಾರೆನ್ನುವುದು ಸತ್ಯ. ಆದರೆ ಈ ರಬ್ಬರ್ ಬ್ಯಾಂಡ್ ಸಿಗೋದ್ ಎಲ್ಲಿ? ಈಗ ನೀನು ಹೇಳೋ ಪ್ರಕಾರ ನನಗೆ ಈಗ ಕೇಜಿಗಟ್ಟಲೆ ರಬ್ಬರ್ ಬ್ಯಾಂಡ್ ಬೇಕಾಗಬಹುದು ಆಲ್ವೇನೋ" ಎಂದೆ.

ಇಲ್ಲ ಸಾರ್ ನೀವೇನ್ ಚಿಂತೆ ಮಾಡಬೇಡಿ ೨ ರೂಪಾಯಿ ಪ್ಯಾಕೆಟ್ಟಿನಲ್ಲಿ ನೂರು ರಬ್ಬರ್ ಬ್ಯಾಂಡ್ ಇರಬಹುದು. ಅದು ಒಂದು ದಿನಕ್ಕೆ ಸಾಕಾಗುತ್ತೆ. ಆದೇ ೧೦ ರೂಪಾಯಿನ ಪ್ಯಾಕೆಟ್ ತಗೊಂಡ್ರೆ ಅದನ್ನು ೧೦ ದಿನ ಉಪಯೋಗಿಸಬಹುದು. ಕಾರಣ ಸ್ವಲ್ಪ ಹೋಲ್ ಸೇಲ್ ಆಗಿ ಜಾಸ್ತಿ ಇರುತ್ತೆ. ಇನ್ನು ನೀವು ಬೇಕಾದರೆ ಚಿಕ್ಕಪೇಟೆಗೆ ಹೋಗಿ ಹೋಲ್ ಸೇಲಾಗಿ ಒಂದು ಕೆಜಿ ತಂದರೆ ಅದು ಕೊನೆಪಕ್ಷ ನಾಲ್ಕು ತಿಂಗಳು ಬರುತ್ತೆ ಸಾರ್!"

ನಾನು ಅವನು ಹೇಳುತ್ತಿರುವುದನ್ನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದೆ. ಒಬ್ಬ ಸಾಮಾನ್ಯ, ಕೆಲವು ಮನೆಗಳಿಗೆ ಪತ್ರಿಕೆ ಹಂಚುವ ಹುಡುಗನಿಗೆ ಇಷ್ಟೊಂದು ಲೆಕ್ಕಚಾರ ಗೊತ್ತಿದೆಯಾ? ಕುತೂಹಲ ತಡೆಯಲಾಗದೆ ಕೇಳಿಯೇಬಿಟ್ಟೆ. ಇದೆಲ್ಲಾ ನಿನಗೆ ಹೇಗೆ ಗೊತ್ತು? ೨ ರೂಪಾಯಿ ಪ್ಯಾಕೆಟ್ಟಿನಲ್ಲಿ ಸರಾಸರಿ ನೂರು ಇರುತ್ತೆ ಎಂದು ನಿನಗೆ ಹೇಗೆ ಗೊತ್ತು? ಮತ್ತೆ ೧೦ ರೂಪಾಯಿ ಪ್ಯಾಕೆಟ್ಟಿನಲ್ಲಿ ನಿನ್ನ ಪ್ರಕಾರ ಒಂದು ಸಾವಿರ್ ರಬ್ಬರ್ ಬ್ಯಾಂಡ್ ಇರಬೇಕಲ್ವ? ಅದು ಹೇಗೆ ಗೊತ್ತು ನಿನಗೆ ಆಷ್ಟೇ ಇದೆ ಅಂತ?

ಅದಕ್ಕೆ ಅವನು ಕೊಟ್ಟ ಉತ್ತರ ಸ್ವಾರಸ್ಯವಾಗಿತ್ತು.

" ಒಂದು ದಿನ ನನ್ನ ಅಕ್ಕ ೨ ರೂಪಾಯಿ ಕೊಟ್ಟು ರಬ್ಬರ್ ಬ್ಯಾಂಡ್ ತರಲು ಹೇಳಿದಳು. ಅಂಗಡಿಯಿಂದ ಮನೆಗೆ ಬರುವ ದಾರಿಯಲ್ಲಿ ಪ್ಯಾಕೆಟ್ಟಿನಿಂದ ಅವನ್ನು ಕೈಗೆ ಸುರಿದುಕೊಂಡು ಒಂದೊಂದೇ ಎಣಿಸುತ್ತಿದ್ದೆ, ಆಗ ಅದರಲ್ಲಿ ೯೫ ಇತ್ತು. ಅದೇ ರೀತಿ ನನ್ನಕ್ಕ ಮತ್ತೊಂದು ದಿನ ೧೦ ರೂಪಯಿ ಕೊಟ್ಟು ಆಷ್ಟಕ್ಕೂ ರಬ್ಬರ್ ಬ್ಯಾಂಡ್ ತರಲು ಹೇಳಿದಳು. ನಾನು ಮತ್ತೆ ಆದೇ ಅಂಗಡಿಗೆ ಹೋದಾಗ ಅಲ್ಲಿ ೨ ರೂಪಾಯಿ, ೫ ರೂಪಾಯಿ, ೧೦ ರೂಪಾಯಿ ಹಾಗೂ ೬೦ ರುಪಾಯಿನ ೧ ಕೆಜಿ ಪ್ಯಾಕೆಟ್ಟುಗಳನ್ನು ನೇತುಹಾಕಿದ್ದರು. ಅವನ್ನೆಲ್ಲಾ ಕಣ್ಣಳತೆಯಲ್ಲೇ ಅಂದಾಜುಮಾಡಿದಾಗ, ೧೦ ರೂಪಾಯಿ ಪಾಕೆಟ್ ಒಂದನ್ನೇ ತಗೊಂಡ್ರೆ ಅದನ್ನು ೨ ರೂಪಾಯಿ ಪಾಕೆಟ್ಟಿನ ೧೦ ಪಾಕೆಟ್ ಮಾಡಬಹುದುದೆಂದುಕೊಂಡೆ. ಸರಿ ೧೦ ರೂಪಾಯಿಯ ಒಂದು ಪಾಕೆಟ್ ಕೊಂಡುಕೊಂಡೆ ೨ ರುಪಾಯಿಯ ಪಾಕೆಟ್ಟಿನ ಹತ್ತು ಕವರಿನೊಳಗೆ ತುಂಬಿ ನನ್ನ ಅಕ್ಕನಿಗೆ ೫ ಕವರ್ ಕೊಟ್ಟು ಉಳಿದ ೫ ಕವರುಗಳನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೆ. ಮತ್ತೊಂದು ದಿನ ೧೦ ರೂಪಾಯಿ ಕೊಟ್ಟು ರಬ್ಬರ್ ಬ್ಯಾಂಡ್ ತರಲು ಹೇಳಿದಾಗ ನಾನು ಎತ್ತಿಟ್ಟಿದ್ದ ೫ ಕವರುಗಳನ್ನು ಅಕ್ಕನಿಗೆ ಕೊಟ್ಟು ೧೦ ರೂಪಾಯಿಗಳನ್ನು ಜೇಬಿಗಿಳಿಸಿದೆ. ಇದೇ ರೀತಿ ಒಂದು ಕೇಜಿ ತಂದ್ರೆ ಕೊನೆಪಕ್ಷ ಅದರಲ್ಲಿ ೯೦ ಸಾವಿರ ರಬ್ಬರ್ ಬ್ಯಾಂದುಗಳಿದ್ದರೆ ನಮಗೆ ಅದು ಮೂರು ತಿಂಗಳಿಗೆ ಬರುಬಹುದು ಅಲ್ವೇ ಸಾರ್"

ಅವನು ಹುರುಪಿನಿಂದ ಹೇಳುತ್ತಿದ್ದರೆ ನಾನು ಆ ಕ್ಷಣ ದಂಗಾಗಿದ್ದೆ. "ನಾನು ಮನೆಗೆ ಹೋಗ್ತೀನಿ " ಎಂದು ಹೇಳಿ ಅವನು ನನ್ನ ಪ್ರತಿಕ್ರಿಯೆಗೂ ಕಾಯದೇ ವೇಗವಾಗಿ ಹೊರಟೇ ಹೋದ.

ಆಷ್ಟೇ ವೇಗವಾಗಿ ನನ್ನ ತಲೆಯೊಳಗೊಂದು ಲೆಕ್ಕಚಾರದ ಹುಳುವೊಂದನ್ನು ಬಿಟ್ಟು ಹೋಗಿದ್ದ. " ಕೇವಲ ಒಬ್ಬ ಸಾಮಾನ್ಯ ಹುಡುಗ ಓಂದು ರಬ್ಬರ್ ಬ್ಯಾಂಡಿನ ಬಗ್ಗೇ ಇಷ್ಟೊಂದು ಚೆನ್ನಾಗಿ ಲೆಕ್ಕ ಮಾಡುವಾಗ ನಾನು ಅವನ್ ಏಜೆಂಟ್ ಆಗಿ ಅವನದೇ ಲೆಕ್ಕಾಚಾರವನ್ನು ಇನ್ನೂ ಚೆನ್ನಾಗಿ ಮಾಡಿ ನೋಡಬೇಕೆನಿಸಿತ್ತು.

ಮನೆಗೆ ಬಂದ ಮೇಲೆ ಒಂದು ಪೆನ್ನು ಪೇಪರ್ ಹಿಡಿದು ಕುಳಿತೆ. ೬೦ ರೂಪಾಯಿಯ ಒಂದು ಕೆಜಿ ರಬ್ಬರ್ ಬ್ಯಾಂಡಿನಿಂದ ೩ ತಿಂಗಳು ಹುಡುಗರಿಗೆ ಅವರ ಪತ್ರಿಕೆ ಹಂಚುವ ಸಮಯದಲ್ಲಿ ಕೊನೆಪಕ್ಷ ೧೦ ನಿಮಿಷ ಉಳಿಯುತ್ತದೆ. ಇದರಿಂದ ನನ್ನ ಗ್ರಾಹಕರಿಗೂ ದಿನಪತ್ರಿಕೆ ಬೇಗ ಬರುತ್ತದೆ ಎಂದು ಸಂತೋಷವಾಗುತ್ತದೆ. ಆ ಉಳಿಸಿದ ೧೦ ನಿಮಿಷಗಳಲ್ಲಿ ಮತ್ತೆ ೧೦-೧೫ ಮನೆಗಳಿಗೆ ಹೆಚ್ಚುವರಿಯಾಗಿ ಪತ್ರಿಕೆ ತಲುಪಿಸಬಹುದು. ಇದರಿಂದಾಗಿ ಅನ್ನ ಅದಾಯವು ಕೊನೆಪಕ್ಷ ೫ ರಿಂದ ೧೦ ಏರಿಕೆಯಾಗುತ್ತಲ್ವೇ" ಅನ್ನಿಸಿತು.

ಮರುದಿನವೇ ಚಿಕ್ಕಪೇಟೆಗೆ ಹೋಗಿ ಒಂದು ಕೆಜಿ ರಬ್ಬರ್ ಬ್ಯಾಂಡ್ ತಂದು ನನ್ನ ಬೀಟ್ ಹುಡುಗರಿಗೆ ಪ್ರತಿದಿನ ಕೊಡಲಾರಂಬಿಸಿದೆ. ನನ್ನ ಹುಡುಗ ಹೇಳಿದಂತೆ ಮೂರು ತಿಂಗಳವರೆಗೆ ಬಂತು. ಅದರಿಂದ ನನ್ನ ಆದಾಯವೂ ಹೆಚ್ಚಿತ್ತು.

ದುರಾದೃಷ್ಟವಶಾತ್, ಇದು ಹೆಚ್ಚು ದಿನಗಳವರೆಗೆ ಸಾಗಲಿಲ್ಲ. ನಾನು ಈ ರೀತಿ ರಬ್ಬರ್ ಬ್ಯಾಂಡ್ ತಂದಿರುವ ಸುದ್ದಿ ನನ್ನ ವೃತ್ತಿಭಾಂಧವರಿಗೂ ನಿದಾನವಾಗಿ ಗೊತ್ತಾಗತೊಡಗಿತು. ಪ್ರಾರಂಭದಲ್ಲಿ ಇದು ಅವರಿಗೆ ತಮಾಷೆ ಎನಿಸಿದರೂ, ನಂತರ ಅವರಿಗೂ ಇದೊಂದು ರೀತಿ ಚೆನ್ನಾಗಿದೆಯೆಲ್ಲಾ ಅನಿಸಿ, ನನ್ನ ಬಳಿ ಬಂದು ರಬ್ಬರ್ ಬ್ಯಾಂಡ್ ತೆಗೆದುಕೊಳ್ಳತೊಡಗಿದರು. ನನ್ನ ಹುಡುಗರ ದಿನಪತ್ರಿಕೆ ವಿತರಣೆಯ ಸಮಯ ಉಳಿಸಲು ತಂದ ಇವನ್ನು ನನ್ನ ವೃತ್ತಿಭಾಂದವರು ಅವರ ಬೀಟ್ ಬಾಯ್ಸ್ ಗಳು ತೆಗೆದುಕೊಂಡು ಹೋಗುವುದು ಜಾಸ್ತಿಯಾಯಿತು.

ನಾನು ತಂದ ಒಂದು ಕೆಜಿ ರಬ್ಬರ್ ಬ್ಯಾಂಡುಗಳು ಮೂರು ತಿಂಗಳು ಬರುವುದಿರಲಿ, ಒಂದು ತಿಂಗಳು ಬರದೇ ಹೋಯಿತು. ನಾನು ಕೊಡೊಲ್ಲವೆಂದಾಗ ನನ್ನ ಗೆಳೆಯರ ಹುಡುಗರು ನಾನಿಲ್ಲದಾಗ ನನ್ನ ದಿನಪತ್ರಿಕೆಯ ಬ್ಯಾಗಿನಿಂದ ರಬ್ಬರ್ ಬ್ಯಾಂಡ್ ತೆಗೆದುಕೊಳ್ಳತೊಡಗಿದರು. ನಾನು ಇದ್ದರೆ ಗೆಳೆಯರು ನನ್ನನ್ನು ಈ ವಿಚಾರದಲ್ಲಿ ಹೊಗಳಿ ಮರಹತ್ತಿಸುತ್ತಿದ್ದರು. ಕೊನೆಗೊಂದು ದಿನ್ ನನಗೂ ಈ ರಬ್ಬರ್ ಬ್ಯಾಂಡ್ ನಂಟು ಸಾಕೆನಿಸಿ ಅದನ್ನು ತರುವುದನ್ನು ನಿಲ್ಲಿಸಿದೆ.

ಶಿವು.ಕೆ

ಮಡಿಚಿ ಎಸೆಯುವ ಕಲೆ.

ನನ್ನ ಗೆಳೆಯರ ಮತ್ತು ಅವರ ಹುಡುಗರ ಕಾಟದಿಂದಾಗಿ ರಬ್ಬರ್ ಬ್ಯಾಂಡ್ ತರುವುದು ನಿಲ್ಲಿಸಿದ ಮೇಲೆ ನನ್ನ ಹುಡುಗರು ಸುಮ್ಮನಿರುತ್ತಾರೆಯೇ? ಸುಮ್ಮನೆ ಅವರ ಪಾಡಿಗೆ ಅವರಿದ್ದವರನ್ನು ಈ ರಬ್ಬರ್ ಬ್ಯಾಂಡಿನ ತೆವಲು ಹತ್ತಿಸಿ ಉಪಯೋಗಿಸುವ ಅಭ್ಯಾಸ ಮಾಡಿಸಿಯಾದ ಮೇಲೆ, ಅದರ ರುಚಿ ಸಿಕ್ಕ ಮೇಲೆ ಅದಕ್ಕಾಗಿ ನನ್ನ ಬೆನ್ನು ಬಿದ್ದರು. ಆಗ ಇನ್ನೊಂದು ಉಪಾಯ ಹೊಳೆಯಿತು.

ಪ್ರತಿದಿನ ದಿನಪತ್ರಿಕೆಗಳನ್ನು ೧೦೦-೨೦೦ ರ ಬಂಡಲುಗಳಾಗಿ ಮಾಡಿ ಅದನ್ನು ಗೋಣಿದಾರದಿಂದಲೋ ಅಥವ ಪ್ಲಾಸ್ಟಿಕ್ ದಾರದಿಂದಲೋ ಕಟ್ಟಿ ವ್ಯಾನುಗಳಲ್ಲಿ ತುಂಬಿ ಕಳುಹಿಸುತ್ತಿದ್ದರು. ಬಂಡಲ್ ಬಿಚ್ಚಿದ ಮೇಲೆ ಆ ದಾರಗಳನ್ನು ಬಿಸಾಡುತ್ತೇವೆ. ಹಾಗೆ ಬಿಸಾಡುವ ಬದಲು ಅದನ್ನೇ ರಬ್ಬರ್ ಬ್ಯಾಂಡಿಗೆ ಬದಲಿಯಾಗಿ ಉಪಯೋಗಿಸಿದರೆ ಹೇಗೆ? ಪ್ರಯತ್ನಿಸಿ ನೋಡುವುದರಲ್ಲಿ ತಪ್ಪಿಲ್ಲ.

ಇದೇ ದಾರವನ್ನು ಪ್ರತಿನಿತ್ಯ ಶೆಟ್ಟರ ಆಂಗಡಿಯಿಂದ ತಂದು ಚಿಕ್ಕ ಚಿಕ್ಕ ತುಂಡು ದಾರಗಳಾಗಿ ಕಟ್ ಮಾಡಿ ಹುಡುಗರಿಗೆ ನಿತ್ಯ ಕೊಡುವುದು ದುಬಾರಿ ಖರ್ಚಿನ ಬಾಬ್ತು. ಅದರ ಬದಲು ಈ ರೀತಿ ಉಚಿತವಾಗಿ ಸಿಗುವ ಬಂಡಲುಗಳ ದಾರಗಳನ್ನು ಉಪಯೋಗಿಸುವುದು ಸುಲಭ ಉಪಾಯವೆನಿಸಿತ್ತು.

ಮರುದಿನವೇ ಯಾರಿಗೋ ಬೇಡವಾಗಿದ್ದ ಆ ದಾರಗಳನ್ನು ಆರಿಸಿಕೊಳ್ಳತೊಡಗಿದಾಗ, ಹಿರಿಯಜ್ಜ ಮತ್ತು ಹಿರಿಯಜ್ಜಿಯ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅವರೇ ತಾನೆ ಪ್ರತಿನಿತ್ಯ ಪ್ಲಾಸ್ಟಿಕ್ ಪೇಪರ್, ದಾರ ರದ್ದಿ ಪೇಪರ್ ಆರಿಸಲು ಬರುವವರು! ಅದರಿಂದ ಹೊಟ್ಟೆ ಹೊರೆಯುತ್ತಿದ್ದರು. ಅದರೆ ನಮ್ಮನ್ನುಕೇಳುವವರು ಯಾರು? ನಮ್ಮ ಹೆಸರಿನಲ್ಲಿ ಬರುವ ದಿನಪತ್ರಿಕೆಗಳ ದಾರವನ್ನಲ್ಲವೇ ಅವರು ತೆಗೆದುಕೊಳ್ಳುತ್ತಿರುವುದು? ಆಗ ನಮಗೆ ಬೇಕಿರಲಿಲ್ಲ. ಆದರೆ ಈಗ ಬೇಕಾಗಿದೆಯಲ್ಲ., ಅದನ್ನು ಪಡೆದುಕೊಳ್ಳುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ನನ್ನನ್ನು ಸಮರ್ಥಿಸಿಕೊಂಡಿದ್ದೆ.

ಈ ಮೊದಲು ರದ್ದಿ ಪೇಪರ್, ದಾರ, ಪ್ಲಾಸ್ಟಿಕ್ ದಾರವೆಲ್ಲಾ ಬೇಕಿಲ್ಲದಾಗ ಅದನ್ನು ಆ ಹಿರಿಯ ದಂಪತಿಗಳು ಒಂದು ದೊಡ್ಡ ಗೋಣಿ ಚೀಲದಲ್ಲಿ ತುಂಬಿಕೊಳ್ಳುವಾಗ ನಮ್ಮ ಕರುಣೆಯಿಂದ ಅವರ ಜೀವನ ನಡೆಯುತ್ತಿದೆಯಲ್ಲ ಎಂದು ಕಣ್ಣರಳಿಸಿಕೊಂಡು ನೋಡುತ್ತಿದ್ದೆ. ಮಹಾನ್ ತ್ಯಾಗಜೀವಿಯಂತೆ ಪೋಜು ಕೊಡುತ್ತಿದ್ದೆ. ಆದರೀಗ ಅದೇ ದಾರ ಉಪಯೋಗಿಸುವುದರಿಂದ ನನ್ನ ಕೆಲಸ ಚೆನ್ನಾಗಿ ಆಗುತ್ತದೆ. ಅದಕ್ಕಾಗಿ ಅದನ್ನು ನನಗೆ ಬೇಕಾದಾಗ ಪಡೆದುಕೊಳ್ಳುವುದು ಕಾನೂನಿನ ಪ್ರಕಾರ ಸರಿ ಎನಿಸಿ ದಾರ ಮುಟ್ಟಬೇಡಿರೆಂದು ದಬಾಯಿಸಿಕಳುಹಿಸಲಾರಂಭಿಸಿದೆ.

ಕೆಲವು ದಿನ ಈ ಪ್ರಯೋಗವು ಚೆನ್ನಾಗಿ ನಡೆಯಿತು. ಅದರೂ ಇದು ಶಾಶ್ವತವಲ್ಲ, ಇದಕ್ಕೊಂದು ದಾರಿ ಕಂಡುಕೊಳ್ಳಬೇಕೆನಿಸಿತ್ತು. ಅದಕ್ಕೆ ಅವಕಾಶ ಕೂಡಿಬಂತು.

ಪತ್ರಿಕೆ ಹಂಚುವ ಹುಡುಗರಿಬ್ಬರೂ ಕೆಲವು ದಿನ ಹೇಳದೇ ಕೇಳದೆ ಕೆಲಸಕ್ಕೆ ಬರಲಿಲ್ಲ. ವಿಧಿಯಿಲ್ಲದೇ ನಾನು ಅವರಿಬ್ಬರೂ ಹಾಕುತ್ತಿದ್ದ ರೂಟುಗಳಿಗೆ ಹೋಗಿ ಪತ್ರಿಕೆಗಳನ್ನು ಮನೆ-ಮನೆಗಳಿಗೆ ಕೊಡಬೇಕಿತ್ತು. ಆ ಬಡಾವಣೆಯಲ್ಲಿ ಆಪಾರ್ಟುಮೆಂಟುಗಳೇ ಇದ್ದವು.

ನಮ್ಮ ಗ್ರಾಹಕರ ಮನೆಗಳೆಲ್ಲಾ ಒಂದು, ಎರಡೌ ಮೂರನೇ ಮಹಡಿಗಳಲ್ಲಿ ಇರಬೇಕೆ! ಲಿಫ್ಟುಗಳಿದ್ದರೂ ದಿನಪತ್ರಿಕೆ ಹಾಲು ಹಂಚುವವರಿಗೆ ಕೆಲವು ಆಪಾರ್ಟುಮೆಂಟುಗಳಲ್ಲಿ ಉಪಯೋಗಿಸಲು ಬಿಡುತ್ತಿರುಲಿಲ್ಲ. ಇನ್ನೂ ಕೆಲವು ಆಪಾರ್ಟುಮೆಂಟುಗಳಲ್ಲಿ ಲಿಫ್ಟಿನ ವಿದ್ಯುತ್ ಕನೆಕ್ಷನ್ ಬೆಳಗಿನ ಹೋತ್ತು ತೆಗೆದುಬಿಡುತ್ತಿದ್ದರು. ಆಗ ಹಾಲು ಅಥವ ದಿನಪತ್ರಿಕೆಯ ಹುಡುಗರು ಮೂರು-ನಾಲ್ಕನೇ ಮಹಡಿಗೆ ಮೆಟ್ಟಿಲೇರಿ ಹೋಗಿ ಬರಬೇಕಿತ್ತು. ಇದರಿಂದಾಗಿ ಅವರಿಗೆ ಸುಸ್ತು ಆಗುವುದರ ಜೊತೆಗೆ ಸಮಯವೂ ಹೆಚ್ಚು ಬೇಕಾಗುತ್ತಿತ್ತು.ಮಡಿಚಿ ಎಸೆಯುವ ಕಲೆ-೨


ಈಗ ಪ್ರತಿದಿನ ನಾನೇ ಹೋಗುತ್ತಿದ್ದೆನಾದ್ದರಿಂದ ಆ ಅನುಭವ ನನಗೂ ಆಗಿತ್ತು. ದಿನವೂ ಈ ವಿಚಾರವಾಗಿ ಹುಡುಗರು ನಮ್ಮ ಬಳಿ ಮೆಟ್ಟಿಲು ಹತ್ತಿ-ಇಳಿಯುವ ಸುಸ್ತಾಗುವ ಲೇಟಾಗುವುದನ್ನು ಹೇಳಿದಾಗ " ಲೋ ನೀನು ಈ ಮಾತನ್ನು ಹೇಳುತ್ತಿದ್ದೀಯ! ನನಗೆ ನಂಬಲಿಕ್ಕೇ ಆಗುವುದಿಲ್ಲ, ನೀನು ಯಾರು ಹೀರೋ ತರ!! ಸೆಕೆಂಡಿನಲ್ಲಿ ಮೆಟ್ಟಿಲು ಹತ್ತಿ-ಇಳಿದವನು ನೀನು, ನೀನು ಓಂದು ತರ ಜಿಂಕೆಮರಿ, ನಿನಗೆ ಸುಸ್ತು ಆಗುತ್ತಾ! ಹೋಗೋ ಹೋಗೋ!!" ಎಂದು ಅವರನ್ನು ಹೊಗಳಿ ಅಟ್ಟಕ್ಕೇರಿಸಿ ಹುರಿದುಂಬಿಸುತ್ತಿದ್ದೆ.

ಆದರೆ ನಾನೆ ಅದನ್ನು ಮಾಡುವಾಗ ನನ್ನನ್ನು ಹುರಿದುಂಬಿಸುವವರು ಯಾರು ಇರಲಿಲ್ಲ. ನನಗೂ ಎಲ್ಲಾ ಮಹಡಿಗಳನ್ನು ಹತ್ತಿಳಿಯುವಷ್ಟರಲ್ಲಿ ಸುಸ್ತಾಗಿಬಿಡುತ್ತಿತ್ತು. ಇದಕ್ಕೆ ಏನಾದರೊಂದು ದಾರಿ ಕಂಡು ಹಿಡಿಯಲೇಬೇಕಿತ್ತು. ಮೊದಲಾದರೆ ರಬ್ಬರ್ ಬ್ಯಾಂಡ್ ಅಥವಾ ದಾರದಿಂದ ಪೇಪರನ್ನು ಕಟ್ಟಿ ಮಹಡಿ ಮೇಲಿನ ಬಾಲ್ಕನಿಗಳಿಗೆ ಎಸೆದುಬಿಡಬಹುದಿತ್ತು. ಈಗ ಅವೆರಡರ ಸಹಾಯವಿಲ್ಲದೇ ಎಸೆಯುವುದಕ್ಕೆ ದಿನಪತ್ರಿಕೆಯೇನು ಕ್ರಿಕೆಟ್ ಚಂಡೆ!, ಏನು ಮಾಡುವುದು? ಪ್ರತಿದಿನವು ಈ ಸಮಯದಲ್ಲಿ ಚಿಂತಿಸುವಂತಾಗಿತ್ತು. ಒಂದು ದಿನ ಕತ್ತಲಲ್ಲಿ ಮೆಟ್ಟಿಲಿಳಿಯುತ್ತಿದ್ದಾಗ ಕೊನೆಗೂ ಒಂದು ಉಪಾಯ ಹೊಳೆದಿತ್ತು.

ನನಗೇ ಬಾಲ್ಯದಲ್ಲಿ ಐದನೇ ತರಗತಿಯಲ್ಲಿದ್ದಾಗ ನಮ್ಮಜ್ಜಿ ೩೦ ಪೈಸೆ ಕೊಟ್ಟು ಮನೆಯಿಂದ ಕೂಗಳತೆ ದೂರದಲ್ಲಿದ ಹೋಟಲಿಗೆ ಹೋಗಿ ಖಾಲಿ ದೋಸೆ, ಮಸಾಲೆ ದೋಸೆಯನ್ನು ಪಾರ್ಸಲ್ ತರಲು ಕಳುಹಿಸುತ್ತಿದ್ದರು.

ಅದು ಚಿಕ್ಕ ಹೋಟಲ್ ಆಗಿದ್ದರಿಂದ ಹೋಟಲ್ ಮಾಲೀಕನೇ ಕಡಪ ಕಲ್ಲಿನ ಮೇಲೆ ನೀರು ಚಿಮುಕಿಸಿ ಚೊಯ್ ಎಂದು ಶಬ್ದ ಬರುವಂತೆ ಮಾಡಿ ಪೊರಕೆಯಲ್ಲಿ ಒಮ್ಮೆ ಗುಡಿಸಿ ನಂತರ ಗುಂಡಗಿನ ಆಕಾರದಲ್ಲಿ ದೋಸೆಯನ್ನು ಬಿಡುತ್ತಿದ್ದ. ನಂತರ ಆಲೂಗಡ್ದೆ ಪಲ್ಯವನ್ನು ಹಾಕಿ ತುಪ್ಪವನ್ನು ಸೋಕಿಸಿ, ಬೆಂದ ಮೇಲೆ ಅದನ್ನು ಒಂದು ಪ್ಲೇಟಿನಲ್ಲಿ ಇಡುತ್ತಿದ್ದ. ಒಂದು ದಿನಪತ್ರಿಕೆಯ ತುಂಡನ್ನು ಟೇಬಲ್ಲಿನ ಮೇಲೆ ಹರಡಿ ಅದರ ಮೇಲೆ ಚಿಕ್ಕದಾದ ಬಾಳೆ ಎಲೆ ಇಟ್ಟು, ಮಸಾಲೆದೋಸೆಯನ್ನು ಸುರುಳಿ ಸುತ್ತಿ, ನಂತರ ಬಾಳೆ ಎಲೆ ಸಮೇತ ದಿನಪತ್ರಿಕೆಯನ್ನು ಒಂದು, ಎರಡು, ಮೂರು ಬಾರಿ ಮಡಚಿ ಯಾವುದೇ ದಾರ ಉಪಯೋಗಿಸದೇ ಬರೀ ಮಡಿಕೆಯಲ್ಲೇ ಚೆನ್ನಾಗಿ ಪ್ಯಾಕ್ ಮಾಡಿಕೊಡುತ್ತಿದ್ದುದು ನನಗಂತೂ ತುಂಬಾ ಕುತೂಹಲ ಕೆರಳಿಸುತ್ತಿತ್ತು.

ಪ್ರತಿಬಾರಿ ಅವನ ಹೋಟಲ್ಲಿಗೆ ದೋಸೆ ತರಲು ಹೋದರೂ ಅವನ್ ಮಡಚುವ ಕೈಚಳಕವನ್ನು ತದೇಕ ಚಿತ್ತದಿಂದ ನೋಡುತ್ತಿದ್ದೆ. ನನಗಂತೂ ಆ ಸಮಯದಲ್ಲಿ ಅವನೊಬ್ಬ ಮಹಾನ್ ಜಾದುಗಾರನಂತೆ ಕಾಣುತ್ತಿದ್ದ. ಅದೃಷ್ಟವಶಾತ್ ಆತನ್ ಕೈ ಚಳಕ ಇದೇ ಸಮಯದಲ್ಲೇ ನೆನಪಾಗಬೇಕೆ!. ಲೇಖಕನಿಗೆ ಹೊಸ ಬಗೆಯ ವಿಚಾರ, ಚಿಂತನೆಹಲು ಮನಸ್ಸಿನಲ್ಲಿ ಮೂಡಿದಾಗ ಅದನ್ನು ಆ ಕ್ಷಣದಲ್ಲೇ ಅನುಭವಿಸಿ ಬರೆದರೆ "ಕವಿ ಸಮಯ" ಎನ್ನುತ್ತಾರಲ್ಲ, ಹಾಗೆ ನನಗಿಲ್ಲಿ ಬಾಲ್ಯದ ಮಸಾಲೆ ದೋಸೆಯ ಪೇಪರ್ ಮಡಚುವ "ಕೈ ಚಳಕದ ಸಮಯ" ಕೂಡಿಬಂದಿತ್ತು.

ಮತ್ತೆ ಮತ್ತೆ ಆ ದೃಶ್ಯಾವಳಿಯನ್ನು ನೆನಪಿಗೆ ತಂದುಕೊಳ್ಳುವ ಪ್ರಯತ್ನ ಮಾಡಿದೆ. ಒಂದು ಪ್ರಜಾವಾಣಿ ಪತ್ರಿಕೆಯನ್ನು ಕೈಗೆತ್ತಿಕೊಂಡು ಮದ್ಯಕ್ಕೆ ಸರಿಯಾಗಿ ಮಡಚಿದೆ. ಮತ್ತೆ ಅದನ್ನೇ ಎರಡು ಬಾರಿ ಮಡಿಕೆ ಮಾಡಿ, ಮಡಿಕೆ ಮಾಡಿದ ಎರಡು ಕಡೆಗಳಲ್ಲಿ ಕೈ ಬೆರಳುಗಳಿಂದ ಪ್ರೆಸ್ ಮಾಡಿದೆ. ನಂತರ ಒಂದು ಕೆಳತುದಿಯನ್ನು ಮತ್ತೊಂದು ಕೆಳತುದಿಯ ಒಳಗೆ ಸೇರಿಸಿ ಪತ್ರಿಕೆಯ ಮೇಲಿನ ಬಾಗದಿಂದ ಒಳಕ್ಕೆ ತಳ್ಳಿದೆ, ಆಷ್ಟೇ! ಸಾಧಿಸಿಬಿಟ್ಟಿದ್ದೆ!! ನಿಂತ ಜಾಗದಲ್ಲೇ ಆ ಮಡಿಕೆ ಮಾಡಿದ ಪತ್ರಿಕೆಯನ್ನು ಕೆಳಗೆ ಬಿಟ್ಟೆ. ಅದರೂ ನೆಲಕ್ಕೆ ಬಿದ್ದರು ಮಡಿಕೆ ಬಿಚ್ಚಿಕೊಳ್ಳಲಿಲ್ಲ. ನನಗೆ ಬೇಕಾಗಿದ್ದುದ್ದು ಸಿಕ್ಕಿಬಿಟ್ಟಿತ್ತು. ಮನಸ್ಸು ಹಗುರಾದ ಅನುಭವ! ನೆಲದಿಂದ ಒಂದು ಆಡಿ ಮೇಲೆ ತೇಲುತ್ತಿದ್ಡೇನೆ ಅನ್ನಿಸಿತು!. ಮರುಕ್ಷಣವೇ ಎಚ್ಛೆತ್ತುಕೊಂಡೆ ಯಾಕೆಂದರೆ ಈಗ ಕಲಿತ ಪೇಪರ್ ಮಡಿಕೆ ವಿದ್ಯೆ ಕಲಿತುಕೊಂಡೆನೆಂಬ ಸಂಬ್ರಮದಲ್ಲಿ ಮೈ ಮರೆತಾಗ ಮರೆತುಹೋದರೆ?

ಆ ರೀತಿ ನನಗೆ ಅನೇಕ ಸಂಧರ್ಭಗಳಲ್ಲಿ ಆಗಿದೆ. ಕಂಪ್ಯೂಟರಿನಲ್ಲಿ ಹೊಸದಾಗಿ ನನ್ನ ಇಮೇಲ್ ಒಪೆನ್ ಮಾಡಿಕೊಳ್ಳುವಾಗ ಹೆಸರು, ಕೆಲಸ ಇಷ್ಟ, ಕಷ್ಟಗಳನೆಲ್ಲಾ ಟೈಪ್ ಮಾಡಿ ನಮಗಿಷ್ಟವಾದ ಪಾಸ್ ವರ್ಡ್ ಹಾಗೂ ಹೆಸರನ್ನು ನಮೂದಿಸಿ, ಕಂಪ್ಯೂಟರ್ ಕೇಳಿದ ಪ್ರಶ್ನೆಗೆ ಉತ್ತರ ತೈಪ್ ಮಾಡಿದ ನಂತರ ಎಲ್ಲವೂ ಸರಿಯಾಗಿದ್ದರೆ ನಮ್ಮ ಇಮೇಲ್ ಸಿದ್ಧವಾಗಿರುತ್ತದೆ!. ಓಹ್ ನನ್ನ ಮೇಲ್ ಐಡಿ ಬಂತೆಂದು ಖುಷಿಯಾಗುತ್ತದೆ.

ಅ ಆನಂದದಲ್ಲಿ ಪ್ರಪಂಚದ ಯಾವ ಮೂಲೆಗಾದರೂ ನಾನು ನನ್ನ ಇಮೇಲ್ ನಿಂದ ಪತ್ರ ಬರೆಯಬಹುದು ಮೆಸೇಜ್ ಕಳುಹಿಸಬಹುದು ಹಾಗೂ ಅವರಿಂದ ಮೇಸೇಜ್ ಪಡೆಯಬಹುದೆನಿಸಿ, ಮರುಕ್ಷಣ ವಿದೇಶದಲ್ಲಿರುವ ಗೆಳೆಯನಿಗೆ ಒಂದು ಮೇಲ್ ಕಳುಹಿಸೋಣ ಎಂದುಕೊಂಡು, ಇಮೇಲ್ ಮತ್ತೆ ಒಪೆನ್ ಮಾಡಲೋದರೆ........... ಪ್ಲಾಪ್. ಕಾರಣ ಸಂಬ್ರಮದಲ್ಲಿ ಪಾಸ್ ವರ್ಡ ಅಥವಾ ಹೆಸರಿನ ಸ್ಪೆಲ್ಲಿಂಗ್ ಮರೆತುಹೋಗಿರುತ್ತದೆ.. ಇಲ್ಲೂ ಹಾಗೆ ಆಗುವುದು ಬೇಡಪ್ಪ ಅನ್ನಿಸಿ ಮತ್ತೆ ಮತ್ತೆ ಅಭ್ಯಾಸ ಮಾಡಿಕೊಂಡೆ. ಸ್ವಲ್ಪ ಸಮಯದಲ್ಲಿಯೇ ಈ ವಿದ್ಯೆ ಕರಗತವಾಗಿತ್ತು.ಮಡಿಚಿ ಎಸೆಯುವ ಕಲೆ-೩

ಮುಂದೆ ಎರಡೇ ದಿನದಲ್ಲಿ ನಾನು ಕಲಿತ ಈ ಮಹಾನ್ ಕಲೆ ನನಗೆ ಸರಿಯಾದ ಟೋಪಿ ಹಾಕಿತ್ತು. ಅದೇನೆಂದರೆ ಮಾಮೂಲಿಯಾಗಿ ಸಪ್ಲಿಮೆಂಟರಿ ಒಂದೇ ಇದ್ದ ದಿನ ಪೇಪರನ್ನು ಸುಲಭವಾಗಿ ಫೋಲ್ಡ್ ಮಾಡಿ ಗುರಿಯಿಟ್ಟು ಸರಿಯಾಗಿ ಎಸೆಯುತ್ತಿದ್ದೆ. ಆದರೆ ಶುಕ್ರವಾರದ ಸಿನಿಮಾ ಸಪ್ಲಿಮೆಂಟರಿಗಳು ಹಾಕಿದ್ದ ದಿನಪತ್ರಿಕೆಗಳು ಫೋಲ್ಡ್ ಮಾಡಿ ಕೈಯಲ್ಲಿ ಇಡಿದಾಗ ಸರಿಯಾಗಿರುತ್ತಿತ್ತು.

ಇನ್ನೇನು ಬಾಲ್ಕನಿಗೆ ಎಸೆಯೋದು ತಾನೆ! ಅಂತಂದುಕೊಂಡು ಎಸೆದಾಗ ಆ ಪೇಪರು ಸಿನಿಮಾದವರ ಬುದ್ಧಿ ತೋರಿಸಿಬಿಡುತ್ತಿತ್ತು. ಕೈಯಿಂದ ಜಾರಿ ಇನ್ನೇನು ಬಾಲ್ಕಾನಿಗೆ ಬೀಳುವ ಮೊದಲೇ ಮಾಡಿದ್ದ ಫೋಲ್ಡ್ ಬಿಚ್ಚಿಕೊಂಡು ನಮ್ಮ ನಟ-ನಟಿಯರು ಸಿನಿಮಾದಲ್ಲಿ ತಾವು ಹಾಕಿಕೊಂಡಿರುವ ಟೂ ಪೀಸ್ ತ್ರೀ ಪೀಸ್ ತುಂಡು ಬಟ್ಟೆಗಳನ್ನು ಒಂದೊಂದಾಗಿ ತೆಗೆದು ಗಾಳಿಗೆ ಕಿತ್ತೆಸೆಯುವಂತೆ ಈ ಸಿನಿಮಾ ಸಪ್ಲಿಮೆಂಟರಿಗಳು ಹಾರಾಡಿ ಯಾರ್ಯಾರ ಕಾಂಪೊಂಡೊಳಗೆ ಬೀಳುವುತ್ತಿದ್ದವು.

ಮತ್ತೆ ಅವುಗಳನ್ನು ಹೆಕ್ಕಿ ತಂದು ಜೋಡಿಸಿ ಎಸೆಯಲು ಮನಸ್ಸಾಗದೇ[ಮತ್ತೆ ಗಾಳಿಗೆ ಹಾರಾಡಿದರೆ} ಮೆಟ್ಟಿಲೇರಿ ಹೋಗಿಬರುವುದರೊಳಗೆ ಸಮಯ ಸುಸ್ತು ಎರಡು ಆಗಿಬಿಡುತ್ತಿತ್ತು. ಹಾಗೆ ಶನಿವಾರದ ಪ್ರಾಪರ್ಟಿ, ರಿಯಲ್ ಎಸ್ಟೇಟ್, ಭಾನುವಾರದ ಸಾಪ್ತಾಹಿಕದ ೪-೫ ಸಪ್ಲಿಮೆಂಟರಿಗಳು ಬಂದಾಗಲು ನನ್ನ ಎಸೆಯುವ ಕಲೆ ಅಟ್ಟರ್ ಪ್ಲಾಪ್ !!.

ಕೊನೆಗೆ ಇದನ್ನು ಅಭ್ಯಾಸ ಮಾಡಿಯೇ ನಂತರ ಇಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದುಕೊಂಡು ನನ್ನ ಗೆಳೆಯನ ಮನೆಗೆ ಹೋದೆ. ಅವನ ಮನೆ ಮೂರನೆ ಮಹಡಿಯಲ್ಲಿತ್ತು. ಅವನಿಗೆ ವಿಚಾರ ತಿಳಿಸಿ ಅವನ ಮನೆಯಲ್ಲಿದ್ದ ಹಳೆಯ ಪೇಪರನ್ನೆಲ್ಲಾ ತೆಗೆದುಕೊಂಡು ಕೆಳಗೆ ಬಂದೆ.

ಒಂದೊಂದಾಗಿ ಮಡಚಿ ಮಡಚಿ ಎಸೆಯಲಾರಂಭಿಸಿದೆ. ಅವನು ನನ್ನ ಈ ಹುಚ್ಚಾಟವನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದ. ಅ ಈ ತಮಾಷೆಯನ್ನು ನೋಡುತ್ತಲೇ ಅವನು ನನಗೊಂದು ಟೋಪಿ ಹಾಕಿದ್ದ.

ನಾನು ಈ ರೀತಿ ಒಂದೊಂದೆ ಪೇಪರ್ ಎಸೆಯುವಾಗ ಅದರ ಗಾತ್ರ ಮತ್ತು ತೂಕ ನೋಡಿ ಹಿಂದೆ ಹೋಗುವುದು, ಮುಂದೆ ಹೋಗುವುದು ಮಾಡುತ್ತಿದ್ದೆ. ಒಮ್ಮೆ ೫ ಸಪ್ಲಿಮೆಂಟರಿಗಳಿದ್ದ ಭಾರದ ಪೇಪರನ್ನು ಸರಿಯಾಗಿ ಹಾಕಲು ನಾನು ನಿಂತಿರುವ ಜಾಗದಿಂದ ನಿದಾನವಾಗಿ ಹಿಂದಕ್ಕೆ ನಡೆಯುತ್ತಾ ಅವನ ಎದುರು ಮನೆಯ ಸಂಪ್ರದಾಯಸ್ಥ ಆಂಟಿ ಹಾಕಿದ್ದ ಸುಂದರವಾದ ರಂಗೋಲಿಯನ್ನು ತುಳಿದು ಕೆಡಿಸಿಬಿಟ್ಟೆ.

ನನ್ನ ಗೆಳೆಯ ಇದನ್ನು ನೋಡಿಯು ನೋಡದವನಂತೆ ಸುಮ್ಮನಿದ್ದುಬಿಟ್ಟ. ಮನೆಯ ಕಿಟಕಿಯಿಂದ ನನ್ನ ಈ ಹೊಸ ಆಟವನ್ನು ನೋಡುತ್ತಿದ್ದ ಆ ಆಂಟಿ ಹೊರಬಂದು ರಂಗೋಲಿ ಕೆಡಿಸಿದ್ದಕ್ಕಾಗಿ ಚೆನ್ನಾಗಿ ಬೈಯ್ದಾಗ, ಅಲ್ಲಿಯವರೆಗೂ ಮಜಾ ತೆಗೆದುಕೊಳ್ಳುತ್ತಿದ್ದ ಗೆಳೆಯ ಭಾಲ್ಕನಿಯಿಂದ ಮಾಯ!.

ಇದೇ ರೀತಿ ಕೆಲವೊಮ್ಮೆ ಎಸೆದ ಪೇಪರುಗಳು ಬಾಲ್ಕನಿಯಲ್ಲಿ ಕುಳಿತಿದ್ದ ಪಾರಿವಾಳಗಳಿಗೆ ಬಿದ್ದು ಅವು ದಿಗಿಲಿಂದ ಹಾರಿ ಹೋಗುತ್ತಿದ್ದವು. ಕೆಲವೊಮ್ಮೆ ನಿಜ ಪಾರಿವಾಳ[ಮಹಡಿ ಮನೆಯ ಹರೆಯದ ಹುಡುಗಿಯರು]ಗಳಿಗೆ ಬಿದ್ದು, 'ಹೌಚ್" ಎಂದು ಅವು ನನ್ನ ಕಡೆ ಬಿಟ್ಟ ಕೆಂಗಣ್ಣಿಗೆ ನಾನು "ಸಾರಿ" ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದುಂಟು.

ಮುಂದಿನ ದಿನಗಳಲ್ಲಿ ನಾನದನ್ನು ಎಷ್ಟು ಚೆನ್ನಾಗಿ ಅಭ್ಯಾಸ ಮಾಡಿಕೊಂಡೆನೆಂದರೇ ನಮ್ಮ ಉಳಿದ ಹುಡುಗರು ಒಂದೊಂದು ಬಡಾವಣೆಗಳಿಗೆ ಪತ್ರಿಕೆ ಹಂಚುವಷ್ಟೇ ಸಮಯದಲ್ಲಿ ನಾನು ಎರಡು ಬಡಾವಣೆಗಳ ಮನೆಗಳಿಗೆ ಪತ್ರಿಕೆ ತಲುಪಿಸಿರುತ್ತಿದ್ದೆ. ನಂತರ ಇದನ್ನು ನನ್ನ ಎಲ್ಲಾ ಬೀಟ್ ಹುಡುಗರಿಗೆ ಹೇಳಿಕೊಟ್ಟಾಗ ಅವರು ಚೆನ್ನಾಗೆ ಕಲಿತರು. ರಬ್ಬರ್ ಬ್ಯಾಂಡ್ ಅಥವಾ ದಾರಗಳ್ಯಾವುದು ಅವರಿಗೆ ಬೇಕಿರಲಿಲ್ಲ.ಮಡಿಚಿ ಎಸೆಯುವ ಕಲೆ-೪


ಅದೊಂದು ದಿನ ನನ್ನ ಗೆಳೆಯ ಜಾಣೇಶ ತನ್ನ ಕೆಲಸ ಮುಗಿಸಿ ಬಿಡುವಿನಲ್ಲಿ ಕುಳಿತಿದ್ದ. ನನ್ನ ಸ್ಕೂಟಿಯಲ್ಲಿ ಒಂದು ದೊಡ್ಡ ಬ್ಯಾಗಿನ ತುಂಬ ಪತ್ರಿಕೆಗಳನ್ನು ಜೋಡಿಸಿಕೊಂಡು ಅವನನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಹೊರಟೆ. ಹತ್ತಿರದಲ್ಲೇ ದರ್ಶಿನಿ ಹೋಟಲ್ ಇತ್ತಾದ್ದರಿಂದ ಕಾಫಿ ಕುಡಿಯೋಣವೆಂದು ಅಲ್ಲಿಗೆ ಹೋದೆವು.

ಅವನು ಕಾಫಿ ತರುವಷ್ಟರಲ್ಲಿ ನಾನು ಸತತವಾಗಿ ಒಂದು ಹತ್ತು ಪೇಪರುಗಳನ್ನು ಮಡಿಕೆ ಮಾಡಿ ಬ್ಯಾಗಿನಲ್ಲಿ ಹಾಕಿದ್ದೆ. ಅವನ್ ಮುಂದೆಯೇ ಮತ್ತೆರಡು ಪೇಪರುಗಳನ್ನು ಮಡಿಕೆ ಮಾಡಿ ಬ್ಯಾಗಿಗೆ ತುರುಕಿದೆ. ಅವನು ಕಾಫಿ ಕುಡಿಯುತ್ತಾ ನನ್ನ ಕೈಗಳನ್ನು ನೋಡುತ್ತಾ,


ಇದೇನೋ ಇದು ಅವಾಗಿನಿಂದ ಒಂದೇ ಸಮ ಈ ರೀತಿ ಪೇಪರನ್ನು ಫೋಲ್ಡ್ ಮಾಡಿ ಬ್ಯಾಗಿಗೆ ಸೇರಿಸ್ತಾ ಇದ್ದೀಯ, ನೋಡಿದ್ರೆ ಒಳ್ಳೇ ಮಸಾಲೆ ದೋಸೆ ಪಾರ್ಸಲ್ ತರ ಕಾಣುತ್ತಲ್ಲೋ! ಅವನಿಗೆ ಕುತೂಹಲ.

"ನಿನಗೆ ಗೊತ್ತಾಗುತ್ತೆ ಬಾ"

ಎಂದು ನಕ್ಕು ಅವನನ್ನು ಕೂರಿಸಿಕೊಂಡು ಹೊರಟೆ. ಹತ್ತಿರದಲ್ಲೇ ನಾನು ಪೇಪರ್ ಹಾಕುವ ಅಪಾರ್ಟುಮೆಂಟು ಇತ್ತು. ಅ ಆಪಾರ್ಟುಮೆಂಟಿನಲ್ಲಿ ನನ್ನ ಗಿರಾಕಿಗಳೆಲ್ಲಾ ಎರಡು ಮೂರನೇ ಮಹಡಿಗಳಲ್ಲೇ ವಾಸವಾಗಿದ್ದರು. ನಾನು ಚಕ್ ಚಕನೆ ಮಡಿಕೆ ಮಾಡಿದ್ದ ದಿನಪತ್ರಿಕೆಗಳನ್ನು ಒಂದೊಂದಾಗಿ ತೆಗೆದು ಆ ಎಲ್ಲಾ ಮಹಡಿ ಮನೆಗಳ ಬಾಲ್ಕನಿಗಳಿಗೆ ಗುರಿ ನೋಡಿ ದಿನಪತ್ರಿಕೆಗಳನ್ನು ಎಸೆದೆ. ಜಾಣೇಶ ಬಿಟ್ಟ ಕಣ್ಣು ಬಿಟ್ಟಹಾಗೆ ಆಶ್ಚರ್ಯದಿಂದ ನೋಡುತ್ತಿದ್ದ. ಕೇವಲ ಐದೇ ನಿಮಿಷದಲ್ಲಿ ಬಾಲ್ಕನಿಗಳ ಮನೆಗಳಿಗೆ ೧೫ ಪತ್ರಿಕೆಗಳನ್ನು ತಲುಪಿಸಿದ್ದೆ. ಅಲ್ಲಿಂದ ಮುಂದೆ ಇನ್ನೊಂದು ಅಪಾರ್ಟುಮೆಂಟು ಹಾಗೆ ಮತ್ತೊಂದಕ್ಕೆ ಹೀಗೆ ಕೇವಲ ಆರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ದಿನಪತ್ರಿಕೆಗಳನ್ನು ಮನೆಗಳಿಗೆ ತಲುಪಿಸಿ ಕೆಲಸ ಮುಗಿಸಿದ್ದೆ.

"ಇದೇನೊ ಶಿವು ಈ ರೀತಿ ಫೋಲ್ದ್ ಮಾಡೋದನ್ನ ಹಾಗೂ ಎಸೆಯುವುದನ್ನು ಎಲ್ಲಿಂದ ಕಲಿತೆಯೋ"! ಅವನಿಗೆ ಆಶ್ಚರ್ಯ,

"ನನಗೂ ಗೊತ್ತಿರಲಿಲ್ಲವೋ ಹಾಗೆ ಕಲಿತುಕೊಂಡೆ. ನೋಡು ನಮ್ಮ ಕೆಲಸವನ್ನು ಚಿಟಿಕೆ ಹೊಡೆದಷ್ಟೇ ಸುಲಭವಾಗಿ ಮಾಡಿ ಮುಗಿಸಬಹುದು. ನನಗಂತೂ ಇದೊಂದು ಮಹಾನ್ ಕಲೆ ಅನ್ನಿಸ್ತಿದೆ ನೋಡು."

"ಸಾಧ್ಯವೇ ಇಲ್ಲಾ" ತಕ್ಷಣ ಅವನಿಂದ ಬಂತು ಉತ್ತರ.

ಬಹುಶಃ ನನ್ನ ಕೆಲಸದ ವೇಗ ನೋಡಿ ಹೊಟ್ಟೆಕಿಚ್ಚಿನಿಂದ ಇವನು ಹೀಗೆ ಹೇಳುತ್ತಿರಬಹುದೇನೋ,
"ಹೇಗೋ ಸಾಧ್ಯವಿಲ್ಲ? ನೀನೆ ನೋಡು ನಾನು ಕೇವಲ ಒಂದೇ ಸೆಕೆಂಡಿನಲ್ಲಿ ಈ ರೀತಿ ಪತ್ರಿಕೆಯನ್ನು ಫೋಲ್ಡ್ ಮಾಡಿ ಯಾವುದೇ ಮಹಡಿಯ ಬಾಲ್ಕನಿಗೆ ಎಸೆದರೂ ಕೂಡ ಅದು ನೀಟಾಗಿ ಹೊಗಿ ಹಕ್ಕಿಯಂತೆ ಲ್ಯಾಂಡ್ ಆಗುತ್ತದೆ. ಬೇಕಾದರೆ ನೀನೆ ಹೋಗಿ ನಾನು ಬಾಲ್ಕನಿಗಳಲ್ಲಿ ಹಾಕಿರುವ ಪತ್ರಿಕೆಗಳನ್ನು ನೋಡಿ ಬರಬಹುದು. ಮನೆಯೊಡತಿ ಬಂದು ತೆಗೆದುಕೊಳ್ಳುವ ವರೆಗೂ ಹಾಗೆ ಒಂದು ಮಡಿಕೆಯೂ ಬಿಚ್ಚಿಕೊಳ್ಳದೆ ಬೆಚ್ಚಗೆ ಕುಳಿತಿರುತ್ತವೆ"!.

"ಅದು ಸರಿ ಇದನ್ನು ಆರ್ಟ್ ಎಂದು ಹೇಗೆ ಹೇಳುತ್ತೀಯಾ?

ಆರ್ಟ್ ಅಲ್ಲದೇ ಮತ್ತೇನು? ಸೆಕೆಂಡಿನಲ್ಲಿ ಫೋಲ್ಡ್ ಮಾಡುವುದು ಕೈಬೆರಳುಗಳಲ್ಲಿ ಪಳಗಿದ ಕಲೆಯಲ್ಲವೇ? ಹಾಗೆ ಯಾವುದೇ ಮಹಡಿಗೆ ಎಸೆಯುವಾಗಲು ನನ್ನ ಕೈಯಿಂದ ಜಾರಿ ಮೇಲೆ ಹಾರಿ ಸರಿಯಾಗಿ ಬಾಲ್ಕನಿಯೊಳಗೆ ಬಿದ್ದರೂ ಪತ್ರಿಕೆ ಹರಿಯುವುದಿರಲಿ, ಬಿಚ್ಚಿಕೊಳ್ಳುದಿರುವುದು ಕಲೆಯಲ್ಲವೇ? ಮನಸ್ಸನ್ನು ಕೇಂದ್ರೀಕರಿಸಿ ಕೈಯಲ್ಲಿ ಪೇಪರ್ ಹಿಡಿದು ಬಿಲ್ಲಿನಿಂದ ಬಿಟ್ಟ ಬಾಣದಂತೆ ಎಸೆದು ಗುರಿ ಸೇರಿಸುವುದು, ಒಂದು ಅದ್ಬುತ ಕಲೆ ಎನಿಸುವುದಿಲ್ಲವೇ?

"ಇಲ್ಲೇ ಇರೋದು ಪಾಯಿಂಟು. ನೀನೆ ಹೇಳಿದೆ ಇದನ್ನು ಫೋಲ್ಡ್ ಮಾಡಲು ಬೆರಳುಗಳ ಸಹಾಯ ಬೇಕು. ಹಾಗೆ ಫೋಲ್ಡ್ ಮಾಡುವಾಗ ಕೈಬೆರಳುಗಳ ಚಲನೆಯಿಂದ ಅದರ ಮಾಂಸಖಂಡಗಳಿಂದ ಒಂದಷ್ಟು ಕ್ಯಾಲೋರಿಗಳಷ್ಟು ಶಕ್ತಿ ವ್ಯಯವಾಗುತ್ತದೆ. ನಂತರ ಎಸೆಯುವಾಗ ನೀನು ಒಂದು ಕಾಲನ್ನು ಮುಂದೆ ಇಟ್ಟೆ ಅಲ್ಲವೇ?

"ಹೌದು".

ನೋಡು ಇಲ್ಲೇ ಇರೋದು ಸ್ವಲ್ಪ ತಲೆ ಉಪಯೋಗಿಸು ಇದರಲ್ಲಿ ಗಣಿತ, ಸೈನ್ಸು, ಎಲ್ಲಾ ಇದೆ. ಒಂದು ಕಾಲನ್ನು ಎಷ್ಟು ಇಂಚು ಮುಂದೆ ಇಡಬೇಕೆನ್ನುವುದು ಒಂದು ಲೆಕ್ಕ. ಹಾಗೆ ಸ್ವಲ್ಪ ದೇಹವನ್ನು ಹಿಂದಕ್ಕೆ ಬಗ್ಗಿಸುವುದು, ಕಣ್ಣಿನಿಂದ ಗುರಿ ನೋಡಿ ಎಸೆಯಬೇಕಾದ ಜಾಗ ಆಳತೆ ಮಾಡುವುದು, ಕೈಯಿಂದ ಎಸೆಯಬೇಕಾದರೆ ಇಂತಿಷ್ಟೇ ವೇಗ ಹಾಗು ಶಕ್ತಿಯನ್ನು ಉಪಯೋಗಿಸಬೇಕೆಂದು ನಿನಗೆ ತಿಳಿದಿದೆ. ಈ ಶಕ್ತಿ ಮತ್ತು ವೇಗದಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಆ ಪೇಪರ್ ಒಂದೋ ಮೇಲಿನ ಬಾಲ್ಕನಿಗೆ ಬೀಳುತ್ತದೆ. ಅಥವಾ ಕೆಳಗಿನ ಸಜ್ಜೆಯೊಳಗೆ ಸೇರಿಬಿಡುತ್ತದೆ. ಇದಕ್ಕೆಲ್ಲಾ ಇಂತಿಷ್ಟೇ ಶಕ್ತಿ, ವೇಗ ಎಲ್ಲವನ್ನು ಕ್ಯಾಲೋರಿಗಳಲ್ಲಿ ಲೆಕ್ಕಹಾಕಬೇಕಾಗುತ್ತದೆ. ಇದೆಲ್ಲಾ ಗಣಿತದಲ್ಲಿ ಬರುತ್ತದೆ.

ಜೊತೆಗೆ ನೀನು ಎಸೆದ ಪೇಪರ್ರು ಮೇಲಕ್ಕೆ ಹಕ್ಕಿಯಂತೆ ಹಾರಿ ಹೋಗದೆ ಬಾಲ್ಕನಿಯ ಒಳಗೆ ಬೀಳುತ್ತದಲ್ಲ, ಇಲ್ಲಿ ಖಂಡಿತವಾಗಿ ನ್ಯೂಟನ್ ತತ್ವ ಅಪ್ಲೇ ಆಗುತ್ತದೆ. ನಿನಗೂ ಗೊತ್ತಲ್ವ?. ಒಂದು ಕಲ್ಲನ್ನು ಮೇಲೆ ಎಸೆದರೆ ಅದು ಗುರುತ್ವಾಕರ್ಷಣಾ ಬಲದಿಂದ ಕೆಳಗೆ ಬೀಳುತ್ತದೆ ಎನ್ನುವುದು ನ್ಯೂಟನ್ನನ ಸೇಬಿನ ಹಣ್ಣಿನ ತತ್ವ ಅಂತ, ನೋಡಿದೆಯಾ ಇಲ್ಲಿ ಸೈನ್ಸು ಬಂತು"

ಅವನ ತರ್ಕಕ್ಕೆ ನನ್ನೀಂದ ಉತ್ತರವಿರಲಿಲ್ಲ. ಸೈನ್ಸು ಮತ್ತು ಮ್ಯಾಕ್ಸ್ ಅವನ ಇಷ್ಟದ ವಿಷಯ. ೧೦ನೇ ತರಗತಿಯಲ್ಲಿ ಓದುವಾಗ ಅವನ ಇಷ್ಟದ ಸೈನ್ಸಿನ ವಿಷಯದ ಮೇಲೆ ತುಂಬಾ ಪ್ರಯೋಗ ನಡೆಸುತ್ತಿದ್ದನಂತೆ. ಅದು ಹೆಚ್ಚಾಗಿ ಬೌತಶಾಸ್ತ್ರ ಮತ್ತು ಜೀವಶಾಸ್ತ್ರದ ಮೇಲೆ ಆಗುತ್ತಿತ್ತಂತೆ. ಮುಂದೊಂದು ದಿನ ತನ್ನ ಸಂಶೋಧನೆಯಿಂದಾಗಿ ಏನಾದರೂ ಕೊಡುಗೆಯನ್ನು ಈ ಪ್ರಪಂಚಕ್ಕೆ ಕೊಡಬೇಕೆಂದು ಧೃಡ ನಿರ್ಧಾರವನ್ನೂ ಮಾಡಿದ್ದನಂತೆ!. ದುರಾದೃಷ್ಟವಶಾತ್ ಅವನಿಗೆ ಪರೀಕ್ಷೆಯಲ್ಲಿ ವಿಜ್ಜ಼ಾನದ ವಿಷಯದಲ್ಲೇ ಕಡಿಮೆ ಅಂಕ ಬಂದು ಪೇಲಾಗಿದ್ದ. ಅವನು ತುಂಬಾ ಚೆನ್ನಾಗಿ ಓದುತ್ತಿದ್ದ ವಿಷಯದಲ್ಲೇ ಫೇಲಾದದ್ದು ಏಕೆಂದು ಕೇಳಿದರೇ.

" ನಾನೇನೊ ಪರೀಕ್ಷೆಯಲ್ಲಿ ಚೆನ್ನಾಗೆ ಬರೆದ್ದಿದ್ದೆ. ನನ್ನ ಪತ್ರಿಕೆ ವ್ಯಾಲ್ಯುವೇಟ್ ಮಾಡಿದ್ದು ಗುಲ್ಬರ್ಗದ ಕಡೆಯ ಮಾಸ್ತರು. ಮೊದಲೇ ಆ ಊರಲ್ಲಿ ಕೆಂಡದಂತ ಬಿಸಿಲು, ಕುಡಿಯಲು ಸರಿಯಾಗಿ ನೀರು ಸಿಗಲ್ಲ, ಆತನಿಗೂ ವಯಸ್ಸಾಗಿತ್ತು, ಮನೆಯಲ್ಲಿ ಸಂಸಾರ ತಾಪತ್ರಯ, ಅವನಿಗೆ ನನ್ನ ಪ್ರಯೋಗಗಳು ಆರ್ಥವಾಗಿರ್ಲಿಕ್ಕಿಲ್ಲ. ಆದ್ದರಿಂದ ಕಡಿಮೆ ಅಂಕ ಕೊಟ್ಟುಬಿಟ್ಟ. ಬೇರೆ ನಮ್ಮ ಬಯಲು ಸೀಮೆಯ ಮೇಷ್ಟ್ರಾಗಿದ್ರೆ ನಾನು ಪಾಸಾಗಿರುತ್ತಿದ್ದೆ. ಆ ಗುಲ್ಬರ್ಗ ಮೇಷ್ಟ್ರಿಂದ ನಾನು ಪತ್ರಿಕೆ ಏಜೆನ್ಸಿ ನಡೆಸಬೇಕಾಗಿ ಬಂತು" ಎಂದಿದ್ದು ನೆನಪಾಯಿತು.

ನಂತರ ಪಾಸಾದರೂ ಪಿ ಯು ಸಿ ನಲ್ಲಿ ಅವನಿಗೆ ಕಡಿಮೆ ಅಂಕ ಬಂದ ಕಾರಣ ಸೈನ್ಸ್ ಸಿಗದೇ ಆರ್ಟ್ಸ್ ಸೇರಿಕೊಂಡನಂತೆ. ಒಲವಿಲ್ಲದಿದ್ದರೂ ಹೇಗೋ ಆರ್ಟ್ಸ್ ನಲ್ಲಿ ಮೊದಲ ವರ್ಷ ಮುಗಿಸಿ ಎರಡನೇ ವರ್ಷಕ್ಕೆ ಹೋಗದೇ ಓದನ್ನೇ ಬಿಟ್ಟುಬಿಟ್ಟನಂತೆ, ಇದು ಅವನ ಓದಿನ ಕತೆ. ಈಗಳು ಅವನು ಪ್ರತಿಯೊಂದು ವಿಚಾರಕ್ಕೂ ವಿಜ್ಝಾನಕ್ಕೆ ಸಂಭಂದ ಕಲ್ಪಿಸಿ ಮಾತಾನಾಡದಿದ್ದರೆ ಅವನಿಗೆ ಸಮಾಧಾನವಿಲ್ಲ.

ನಂತರ ಅವನ ಅಪ್ತರಿಂದ ತಿಳಿದುಬಂದ ವಿಷಯವೇನೆಂದರೇ ಪೂಯೂಸಿ ಎರಡನೇ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ಫೇಲಾದ ಮೇಲೆ ಮುಂದೆ ಪರೀಕ್ಷೆ ಕಟ್ಟಿ ಪಾಸು ಮಾಡದೇ ಕೆಲವು ದಿನ ಅದು-ಇದು ಕೆಲಸ ಮಾಡಿ ಕೊನೆಗೆ ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಬಂದನೆಂದು ಹೇಳುತ್ತಾರೆ. ಆತನ ಮಾತಿನಿಂದ ಈ "ಫೋಲ್ಡ್ ಮಾಡಿ ದಿನಪತ್ರಿಕೆ ಎಸೆಯುವ ಕಲೆ" ಕಲೆಯೋ, ಸೈನ್ಸೋ, ಅಥವಾ ಶಕ್ತಿ ಕ್ಯಾಲೋರಿಗಳ ಲೆಕ್ಕಾಚಾರದ ಗಣಿತವೋ, ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವಲ್ಲಿನ ಅಂಕಿ ಅಂಶಗಳ ಸ್ಟಾಟಿಸ್ಟಿಕ್ಸೋ ಗೊತ್ತಾಗದೆ ನಾನು ಒಂದಷ್ಟು ದಿನ ಜಿಜ್ಣಾಸೆಗೊಳಗಾಗಿದ್ದು ನಿಜ.ಮಡಿಚಿ ಎಸೆಯುವ ಕಲೆ-೫

ಮುಂದೆ ಈ ವಿದ್ಯೆಯನ್ನು ನನ್ನ ಬೀಟ್ ಹುಡುಗರಿಗೆಲ್ಲಾ ಕಲಿಸಿದೆ. ಕೆಲ ಹುಡುಗರು ಇದರಿಂದಾಗಿ ಅವರು ಸಮಯ ಉಳಿದು ನನ್ನ ಆದಾಯ ಹೆಚ್ಚಿಸಿದರು. ಅವರವರ ಗೆಳೆಯರೆಗೂ ಇದನ್ನು ಹೇಳಿಕೊಟ್ಟು ಅವರವರ ಯಜಮಾನರ ಆಧಾಯದ ಜೊತೆಗೆ ಖುಷಿಯನ್ನು ಹೆಚ್ಚಿಸಿದ್ದು ನಿಜ.

ಮುಂದೊಂದು ದಿನ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದಲ್ಲಿ ಈ ಕಲೆ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ನಮ್ಮ ನಮ್ಮ ಸಂಪಾದನೆಯನ್ನು ಹೆಚ್ಚಿಸಿಕೊಂಡು ಸ್ವಲ್ಪ ಮಟ್ಟಿಗಾದರೂ ಶ್ರೀಮಂತರಾಗಬಹುದೆಂದು ಕನಸು ಕಂಡಿದ್ದರು ನಾನು ಸೇರಿದಂತೆ ನನ್ನ ವೃತ್ತಿಭಾಂಧವರು.

ಆದರೆ ನನ್ನ ಮಂಜ ಈ ವಿದ್ಯೆಯಲ್ಲಿ ಇನ್ನಷ್ಟು ಪರಿಣತಿ ಸಾಧಿಸಲು ಪ್ರಯತ್ನಿಸಿ ಗ್ರಾಹಕರ ಮಹಡಿ ಮನೆಗಳ ಕಿಟಕಿಗಳ ದುಬಾರಿ ವೆಚ್ಚದ ಗಾಜುಗಳನ್ನು ಹಾಗೂ ವಿದ್ಯುತ್ ದೀಪಗಳನ್ನು ಒಡೆದಿದ್ದ. ನಾನು ಎಂದಿನಂತೆ ಹಣ ವಸುಆಲಿಗೆ ಹೋದಾಗ, ಮಂಜನ ಸಾಹಸವನ್ನು ಸಾಕ್ಷಿ ಸಮೇತ ತೋರಿಸಿ ವಸೂಲಿ ಹಣದಲ್ಲಿ ಕಿಟಕಿಯ ದುಬಾರಿ ಗ್ಲಾಸು, ಆಲಂಕೃತ ವಿದ್ಯುತ್ ದೀಪಗಳ ವೆಚ್ಚಗಳನ್ನು ಮುರಿದುಕೊಂಡಾಗ ಆ ತಿಂಗಳ ಆಧಾಯವೆಲ್ಲಾ ಸೋರಿಹೋಗಿತ್ತು. ಇದು ನನಗೊಬ್ಬನಿಗಾಗದೇ ನನ್ನ ಗೆಳೆಯರ ಹುಡುಗರು ನಮ್ಮ ಮಂಜನಂತಹದ್ದೇ ಸಾಹಸಗಳನ್ನು ಮಾಡಿದ್ದರಿಂದ ಅವರಿಗೂ ಹೀಗೆ ಸಾಮೂಹಿಕ ನಷ್ಟ ಉಂಟಾಗಿ, ನಾವೆಲ್ಲಾ ನಿರೀಕ್ಷಿಸಿದ್ದ ಕ್ರಾಂತಿಕಾರಿ ಬದಲಾವಣೆ ಹಿಮ್ಮುಖವಾಗಿ ಸಾಗಿ ನಾನು ಸೇರಿದಂತೆ ಎಲ್ಲರೂ ಶ್ರೀಮಂತರಾಗುವ ಬದಲಿಗೆ ಮತ್ತಷ್ಟು ಬಡವರಾದೆವು.

ಇದೆಲ್ಲಾ ನಡೆದ ನಂತರವೂ ನನ್ನ ಜೊತೆ ದಿನಪತ್ರಿಕೆ ಹಾಕಲು ಜಾಣೇಶ ಬಂದಾಗ " ಈ ಎಸೆಯುವ ಕಲೆ" ಸೈನ್ಸೋ, ಕಲೆಯೋ, ಗಣಿತವೋ, ಅಂಕಿ ಅಂಶಗಳ ಸ್ಟಾಟಿಸ್ಟಿಕ್ಸೋ ತಿಳಿಯದೆ ಜಿಜ್ಣಾಸೆಗೊಳಗಾಗುತ್ತೇನೆ.

ಶಿವು.ಕೆ