Sunday, October 19, 2008

ಮೊಬೈಲ್ ಫೋನು ಮತ್ತು ಗ್ರಾಹಕರು

ಹತ್ತು ವರ್ಷದ ಹಿಂದಿನ ಘಟನೆ. ಇದನ್ನು ಶುರು ಮಾಡಿದಾಗಲೇ ನಿಮ್ಮ ಆಲೋಚನೆಯನ್ನು ಹತ್ತು ವರ್ಷಗಳ ಹಿಂದಕ್ಕೆ ಓಡಿಸಬೇಕಾಗುತ್ತದೆ. ನಮ್ಮ ದಿನಪತ್ರಿಕೆ ವಿತರಣೆ ಕೆಲಸದಲ್ಲಿ ನಮ್ಮ ಹುಡುಗರು ಯಾವತ್ತಾದರೂ ಒಂದು ದಿನ ಅಥವ ೨-೩ ದಿನ ಪತ್ರಿಕೆಗಳನ್ನು ಯಾವುದಾದರೂ ಒಂದು ಅಥವ ಎರಡು ಮನೆಗೆ ಹಾಕದೆ ತಪ್ಪಿಸಿಬಿಟ್ಟಿದ್ದರೆ ನಮಗೆ ತಿಳಿಯುತ್ತಿದ್ದುದ್ದು, ನಾವು ಒಂದು ತಿಂಗಳಾದ ಮೇಲೆ ಅವರ ಮನೆಗೆ ಹಣ ವಸೂಲಿಗೆ ಹೋದಾಗ ಮಾತ್ರ. ಅಥವಾ ತಪ್ಪಿಸಿದ್ದ ಹುಡುಗನೇ ಮರುದಿನ ನಾನು ಇಂಥ ಮನೆಗೆ ಪೇಪರ್ ಹಾಕಿಲ್ಲಣ್ಣ ಎಂದು ಹೇಳಿದಾಗ ಮಾತ್ರ ನಮಗೆ ಗೊತ್ತಾಗುತ್ತಿತ್ತು. ಆಗ ಗ್ರಾಹಕರು ನಮ್ಮ ಬಳಿ ಆ ಸಮಯದಲ್ಲಿ ಮಾತಾಡುತ್ತಿದ್ದುದ್ದು ಹೀಗೆ.
" ಸಾರ್ ನ್ಯೂಸ್ ಪೇಪರ್ ಬಿಲ್ಲು."
"ಓ ಬನ್ನಿ ಒಳಗೆ ಬನ್ನಿ, ಕೂತುಕೊಳ್ಳಿ. ಹೇಗಿದ್ದೀರಿ? ಹೇಗೆ ನಡೆಯುತ್ತಿದೆ ನಿಮ್ಮ ಕೆಲಸ.?"
ಚೆನ್ನಾಗಿದೆ ನಡೆಯುತ್ತಿದೆ ಸಾರ್. ಪರವಾಗಿಲ್ಲ".
"ಏನು ಈ ಸಾರಿ ಲೇಟಾಗಿ ಬಂದಿದ್ದೀರಿ ಕಲೆಕ್ಷನ್ನಿಗೆ"
ಹೌದು ಸಾರ್, ಈ ಸಲ ಲೇಟಾಯ್ತು. ನಿಮಗೆ ಗೊತ್ತಲ್ಲ. ಇದೊಂದೆ ಕೆಲಸದಲ್ಲಿ ಹೊಟ್ಟೆ ತುಂಬಲ್ಲ. ಬೇರೆ ಕೆಲಸಕ್ಕೆ ಹೋಗ್ತೀನಲ್ಲ ಸಂಜೆ ಬರೋದು ತಡವಾಗುತ್ತೆ. ಅದಕ್ಕಾಗಿ ಕಲೆಕ್ಷನ್ ಸರಿಯಾದ ಟೈಮಿಗೆ ಮಾಡೋಕ್ಕೆ ಆಗೊಲ್ಲ."
ಆಷ್ಟರಲ್ಲಿ ಅವರ ಶ್ರೀಮತಿ ಕಾಫಿ ಕೊಡುತ್ತಾರೆ. ನಾನು ಸಂಕೋಚದಿಂದಲೇ ಕುಡಿಯುತ್ತೇನೆ.
ಬಿಲ್ ಎಷ್ಟಾಯ್ತಪ್ಪ?
"ತಗೊಳ್ಳಿ ಸಾರ್ ಪ್ರಜಾವಾಣಿ ಬಿಲ್ಲು ೩೩-೦೦ ರೂಪಾಯಿ"
"ಏನಪ್ಪ ಜಾಸ್ತಿ ಹಾಕಿದ್ದೀಯ?"
"ಇಲ್ಲಾ ಸಾರ್. ನಾವು ಎಲ್ಲಿ ಜಾಸ್ತಿ ಹಾಕಲಿಕ್ಕೆ ಸಾಧ್ಯ. ಈ ತಿಂಗಳಿಂದ ೧೦ ಪೈಸೆ ಜಾಸ್ತಿ ಆಫೀಸಿನಿಂದಲೇ ಮಾಡಿದ್ದಾರೆ. ಅದಕ್ಕೆ ಮೂರು ರೂಪಾಯಿ ಜಾಸ್ತಿ ಆಗಿದೆ ಸಾರ್. ಮೊದಲು ೩೦ ರೂಪಾಯಿ ತಗೊತಿದ್ದೆನಲ್ಲಾ ಸಾರ್"
ಏನೋಪ್ಪ ಇವರು ಅವಾಗಾವಗ ಈ ರೀತಿ ಜಾಸ್ತಿ ಮಾಡಿದ್ರೆ ಹೆಂಗಪ್ಪ? ನಮಗೂ ಈ ರೀತಿ ಸಂಬಳ ಜಾಸ್ತಿ ಆಗೊಲ್ಲವಲ್ಲಪ"
ಅವರು ತಮ್ಮ ಕಷ್ಟ_ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಹಣವನ್ನು ಕೊಡುತ್ತಾ,
"ನಿಮ್ಮ ಹುಡುಗನಿಗೆ ಸ್ವಲ್ಪ ಹೇಳಪ್ಪ, ಅವಾಗಾವಾಗ ಯಾವಾತ್ತಾದ್ರೂ ಒಂದೊಂದು ದಿನ ಪೇಪರ್ ಹಾಕೊದನ್ನ ತಪ್ಪಿಸಿಬಿಡುತ್ತಾನೆ. ದಿನಾ ಬೆಳಗಾದ್ರೆ ನಮಗೆ ಪೇಪರ್ ಬೇಕೆ ಬೇಕಪ್ಪ. ನಮಗೆ ನಮ್ಮ ಹೊರಗಿನ ಪ್ರಪಂಚದ ನ್ಯೂಸ್ ಎಲ್ಲಾ ಸರಿಯಾಗಿ ಗೊತ್ತಾಗೋದು ಈ ಪೇಪರಿನಿಂದಲೇ ಅಲ್ವೇ! ಅದು ಅಲ್ದೇ ನಮ್ಮ ಆಕಾಶವಾಣಿಯಲ್ಲಿ ಅವಾಗಾವಾಗ ವಾರ್ತೆ ಕೇಳ್ತಿದ್ರು ಅದು ತುಂಭಾ ಚುಟುಕಾಗಿರುತ್ತೆ, ಇನ್ನೂ ಆ ಟಿ.ವಿ. ನ್ಯೂಸನ್ನು ನೋಡಬೇಕಂದ್ರೆ ರಾತ್ರಿ ೯ ಗಂಟೆಯವರೆಗೆ ಕಾಯಬೇಕಲ್ವ, ಏನೇ ಆದ್ರೂ ಪೇಪರಿನಲ್ಲಿ ನಿದಾನವಾಗಿ ಓದೋ ಮಜಾನೇ ಬೇರೆ ಬಿಡಪ್ಪ"
"ಸರಿ ಸಾರ್ ನಮ್ಮ ಹುಡುಗನಿಗೆ ಹೇಳ್ತೀನಿ, ಬರ್ತೀನಿ ಸಾರ್."
ಒಂದು ನಿಮಿಷ ಇರು, ನಾಡಿದ್ದು ಭಾನುವಾರ ಸಂಜೆ ಮನೆಗೆ ಬಾಪ್ಪ. ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದೇವೆ. ನೀನು ತಪ್ಪದೇ ಬರಬೇಕು. ನಿಮ್ಮ ಮನೆಯವರನ್ನು ಕರೆದುಕೊಂಡು ಬಾ ಆಯ್ತಾ."
"ನನಗಿನ್ನೂ ಮದುವೆಯಾಗಿಲ್ಲಾ"
"ಹೋ ಹೌದಾ, ಬೇಗ ಒಂದು ಮದುವೆ ಮಾಡಿಕೊಳ್ಳೋದು ತಾನೆ. ನೀನು ಭಾನುವಾರ ತಪ್ಪದೇ ಬರಬೇಕು".
ಆ ಮನೆಯಿಂದ ಹೊರಬರುತ್ತಾ ನನ್ನ ಸ್ಕೂಟಿಯನ್ನು ಸ್ಟಾರ್ಟ್ ಮಾಡಿದೆ. ಎಂಥ ಒಳ್ಳೇ ಗ್ರಾಹಕರು ಇವರು. ಎಷ್ಟು ಪ್ರೀತಿಯಿಂದ ಮಾತಾಡಿಸ್ತಾರೆ, ವಿಚಾರಿಸುತ್ತಾರೆ ಎನ್ನಿಸಿತ್ತು. ಹಾಗೆ ಮುಂದೆ ಹೋಗಿ ಇನ್ನೊಂದು ಮನೆಯ ಕಾಲಿಂಗ್ ಬೆಲ್ ಹೊತ್ತಿದೆ. ಬಾಗಿಲು ತೆಗೆಯಲಿಲ್ಲ. ಬದಲಾಗಿ ಕಿಟಕಿ ತೆರೆಯಿತು. ಒಳಗಿನಿಂದ ಒಂದು ಹುಡುಗಿ ಇಣುಕಿನೋಡಿ,
" ಯಾರು ?"
"ನಾನು ನ್ಯೂಸ್ ಪೇಪರ್ ಬಿಲ್ ಕಲೆಕ್ಟ್ ಮಾಡಲಿಕ್ಕೆ ಬಂದಿದ್ದೀನಿ."
"ಒಂದು ನಿಮಿಷ ಇರಿ" ಒಳಗೆ ಹೋಯಿತು ಹುಡುಗಿ.
"ಅಪ್ಪಾ ನ್ಯೂಸ್ ಪೇಪರಿನವರು ಬಂದಿದ್ದಾರೆ".
"ನಾನು ಸ್ನಾನ ಮಾಡಿ ಮಡಿಲಿದ್ದೀನಿ ಅರ್ದ ಗಂಟೆ ಬಿಟ್ಟು ಬರಲಿಕ್ಕೆ ಹೇಳಮ್ಮ" ಅದು ನನಗೂ ಕೇಳಿಸಿತ್ತು. ಆ ಹುಡುಗಿ ಬಂದು ಹೇಳುವ ಮೊದಲೇ " ಸರಿ ಆಯ್ತು." ನಾನು ಅಲ್ಲಿಂದ ಹೊರಟೆ/ ಹೊರಡುವಾಗ ಅನ್ನಿಸಿತು, ಸ್ನಾನ ಮಾಡಿ ಮಡಿಯಲ್ಲಿದ್ದರೆ ದುಡ್ಡು ಮಡಿಯಲ್ಲಿರುತ್ತಾ, ಮನಸ್ಸಿನಲ್ಲಿ ಅಸಮಧಾನವಿತ್ತು. ಒಂದಷ್ಟು ಸುತ್ತು ಹಾಕಿಕೊಂಡು ಮತ್ತೆ ಅದೇ ಮನೆಗೆ ಹೋದೆ. ಮತ್ತೆ ಕಾಲಿಂಗ್ ಬೆಲ್, ಹುಡುಗಿ, ಅದೇ ಮಾತು, ಸರಿ ಈ ಬಾರಿ " ಕೊಡ್ತೀನಿ ಐದು ನಿಮಿಷ ಇರಲಿಕ್ಕೆ ಹೇಳು" ನನಗೂ ಕೇಳಿಸಿತು ಆ ಮಾತು.
ಐದು ನಿಮಿಷ ಇರು ಎಂದರೆ ಎಲ್ಲಿ ಇರಬೇಕು? ನಾನು ನಿಂತಿದ್ದು ಅವರ ಮುಚ್ಚಿದ ಬಾಗಿಲ ಮುಂದೆ, ಸರಿ ನಿಂತು ಏನು ಮಾಡುವುದು? ಬೇಸರವಾಯ್ತು. ಸರಿ ಐದು ನಿಮಿಷ ತಾನೆ ನಿಲ್ಲೋಣ ಎಂದು ನನಗೆ ನಾನೆ ಸಮಾಧಾನ ಮಾಡಿಕೊಂಡೆ.
ಐದು ನಿಮಿಷವಾಯ್ತು. ಆತ ಬರಲಿಲ್ಲ. ಹತ್ತು ನಿಮಿಷವಾಯ್ತು. ನನಗೆ ತಡೆಯಲಾಗದ ಸಿಟ್ಟು ಬಂತು. ಹತ್ತು ನಿಮಿಷ ಮುಚ್ಚಿದ ಬಾಗಿಲ ಮುಂದೆ ಆ ಬಾಗಿಲನ್ನು ನೋಡುತ್ತಾ ನಿಲ್ಲಲು ಸಾಧ್ಯವೇ? ಅದರಲ್ಲೂ ಸುಮ್ಮನೆ ನಿಲ್ಲುವುದು ನನ್ನ ಸ್ವಭಾವಕ್ಕೆ ಸಾಧ್ಯವೇ? ಈ ಮನೆಯವ ಮೊದಲು ಬಂದಾಗ ಮಡಿ, ಪೂಜೆ ಎಂದ. ಅವಾಗಲೇ ಜೇಬಿನಿಂದಲೋ, ಬೀರುವಿನಿಂದಲೋ ಹಣ ತೆಗೆದು ಒಂದು ನಿಮಿಷದಲ್ಲಿ ಕೊಟ್ಟು ಬಿಡಬಹುದಿತ್ತು. ಹೋಗಲಿ ಈಗಲಾದರೂ ಕೊಡುತ್ತಾನಾ ಎಂದರೇ ೫ ನಿಮಿಷ ಎಂದ, ಆಗಲೇ ಹತ್ತು ನಿಮಿಷ ಕಳೆಯಿತು. ನಾವು ಎಂದಾದರೂ ಒಂದು ದಿನ ಪೇಪರ್ ಲೇಟಾಗಿ ಕೊಟ್ಟರೆ, ಸೂರೆ ಕಿತ್ತುಹೋಗುವಂತೆ ಕೂಗಾಡುತ್ತಾನೆ. ಈಗ ಹಣ ಕೊಡಲು ಎಷ್ಟು ಹೊತ್ತು ಬಾಗಿಲ ಮುಂದೆ ನಿಲ್ಲಿಸುತ್ತಾನೆ ಈತ?,

ನನ್ನ ಸಿಟ್ಟು ನೆತ್ತಿಗೇರಿತ್ತು. ಅದರೆ ಏನು ಮಾಡುವುದು ? ನಾನು ಸಿಟ್ಟು ಮಾಡಿಕೊಳ್ಳುವಂತಿಲ್ಲ. ಆತ ನನ್ನ ಗ್ರಾಹಕ. ಅವನು ದಿನಪತ್ರಿಕೆ ಕೊಂಡರೇ ಅದರ ಲಾಭದಲ್ಲಿ ನನ್ನ ಜೀವನ ನಡೆಯುವುದು.

ಹೀಗೆ ಯೋಚಿಸುತ್ತಿರುವಾಗ ನನಗೆ ಅದುವರೆಗೂ ಕಟಕಟೆಯಲ್ಲಿ ನಿಂತ ಆನುಭವ. ಆತನೋ ಜಡ್ಜ್ ಸಾಹೇಬನಂತೆ ಕಾಣುತ್ತಿದ್ದಾನೆ{ಅನ್ನಿಸುತ್ತಿದ್ದಾನೆ} ಆತ ಬಂದ ಮೇಲೆ ಏನೇನು ಹೇಳುತ್ತಾನೆ ಎಂಬ ಭಯ ಹೀಗೆ ಯೋಚಿಸುತ್ತಿರುವಾಗಲೇ ಕೊನೆಗೂ ಕಿಟಕಿ ತೆರೆಯಿತು.

ಜಡ್ಜ್ ಸಾಹೇಬರ ದರ್ಶನವಾದಂತೆ ಕಿಟಕಿಯಲ್ಲಿ ಆತನ ದರ್ಶನವಾಯಿತು. ಕೈಯಲ್ಲೊಂದು ಕ್ಯಾಲೆಂಡರ್ ಹಿಡಿದಿದ್ದ. ಆತ. ಕಿಟಕಿಯ ಒಳಗೆ ಆತ. ನಾನು ಹೊರಗೆ ಕಟಕಟೆಯಲ್ಲಿ ನಿಂತಂತೆ.

"ಇಲ್ಲಿ ನೋಡಿ ಮಾರ್ಚ್ ೬ನೇ ತಾರೀಖು, ಮತ್ತೆ ೧೫, ೧೯, ಒಟ್ಟು ಮೂರು ದಿನ ಪೇಪರ್ ಬಂದಿಲ್ಲ. ನೋಡಿ ಇಲ್ಲಿ ಮಾರ್ಕ್ ಮಾಡಿದ್ದೇನೆ. ಸಾಕ್ಷಿ ಸಮೇತ ತೋರಿಸಿದ್ದ.

ಅವನ ಮಾತಿಗೆ "ಇಲ್ಲಾ ಸಾರ್ ನಮ್ಮ ಹುಡುಗ ಸರಿಯಾಗಿ ಹಾಕಿರ್ತಾನೆ ನೋಡಿ"
"ಹಾಗಾದರೆ ನಾನು ಇಲ್ಲಿ ಸುಮ್ಮನೆ ಬರೀತೀನೇನ್ರೀ? ನಮಗೆ ಪೇಪರು ಬರದಿದ್ದ ದಿನ ಈ ಕ್ಯಾಲೆಂಡರಲ್ಲಿ ಗುರುತು ಹಾಕಿಬಿಡ್ತೀನಿ. ಗೊತ್ತಾ! ನಾನು ಈ ಕ್ಯಾಲೆಂಡರ್ ತರಿಸೋದೆ ಹಾಲು ಪೇಪರು ಇನ್ನೂ ಏನೇನೋ ಬರದಿದ್ರೆ ಗುರುತು ಹಾಕಿಕೊಳ್ಳಲಿಕ್ಕೆ ಗೊತ್ತಾ. ಸರಿ ಎಷ್ಟಾಯ್ತು ಹೇಳಿ ಪೇಪರ್ ಬಿಲ್?

ಆತ ಹೇಳಿದ ದಿನಗಳನ್ನು ಕಳೆದು ಒಂದು ಮೊತ್ತ ಬಿಲ್ಲಿನಲ್ಲಿ ಬರೆದುಕೊಟ್ಟೆ. ಬಿಲ್ ತೆಗೆದುಕೊಂಡವನು ಮತ್ತೆ ಒಳಗೆ ಹೋಗಿ ಕ್ಯಾಲಿಕುಲೇಟರ್ ತಂದು "ದಿನದ ಪೇಪರ್ ರೇಟು ಎಷ್ಟು?"

ನಾನು "೧ ರೂಪಾಯಿ ೧೦ ಪೈಸೆ ಸಾರ್" ಎಂದೆ.

ಆತ ಲೆಕ್ಕ ಹಾಕಿ "೨೯-೭೦ ಆಗುತ್ತಲ್ಲರೀ ನೀವು ೩೦ ರೂಪಾಯಿ ಹಾಕಿದ್ದೀರಿ,"
"ಚಿಲ್ಲರೇ ಇರೋದಿಲ್ಲವಲ್ಲ ಸಾರ್ ಅದಕ್ಕೆ"

ನಾನು ಕೊಡ್ತೀನ್ರೀ ಚಿಲ್ರೆ" ಎಂದು ತನ್ನ ಮಗಳನ್ನು ಕರೆದು ತನ್ನ ದೇವರ ಮನೆಯ ಹುಂಡಿಯಲ್ಲಿದ್ದ ಚಿಲ್ಲರೆ ತರಲು ಹೇಳಿ, "ತಗೋಳ್ರೀ" ಎಂದು ೨೯ ರೂಪಾಯಿ ನೋಟುಗಳನ್ನು ಕೊಟ್ಟು, ನಾಲ್ಕಾಣೆಯ ೨ ಕಾಯಿನ್ ಮತ್ತು ೧೦ ಪೈಸೆಯ ೨ ಕಾಯಿನ್ ಕೊಟ್ಟು, "ಸರಿಯಾಯ್ತ?" ಕೇಳಿದ.

ನನಗೇ ಮನದಲ್ಲಿಯೇ ಕೋಪ. ಈತ ಸರಿಯಾಗಿ ಊಟ ಮಾಡುತ್ತಾನ ಅಂತ? "ಸರಿ ಸಾರ್" ಎಂದು ಹೇಳುವಷ್ಟರಲ್ಲಿ ಕಿಟಕಿ ದಡ್ ಎಂದು ಮುಚ್ಚಿಕೊಂಡಿತು. ಆತ ಕೊಟ್ಟ ನೋಟು, ಚಿಲ್ಲರೆಯಿಂದಲೋ ಅಥವಾ ಅಷ್ಟು ಹೊತ್ತು ಆ ಮುಚ್ಚಿದ ಬಾಗಿಲ ಮುಂದೆ ನಿಂತಿದ್ದಕ್ಕೋ ಅಲ್ಲಿಂದ ನಿರ್ಗಮಿಸುವಾಗ ಮನಸ್ಸು ಭಾರವಾಗಿತ್ತು.

ಅಲ್ಲಿಂದ ಮತ್ತೊಂದು ಮನೆ, ಮಗದೊಂದು ಮನೆ ಹೀಗೆ ಒಂದೊಂದು ಮನೆಯ ಮುಂದೆಯೂ ನನಗಾದ ಅನುಭವಗಳು ನೂರಾರು. ಕೆಲವು ಮನೆಗೆ ಹೋದಾಗ ಅವರು ತಕ್ಷಣಕ್ಕೆ ಹಣ ಕೊಡುತ್ತಾರೆ. ಒಂದು ನಿಮಿಷವೂ ನಿಲ್ಲಿಸುವುದಿಲ್ಲ. ಅವರಿಗೆ ನಮ್ಮ ಕಷ್ಟ-ಸುಖಗಳು ಗೊತ್ತಿರಬಹುದು. ಹಾಗೂ ತಿಂಗಳಿಗೊಮ್ಮೆ ಕೊಡುವ ಹಣಕ್ಕೆ ಏತಕ್ಕೆ ಸತಾಹಿಸಬೇಕು? ಅವರಾಗಲಿ ಅವರ ಹುಡುಗರಾಗಲಿ ತಿಂಗಳಾನುಗಟ್ಟಲೆ ಬೆಳಿಗ್ಗೆ ಎದ್ದು ಚಳಿ, ಮಳೆ, ಗಾಳಿ ಎನ್ನದೇ ನಮಗೆ ಪೇಪರುಗಳನ್ನು ಕೊಡುತ್ತಾರೆನ್ನುವ ಭಾವನೆಯಿಂದಲೋ ನಾವು ಬಿಲ್ ಕೊಟ್ಟ ತಕ್ಷಣ ಹಣ ಕೊಡುತ್ತಾರೆ.

ಇನ್ನೂ ಕೆಲವರಿರುತ್ತಾರೆ. ಅವರ ಬಳಿ ಹೋದಾಗ ಮಲಗಿದ್ದಾರೆ ಎಂದೋ, ಸ್ನಾನಕ್ಕೆ ಹೋಗಿದ್ದಾರೆ, ಪೂಜೆ ಮಾಡುತ್ತಿದ್ದಾರೆ , ಹೊರಗೆ ಹೋಗಿದ್ದಾರೆ ಎಂದು ಹೇಳಿ ನಮ್ಮನ್ನು ಸಾಗಹಾಕುತ್ತಾರೆ. ಇನ್ನೂ ಕೆಲವೊಂದು ಮನೆಗಳ ಅನುಭವ ಮತ್ತಷ್ಟು ವಿಭಿನ್ನ.
ನಾನು ಎಂದಿನಂತೆ ಕಾಲಿಂಗ್ ಬೆಲ್ ಮಾಡಿ,
"ಸಾರ್ ನ್ಯೂಸ್ ಪೇಪರ್ ಬಿಲ್"
ಬಾಗಿಲು ತೆರೆಯಿತು. ಮನೆಯ ಯಜಮಾನ ಬಂದ. ಬಿಲ್ ಕೈಗೆ ಕೊಟ್ಟೆ. ಆತ ತಕ್ಷಣ
"ಓ ನ್ಯೂಸ್ ಪೇಪರ್ ಬಿಲ್ಲ, ಐದು ನಿಮಿಷ ಮೊದಲು ಬರಬಾರದ?"
"ಯಾಕೆ ಸಾರ್ ಏನಾಯ್ತು?"
"ನಮ್ಮೆಂಗಸ್ರು ಟಾಯ್ಲೆಟ್ಟಿಗೆ ಹೋದರಲ್ಲರೀ"
ಆ ಮಾತನ್ನು ಹೇಳುವಾಗ ಅವನ ಮುಖದಲ್ಲಿ ಯಾವ ಭಾವನೆಯು ಇರಲಿಲ್ಲ.
"ಅರೆರೆ.... ಈತನ ಹೆಂಡತಿ ಟಾಯ್ಲೆಟ್ಟಿಗೆ ಹೋಗುವುದಕ್ಕೂ ನಾನು ಪೇಪರ್ ಕಲೆಕ್ಷನ್ ಮಾಡಲಿಕ್ಕೂ ಏನು ಸಂಭಂದ?, ಹಾಗೆ ಇವನ ಹೆಂಡತಿಗೆ ಐದು ನಿಮಿಷಕ್ಕೆ ಮೊದಲು ಟಾಯ್ಲೆಟ್ಟಿಗೆ ಹೋಗುವುದಕ್ಕೆ ಪ್ರಶ್ಶರ್[ಒತ್ತಡ] ಪ್ರಾರಂಭವಾಗಿದೆಯೆಂದು ಮೊದಲೇ ತಿಳಿದು ನಾನು ಅವರ ಬಳಿ ಹೋಗಬೇಕಾಗಿತ್ತೆಂದು ನನಗೆ ಗೊತ್ತಾಗಲಿಕ್ಕೆ ನಾನೇನು ತ್ರಿಕಾಲ ಜ್ಜಾನಿಯೇ? ಬೇರೆ ಸಮಯವಾಗಿದ್ದರೇ ತಕ್ಷಣ ನಗು ಬರುತ್ತಿತ್ತೇನೋ! ಆದರೆ ಈಗ ನಗುವಿನ ಬದಲು ಅತನ ಮೇಲೆ ಸಿಟ್ಟೇ ಬಂತು.

ನನ್ನ ಹಣ ವಸೂಲಿಗೂ, ಆಕೆ ಟಾಯ್ಲೆಟ್ಟಿಗೆ ಹೋಗುವುದಕ್ಕೂ, ಈ ಮನೆ ಯಜಮಾನ ಸಂಭಂದ ಕಲ್ಪಿಸುತ್ತಿದ್ದಾನಲ್ಲ! ಇಷ್ಟಕ್ಕೂ ಅವನ ಹೆಂಡತಿ ಮಹಾರಾಣಿಯಂತೆ ಟಾಯ್ಲೆಟ್ಟಿನಲ್ಲಿರಲಿ!! ಅದರ ಸುಖ ನೆಮ್ಮದಿ ಅನುಭವಿಸಲಿ! ಆದರೆ ಇವನಿಗೇನು ದಾಡಿ ಹಣ ಕೊಡಲಿಕ್ಕೆ? ನನ್ನಲ್ಲಿ ಪ್ರಶ್ನೆ ಮೂಡಿತ್ತು.

"ಅದಕ್ಕೇನಂತೆ ಹೋಗ್ಲಿಬಿಡಿ, ನೀವೆ ದುಡ್ಡು ಕೊಡಬಹುದಲ್ಲವೇ ಸಾರ್" ಕೇಳಿದೆ.
"ಛೇ ಹಾಗೆಲ್ಲಾದರೂ ಉಂಟೇ!, ನಾನು ಆ ವಿಚಾರಕ್ಕೆ ತಲೆ ಹಾಕಲ್ಲ! ನನ್ನದೇನಿದ್ರೂ ತಿಂಗಳಿಗೊಂದು ಸಲ ಸಂಬಳ ತಂದು "ನಮ್ಮೆಂಗಸ್ರ" ಕೈಗೆ ಕೊಟ್ಟುಬಿಟ್ಟರೆ ಮುಗೀತು. ಅವರೇ ಹಾಲು, ಪೇಪರ್, ದಿನಸಿ, ಮನೆಖರ್ಚು ಎಲ್ಲಾ ನೋಡಿಕೊಳ್ಳೋದು. ನನಗ್ಯಾಕ್ರಿ ಬೇಕು ಈ ಉಸಾಬರಿ, ನೀವೊಂದು! ಎಂದು ನಕ್ಕ ತನ್ನ ಬೋಳು ತಲೆ ಸವರಿಕೊಳ್ಳುತ್ತಾ, "ಐದು ನಿಮಿಷ ಇರಿ ಬರ್ತಾರೆ" ಎಂದು ಹೇಳಿ ರೂಮಿಗೆ ಹೋಗೆಬಿಟ್ಟ.

ಮತ್ತೆ ಐದು ನಿಮಿಷ ನಿಲ್ಲಬೇಕೆ, ಅದು ತೆರೆದ ಬಾಗಿಲ ಮುಂದೆ! ಇದಕ್ಕೆ ಮೊದಲು ಹೋಗಿದ್ದ ಮನೆಯ ಮುಚ್ಚಿದ ಬಾಗಿಲ ಮುಂದೆ ಸುಮಾರು ಹೊತ್ತು ನಿಂತ ಅನುಭವವೇ ಇನ್ನೂ ಹಚ್ಚ ಹಸಿರಾಗಿರುವಾಗ ಮತ್ತೊಮ್ಮೆ ಈಗ ತೆರೆದ ಬಾಗಿಲ ಮುಂದೆ ಆತನ "ನಮ್ಮೆಂಗಸ್ರೂ' ಟಾಯ್ಲೆಟ್ಟ್ ರೂಮಿನಿಂದ ಹೊರಬರುವವರೆಗೂ ಇಲ್ಲೇ ನಿಂತಿರಬೇಕು!

ಸರಿ. ನಿಂತು ಏನು ಮಾಡಲಿ, ಮತ್ತೊಮ್ಮೆ ನಾಳೆ ಬರುತ್ತೇನೆ ಎಂದು ಹೇಳೋಣವೆಂದರೆ ಮನೆಯ ಯಜಮಾನ ಇದೆಲ್ಲಾ ಉಸಾಬರಿ ನನಗೇಕೆ ಎಂದು ಹೇಳಿ ರೂಮು ಸೇರಿಬಿಟ್ಟ. ಈಗೇನು ಮಾಡಲಿ?

ಹೋಗಲಿ ಒಂದೈದು ನಿಮಿಷ ತಾನೆ ಆಯ್ತು ಬಿಡು ಎಂದು ನನ್ನಷ್ಟಕ್ಕೆ ನಾನೇ ಸಮಾಧಾನ ಮಾಡಿಕೊಂಡು ಅವರ ಮನೆಯ ಒಳಗೆಲ್ಲಾ ನೋಡತೊಡಗಿದೆ. ಒಳಗೇನಿದೆ, ಅದೇ ಫೋಟೋ, ಸೋಫಾ, ಷೋಕೇಸ್, ಲೈಟು ಪ್ಯಾನು ಟಿ.ವಿ. ಒಂದು ಟಿಪಾಯ್, ಅದರ ಮೇಲೆ ನಾವೇ ತಂದು ಹಾಕಿದ ದಿನಪತ್ರಿಕೆ. ಇದನ್ನೇ ನಾನು ಪ್ರತಿದಿನಕ್ಕೆ ಸರಾಸರಿ ೧೫-೨೦ ಮನೆಗಳಂತೆ ಒಂದು ತಿಂಗಳಲ್ಲಿ ಕಡಿಮೆಯೆಂದರೂ ೬೦೦ ಮನೆಗಳಂತೆ, ಅಜಮಾಸು ೧೫ ವರ್ಷಗಳಿಂದ ನೋಡುತ್ತಾ ಬಂದಿರುವ ನನಗೇ ಮತ್ತೇ ಅದನ್ನೇ ನೋಡಬೇಕಾದ ಕರ್ಮಕಾಂಡಕ್ಕೆ ನನ್ನನ್ನೇ ನಾನು ಬೈದುಕೊಂಡರೂ, ನನಗಿಂತ ದೊಡ್ಡದಾಗಿ ೧೦೦೦ ಸಾವಿರ ಮನೆಗಳು, ೧೫೦೦ ಮನೆಗಳಷ್ಟು ಗ್ರಾಹಕರನ್ನು ಹೊಂದಿರುವ ವಿತರಕರನ್ನು ನೆನೆದು ನಾನೆ ಪರ್ವಾಗಿಲ್ಲವೆಂದು ಸಮಾಧಾನ ಮಾಡಿಕೊಳ್ಳಬೇಕಾಯಿತು.

ಇದರ ಮದ್ಯೆ ಬೇಡ ಬೇಡವೆಂದರೂ ಈ ಮನೆಯಾಕೆಯ ಟಾಯ್ಲೆಟ್ಟಿನ ವಿಚಾರ ಪದೇ ಪದೇ ನೆನಪಾಗಿ ಅಲ್ಲಿ ನಿಂತ ೧೦-೧೫ ನಿಮಿಷಗಳ ಕಾಲ ನಾನು ಅನುಭವಿಸಿದ ಯಾತನೆ ಬಹುದಿನದವರೆಗೆ ಕಾಡುತ್ತಿತ್ತು.

ಇಂಥ ಸಾವಿರಾರೂ ಅನುಭವಗಳು ನಾನು ಈ ವೃತ್ತಿಗೆ ಬಂದಾಗಿನಿಂದ ಸಿಗುತ್ತವೆ. ಇದರಲ್ಲಿ ನನಗೆ ಗೊತ್ತಾದ ವ್ಯತ್ಯಾಸವೆಂದರೆ ಆ ದಿನಗಳಿಗೂ ಇಂದಿನ ಈ ದಿನಗಳಿಗೂ ನಡುವೆ ಈಗ ಪ್ರತಿಯೊಬ್ಬರ ಕೈಯಲ್ಲೂ ಇರುವ ಮೊಬೈಲ್ ಫೋನ್. ಆಗ ಇದೇ ರೀತಿ ನಮ್ಮ ಕೆಲಸ ನಡೆಯುತ್ತಿತ್ತು. ಆಗಿನ ಕಾಲಕ್ಕೆ ರೂಪಾಯಿ ಬೆಲೆ ಕಡಿಮೆ ಇದಂತೆ ಅದಕ್ಕೆ ತಕ್ಕಂತೆ ದಿನಪತ್ರಿಕೆಗಳ ಬೆಲೆಯೂ ಕಡಿಮೆ ಇರುತ್ತಿತ್ತು.

ಮತ್ತೊಂದು ಅನುಕೂಲವೆಂದರೆ ಜನರ ಜೀವನ ಮಟ್ಟ ಕೆಳಗಿದ್ದುದರಿಂದ ನಮ್ಮ ವೃತ್ತಿಯಲ್ಲಿ ಹುಡುಗರು ದಾರಾಳವಾಗಿ ಸಿಗುತ್ತಿದ್ದರು. ಆಗ ಅವರಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಪ್ರಮಾಣಿಕತೆಯಿತ್ತು. ಈಗಿನಷ್ಟು ಅನುಕೂಲಗಳಿಲ್ಲದಿದ್ದರೂ ಇರುವುದರಲ್ಲೇ ಅವರು ತೃಪ್ತಿ ಹೊಂದಿರುತ್ತಿರುದ್ದರು. ನಮ್ಮ ಹಾಗೂ ಗ್ರಾಹಕರ ನಡುವಿನ ಭಾಂಧವ್ಯಗಳು ಚೆನ್ನಾಗೆ ಇದ್ದವು.

ನಮಗೂ ಗ್ರಾಹಕರ ನಡುವೆ ಸಂವಾದಗಳಾಗಲಿ, ಪ್ರೀತಿ ವಿಶ್ವಾಸದ ಮಾತುಗಳಾಗಲಿ, ಜಿಪುಣತನದ ಲೆಕ್ಕಚಾರವಾಗಲಿ, ಇದ್ದ ಆತ್ಮೀಯತೆ, ತಿರಸ್ಕಾರ, ಕೃತಜ್ಜತೆ, ಬೇಸರ, ಸಿಟ್ಟುಗಳಾಗಲಿ ನಡೆಯುತ್ತಿದ್ದುದ್ದು ತಿಂಗಳಿಗೊಮ್ಮೆ ಮಾತ್ರ.

ಆಗ ಬಂತು ನೋಡಿ ಮೋಬೈಲು. ಇದು ನಮ್ಮ ಹಾಗೂ ಗ್ರಾಹಕರ ನಡುವೆ ತಂದಿಟ್ಟ ಅನುಕೂಲ, ಆನಾನುಕೂಲ, ಆತ್ಮೀಯತೆ, ಅತಂಕ, ತಿರಸ್ಕಾರ, ಪರಸ್ಪರ ತಪ್ಪು ತಿಳಿವಳಿಕೆಗಳು, ಜಗಳ ದೂರುಗಳು ಒಂದೇ ಎರಡೇ, ಸಾವಿರಾರು.

ಆಗ ತಾನೆ ಹೊಸದಾಗಿ ಮೊಬೈಲ್ ಫೋನು ತಗೊಂಡಿದ್ದೆ. ನಾನು ಕೊಳ್ಳುವುದಕ್ಕೂ ಮೊದಲೇ ಈ ವಸ್ತು ಬಂದಿತ್ತಾದರೂ ನನಗೆ ಹೊಸದಾಗಿ ಕೊಂಡಾಗ ಏನೋ ಸಂಭ್ರಮ. ಎಲ್ಲರಿಗೂ ಇದ್ದಂತೆ. ಸಿಕ್ಕ ಸಿಕ್ಕ ಗೆಳೆಯರಿಗೆಲ್ಲಾ ನನ್ನ ಫೋನ್ ನಂಬರ್ ಕೊಟ್ಟು ಮಾತಾಡುವುದೇ ಒಂದು ಆನಂದ. ಅದು ರಿಂಗಾಗುತ್ತಿದ್ದಂತೆ ನನ್ನೊಳಗೆ ಏನೋ ಒಂದು ವರ್ಣಿಸಲಾಗದ ಕುತೂಹಲ ಇತ್ತು. ಆಗ ಒಳಬರುವ ಕರೆಗಳಿಗೂ ಹಣ ಕಟ್ಟಬೇಕಿದ್ದರೂ ಖುಷಿಯಿಂದ ಮಾತಾಡುತ್ತಿದ್ದೆ. ಕೆಲವೇ ದಿನಗಳ ನಂತರ ಮೊಬೈಲ್ ಫೋನಿನ ಒಳಬರುವ ಕರೆಗಳಿಗೆ ಹಣ ಕಟ್ಟುವಂತಿಲ್ಲವೆಂದಾಗ ನನಗೆ ಆಕಾಶ ಕೈಗೆ ಎಟುಕಿದಷ್ಟು ಆನಂದ.

ಪ್ರತಿ ತಿಂಗಳು ನಾವು ಹಣ ವಸೂಲಿಗೆ ಹೋದಾಗ ಗ್ರಾಹಕರು, ನಮ್ಮ ಹುಡುಗರು ಮಾಡುವ ತಪ್ಪುಗಳ ಬಗ್ಗೆ, ಪೇಪರ್ ತಪ್ಪಿಸುವ ಬಗ್ಗೆ ಪುಟಗಟ್ಟಲೆ ನಮಗೆ ಹೇಳುತ್ತಿದ್ದರು. ಬಹುಶಃ ಒಂದು ತಿಂಗಳಿಗಾಗುವಷ್ಟು ದೂರುಗಳನ್ನು ಸೇರಿಸಿಡುತ್ತಿದ್ದರೇನೋ. ಇದನ್ನೆಲ್ಲಾ ತಪ್ಪಿಸಲು ನಮಗೆ ಏನಾದರೂ ಮಾಡಬೇಕೆನ್ನಿಸುವ ಸಮಯದಲ್ಲಿ ಸಿಕ್ಕಿತಲ್ಲ ನಮಗೆ ಮೊಬೈಲು ಫೋನಿನ ಉಚಿತ ಒಳಬರುವ ಕರೆಗಳು!

ನಮ್ಮ ಎಲ್ಲಾ ಗ್ರಾಹಕರಿಗೂ ನನ್ನ ಮೊಬೈಲ್ ಫೋನ್ ನಂಬರ್ ಕೊಟ್ಟುಬಿಡೋಣ. ನಮ್ಮ ಹುಡುಗರು ಮಾಡುವ ತಪ್ಪುಗಳಾದ ಮಳೆಬಂದಾಗ ಪೇಪರನ್ನು ನೀರಲ್ಲಿ ಹಾಕಿಬಿಡುವುದು, ಸಜ್ಜೆ ಮೇಲೆ ಬೀಳಿಸುವುದು, ಹರಿದು ಹಾಕಿದ ಪೇಪರ್ ಹಾಕಿಬಿಡುವುದು, ಸಪ್ಲಿಮೆಂಟರಿ ತಪ್ಪಿಸುವುದು, ತಡವಾಇ ಹಾಕುವುದು, ಇವುಗಳನ್ನೆಲ್ಲಾ ತಕ್ಷಣಕ್ಕೆ ನಮ್ಮ ಟಿ.ವಿ. ನ್ಯೂಸ್ ನಂತೆ ಲೈವ್ ಕವರೇಜ್ ರೀತಿ, ಅವರು ಫೋನ್ ಮಾಡಿದ ತಕ್ಷಣ ಹೋಗಿ ಸರಿಪಡಿಸಿಬಿಡಬಹುದು ಎಂದು ಖುಷಿಯಾಯಿತು.

ಆಗಲೇ ನಮ್ಮ ಹಣ ವಸೂಲಿ ರಸೀತಿಯ ಮೇಲೆಲ್ಲಾ ನನ್ನ ಮೊಬೈಲ್ ಫೋನ್ ನಂಬರು ರಾರಾಜಿಸುತ್ತಿತ್ತು. ಈಗ ನನ್ನ ಗ್ರಾಹಕರು ಏನೇ ತೊಂದರೆಗಳಿಗೂ ತಿಂಗಳುಗಳವರೆಗೆ ಕಾಯುವಂತಿಲ್ಲ. ಈ ಕ್ಷಣ ಕರೆ ಮಾಡಿದರೆ ಅರ್ದ ಗಂಟೆ, ಒಂದು ಗಂಟೆ ಹೆಚ್ಚೆಂದರೆ ಅವತ್ತೇ ಪರಿಹರಿಸಬಲ್ಲೆನು ಎನ್ನುವ ಆತ್ಮವಿಶ್ವಾಸ ಮೂಡಿತ್ತು.

ಪ್ರಾರಂಭದ ಒಂದೆರಡು ವರ್ಷಗಳು ಇದು ತುಂಬಾ ಚೆನ್ನಾಗಿತ್ತು. ಇದು ಎಷ್ಟು ನೇರ ಪರಿಣಾಮ ಬೀರಿತ್ತೆಂದರೇ ನಮ್ಮ ಹಾಗೂ ಗ್ರಾಹಕರ ನಡುವೆ ಅತ್ಯುತ್ತಮ ಭಾಂಧವ್ಯ ಬೆಳೆದಿತ್ತು. ನಮ್ಮ ಸೇವೆಗಳಿಗೂ ಅವರು ಸಂತೃಪ್ತಗೊಂಡಿದ್ದರು. ಹೊಸದಾದ ತಂತ್ರಜ್ಜಾನ ಸಿಕ್ಕಾಗ ಆಗುವ ಬೆಳವಣಿಗೆಗೆ ಅದ್ಬುತವೆನಿಸಿದರೂ, ನಂತರ ನಿದಾನವಾಗಿ ಅದರ ಆಡ್ಡ ಪರಿಣಾಮ ಆದಾಗ ಏನೇನು ಆನಾಹುತಗಳು ಆಗುತ್ತವೆ ಎನ್ನುವ ಸಾವಿರಾರು ಉದಾಹರಣೆಗಳು ಇರುವಂತೆ ಈ ಮೊಬೈಲು ಕೂಡ ನಮ್ಮ ಹಾಗೂ ಗ್ರಾಹಕರ ನಡುವೆ ನಂತರದ ದಿನಗಳಲ್ಲಿ ಆಡ್ಡ ಪರಿಣಾಮ ಬೀರಲು ಪ್ರಾರಂಭಿಸಿದ್ದವು.

ಒಂದು ದಿನ ಮದ್ಯಾಹ್ನ ಊಟ ಮುಗಿಸಿ ಆರಾಮವಾಗಿ ಅಂದಿನ ಪತ್ರಿಕೆ ಓದುತ್ತಿದ್ದೆ. ಸಮಯ ೩ ಗಂಟೆಯಾಗಿರಬಹುದು. ಆಗ ನನ್ನ ಮೊಬೈಲು ರಿಂಗ್ ಆಯಿತು. ನಾನು
"ಹಲೋ ಯಾರು?" ಎಂದೆ.
'ನಾನು ಜತಿನ್ ಷಾ"
ಹೇಳಿ ಏನಾಗಬೇಕು"
"ನಮ್ಮ ಮನೆಗೆ ಇವತ್ತು ನ್ಯೂಸ್ ಪೇಪರ್ ಬಂದಿಲ್ಲವಲ್ಲರೀ?"
ಎಲ್ಲಿ ಸಾರ್ ನಿಮ್ಮ ಮನೆ"
ಏನ್ರೀ ನಮ್ಮ ಮನೆ ಗೊತ್ತಿಲ್ವಾ?
"ಇಲ್ಲಾ ಸಾರ್, ನನಗೆ ಹೇಗೆ ಗೊತ್ತಾಗುತ್ತೆ ಹೇಳಿ, ನನ್ನ ೬೦೦ ಜನ ಕಷ್ಟಮರುಗಳಲ್ಲಿ ನಿಮ್ಮದು ಯಾವುದು ಅಂತ ತಿಳಿದುಕೊಳ್ಳಲಿ"
ಆತನಿಗೆ ನನ್ನ ತೊಂದರೆ ಆರ್ಥವಾಯಿತೆಂದು ತಿಳಿಯುತ್ತದ್ದೆ.
"ನಮ್ಮ ಮನೆ ನಂ. ೨೨/ಇ, ೪ ನೇ ಕ್ರಾಸ್, ಕುಮಾರ ಪಾರ್ಕ ವೆಸ್ಟ್ ಎಂದು ಹೇಳಿದ.
ಅವನು ನನ್ನನ್ನು ಕಂಪ್ಯೂಟರ್ ಅಂತಲೋ, ಅಥವಾ ಡಾಟಾ ಸ್ಟೋರೇಜೆ ಬಾಕ್ಸ್ ಎಂದೋ, ಇಲ್ಲಾ ಆತನೊಬ್ಬನೇ ನನಗೇ ಕಷ್ಟಮರು, ಬೇರಾರು ಇಲ್ಲ, ಈ ರೀತಿ ವಿಳಾಸ ಹೇಳಿದ ತಕ್ಷಣ ನನಗೆ ಗೊತ್ತಾಗಿಬಿಡುತ್ತದೆ ಎಂದು ಅವನಿಗೆ ಅನ್ನಿಸಿರಬೇಕು.
ನನಗಿನ್ನೂ ಗೊತ್ತಾಗಿಲ್ಲ ಸಾರ್, ನಿಮ್ಮ ಮನೆಯ ಹತ್ತಿರ ಯಾವುದಾದ್ರು ಲ್ಯಾಂಡ್ ಮಾರ್ಕ್ ಹೇಳಿದ್ರೆ ಗೊತ್ತಾಗುತ್ತೆ.;
ನಾವು ನಮ್ಮ ಗಿರಾಕಿಗಳ ಪ್ರತಿಯೊಂದು ಮನೆಯನ್ನು ಅಕ್ಕ-ಪಕ್ಕ ಎದುರಿಗೆ, ಇಲ್ಲವೇ ಮೇಲೆ-ಕೆಳಗೆ, ಅಥವಾ ಯಾವುದಾದರೂ ಆಂಗಡಿ ಕಛೇರಿ, ಬೋರ್ ವೆಲ್, ಮನೆಗೆ ಹೊಡೆದಿರುವ ಬಣ್ಣ ಹೀಗೆ ಯಾವುದಾದರೂ ಒಂದು ಆದಾರವಾಗಿಟ್ಟುಕೊಂಡು ನಾನಾಗಲಿ, ನನ್ನ ಇತರ ಗೆಳೆಯರಾಗಲಿ ಅಥವ ನಮ್ಮ ಬೀಟ್ ಹುಡುಗರಾಗಲಿ ಮನೆಗಳನ್ನು ಗುರುತಿಟ್ಟುಕೊಳ್ಳುತ್ತೇವೆ.
"ನೋಡ್ರಿ ನಮ್ಮ ಮನೆ ಪಕ್ಕ ಸತ್ಯಂ ಕಂಪ್ಯೂಟರ್ಸ್ ಅಂತ ಆಫೀಸಿದೆಯಲ್ಲಾ ಅದರ ಬಲಕ್ಕಿರೋದೆ ನಮ್ಮ ಮನೆ.
ಓಹ್ ಆ ಮನೇನಾ ಹೇಳಿ ಸಾರ್ ಏನಾಗಬೇಕು?
ನಮ್ಮನೆಗೆ ಇವತ್ತು ಪೇಪರು ಹಾಕಿಲ್ವಲ್ಲ ಯಾಕೆ?
ಇಲ್ಲಾ ಸಾರ್ ನಾವು ಸರಿಯಾಗಿ ಕಳುಹಿಸಿರುತ್ತೇವೆ. ಬಾಲ್ಕನಿಯಲ್ಲಿರುವ ಮೂಲೆಯಲ್ಲೇನಾದ್ರೂ ಸೇರಿಕೊಂಡಿದೆಯಾ ನೋಡಿ ಸಾರ್" [ಕೆಲವೊಮ್ಮೆ ನಮ್ಮ ಹುಡುಗರು ಮೇಲೆ ಎಸೆದ ಪೇಪರುಗಳು ಈ ರೀತಿ ಬಾಲ್ಕನಿಯ ಮೂಲೆಯಲ್ಲಿ ಹೋಗಿ ಬಚ್ಚಿಟ್ಟುಕೊಂಡಿರುತ್ತವೆ. ಎಷ್ಟೋ ಕಷ್ಟಮರುಗಳು ಪೇಪರ್ ಬಂದಿಲ್ಲ ಎಂದು ಹೇಳಿದ ದಿನ ಬಾಲ್ಕನಿಗೆ ಹೋಗಿ ನೋಡಿರುವುದಿಲ್ಲ. ಸುಲಭವಾಗಿ ಫೋನು ಕೈಗೆ ಸಿಗುತ್ತದಲ್ಲ ಎಂದು ತಕ್ಷಣ ನಮಗೆ ಫೋನು ಮಾಡುತ್ತಾರೆ. ನಾವು ಈ ರೀತಿ ಹೇಳಿದಾಗ ಬಾಲ್ಕನಿಗೆ ಹೋಗಿ ನೋಡಿ ಅಲ್ಲಿದ್ದ ಪೇಪರ್ ಹುಡುಕಿ "ಸಿಕ್ಕಿತು ಸಾರಿ" ಎನ್ನುತ್ತಾರೆ]
ಎಲ್ಲಾ ನೋಡಿ ಆಯ್ತು ರ್ರೀ ಇವತ್ತು ಪೇಪರ್ ಬಂದಿಲ್ಲ".
ಸರಿ ಸಾರ್ ನಾನು ನಾಳೆ ಬೆಳಿಗ್ಗೆ ನಮ್ಮ ಹುಡುಗನಿಗೆ ಕೇಳ್ತೀನಿ. ಅವನಿಗೆ ಏನೋ ಕನ್ ಪ್ಯೂಸ್ ಆಗಿರಬೇಕು, ವಿಚಾರಿಸಿ ನಾಳೆ ಸರಿಯಾಗಿ ಪೇಪರ್ ಹಾಕಲಿಕ್ಕೆ ಹೇಳ್ತೀನಿ.
"ಆದ್ರೆ ನನಗೆ ಇವಾಗ ಪೇಪರ್ ಬೇಕಲ್ಲ?"
"ನಿಮಗೆ ಪೇಪರ್ ಬೇಕು ಒಪ್ಪಿಕೋತೀನಿ, ಆದ್ರೆ ಈಗ ಮೂರು ಗಂಟೆ ಆಗಿದೆ. ಈಗ ಕೇಳಿದ್ರೆ ಹೇಗೆ ಸಾರ್?"
"ಅರೆ ನಾವು ಪೇಪರ್ ನೋಡೋದು ಇವಾಗ್ಲೆ ರೀ, ನಮಗೆ ಇವಾಗ ಪೇಪರ್ ಬೇಕಲ್ವ?"
ಇಲ್ನೋಡಿ ಸಾರ್, ನಮ್ಮ ಈ ಪೇಪರ್ ಕೆಲಸ ಬೆಳಿಗ್ಗೆ ಮುಗಿದುಹೋಗುತ್ತೆ. ಹೆಚ್ಚೆಂದರೆ ನಮ್ಮ ಹುಡುಗರು ೭ ಗಂಟೆ ಅಥವಾ ೭-೩೦ರ ಒಳಗೆ ತಮ್ಮ ಕೆಲಸ ಮುಗಿಸಿ ಹೋಗಿಬಿಡುತ್ತಾರೆ. ಆಷ್ಟಾದರೂ ನಾನು ೮ ಗಂಟೆಯವರೆಗೆ ಇದ್ದು ಯಾರಿಗಾದ್ರು ತಪ್ಪಿಸಿದ್ರೆ ಹೋಗಿ ಕೊಟ್ಟುಬಿಟ್ಟು ಮನೆಗೆ ಹೋಗಿಬಿಡ್ತೀನಿ"
ಅದೆಲ್ಲಾ ನನಗೆ ಗೊತ್ತಿಲ್ಲಾರೀ, ನನಗೆ ಈಗ ಪೇಪರ್ ಬೇಕಲ್ವ್?"
ಇಷ್ಟುಹೊತ್ತಿಗೆಲ್ಲಾ ನಾವು ಪೇಪರ್ ಕೊಡೋಕ್ಕಾಗಲ್ಲ. ಈಗ ಕೊಡೋದು ಏನಿದ್ರೂ ಸಂಜೆ ಪತ್ರಿಕೆ. ನಾನು ಸಂಜೆ ಪತ್ರಿಕೆ ಸಪ್ಲೇ ಮಾಡೋಲ್ಲ ಸಾರ್.
"ಏನ್ರೀ ನೀವು ಹೀಗೆ ಹೇಳ್ತೀರಿ, ನಿಮ್ಮ ಹುಡುಗರು ತಪ್ಪಿಸಿದ್ರೆ ನೀವು ತಂದುಕೊಡೋದು ನಿಮ್ಮ ಜವಬ್ದಾರಿ ತಾನೆ!"
"ಖಂಡಿತ ನಿಮ್ಮ ಮಾತು ಒಪ್ಪಿಕೋತೀನಿ, ನೀವೆ ಹೇಳಿದ ಹಾಗೆ ನಮ್ಮ ಜವಾಬ್ದಾರಿ ಬೆಳಿಗ್ಗೆ ಮಾತ್ರ, ನೀವು ಬೆಳಿಗ್ಗೆ ಫೋನ್ ಮಾಡಿದ್ರೆ ನಾನೇ ತಂದು ಕೊಡುತಿದ್ದೆ".
ಆ ಕಡೆಯಿಂದ ಆತ ಒಪ್ಪಿಕೊಳ್ಳುವಂತೆ ಕಾಣಲಿಲ್ಲ. ಅವನು ಪಟ್ಟು ಬಿಡದೇ ನನಗೇ ನನಗೆ ಸಿಟ್ಟು ಬಂತು.
"ನನಗೆ ಈಗ ತಂದುಕೊಡೋಕ್ಕೆ ಆಗೋಲ್ಲ"
ಈ ಮಾತನ್ನು ಕೇಳಿ ಅವನ ಇಗೋಗೆ ಪೆಟ್ಟುಬಿದ್ದಂತಾಯಿತೇನೋ ಅವನು ಮತ್ತಷ್ಟು ಹಠದಿಂದ,
"ಯಾಕ್ರೀ ತಂದುಕೊಡೋಲ್ಲ? ನಿಮ್ಮ ಡ್ಯೂಟಿ ಅದು, ತಂದುಕೊಡಬೇಕು".
ಇದುವರೆಗೂ ತಾಳ್ಮೆಯಿಂದ ಮಾತಾಡಿದ್ದ ನನಗೂ ಕೋಪ ಬಂತು. ನನ್ನಲ್ಲೂ ಆ ಕ್ಷಣದಲ್ಲಿ ಇಗೋ ಸೆಟೆದುನಿಂತಿತೆಂದು ಕಾಣುತ್ತದೆ.[ನಾನು ಸುಮಾರು ೧೫ ವರ್ಷಗಳಿಂದ ಏಜೆಂಟ್ ಆಗಿ ಇಂತಹ ಗಿರಾಕಿಗಳನ್ನು ನೋಡಿದ್ದರಿಂದ ಹಾಗೂ ಇದರಲ್ಲೇ ನಾನು ಚೆನ್ನಾಗಿ ಅನುಕೂಲಕರ ಜೀವನ ಮಾಡುತ್ತಿದ್ದುದರಿಂದ ಹಾಗೂ ಇಂತ ಒಬ್ಬ ಗಿರಾಕಿ ಇಲ್ಲದಿದ್ದರೆ ನನಗೇ ಬೇಡುವ ಪರಿಸ್ಥಿತಿ ಬರುವುದಿಲ್ಲವೆನಿಸಿ, ನನ್ನಲ್ಲೂ ಸ್ವಲ್ಪ ಇಗೋ ಬೆಳಿದಿತ್ತು].

ಇಲ್ಲಾ ತಂದುಕೊಡೋದಿಕ್ಕೆ ಆಗೊಲ್ಲ. ಇದೇ ರೀತಿ ಬ್ಯಾಂಕಿನಲ್ಲೋ, ಇನ್ಯಾವುದೋ ಆಫೀಸಿಗೆ ಹೋಗಿ, ಅವರ ಡ್ಯೂಟಿ ಅವರ್ ಮುಗಿದ ಮೇಲೆ ನಮ್ಮ ಕೆಲಸ ಮಾಡಿಕೊಡಿ ಅಂತ ಕೇಳಿನೋಡಿ ಅವರು ಮಾಡಿ ಕೊಡ್ತಾರ?"

ನೀವು ಬ್ಯಾಂಕ್, ಆಫೀಸೆಲ್ಲಾ ಹೇಳಬ್ಯಾಡ್ರೀ.. ಅದಕ್ಕೂ ಇದಕ್ಕೂ ಸಂಭಂಧವಿಲ್ಲ. ಅವರ ಮಟ್ಟಕ್ಕೆ ಹೋಲಿಸಬೇಡ್ರೀ..

ಹಾಗಾದರೆ ಅವರೆಲ್ಲಾ ಮನುಷ್ಯರು, ನಾವೆಲ್ಲಾ ಗುಲಾಮರು ಅಂತ ಅಂದುಕೊಂಡಿದ್ದೀರಿ ಅನಿಸುತ್ತೆ". ಆವರು ಎ.ಸಿ.ರೂಮಿನಲ್ಲಿ ಕೂತು ಟೈ, ಸೂಟು-ಬೂಟು ಹಾಕಿಕೊಂಡು ಸಾವಿರಗಟ್ಟಲೇ ಸಂಬಳ ಎಣಿಸುತ್ತಾರೆ. ಅದಕ್ಕೆ ಅವರ ಬಗ್ಗೆ ನಿಮಗೆ ಗೌರವ. ನಾವು ಕೇವಲ ದಿನಪತ್ರಿಕೆ ಕೋಡೋರು ಅಂತ ನಮ್ಮ ಬಗ್ಗೆ ತಾತ್ಸಾರ".
"ಆಗೇನಿಲ್ಲಪ್ಪಾ".

ಮತ್ತೇನ್ ಸಾರ್, ಅವರೂ ಊಟ ತಿಂಡಿ ಮಾಡ್ತಾರೆ, ನಾವೂ ಮಾಡ್ತೀವಿ. ಅವರಷ್ಟೇ ಸ್ವಾಭಿಮಾನ ನಮಗೂ ಇದೆ. ಇದನ್ನು ನೀವು ತಿಳಿಯದೆ, ಬೆಳಗಿನ ಪೇಪರನ್ನು ನೀವು ಮದ್ಯಾಹ್ನ ಮೂರು ಗಂಟೆಗೆ ನೋಡಿಕೊಂಡಿದ್ದು ನಿಮ್ಮ ಪ್ರಾಬ್ಲಮ್ಮು, ಅದು ಅಲ್ಲದೇ ಈಗ ತಂದು ಕೊಡಿ ಅಂದ್ರೆ, ನಿಮಗೆ ನಮ್ಮ ಮೇಲೆ ಗುಲಾಮಗಿರಿಯ ಭಾವನೆಯಲ್ಲದೇ ಮತ್ತೇನು ಬರಲಿಕ್ಕೆ ಸಾಧ್ಯ ಹೇಳಿ ಸಾರ್?"

ನನ್ನ ಮಾತಿಗೆ ಆತನಲ್ಲಿ ಉತ್ತರವಿರಲಿಲ್ಲ. ಕೊನೆಗೆ
"ಕೊನೆಗೆ ಹೀಗೇನು ಮಾಡೋಣ,"
"ಏನಿ ಮಾಡಬೇಕಿಲ್ಲ ಸಾರ್, ನಿಮಗೆ ಇವತ್ತಿನ ಪೇಪರ್ ಬಂದಿಲ್ಲವಲ್ಲ. ಮುಂದಿನ ತಿಂಗಳು ದುಡ್ಡು ಕೊಡುವಾಗ ಅದರ ಹಣ ಮುರಿದು ಕೊಡಿ. ನಿಮಗೆ ಆಷ್ಟಕ್ಕೂ ಈಗ ಪೇಪರ್ ಬೇಕೆಬೇಕು ಅನಿಸಿದ್ರೆ, ನಿಮ್ಮ ರಸ್ತೆಯ ಬಲ ಮೂಲೆ ಅಂಗಡಿಯಲ್ಲಿ ಎಲ್ಲಾ ಪೇಪರುಗಳು ಸಿಕ್ಕುತ್ತೆ. ಹೋಗಿ ತಗೋಬಹುದಲ್ವ ಸಾರ್"

"ಸರಿಯಪ್ಪ ಮತ್ತೆ ಹೀಗೆ ಮಾಡಬೇಡ ಅಂತ ನಿಮ್ಮ ಹುಡುಗನಿಗೆ ಹೇಳು. ಮತ್ತೆ ಹೀಗೆ ಆದ್ರೆ ನಾನು ಪೇಪರ್ ನಿಲ್ಲಿಸಿಬಿಡ್ತೀನಿ. ಆಯ್ತಾ!
ಆಯ್ತು ಸಾರ್.

ಈ ಫೋನ್ ಸಂಭಾಷಣೆ ಸುಮಾರು ೧೫ ನಿಮಿಷದವರೆಗೆ ಸಾಗಿತ್ತು. ಇಷ್ಟು ಮಾತಾಡಲು ನಿಮಿಷಕ್ಕೆ ಒಂದು ರೂಪಾಯಿಯಂತೆ ೧೫ ರೂಪಾಯಿ ಫೋನಿಗೆ ಖರ್ಚು ಮಾಡುವ ಬದಲು ಎದುರಿನ ಆಂಗಡಿಯಲ್ಲಿ ೩ ರೂಪಾಯಿ ಕೊಟ್ಟು ಅವನ ದಿನಪತ್ರಿಕೆ ತೊಗೊಬಹುದಿತ್ತಲ್ಲ ಎನಿಸಿತ್ತು.

ಇದು ಸುಲಭವಾಗಿ ಕೈಗೆ ಸಿಕ್ಕ ಮೊಬೈಲಿನಲ್ಲಿ ನಡೆದ ಸಂಭಾಷಣೆ. ಕೆಲವು ಕಷ್ಟಮರುಗಳು ರಾತ್ರಿ ೮ ಗಂಟೆಗೆ ಇವತ್ತಿನ ಪೇಪರ್ ಬಂದಿಲ್ಲವೆಂದು ಹೀಗೆ ಸುಮಾರು ಹೊತ್ತು ಮಾತಾಡಿದವರಿದ್ದಾರೆ. ಆಗ ತಿಂಗಳಿಗೊಮ್ಮೆ ನನ್ನ ಗಿರಾಕಿಗಳ ನಡುವೆ ಮುಖಾಮುಖಿ ಸಂಭಾಷಣೆ ನಡೆದರೆ, ಈಗ ಈ ಮೊಬೈಲಿನಿಂದಾಗಿ ಪ್ರತಿದಿನ ಇಂಥ ಸಂಭಾಷಣೆಗಳು ನಡೆದು ಕೊಲವೊಮ್ಮೆ ಈ ಉದ್ಯೋಗದ ಮೇಲು ಬೇಸರವಾಗಿದ್ದಿದೆ.

ಈ ಮೊಬೈಲಿನಿಂದ ಇಷ್ಟೆಲ್ಲಾ ಅಡ್ಡ ಪರಿಣಾಮ ಎಂದು ಸ್ವಿಚ್-ಆಪ್ ಮಾಡಿದರೆ, ನನಗೆ ಅದರಿಂದ ಬೇರೆ ರೀತಿಯ ನಷ್ಟವಾಗುವ ಸಾಧ್ಯತೆಗಳುಂಟು. ನಾನು ದಿನಪತ್ರಿಕೆ ಉದ್ಯೋಗವನ್ನು ಬೆಳಗಿನ ಹೊತ್ತು ಮುಗಿಸಿದ ಮೇಲೆ ಉಳಿದ ಸಮಯದಲ್ಲಿ ಫೋಟೋಗ್ರಫಿ ಮಾಡುತ್ತೇನೆ.

ನಾನು ಯಾವುದೇ ಸ್ಟುಡಿಯೋ ಇಟ್ಟಿಲ್ಲವಾದ್ದರಿಂದ ನನಗೆ ನನ್ನ ಗೆಳೆಯರು, ಸಂಭಂದಿಕರು, ಗಿರಾಕಿಗಳಿಂದ ಮದುವೆ, ಮುಂಜಿ ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೂ ನನ್ನ ಮೊಬೈಲಿಗೆ ಫೋನ್ ಮಾಡಿ ಬುಕ್ ಮಾಡುತ್ತಾರೆ. ನಾನು ಫೋನ್ ಸ್ವಿಚ್-ಆಪ್ ಮಾಡಿದರೆ ಅವರಿಂದ ಸಿಗುವ ಫೋಟೋಗ್ರಫಿ ಕೆಲಸ ಬೇರೆಯವರ ಪಾಲಾಗಿಬಿಡಬಹುದು. ಆ ಕಾರಣದಿಂದಾಗಿ ನಾನೆಂದು ಮೊಬೈಲು ಸ್ವಿಚ್-ಆಪ್ ಮಾಡುವುದಿಲ್ಲ.

ಇಷ್ಟೆಲ್ಲಾ ಅನಾನುಕೂಲ ನಮ್ಮ ವೃತ್ತಿಯಲ್ಲಿ ಮೊಬೈಲಿನಿಂದ ಆಗಿದ್ದರೂ, ಕೆಲವು ಅನುಕೂಲಗಳಂತೂ ಇದ್ದೇ ಇದೆ. ಕೆಲವು ಗಿರಾಕಿಗಳಿಗೆ ನಮ್ಮ ಬಗ್ಗೆ ಆದೆಷ್ಟು ಗೌರವವೆಂದರೇ ಅವರೇನಾದರೂ ಮನೆ ಖಾಳಿ ಮಾಡಿ ಹೋಗುವಾಗ ಅಥವಾ ಬದಲಿಸುವಾಗ, ನಮಗೆ ಕರೆ ಮಾಡಿ ವಿಷಯ ತಿಳಿಸಿ ಹಣ ತೆಗೆದುಕೊಂಡು ಹೋಗಲು ಹೇಳುತ್ತಾರೆ. ಇದರಿಂದಾಗಿ ನಾವು ಅಲ್ಲಿಯವರೆಗೆ ಹಾಕಿದ ದಿನಪತ್ರಿಕೆಯ ಹಣ ನಷ್ಟವಾಗದೇ ನಮಗೆ ತಲುಪುತ್ತದೆ. ಮತ್ತು ಅದೇ ಗಿರಾಕಿಗೆ ಹೊಸ ವಿಳಾಸಕ್ಕೂ ನಾವೇ ಕೊಡುವಂತಾದರೆ ಆ ಗ್ರಾಹಕ ನಮ್ಮ ಕೈ ತಪ್ಪಿಹೋಗದಂತಾಗುತ್ತದೆ.

ಕೆಲವೊಮ್ಮೆ ನಾನು ಊರಿಗೆ ಹೋದರೆ ಅಥವ ಇನ್ನಿತರ ಕೆಲಸದ ಮೇರೆಗೆ ಬೆಂಗಳೂರು ಬಿಟ್ಟು ದೂರ ಹೋಗಿದ್ದರೂ ನನ್ನ ಸಹಾಯಕ ನನ್ನ ಮೊಬೈಲಿಗೆ ಮಿಸ್ಡ್ ಕಾಲ್ ಮಾಡುತ್ತಾರೆ. ಕಾರಣ ಅವರ ಫೋನಿನಲ್ಲಿ ಕರೆನ್ಸಿ ಹೆಚ್ಚು ಇರುವುದಿಲ್ಲ. ಮತ್ತೆ ನಾನೇ ಅವರಿಗೆ ಫೋನ್ ಮಾಡಿ ಯಾರ್ಯಾರು ಹುಡುಗರು ಅವತ್ತು ಬಂದಿಲ್ಲವೆಂದು ತಿಳೀದು ಅವರಿಗೆಲ್ಲಾ ಫೋನ್ ಮಾಡಿ ಎಚ್ಚರಗೊಳಿಸಿ ಪತ್ರಿಕೆ ಹಂಚುವ ಕೆಲಸಕ್ಕೆ ಕಳುಹಿಸುತ್ತೇನೆ. ಈ ರೀತಿ ನಾನು ಸ್ಥಳದಲ್ಲಿ ಇಲ್ಲದಿದ್ದರೂ ಕೇವಲ ಮೊಬೈಲು ಫೋನ್ ಮೂಲಕವೇ ನನ್ನ ಕೆಲಸಗಳನ್ನು ಮಾಡಿಸುವಷ್ಟರ ಮಟ್ಟಿಗೆ ಈ ಮೊಬೈಲ್ ಫೋನ್ ಸಹಾಯಕವಾಗಿದೆ.
ಇನ್ನು ಕೆಲವೊಮ್ಮೆ ನಾನೆಲ್ಲೋ ದೂರದ ಊರಿನಲ್ಲಿದ್ದರೆ ಅಲ್ಲಿ ಮೊಬೈ ನೆಟ್ ವರ್ಕ್ ಸಿಗುವುದಿಲ್ಲ. ಆಗ ಈ ಸಾಧನ ಕೆಲಸಕ್ಕೆ ಬಾರದಂತಾಗುತ್ತದೆ.

ಇನ್ನು ಈ ಮೊಬೈಲಿನಿಂದ ಅನೇಕ ಪರಿಣಾಮಗಳಿವೆ. ನನ್ನ ಕುಂಬಕರ್ಣನಂತಹ ಹುಡುಗರನ್ನು ಮೊದಲಿಗೆ ಅವರ ಮನೆಗಳಿಗೆ ಪ್ರತಿದಿನ ಹೋಗಿ ಎದ್ದೇಳಿಸಿ ಬರಬೇಕಿತ್ತು. ಈಗ ಈ ಫೋನಿನಿಂದಾಗಿ ಕುಳಿತಲ್ಲಿಂದಲೇ ಒಂದು ಮಿಸ್ಡ್ ಕಾಲ್ ಮಾಡಿದರೆ ಸಾಕು ಅವರು ಎಚ್ಚರವಾಗಿ ಎದ್ದು ಬರುತ್ತಾರೆ. ಈ ಅನುಕೂಲಗಳ ಜೊತೆಯಲ್ಲಿಯೇ ನಮ್ಮ ಫಠಿಂಗ ಹುಡುಗರು ಸ್ವಿಚ್-ಅಪ್ ಮಾಡುವುದು ಬ್ಯಾಟಾರಿ ಲೋ ಎನ್ನುವುದು, ಹೀಗೆ ಅನೇಕ ಅಡ್ಡ ಪರಿಣಾಮ ಸೃಷ್ಠಿಸುವುದನ್ನು ಈ ಮೊದಲ ಲೇಖನದಲ್ಲಿ ಬರೆದಿದ್ದೇನೆ.

ಇನ್ನೂ ತರಹೇವಾರಿ ಪರಿಣಾಮಗಳನ್ನು ಉಂಟು ಮಾಡುವ ಈ ಮೊಬೈಲಿನ ಫೋನು ತಿಂಗಳಿಗೊಮ್ಮೆ ಬರುವ ಫೋಸ್ಟ್ ಪೇಯಿಡ್ ಬಿಲ್ಲೋ ಅಥವಾ ಪ್ರಿ ಪೇಯಿಡ್ ಕರೆನ್ಸ್ಯೋ ೫೦೦-೧೦೦೦ ಸಾವಿರವೋ ಮುಟ್ಟಿ ನಮ್ಮ ಜೇಬು ಮತ್ತಷ್ಟು ತೂತಾಗುತ್ತದೆ.

ನಮ್ಮ ಮಗು ಏನೇ ಗಲಾಟೆ ಮಾಡಿದರೂ ನಾವದನ್ನು ಪ್ರೀತಿ ವಾತ್ಸಲ್ಯದಿಂದ ಮುದ್ದಿಸುವ ಹಾಗೆ, ಈ ಮೊಬೈಲ್ ಕೂಡ ನಮ್ಮ ಉದ್ಯೋಗದಲ್ಲಿ ಎಲ್ಲಾ ರೀತಿಯ ಪರಿಣಾಮಗಳನ್ನು ಬೀರಿದರೂ ನನ್ನ ಜೇಬಿನಲ್ಲಿ ಮುದ್ದಿನ ಮಗು ತಾನೆ!
ಶಿವು.ಕೆ.