Friday, September 26, 2008

ಮಡಿಚಿ ಎಸೆಯುವ ಕಲೆ.

ನನ್ನ ಗೆಳೆಯರ ಮತ್ತು ಅವರ ಹುಡುಗರ ಕಾಟದಿಂದಾಗಿ ರಬ್ಬರ್ ಬ್ಯಾಂಡ್ ತರುವುದು ನಿಲ್ಲಿಸಿದ ಮೇಲೆ ನನ್ನ ಹುಡುಗರು ಸುಮ್ಮನಿರುತ್ತಾರೆಯೇ? ಸುಮ್ಮನೆ ಅವರ ಪಾಡಿಗೆ ಅವರಿದ್ದವರನ್ನು ಈ ರಬ್ಬರ್ ಬ್ಯಾಂಡಿನ ತೆವಲು ಹತ್ತಿಸಿ ಉಪಯೋಗಿಸುವ ಅಭ್ಯಾಸ ಮಾಡಿಸಿಯಾದ ಮೇಲೆ, ಅದರ ರುಚಿ ಸಿಕ್ಕ ಮೇಲೆ ಅದಕ್ಕಾಗಿ ನನ್ನ ಬೆನ್ನು ಬಿದ್ದರು. ಆಗ ಇನ್ನೊಂದು ಉಪಾಯ ಹೊಳೆಯಿತು.

ಪ್ರತಿದಿನ ದಿನಪತ್ರಿಕೆಗಳನ್ನು ೧೦೦-೨೦೦ ರ ಬಂಡಲುಗಳಾಗಿ ಮಾಡಿ ಅದನ್ನು ಗೋಣಿದಾರದಿಂದಲೋ ಅಥವ ಪ್ಲಾಸ್ಟಿಕ್ ದಾರದಿಂದಲೋ ಕಟ್ಟಿ ವ್ಯಾನುಗಳಲ್ಲಿ ತುಂಬಿ ಕಳುಹಿಸುತ್ತಿದ್ದರು. ಬಂಡಲ್ ಬಿಚ್ಚಿದ ಮೇಲೆ ಆ ದಾರಗಳನ್ನು ಬಿಸಾಡುತ್ತೇವೆ. ಹಾಗೆ ಬಿಸಾಡುವ ಬದಲು ಅದನ್ನೇ ರಬ್ಬರ್ ಬ್ಯಾಂಡಿಗೆ ಬದಲಿಯಾಗಿ ಉಪಯೋಗಿಸಿದರೆ ಹೇಗೆ? ಪ್ರಯತ್ನಿಸಿ ನೋಡುವುದರಲ್ಲಿ ತಪ್ಪಿಲ್ಲ.

ಇದೇ ದಾರವನ್ನು ಪ್ರತಿನಿತ್ಯ ಶೆಟ್ಟರ ಆಂಗಡಿಯಿಂದ ತಂದು ಚಿಕ್ಕ ಚಿಕ್ಕ ತುಂಡು ದಾರಗಳಾಗಿ ಕಟ್ ಮಾಡಿ ಹುಡುಗರಿಗೆ ನಿತ್ಯ ಕೊಡುವುದು ದುಬಾರಿ ಖರ್ಚಿನ ಬಾಬ್ತು. ಅದರ ಬದಲು ಈ ರೀತಿ ಉಚಿತವಾಗಿ ಸಿಗುವ ಬಂಡಲುಗಳ ದಾರಗಳನ್ನು ಉಪಯೋಗಿಸುವುದು ಸುಲಭ ಉಪಾಯವೆನಿಸಿತ್ತು.

ಮರುದಿನವೇ ಯಾರಿಗೋ ಬೇಡವಾಗಿದ್ದ ಆ ದಾರಗಳನ್ನು ಆರಿಸಿಕೊಳ್ಳತೊಡಗಿದಾಗ, ಹಿರಿಯಜ್ಜ ಮತ್ತು ಹಿರಿಯಜ್ಜಿಯ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅವರೇ ತಾನೆ ಪ್ರತಿನಿತ್ಯ ಪ್ಲಾಸ್ಟಿಕ್ ಪೇಪರ್, ದಾರ ರದ್ದಿ ಪೇಪರ್ ಆರಿಸಲು ಬರುವವರು! ಅದರಿಂದ ಹೊಟ್ಟೆ ಹೊರೆಯುತ್ತಿದ್ದರು. ಅದರೆ ನಮ್ಮನ್ನುಕೇಳುವವರು ಯಾರು? ನಮ್ಮ ಹೆಸರಿನಲ್ಲಿ ಬರುವ ದಿನಪತ್ರಿಕೆಗಳ ದಾರವನ್ನಲ್ಲವೇ ಅವರು ತೆಗೆದುಕೊಳ್ಳುತ್ತಿರುವುದು? ಆಗ ನಮಗೆ ಬೇಕಿರಲಿಲ್ಲ. ಆದರೆ ಈಗ ಬೇಕಾಗಿದೆಯಲ್ಲ., ಅದನ್ನು ಪಡೆದುಕೊಳ್ಳುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ನನ್ನನ್ನು ಸಮರ್ಥಿಸಿಕೊಂಡಿದ್ದೆ.

ಈ ಮೊದಲು ರದ್ದಿ ಪೇಪರ್, ದಾರ, ಪ್ಲಾಸ್ಟಿಕ್ ದಾರವೆಲ್ಲಾ ಬೇಕಿಲ್ಲದಾಗ ಅದನ್ನು ಆ ಹಿರಿಯ ದಂಪತಿಗಳು ಒಂದು ದೊಡ್ಡ ಗೋಣಿ ಚೀಲದಲ್ಲಿ ತುಂಬಿಕೊಳ್ಳುವಾಗ ನಮ್ಮ ಕರುಣೆಯಿಂದ ಅವರ ಜೀವನ ನಡೆಯುತ್ತಿದೆಯಲ್ಲ ಎಂದು ಕಣ್ಣರಳಿಸಿಕೊಂಡು ನೋಡುತ್ತಿದ್ದೆ. ಮಹಾನ್ ತ್ಯಾಗಜೀವಿಯಂತೆ ಪೋಜು ಕೊಡುತ್ತಿದ್ದೆ. ಆದರೀಗ ಅದೇ ದಾರ ಉಪಯೋಗಿಸುವುದರಿಂದ ನನ್ನ ಕೆಲಸ ಚೆನ್ನಾಗಿ ಆಗುತ್ತದೆ. ಅದಕ್ಕಾಗಿ ಅದನ್ನು ನನಗೆ ಬೇಕಾದಾಗ ಪಡೆದುಕೊಳ್ಳುವುದು ಕಾನೂನಿನ ಪ್ರಕಾರ ಸರಿ ಎನಿಸಿ ದಾರ ಮುಟ್ಟಬೇಡಿರೆಂದು ದಬಾಯಿಸಿಕಳುಹಿಸಲಾರಂಭಿಸಿದೆ.

ಕೆಲವು ದಿನ ಈ ಪ್ರಯೋಗವು ಚೆನ್ನಾಗಿ ನಡೆಯಿತು. ಅದರೂ ಇದು ಶಾಶ್ವತವಲ್ಲ, ಇದಕ್ಕೊಂದು ದಾರಿ ಕಂಡುಕೊಳ್ಳಬೇಕೆನಿಸಿತ್ತು. ಅದಕ್ಕೆ ಅವಕಾಶ ಕೂಡಿಬಂತು.

ಪತ್ರಿಕೆ ಹಂಚುವ ಹುಡುಗರಿಬ್ಬರೂ ಕೆಲವು ದಿನ ಹೇಳದೇ ಕೇಳದೆ ಕೆಲಸಕ್ಕೆ ಬರಲಿಲ್ಲ. ವಿಧಿಯಿಲ್ಲದೇ ನಾನು ಅವರಿಬ್ಬರೂ ಹಾಕುತ್ತಿದ್ದ ರೂಟುಗಳಿಗೆ ಹೋಗಿ ಪತ್ರಿಕೆಗಳನ್ನು ಮನೆ-ಮನೆಗಳಿಗೆ ಕೊಡಬೇಕಿತ್ತು. ಆ ಬಡಾವಣೆಯಲ್ಲಿ ಆಪಾರ್ಟುಮೆಂಟುಗಳೇ ಇದ್ದವು.

ನಮ್ಮ ಗ್ರಾಹಕರ ಮನೆಗಳೆಲ್ಲಾ ಒಂದು, ಎರಡೌ ಮೂರನೇ ಮಹಡಿಗಳಲ್ಲಿ ಇರಬೇಕೆ! ಲಿಫ್ಟುಗಳಿದ್ದರೂ ದಿನಪತ್ರಿಕೆ ಹಾಲು ಹಂಚುವವರಿಗೆ ಕೆಲವು ಆಪಾರ್ಟುಮೆಂಟುಗಳಲ್ಲಿ ಉಪಯೋಗಿಸಲು ಬಿಡುತ್ತಿರುಲಿಲ್ಲ. ಇನ್ನೂ ಕೆಲವು ಆಪಾರ್ಟುಮೆಂಟುಗಳಲ್ಲಿ ಲಿಫ್ಟಿನ ವಿದ್ಯುತ್ ಕನೆಕ್ಷನ್ ಬೆಳಗಿನ ಹೋತ್ತು ತೆಗೆದುಬಿಡುತ್ತಿದ್ದರು. ಆಗ ಹಾಲು ಅಥವ ದಿನಪತ್ರಿಕೆಯ ಹುಡುಗರು ಮೂರು-ನಾಲ್ಕನೇ ಮಹಡಿಗೆ ಮೆಟ್ಟಿಲೇರಿ ಹೋಗಿ ಬರಬೇಕಿತ್ತು. ಇದರಿಂದಾಗಿ ಅವರಿಗೆ ಸುಸ್ತು ಆಗುವುದರ ಜೊತೆಗೆ ಸಮಯವೂ ಹೆಚ್ಚು ಬೇಕಾಗುತ್ತಿತ್ತು.



ಮಡಿಚಿ ಎಸೆಯುವ ಕಲೆ-೨


ಈಗ ಪ್ರತಿದಿನ ನಾನೇ ಹೋಗುತ್ತಿದ್ದೆನಾದ್ದರಿಂದ ಆ ಅನುಭವ ನನಗೂ ಆಗಿತ್ತು. ದಿನವೂ ಈ ವಿಚಾರವಾಗಿ ಹುಡುಗರು ನಮ್ಮ ಬಳಿ ಮೆಟ್ಟಿಲು ಹತ್ತಿ-ಇಳಿಯುವ ಸುಸ್ತಾಗುವ ಲೇಟಾಗುವುದನ್ನು ಹೇಳಿದಾಗ " ಲೋ ನೀನು ಈ ಮಾತನ್ನು ಹೇಳುತ್ತಿದ್ದೀಯ! ನನಗೆ ನಂಬಲಿಕ್ಕೇ ಆಗುವುದಿಲ್ಲ, ನೀನು ಯಾರು ಹೀರೋ ತರ!! ಸೆಕೆಂಡಿನಲ್ಲಿ ಮೆಟ್ಟಿಲು ಹತ್ತಿ-ಇಳಿದವನು ನೀನು, ನೀನು ಓಂದು ತರ ಜಿಂಕೆಮರಿ, ನಿನಗೆ ಸುಸ್ತು ಆಗುತ್ತಾ! ಹೋಗೋ ಹೋಗೋ!!" ಎಂದು ಅವರನ್ನು ಹೊಗಳಿ ಅಟ್ಟಕ್ಕೇರಿಸಿ ಹುರಿದುಂಬಿಸುತ್ತಿದ್ದೆ.

ಆದರೆ ನಾನೆ ಅದನ್ನು ಮಾಡುವಾಗ ನನ್ನನ್ನು ಹುರಿದುಂಬಿಸುವವರು ಯಾರು ಇರಲಿಲ್ಲ. ನನಗೂ ಎಲ್ಲಾ ಮಹಡಿಗಳನ್ನು ಹತ್ತಿಳಿಯುವಷ್ಟರಲ್ಲಿ ಸುಸ್ತಾಗಿಬಿಡುತ್ತಿತ್ತು. ಇದಕ್ಕೆ ಏನಾದರೊಂದು ದಾರಿ ಕಂಡು ಹಿಡಿಯಲೇಬೇಕಿತ್ತು. ಮೊದಲಾದರೆ ರಬ್ಬರ್ ಬ್ಯಾಂಡ್ ಅಥವಾ ದಾರದಿಂದ ಪೇಪರನ್ನು ಕಟ್ಟಿ ಮಹಡಿ ಮೇಲಿನ ಬಾಲ್ಕನಿಗಳಿಗೆ ಎಸೆದುಬಿಡಬಹುದಿತ್ತು. ಈಗ ಅವೆರಡರ ಸಹಾಯವಿಲ್ಲದೇ ಎಸೆಯುವುದಕ್ಕೆ ದಿನಪತ್ರಿಕೆಯೇನು ಕ್ರಿಕೆಟ್ ಚಂಡೆ!, ಏನು ಮಾಡುವುದು? ಪ್ರತಿದಿನವು ಈ ಸಮಯದಲ್ಲಿ ಚಿಂತಿಸುವಂತಾಗಿತ್ತು. ಒಂದು ದಿನ ಕತ್ತಲಲ್ಲಿ ಮೆಟ್ಟಿಲಿಳಿಯುತ್ತಿದ್ದಾಗ ಕೊನೆಗೂ ಒಂದು ಉಪಾಯ ಹೊಳೆದಿತ್ತು.

ನನಗೇ ಬಾಲ್ಯದಲ್ಲಿ ಐದನೇ ತರಗತಿಯಲ್ಲಿದ್ದಾಗ ನಮ್ಮಜ್ಜಿ ೩೦ ಪೈಸೆ ಕೊಟ್ಟು ಮನೆಯಿಂದ ಕೂಗಳತೆ ದೂರದಲ್ಲಿದ ಹೋಟಲಿಗೆ ಹೋಗಿ ಖಾಲಿ ದೋಸೆ, ಮಸಾಲೆ ದೋಸೆಯನ್ನು ಪಾರ್ಸಲ್ ತರಲು ಕಳುಹಿಸುತ್ತಿದ್ದರು.

ಅದು ಚಿಕ್ಕ ಹೋಟಲ್ ಆಗಿದ್ದರಿಂದ ಹೋಟಲ್ ಮಾಲೀಕನೇ ಕಡಪ ಕಲ್ಲಿನ ಮೇಲೆ ನೀರು ಚಿಮುಕಿಸಿ ಚೊಯ್ ಎಂದು ಶಬ್ದ ಬರುವಂತೆ ಮಾಡಿ ಪೊರಕೆಯಲ್ಲಿ ಒಮ್ಮೆ ಗುಡಿಸಿ ನಂತರ ಗುಂಡಗಿನ ಆಕಾರದಲ್ಲಿ ದೋಸೆಯನ್ನು ಬಿಡುತ್ತಿದ್ದ. ನಂತರ ಆಲೂಗಡ್ದೆ ಪಲ್ಯವನ್ನು ಹಾಕಿ ತುಪ್ಪವನ್ನು ಸೋಕಿಸಿ, ಬೆಂದ ಮೇಲೆ ಅದನ್ನು ಒಂದು ಪ್ಲೇಟಿನಲ್ಲಿ ಇಡುತ್ತಿದ್ದ. ಒಂದು ದಿನಪತ್ರಿಕೆಯ ತುಂಡನ್ನು ಟೇಬಲ್ಲಿನ ಮೇಲೆ ಹರಡಿ ಅದರ ಮೇಲೆ ಚಿಕ್ಕದಾದ ಬಾಳೆ ಎಲೆ ಇಟ್ಟು, ಮಸಾಲೆದೋಸೆಯನ್ನು ಸುರುಳಿ ಸುತ್ತಿ, ನಂತರ ಬಾಳೆ ಎಲೆ ಸಮೇತ ದಿನಪತ್ರಿಕೆಯನ್ನು ಒಂದು, ಎರಡು, ಮೂರು ಬಾರಿ ಮಡಚಿ ಯಾವುದೇ ದಾರ ಉಪಯೋಗಿಸದೇ ಬರೀ ಮಡಿಕೆಯಲ್ಲೇ ಚೆನ್ನಾಗಿ ಪ್ಯಾಕ್ ಮಾಡಿಕೊಡುತ್ತಿದ್ದುದು ನನಗಂತೂ ತುಂಬಾ ಕುತೂಹಲ ಕೆರಳಿಸುತ್ತಿತ್ತು.

ಪ್ರತಿಬಾರಿ ಅವನ ಹೋಟಲ್ಲಿಗೆ ದೋಸೆ ತರಲು ಹೋದರೂ ಅವನ್ ಮಡಚುವ ಕೈಚಳಕವನ್ನು ತದೇಕ ಚಿತ್ತದಿಂದ ನೋಡುತ್ತಿದ್ದೆ. ನನಗಂತೂ ಆ ಸಮಯದಲ್ಲಿ ಅವನೊಬ್ಬ ಮಹಾನ್ ಜಾದುಗಾರನಂತೆ ಕಾಣುತ್ತಿದ್ದ. ಅದೃಷ್ಟವಶಾತ್ ಆತನ್ ಕೈ ಚಳಕ ಇದೇ ಸಮಯದಲ್ಲೇ ನೆನಪಾಗಬೇಕೆ!. ಲೇಖಕನಿಗೆ ಹೊಸ ಬಗೆಯ ವಿಚಾರ, ಚಿಂತನೆಹಲು ಮನಸ್ಸಿನಲ್ಲಿ ಮೂಡಿದಾಗ ಅದನ್ನು ಆ ಕ್ಷಣದಲ್ಲೇ ಅನುಭವಿಸಿ ಬರೆದರೆ "ಕವಿ ಸಮಯ" ಎನ್ನುತ್ತಾರಲ್ಲ, ಹಾಗೆ ನನಗಿಲ್ಲಿ ಬಾಲ್ಯದ ಮಸಾಲೆ ದೋಸೆಯ ಪೇಪರ್ ಮಡಚುವ "ಕೈ ಚಳಕದ ಸಮಯ" ಕೂಡಿಬಂದಿತ್ತು.

ಮತ್ತೆ ಮತ್ತೆ ಆ ದೃಶ್ಯಾವಳಿಯನ್ನು ನೆನಪಿಗೆ ತಂದುಕೊಳ್ಳುವ ಪ್ರಯತ್ನ ಮಾಡಿದೆ. ಒಂದು ಪ್ರಜಾವಾಣಿ ಪತ್ರಿಕೆಯನ್ನು ಕೈಗೆತ್ತಿಕೊಂಡು ಮದ್ಯಕ್ಕೆ ಸರಿಯಾಗಿ ಮಡಚಿದೆ. ಮತ್ತೆ ಅದನ್ನೇ ಎರಡು ಬಾರಿ ಮಡಿಕೆ ಮಾಡಿ, ಮಡಿಕೆ ಮಾಡಿದ ಎರಡು ಕಡೆಗಳಲ್ಲಿ ಕೈ ಬೆರಳುಗಳಿಂದ ಪ್ರೆಸ್ ಮಾಡಿದೆ. ನಂತರ ಒಂದು ಕೆಳತುದಿಯನ್ನು ಮತ್ತೊಂದು ಕೆಳತುದಿಯ ಒಳಗೆ ಸೇರಿಸಿ ಪತ್ರಿಕೆಯ ಮೇಲಿನ ಬಾಗದಿಂದ ಒಳಕ್ಕೆ ತಳ್ಳಿದೆ, ಆಷ್ಟೇ! ಸಾಧಿಸಿಬಿಟ್ಟಿದ್ದೆ!! ನಿಂತ ಜಾಗದಲ್ಲೇ ಆ ಮಡಿಕೆ ಮಾಡಿದ ಪತ್ರಿಕೆಯನ್ನು ಕೆಳಗೆ ಬಿಟ್ಟೆ. ಅದರೂ ನೆಲಕ್ಕೆ ಬಿದ್ದರು ಮಡಿಕೆ ಬಿಚ್ಚಿಕೊಳ್ಳಲಿಲ್ಲ. ನನಗೆ ಬೇಕಾಗಿದ್ದುದ್ದು ಸಿಕ್ಕಿಬಿಟ್ಟಿತ್ತು. ಮನಸ್ಸು ಹಗುರಾದ ಅನುಭವ! ನೆಲದಿಂದ ಒಂದು ಆಡಿ ಮೇಲೆ ತೇಲುತ್ತಿದ್ಡೇನೆ ಅನ್ನಿಸಿತು!. ಮರುಕ್ಷಣವೇ ಎಚ್ಛೆತ್ತುಕೊಂಡೆ ಯಾಕೆಂದರೆ ಈಗ ಕಲಿತ ಪೇಪರ್ ಮಡಿಕೆ ವಿದ್ಯೆ ಕಲಿತುಕೊಂಡೆನೆಂಬ ಸಂಬ್ರಮದಲ್ಲಿ ಮೈ ಮರೆತಾಗ ಮರೆತುಹೋದರೆ?

ಆ ರೀತಿ ನನಗೆ ಅನೇಕ ಸಂಧರ್ಭಗಳಲ್ಲಿ ಆಗಿದೆ. ಕಂಪ್ಯೂಟರಿನಲ್ಲಿ ಹೊಸದಾಗಿ ನನ್ನ ಇಮೇಲ್ ಒಪೆನ್ ಮಾಡಿಕೊಳ್ಳುವಾಗ ಹೆಸರು, ಕೆಲಸ ಇಷ್ಟ, ಕಷ್ಟಗಳನೆಲ್ಲಾ ಟೈಪ್ ಮಾಡಿ ನಮಗಿಷ್ಟವಾದ ಪಾಸ್ ವರ್ಡ್ ಹಾಗೂ ಹೆಸರನ್ನು ನಮೂದಿಸಿ, ಕಂಪ್ಯೂಟರ್ ಕೇಳಿದ ಪ್ರಶ್ನೆಗೆ ಉತ್ತರ ತೈಪ್ ಮಾಡಿದ ನಂತರ ಎಲ್ಲವೂ ಸರಿಯಾಗಿದ್ದರೆ ನಮ್ಮ ಇಮೇಲ್ ಸಿದ್ಧವಾಗಿರುತ್ತದೆ!. ಓಹ್ ನನ್ನ ಮೇಲ್ ಐಡಿ ಬಂತೆಂದು ಖುಷಿಯಾಗುತ್ತದೆ.

ಅ ಆನಂದದಲ್ಲಿ ಪ್ರಪಂಚದ ಯಾವ ಮೂಲೆಗಾದರೂ ನಾನು ನನ್ನ ಇಮೇಲ್ ನಿಂದ ಪತ್ರ ಬರೆಯಬಹುದು ಮೆಸೇಜ್ ಕಳುಹಿಸಬಹುದು ಹಾಗೂ ಅವರಿಂದ ಮೇಸೇಜ್ ಪಡೆಯಬಹುದೆನಿಸಿ, ಮರುಕ್ಷಣ ವಿದೇಶದಲ್ಲಿರುವ ಗೆಳೆಯನಿಗೆ ಒಂದು ಮೇಲ್ ಕಳುಹಿಸೋಣ ಎಂದುಕೊಂಡು, ಇಮೇಲ್ ಮತ್ತೆ ಒಪೆನ್ ಮಾಡಲೋದರೆ........... ಪ್ಲಾಪ್. ಕಾರಣ ಸಂಬ್ರಮದಲ್ಲಿ ಪಾಸ್ ವರ್ಡ ಅಥವಾ ಹೆಸರಿನ ಸ್ಪೆಲ್ಲಿಂಗ್ ಮರೆತುಹೋಗಿರುತ್ತದೆ.. ಇಲ್ಲೂ ಹಾಗೆ ಆಗುವುದು ಬೇಡಪ್ಪ ಅನ್ನಿಸಿ ಮತ್ತೆ ಮತ್ತೆ ಅಭ್ಯಾಸ ಮಾಡಿಕೊಂಡೆ. ಸ್ವಲ್ಪ ಸಮಯದಲ್ಲಿಯೇ ಈ ವಿದ್ಯೆ ಕರಗತವಾಗಿತ್ತು.



ಮಡಿಚಿ ಎಸೆಯುವ ಕಲೆ-೩

ಮುಂದೆ ಎರಡೇ ದಿನದಲ್ಲಿ ನಾನು ಕಲಿತ ಈ ಮಹಾನ್ ಕಲೆ ನನಗೆ ಸರಿಯಾದ ಟೋಪಿ ಹಾಕಿತ್ತು. ಅದೇನೆಂದರೆ ಮಾಮೂಲಿಯಾಗಿ ಸಪ್ಲಿಮೆಂಟರಿ ಒಂದೇ ಇದ್ದ ದಿನ ಪೇಪರನ್ನು ಸುಲಭವಾಗಿ ಫೋಲ್ಡ್ ಮಾಡಿ ಗುರಿಯಿಟ್ಟು ಸರಿಯಾಗಿ ಎಸೆಯುತ್ತಿದ್ದೆ. ಆದರೆ ಶುಕ್ರವಾರದ ಸಿನಿಮಾ ಸಪ್ಲಿಮೆಂಟರಿಗಳು ಹಾಕಿದ್ದ ದಿನಪತ್ರಿಕೆಗಳು ಫೋಲ್ಡ್ ಮಾಡಿ ಕೈಯಲ್ಲಿ ಇಡಿದಾಗ ಸರಿಯಾಗಿರುತ್ತಿತ್ತು.

ಇನ್ನೇನು ಬಾಲ್ಕನಿಗೆ ಎಸೆಯೋದು ತಾನೆ! ಅಂತಂದುಕೊಂಡು ಎಸೆದಾಗ ಆ ಪೇಪರು ಸಿನಿಮಾದವರ ಬುದ್ಧಿ ತೋರಿಸಿಬಿಡುತ್ತಿತ್ತು. ಕೈಯಿಂದ ಜಾರಿ ಇನ್ನೇನು ಬಾಲ್ಕಾನಿಗೆ ಬೀಳುವ ಮೊದಲೇ ಮಾಡಿದ್ದ ಫೋಲ್ಡ್ ಬಿಚ್ಚಿಕೊಂಡು ನಮ್ಮ ನಟ-ನಟಿಯರು ಸಿನಿಮಾದಲ್ಲಿ ತಾವು ಹಾಕಿಕೊಂಡಿರುವ ಟೂ ಪೀಸ್ ತ್ರೀ ಪೀಸ್ ತುಂಡು ಬಟ್ಟೆಗಳನ್ನು ಒಂದೊಂದಾಗಿ ತೆಗೆದು ಗಾಳಿಗೆ ಕಿತ್ತೆಸೆಯುವಂತೆ ಈ ಸಿನಿಮಾ ಸಪ್ಲಿಮೆಂಟರಿಗಳು ಹಾರಾಡಿ ಯಾರ್ಯಾರ ಕಾಂಪೊಂಡೊಳಗೆ ಬೀಳುವುತ್ತಿದ್ದವು.

ಮತ್ತೆ ಅವುಗಳನ್ನು ಹೆಕ್ಕಿ ತಂದು ಜೋಡಿಸಿ ಎಸೆಯಲು ಮನಸ್ಸಾಗದೇ[ಮತ್ತೆ ಗಾಳಿಗೆ ಹಾರಾಡಿದರೆ} ಮೆಟ್ಟಿಲೇರಿ ಹೋಗಿಬರುವುದರೊಳಗೆ ಸಮಯ ಸುಸ್ತು ಎರಡು ಆಗಿಬಿಡುತ್ತಿತ್ತು. ಹಾಗೆ ಶನಿವಾರದ ಪ್ರಾಪರ್ಟಿ, ರಿಯಲ್ ಎಸ್ಟೇಟ್, ಭಾನುವಾರದ ಸಾಪ್ತಾಹಿಕದ ೪-೫ ಸಪ್ಲಿಮೆಂಟರಿಗಳು ಬಂದಾಗಲು ನನ್ನ ಎಸೆಯುವ ಕಲೆ ಅಟ್ಟರ್ ಪ್ಲಾಪ್ !!.

ಕೊನೆಗೆ ಇದನ್ನು ಅಭ್ಯಾಸ ಮಾಡಿಯೇ ನಂತರ ಇಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದುಕೊಂಡು ನನ್ನ ಗೆಳೆಯನ ಮನೆಗೆ ಹೋದೆ. ಅವನ ಮನೆ ಮೂರನೆ ಮಹಡಿಯಲ್ಲಿತ್ತು. ಅವನಿಗೆ ವಿಚಾರ ತಿಳಿಸಿ ಅವನ ಮನೆಯಲ್ಲಿದ್ದ ಹಳೆಯ ಪೇಪರನ್ನೆಲ್ಲಾ ತೆಗೆದುಕೊಂಡು ಕೆಳಗೆ ಬಂದೆ.

ಒಂದೊಂದಾಗಿ ಮಡಚಿ ಮಡಚಿ ಎಸೆಯಲಾರಂಭಿಸಿದೆ. ಅವನು ನನ್ನ ಈ ಹುಚ್ಚಾಟವನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದ. ಅ ಈ ತಮಾಷೆಯನ್ನು ನೋಡುತ್ತಲೇ ಅವನು ನನಗೊಂದು ಟೋಪಿ ಹಾಕಿದ್ದ.

ನಾನು ಈ ರೀತಿ ಒಂದೊಂದೆ ಪೇಪರ್ ಎಸೆಯುವಾಗ ಅದರ ಗಾತ್ರ ಮತ್ತು ತೂಕ ನೋಡಿ ಹಿಂದೆ ಹೋಗುವುದು, ಮುಂದೆ ಹೋಗುವುದು ಮಾಡುತ್ತಿದ್ದೆ. ಒಮ್ಮೆ ೫ ಸಪ್ಲಿಮೆಂಟರಿಗಳಿದ್ದ ಭಾರದ ಪೇಪರನ್ನು ಸರಿಯಾಗಿ ಹಾಕಲು ನಾನು ನಿಂತಿರುವ ಜಾಗದಿಂದ ನಿದಾನವಾಗಿ ಹಿಂದಕ್ಕೆ ನಡೆಯುತ್ತಾ ಅವನ ಎದುರು ಮನೆಯ ಸಂಪ್ರದಾಯಸ್ಥ ಆಂಟಿ ಹಾಕಿದ್ದ ಸುಂದರವಾದ ರಂಗೋಲಿಯನ್ನು ತುಳಿದು ಕೆಡಿಸಿಬಿಟ್ಟೆ.

ನನ್ನ ಗೆಳೆಯ ಇದನ್ನು ನೋಡಿಯು ನೋಡದವನಂತೆ ಸುಮ್ಮನಿದ್ದುಬಿಟ್ಟ. ಮನೆಯ ಕಿಟಕಿಯಿಂದ ನನ್ನ ಈ ಹೊಸ ಆಟವನ್ನು ನೋಡುತ್ತಿದ್ದ ಆ ಆಂಟಿ ಹೊರಬಂದು ರಂಗೋಲಿ ಕೆಡಿಸಿದ್ದಕ್ಕಾಗಿ ಚೆನ್ನಾಗಿ ಬೈಯ್ದಾಗ, ಅಲ್ಲಿಯವರೆಗೂ ಮಜಾ ತೆಗೆದುಕೊಳ್ಳುತ್ತಿದ್ದ ಗೆಳೆಯ ಭಾಲ್ಕನಿಯಿಂದ ಮಾಯ!.

ಇದೇ ರೀತಿ ಕೆಲವೊಮ್ಮೆ ಎಸೆದ ಪೇಪರುಗಳು ಬಾಲ್ಕನಿಯಲ್ಲಿ ಕುಳಿತಿದ್ದ ಪಾರಿವಾಳಗಳಿಗೆ ಬಿದ್ದು ಅವು ದಿಗಿಲಿಂದ ಹಾರಿ ಹೋಗುತ್ತಿದ್ದವು. ಕೆಲವೊಮ್ಮೆ ನಿಜ ಪಾರಿವಾಳ[ಮಹಡಿ ಮನೆಯ ಹರೆಯದ ಹುಡುಗಿಯರು]ಗಳಿಗೆ ಬಿದ್ದು, 'ಹೌಚ್" ಎಂದು ಅವು ನನ್ನ ಕಡೆ ಬಿಟ್ಟ ಕೆಂಗಣ್ಣಿಗೆ ನಾನು "ಸಾರಿ" ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದುಂಟು.

ಮುಂದಿನ ದಿನಗಳಲ್ಲಿ ನಾನದನ್ನು ಎಷ್ಟು ಚೆನ್ನಾಗಿ ಅಭ್ಯಾಸ ಮಾಡಿಕೊಂಡೆನೆಂದರೇ ನಮ್ಮ ಉಳಿದ ಹುಡುಗರು ಒಂದೊಂದು ಬಡಾವಣೆಗಳಿಗೆ ಪತ್ರಿಕೆ ಹಂಚುವಷ್ಟೇ ಸಮಯದಲ್ಲಿ ನಾನು ಎರಡು ಬಡಾವಣೆಗಳ ಮನೆಗಳಿಗೆ ಪತ್ರಿಕೆ ತಲುಪಿಸಿರುತ್ತಿದ್ದೆ. ನಂತರ ಇದನ್ನು ನನ್ನ ಎಲ್ಲಾ ಬೀಟ್ ಹುಡುಗರಿಗೆ ಹೇಳಿಕೊಟ್ಟಾಗ ಅವರು ಚೆನ್ನಾಗೆ ಕಲಿತರು. ರಬ್ಬರ್ ಬ್ಯಾಂಡ್ ಅಥವಾ ದಾರಗಳ್ಯಾವುದು ಅವರಿಗೆ ಬೇಕಿರಲಿಲ್ಲ.



ಮಡಿಚಿ ಎಸೆಯುವ ಕಲೆ-೪


ಅದೊಂದು ದಿನ ನನ್ನ ಗೆಳೆಯ ಜಾಣೇಶ ತನ್ನ ಕೆಲಸ ಮುಗಿಸಿ ಬಿಡುವಿನಲ್ಲಿ ಕುಳಿತಿದ್ದ. ನನ್ನ ಸ್ಕೂಟಿಯಲ್ಲಿ ಒಂದು ದೊಡ್ಡ ಬ್ಯಾಗಿನ ತುಂಬ ಪತ್ರಿಕೆಗಳನ್ನು ಜೋಡಿಸಿಕೊಂಡು ಅವನನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಹೊರಟೆ. ಹತ್ತಿರದಲ್ಲೇ ದರ್ಶಿನಿ ಹೋಟಲ್ ಇತ್ತಾದ್ದರಿಂದ ಕಾಫಿ ಕುಡಿಯೋಣವೆಂದು ಅಲ್ಲಿಗೆ ಹೋದೆವು.

ಅವನು ಕಾಫಿ ತರುವಷ್ಟರಲ್ಲಿ ನಾನು ಸತತವಾಗಿ ಒಂದು ಹತ್ತು ಪೇಪರುಗಳನ್ನು ಮಡಿಕೆ ಮಾಡಿ ಬ್ಯಾಗಿನಲ್ಲಿ ಹಾಕಿದ್ದೆ. ಅವನ್ ಮುಂದೆಯೇ ಮತ್ತೆರಡು ಪೇಪರುಗಳನ್ನು ಮಡಿಕೆ ಮಾಡಿ ಬ್ಯಾಗಿಗೆ ತುರುಕಿದೆ. ಅವನು ಕಾಫಿ ಕುಡಿಯುತ್ತಾ ನನ್ನ ಕೈಗಳನ್ನು ನೋಡುತ್ತಾ,


ಇದೇನೋ ಇದು ಅವಾಗಿನಿಂದ ಒಂದೇ ಸಮ ಈ ರೀತಿ ಪೇಪರನ್ನು ಫೋಲ್ಡ್ ಮಾಡಿ ಬ್ಯಾಗಿಗೆ ಸೇರಿಸ್ತಾ ಇದ್ದೀಯ, ನೋಡಿದ್ರೆ ಒಳ್ಳೇ ಮಸಾಲೆ ದೋಸೆ ಪಾರ್ಸಲ್ ತರ ಕಾಣುತ್ತಲ್ಲೋ! ಅವನಿಗೆ ಕುತೂಹಲ.

"ನಿನಗೆ ಗೊತ್ತಾಗುತ್ತೆ ಬಾ"

ಎಂದು ನಕ್ಕು ಅವನನ್ನು ಕೂರಿಸಿಕೊಂಡು ಹೊರಟೆ. ಹತ್ತಿರದಲ್ಲೇ ನಾನು ಪೇಪರ್ ಹಾಕುವ ಅಪಾರ್ಟುಮೆಂಟು ಇತ್ತು. ಅ ಆಪಾರ್ಟುಮೆಂಟಿನಲ್ಲಿ ನನ್ನ ಗಿರಾಕಿಗಳೆಲ್ಲಾ ಎರಡು ಮೂರನೇ ಮಹಡಿಗಳಲ್ಲೇ ವಾಸವಾಗಿದ್ದರು. ನಾನು ಚಕ್ ಚಕನೆ ಮಡಿಕೆ ಮಾಡಿದ್ದ ದಿನಪತ್ರಿಕೆಗಳನ್ನು ಒಂದೊಂದಾಗಿ ತೆಗೆದು ಆ ಎಲ್ಲಾ ಮಹಡಿ ಮನೆಗಳ ಬಾಲ್ಕನಿಗಳಿಗೆ ಗುರಿ ನೋಡಿ ದಿನಪತ್ರಿಕೆಗಳನ್ನು ಎಸೆದೆ. ಜಾಣೇಶ ಬಿಟ್ಟ ಕಣ್ಣು ಬಿಟ್ಟಹಾಗೆ ಆಶ್ಚರ್ಯದಿಂದ ನೋಡುತ್ತಿದ್ದ. ಕೇವಲ ಐದೇ ನಿಮಿಷದಲ್ಲಿ ಬಾಲ್ಕನಿಗಳ ಮನೆಗಳಿಗೆ ೧೫ ಪತ್ರಿಕೆಗಳನ್ನು ತಲುಪಿಸಿದ್ದೆ. ಅಲ್ಲಿಂದ ಮುಂದೆ ಇನ್ನೊಂದು ಅಪಾರ್ಟುಮೆಂಟು ಹಾಗೆ ಮತ್ತೊಂದಕ್ಕೆ ಹೀಗೆ ಕೇವಲ ಆರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ದಿನಪತ್ರಿಕೆಗಳನ್ನು ಮನೆಗಳಿಗೆ ತಲುಪಿಸಿ ಕೆಲಸ ಮುಗಿಸಿದ್ದೆ.

"ಇದೇನೊ ಶಿವು ಈ ರೀತಿ ಫೋಲ್ದ್ ಮಾಡೋದನ್ನ ಹಾಗೂ ಎಸೆಯುವುದನ್ನು ಎಲ್ಲಿಂದ ಕಲಿತೆಯೋ"! ಅವನಿಗೆ ಆಶ್ಚರ್ಯ,

"ನನಗೂ ಗೊತ್ತಿರಲಿಲ್ಲವೋ ಹಾಗೆ ಕಲಿತುಕೊಂಡೆ. ನೋಡು ನಮ್ಮ ಕೆಲಸವನ್ನು ಚಿಟಿಕೆ ಹೊಡೆದಷ್ಟೇ ಸುಲಭವಾಗಿ ಮಾಡಿ ಮುಗಿಸಬಹುದು. ನನಗಂತೂ ಇದೊಂದು ಮಹಾನ್ ಕಲೆ ಅನ್ನಿಸ್ತಿದೆ ನೋಡು."

"ಸಾಧ್ಯವೇ ಇಲ್ಲಾ" ತಕ್ಷಣ ಅವನಿಂದ ಬಂತು ಉತ್ತರ.

ಬಹುಶಃ ನನ್ನ ಕೆಲಸದ ವೇಗ ನೋಡಿ ಹೊಟ್ಟೆಕಿಚ್ಚಿನಿಂದ ಇವನು ಹೀಗೆ ಹೇಳುತ್ತಿರಬಹುದೇನೋ,
"ಹೇಗೋ ಸಾಧ್ಯವಿಲ್ಲ? ನೀನೆ ನೋಡು ನಾನು ಕೇವಲ ಒಂದೇ ಸೆಕೆಂಡಿನಲ್ಲಿ ಈ ರೀತಿ ಪತ್ರಿಕೆಯನ್ನು ಫೋಲ್ಡ್ ಮಾಡಿ ಯಾವುದೇ ಮಹಡಿಯ ಬಾಲ್ಕನಿಗೆ ಎಸೆದರೂ ಕೂಡ ಅದು ನೀಟಾಗಿ ಹೊಗಿ ಹಕ್ಕಿಯಂತೆ ಲ್ಯಾಂಡ್ ಆಗುತ್ತದೆ. ಬೇಕಾದರೆ ನೀನೆ ಹೋಗಿ ನಾನು ಬಾಲ್ಕನಿಗಳಲ್ಲಿ ಹಾಕಿರುವ ಪತ್ರಿಕೆಗಳನ್ನು ನೋಡಿ ಬರಬಹುದು. ಮನೆಯೊಡತಿ ಬಂದು ತೆಗೆದುಕೊಳ್ಳುವ ವರೆಗೂ ಹಾಗೆ ಒಂದು ಮಡಿಕೆಯೂ ಬಿಚ್ಚಿಕೊಳ್ಳದೆ ಬೆಚ್ಚಗೆ ಕುಳಿತಿರುತ್ತವೆ"!.

"ಅದು ಸರಿ ಇದನ್ನು ಆರ್ಟ್ ಎಂದು ಹೇಗೆ ಹೇಳುತ್ತೀಯಾ?

ಆರ್ಟ್ ಅಲ್ಲದೇ ಮತ್ತೇನು? ಸೆಕೆಂಡಿನಲ್ಲಿ ಫೋಲ್ಡ್ ಮಾಡುವುದು ಕೈಬೆರಳುಗಳಲ್ಲಿ ಪಳಗಿದ ಕಲೆಯಲ್ಲವೇ? ಹಾಗೆ ಯಾವುದೇ ಮಹಡಿಗೆ ಎಸೆಯುವಾಗಲು ನನ್ನ ಕೈಯಿಂದ ಜಾರಿ ಮೇಲೆ ಹಾರಿ ಸರಿಯಾಗಿ ಬಾಲ್ಕನಿಯೊಳಗೆ ಬಿದ್ದರೂ ಪತ್ರಿಕೆ ಹರಿಯುವುದಿರಲಿ, ಬಿಚ್ಚಿಕೊಳ್ಳುದಿರುವುದು ಕಲೆಯಲ್ಲವೇ? ಮನಸ್ಸನ್ನು ಕೇಂದ್ರೀಕರಿಸಿ ಕೈಯಲ್ಲಿ ಪೇಪರ್ ಹಿಡಿದು ಬಿಲ್ಲಿನಿಂದ ಬಿಟ್ಟ ಬಾಣದಂತೆ ಎಸೆದು ಗುರಿ ಸೇರಿಸುವುದು, ಒಂದು ಅದ್ಬುತ ಕಲೆ ಎನಿಸುವುದಿಲ್ಲವೇ?

"ಇಲ್ಲೇ ಇರೋದು ಪಾಯಿಂಟು. ನೀನೆ ಹೇಳಿದೆ ಇದನ್ನು ಫೋಲ್ಡ್ ಮಾಡಲು ಬೆರಳುಗಳ ಸಹಾಯ ಬೇಕು. ಹಾಗೆ ಫೋಲ್ಡ್ ಮಾಡುವಾಗ ಕೈಬೆರಳುಗಳ ಚಲನೆಯಿಂದ ಅದರ ಮಾಂಸಖಂಡಗಳಿಂದ ಒಂದಷ್ಟು ಕ್ಯಾಲೋರಿಗಳಷ್ಟು ಶಕ್ತಿ ವ್ಯಯವಾಗುತ್ತದೆ. ನಂತರ ಎಸೆಯುವಾಗ ನೀನು ಒಂದು ಕಾಲನ್ನು ಮುಂದೆ ಇಟ್ಟೆ ಅಲ್ಲವೇ?

"ಹೌದು".

ನೋಡು ಇಲ್ಲೇ ಇರೋದು ಸ್ವಲ್ಪ ತಲೆ ಉಪಯೋಗಿಸು ಇದರಲ್ಲಿ ಗಣಿತ, ಸೈನ್ಸು, ಎಲ್ಲಾ ಇದೆ. ಒಂದು ಕಾಲನ್ನು ಎಷ್ಟು ಇಂಚು ಮುಂದೆ ಇಡಬೇಕೆನ್ನುವುದು ಒಂದು ಲೆಕ್ಕ. ಹಾಗೆ ಸ್ವಲ್ಪ ದೇಹವನ್ನು ಹಿಂದಕ್ಕೆ ಬಗ್ಗಿಸುವುದು, ಕಣ್ಣಿನಿಂದ ಗುರಿ ನೋಡಿ ಎಸೆಯಬೇಕಾದ ಜಾಗ ಆಳತೆ ಮಾಡುವುದು, ಕೈಯಿಂದ ಎಸೆಯಬೇಕಾದರೆ ಇಂತಿಷ್ಟೇ ವೇಗ ಹಾಗು ಶಕ್ತಿಯನ್ನು ಉಪಯೋಗಿಸಬೇಕೆಂದು ನಿನಗೆ ತಿಳಿದಿದೆ. ಈ ಶಕ್ತಿ ಮತ್ತು ವೇಗದಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಆ ಪೇಪರ್ ಒಂದೋ ಮೇಲಿನ ಬಾಲ್ಕನಿಗೆ ಬೀಳುತ್ತದೆ. ಅಥವಾ ಕೆಳಗಿನ ಸಜ್ಜೆಯೊಳಗೆ ಸೇರಿಬಿಡುತ್ತದೆ. ಇದಕ್ಕೆಲ್ಲಾ ಇಂತಿಷ್ಟೇ ಶಕ್ತಿ, ವೇಗ ಎಲ್ಲವನ್ನು ಕ್ಯಾಲೋರಿಗಳಲ್ಲಿ ಲೆಕ್ಕಹಾಕಬೇಕಾಗುತ್ತದೆ. ಇದೆಲ್ಲಾ ಗಣಿತದಲ್ಲಿ ಬರುತ್ತದೆ.

ಜೊತೆಗೆ ನೀನು ಎಸೆದ ಪೇಪರ್ರು ಮೇಲಕ್ಕೆ ಹಕ್ಕಿಯಂತೆ ಹಾರಿ ಹೋಗದೆ ಬಾಲ್ಕನಿಯ ಒಳಗೆ ಬೀಳುತ್ತದಲ್ಲ, ಇಲ್ಲಿ ಖಂಡಿತವಾಗಿ ನ್ಯೂಟನ್ ತತ್ವ ಅಪ್ಲೇ ಆಗುತ್ತದೆ. ನಿನಗೂ ಗೊತ್ತಲ್ವ?. ಒಂದು ಕಲ್ಲನ್ನು ಮೇಲೆ ಎಸೆದರೆ ಅದು ಗುರುತ್ವಾಕರ್ಷಣಾ ಬಲದಿಂದ ಕೆಳಗೆ ಬೀಳುತ್ತದೆ ಎನ್ನುವುದು ನ್ಯೂಟನ್ನನ ಸೇಬಿನ ಹಣ್ಣಿನ ತತ್ವ ಅಂತ, ನೋಡಿದೆಯಾ ಇಲ್ಲಿ ಸೈನ್ಸು ಬಂತು"

ಅವನ ತರ್ಕಕ್ಕೆ ನನ್ನೀಂದ ಉತ್ತರವಿರಲಿಲ್ಲ. ಸೈನ್ಸು ಮತ್ತು ಮ್ಯಾಕ್ಸ್ ಅವನ ಇಷ್ಟದ ವಿಷಯ. ೧೦ನೇ ತರಗತಿಯಲ್ಲಿ ಓದುವಾಗ ಅವನ ಇಷ್ಟದ ಸೈನ್ಸಿನ ವಿಷಯದ ಮೇಲೆ ತುಂಬಾ ಪ್ರಯೋಗ ನಡೆಸುತ್ತಿದ್ದನಂತೆ. ಅದು ಹೆಚ್ಚಾಗಿ ಬೌತಶಾಸ್ತ್ರ ಮತ್ತು ಜೀವಶಾಸ್ತ್ರದ ಮೇಲೆ ಆಗುತ್ತಿತ್ತಂತೆ. ಮುಂದೊಂದು ದಿನ ತನ್ನ ಸಂಶೋಧನೆಯಿಂದಾಗಿ ಏನಾದರೂ ಕೊಡುಗೆಯನ್ನು ಈ ಪ್ರಪಂಚಕ್ಕೆ ಕೊಡಬೇಕೆಂದು ಧೃಡ ನಿರ್ಧಾರವನ್ನೂ ಮಾಡಿದ್ದನಂತೆ!. ದುರಾದೃಷ್ಟವಶಾತ್ ಅವನಿಗೆ ಪರೀಕ್ಷೆಯಲ್ಲಿ ವಿಜ್ಜ಼ಾನದ ವಿಷಯದಲ್ಲೇ ಕಡಿಮೆ ಅಂಕ ಬಂದು ಪೇಲಾಗಿದ್ದ. ಅವನು ತುಂಬಾ ಚೆನ್ನಾಗಿ ಓದುತ್ತಿದ್ದ ವಿಷಯದಲ್ಲೇ ಫೇಲಾದದ್ದು ಏಕೆಂದು ಕೇಳಿದರೇ.

" ನಾನೇನೊ ಪರೀಕ್ಷೆಯಲ್ಲಿ ಚೆನ್ನಾಗೆ ಬರೆದ್ದಿದ್ದೆ. ನನ್ನ ಪತ್ರಿಕೆ ವ್ಯಾಲ್ಯುವೇಟ್ ಮಾಡಿದ್ದು ಗುಲ್ಬರ್ಗದ ಕಡೆಯ ಮಾಸ್ತರು. ಮೊದಲೇ ಆ ಊರಲ್ಲಿ ಕೆಂಡದಂತ ಬಿಸಿಲು, ಕುಡಿಯಲು ಸರಿಯಾಗಿ ನೀರು ಸಿಗಲ್ಲ, ಆತನಿಗೂ ವಯಸ್ಸಾಗಿತ್ತು, ಮನೆಯಲ್ಲಿ ಸಂಸಾರ ತಾಪತ್ರಯ, ಅವನಿಗೆ ನನ್ನ ಪ್ರಯೋಗಗಳು ಆರ್ಥವಾಗಿರ್ಲಿಕ್ಕಿಲ್ಲ. ಆದ್ದರಿಂದ ಕಡಿಮೆ ಅಂಕ ಕೊಟ್ಟುಬಿಟ್ಟ. ಬೇರೆ ನಮ್ಮ ಬಯಲು ಸೀಮೆಯ ಮೇಷ್ಟ್ರಾಗಿದ್ರೆ ನಾನು ಪಾಸಾಗಿರುತ್ತಿದ್ದೆ. ಆ ಗುಲ್ಬರ್ಗ ಮೇಷ್ಟ್ರಿಂದ ನಾನು ಪತ್ರಿಕೆ ಏಜೆನ್ಸಿ ನಡೆಸಬೇಕಾಗಿ ಬಂತು" ಎಂದಿದ್ದು ನೆನಪಾಯಿತು.

ನಂತರ ಪಾಸಾದರೂ ಪಿ ಯು ಸಿ ನಲ್ಲಿ ಅವನಿಗೆ ಕಡಿಮೆ ಅಂಕ ಬಂದ ಕಾರಣ ಸೈನ್ಸ್ ಸಿಗದೇ ಆರ್ಟ್ಸ್ ಸೇರಿಕೊಂಡನಂತೆ. ಒಲವಿಲ್ಲದಿದ್ದರೂ ಹೇಗೋ ಆರ್ಟ್ಸ್ ನಲ್ಲಿ ಮೊದಲ ವರ್ಷ ಮುಗಿಸಿ ಎರಡನೇ ವರ್ಷಕ್ಕೆ ಹೋಗದೇ ಓದನ್ನೇ ಬಿಟ್ಟುಬಿಟ್ಟನಂತೆ, ಇದು ಅವನ ಓದಿನ ಕತೆ. ಈಗಳು ಅವನು ಪ್ರತಿಯೊಂದು ವಿಚಾರಕ್ಕೂ ವಿಜ್ಝಾನಕ್ಕೆ ಸಂಭಂದ ಕಲ್ಪಿಸಿ ಮಾತಾನಾಡದಿದ್ದರೆ ಅವನಿಗೆ ಸಮಾಧಾನವಿಲ್ಲ.

ನಂತರ ಅವನ ಅಪ್ತರಿಂದ ತಿಳಿದುಬಂದ ವಿಷಯವೇನೆಂದರೇ ಪೂಯೂಸಿ ಎರಡನೇ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ಫೇಲಾದ ಮೇಲೆ ಮುಂದೆ ಪರೀಕ್ಷೆ ಕಟ್ಟಿ ಪಾಸು ಮಾಡದೇ ಕೆಲವು ದಿನ ಅದು-ಇದು ಕೆಲಸ ಮಾಡಿ ಕೊನೆಗೆ ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಬಂದನೆಂದು ಹೇಳುತ್ತಾರೆ. ಆತನ ಮಾತಿನಿಂದ ಈ "ಫೋಲ್ಡ್ ಮಾಡಿ ದಿನಪತ್ರಿಕೆ ಎಸೆಯುವ ಕಲೆ" ಕಲೆಯೋ, ಸೈನ್ಸೋ, ಅಥವಾ ಶಕ್ತಿ ಕ್ಯಾಲೋರಿಗಳ ಲೆಕ್ಕಾಚಾರದ ಗಣಿತವೋ, ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವಲ್ಲಿನ ಅಂಕಿ ಅಂಶಗಳ ಸ್ಟಾಟಿಸ್ಟಿಕ್ಸೋ ಗೊತ್ತಾಗದೆ ನಾನು ಒಂದಷ್ಟು ದಿನ ಜಿಜ್ಣಾಸೆಗೊಳಗಾಗಿದ್ದು ನಿಜ.



ಮಡಿಚಿ ಎಸೆಯುವ ಕಲೆ-೫

ಮುಂದೆ ಈ ವಿದ್ಯೆಯನ್ನು ನನ್ನ ಬೀಟ್ ಹುಡುಗರಿಗೆಲ್ಲಾ ಕಲಿಸಿದೆ. ಕೆಲ ಹುಡುಗರು ಇದರಿಂದಾಗಿ ಅವರು ಸಮಯ ಉಳಿದು ನನ್ನ ಆದಾಯ ಹೆಚ್ಚಿಸಿದರು. ಅವರವರ ಗೆಳೆಯರೆಗೂ ಇದನ್ನು ಹೇಳಿಕೊಟ್ಟು ಅವರವರ ಯಜಮಾನರ ಆಧಾಯದ ಜೊತೆಗೆ ಖುಷಿಯನ್ನು ಹೆಚ್ಚಿಸಿದ್ದು ನಿಜ.

ಮುಂದೊಂದು ದಿನ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದಲ್ಲಿ ಈ ಕಲೆ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ನಮ್ಮ ನಮ್ಮ ಸಂಪಾದನೆಯನ್ನು ಹೆಚ್ಚಿಸಿಕೊಂಡು ಸ್ವಲ್ಪ ಮಟ್ಟಿಗಾದರೂ ಶ್ರೀಮಂತರಾಗಬಹುದೆಂದು ಕನಸು ಕಂಡಿದ್ದರು ನಾನು ಸೇರಿದಂತೆ ನನ್ನ ವೃತ್ತಿಭಾಂಧವರು.

ಆದರೆ ನನ್ನ ಮಂಜ ಈ ವಿದ್ಯೆಯಲ್ಲಿ ಇನ್ನಷ್ಟು ಪರಿಣತಿ ಸಾಧಿಸಲು ಪ್ರಯತ್ನಿಸಿ ಗ್ರಾಹಕರ ಮಹಡಿ ಮನೆಗಳ ಕಿಟಕಿಗಳ ದುಬಾರಿ ವೆಚ್ಚದ ಗಾಜುಗಳನ್ನು ಹಾಗೂ ವಿದ್ಯುತ್ ದೀಪಗಳನ್ನು ಒಡೆದಿದ್ದ. ನಾನು ಎಂದಿನಂತೆ ಹಣ ವಸುಆಲಿಗೆ ಹೋದಾಗ, ಮಂಜನ ಸಾಹಸವನ್ನು ಸಾಕ್ಷಿ ಸಮೇತ ತೋರಿಸಿ ವಸೂಲಿ ಹಣದಲ್ಲಿ ಕಿಟಕಿಯ ದುಬಾರಿ ಗ್ಲಾಸು, ಆಲಂಕೃತ ವಿದ್ಯುತ್ ದೀಪಗಳ ವೆಚ್ಚಗಳನ್ನು ಮುರಿದುಕೊಂಡಾಗ ಆ ತಿಂಗಳ ಆಧಾಯವೆಲ್ಲಾ ಸೋರಿಹೋಗಿತ್ತು. ಇದು ನನಗೊಬ್ಬನಿಗಾಗದೇ ನನ್ನ ಗೆಳೆಯರ ಹುಡುಗರು ನಮ್ಮ ಮಂಜನಂತಹದ್ದೇ ಸಾಹಸಗಳನ್ನು ಮಾಡಿದ್ದರಿಂದ ಅವರಿಗೂ ಹೀಗೆ ಸಾಮೂಹಿಕ ನಷ್ಟ ಉಂಟಾಗಿ, ನಾವೆಲ್ಲಾ ನಿರೀಕ್ಷಿಸಿದ್ದ ಕ್ರಾಂತಿಕಾರಿ ಬದಲಾವಣೆ ಹಿಮ್ಮುಖವಾಗಿ ಸಾಗಿ ನಾನು ಸೇರಿದಂತೆ ಎಲ್ಲರೂ ಶ್ರೀಮಂತರಾಗುವ ಬದಲಿಗೆ ಮತ್ತಷ್ಟು ಬಡವರಾದೆವು.

ಇದೆಲ್ಲಾ ನಡೆದ ನಂತರವೂ ನನ್ನ ಜೊತೆ ದಿನಪತ್ರಿಕೆ ಹಾಕಲು ಜಾಣೇಶ ಬಂದಾಗ " ಈ ಎಸೆಯುವ ಕಲೆ" ಸೈನ್ಸೋ, ಕಲೆಯೋ, ಗಣಿತವೋ, ಅಂಕಿ ಅಂಶಗಳ ಸ್ಟಾಟಿಸ್ಟಿಕ್ಸೋ ತಿಳಿಯದೆ ಜಿಜ್ಣಾಸೆಗೊಳಗಾಗುತ್ತೇನೆ.

ಶಿವು.ಕೆ

2 comments:

kalsakri said...

ಸೂಪರ್ ಗುರುಗಳೇ ... ನಿಮ್ಮ ಎಲ್ಲಾ ಬ್ಲಾಗುಗಳನ್ನು ನೋಡಿದೆ .... ತುಂಬ ಚೆನ್ನಾಗಿವೆ ... ನಿಜಕ್ಕೂ ತಲೆ ಬಾಗುವೆ ....

ಉಉನಾಶೆ said...

ಬರಹ ಬಹಳ ಚೆನ್ನಾಗಿದೆ.