Saturday, September 27, 2008

ಮುಂಜಾನೆ ಸಂತೆ

ಜಗತ್ತೇ ಮಲಗಿರುವಾಗ ಬುದ್ದನೊಬ್ಬ ಎದ್ದ. ಎನ್ನುವ ಮಾತು ಹಳೆಯದು. ಈಗ ಜಗತ್ತೇ ಮಲಗಿರುವಾಗ ನಾವು ದಿನಪತ್ರಿಕೆ ಹಂಚುವವರು[ಜೊತೆಗೆ ಹಾಲಿನವರು] ಎದ್ದಿರುತ್ತೇವೆ. ಎನ್ನುವುದು ಇಂದಿನ ಮಾತು.

ಬೆಳಗಿನ ನಾಲ್ಕು ಗಂಟೆಗೆ ಪ್ರಾರಂಭವಾಗುವ ನಮ್ಮ ದಿನಪತ್ರಿಕೆ ಹಂಚುವ ಕೆಲಸ ಎಲ್ಲಾ ಮುಗಿಯುವ ಹೊತ್ತಿಗೆ ೭ ಗಂಟೆ ದಾಟಿರುತ್ತದೆ. ಒಂದು ರೀತಿ ಇಡೀ ಪ್ರಪಂಚವೇ ನೆಮ್ಮದಿಯಾಗಿ ನಿದ್ರಿಸುವ ಸಮಯದಲ್ಲಿ ನಾವು ಬ್ಯುಸಿ ಬೀಗಳಂತೆ ಚಟುವಟಿಕೆಯಿಂದ ನಮ್ಮ ಪೇಪರುಗಳ ಬಂಡಲ್ಲುಗಳನ್ನು ತರುವುದು, ಸಪ್ಲಿಮೆಂಟರಿ[ಮುಖ್ಯಪತ್ರಿಕೆಯ ಜೊತೆಯಲ್ಲಿ ದಿನಕ್ಕೊಂದು, ಎರಡು ಹೆಚ್ಚಿನ ಪುಟಗಳು ಉದಾಹರಣೆಗೆ "ಮೆಟ್ರೋ, ಸಾಪ್ತಾಹಿಕ, ವಾಣಿಜ್ಯ, ಲೈಫ್ ಸ್ಟೈಲ್, ಕ್ಲಾಸಿಫೈಡ್, ಉದ್ಯೋಗ,ಇತ್ಯಾದಿ ಇವುಗಳನ್ನು ಸಪ್ಲಿಮೆಂಟರಿಗಳು ಅನ್ನುತ್ತೇವೆ]ಗಳನ್ನು ತರುವುದು, ಒಂದೊಂದು ಏರಿಯಾದ ಸುಮಾರು ೫೦-೮೦ ಮನೆಗಳಿಗೆ ಒಬ್ಬೊಬ್ಬ ಹುಡುಗನು ನಿಗದಿಪಡಿಸಿದ ಪತ್ರಿಕೆಗಳನ್ನು ತನ್ನ ಸೈಕಲ್ಲಿಗೇರಿಸಿಕೊಂಡು ಹೋಗಿ ಮನೆಗಳಿಗೆ ತಲುಪಿಸುವುದು, ಹಣ ಕೊಡುವುದು, ಪಡೆಯುವುದು, ಚಿಲ್ಲರೆಗಾಗಿ ಮಾತು, ರೇಗಾಟ, ಹೀಗೆ ನೂರಾರು ಸಂಗತಿ ಸನ್ನಿವೇಶಗಳೆಲ್ಲಾ ಸೇರಿದ ಒಂದು ಸಣ್ಣ ಸಂತೆ. ಕೇವಲ ೨-೩ ಗಂಟೆಗಳಲ್ಲಿ ಫುಟ್ ಪಾತ್ ಎನ್ನುವ ವೇದಿಕೆ ಮೇಲೆ ೨೦-೨೦ ಕ್ರಿಕೆಟ್ಟಿಗಿಂತ ವೇಗವಾಗಿ, ಚುರುಕಾಗಿ ನಸುಕಿನಲ್ಲಿ ನಡೆಯುವ ಇಲ್ಲಾ ನವರಸಗಳ, ಎಲ್ಲಾ ವಯೋಮಾನದವರ ರಂಗಪ್ರಯೋಗವೆನ್ನಿ. ಇಲ್ಲಾ ದಿನಪತ್ರಿಕೆಗಳ ಸಂತೆ ಎನ್ನಿ.

ಅಂದಹಾಗೆ ನಮ್ಮ ಈ ಕೆಲಸ ಮಹಾನ್ ಸಾಧನೆ ಎಂದಾಗಲಿ, ನಾವೆಲ್ಲರೂ ತುಂಬಾ ನಿಯತ್ತಿನವರು, ನಮ್ಮ ದಿನಪತ್ರಿಕೆ ಹಂಚುವ ಹುಡುಗರಾಗಲಿ, ನಾವಾಗಲಿ ಕಾಯಕವೇ ಕೈಲಾಸ, ನಮ್ಮ ಗ್ರಾಹಕರಿಗೆ ಒಳ್ಳೆಯ ಸೇವೆ ಕೊಡಬೇಕು, ಕೊಡುತ್ತಿದ್ದೇವೆ ಎಂದೆಲ್ಲಾ ಹೇಳಿ ನಿಮಗೆ ಬೋರು ಹೊಡಿಸುವುದಿಲ್ಲ.

ಅದೆಲ್ಲವನ್ನು ಬಿಟ್ಟು ನೀವೆಂದು ಕಂಡಿರದ, ನೋಡಿರದ, ಕೇಳಿರದ, ಕೊನೆಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ಹೊಸ ಹೊಸ ನಿಜ ಚಿತ್ರಗಳನ್ನು ಈ ಲೇಖನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತೇನೆ.

ನಾನು ಈ ವೃತ್ತಿಗೆ ಬರುವ ಮೊದಲು ಸುಮಾರು ೨೦ ವರ್ಷಗಳ ಹಿಂದೆ ಈ ದಿನಪತ್ರಿಕೆಗಳನ್ನು ಮನೆ-ಮನೆಗೆ ತಲುಪಿಸುವ ಬೀಟ್ ಬಾಯ್ ಆಗಿದ್ದೆ. ಆಗ ನನ್ನ ಎಸ್.ಎಸ್.ಎಲ್.ಸಿ ಮುಗಿದು ಕಾಲೇಜಿಗೆ ಸೇರಿದ್ದ ದಿನಗಳು. ಅಲ್ಲಿಯವರೆಗೆ ಬೆಳಸಿ ಓದಿಸಿದ್ದ ಅಪ್ಪ ಅಮ್ಮನ ಬಳಿ ಇನ್ನು ಮುಂದೆ ನನ್ನ ಸಣ್ಣ ಪುಟ್ಟ ಖರ್ಚುಗಳಾದ ಪೆನ್ನು ಪುಸ್ತಕ ಇತರೆ ವೆಚ್ಚಗಳನ್ನು ಕೇಳದೆ ನಾನೇ ಯಾವುದಾದರೂ ಪಾರ್ಟ್ ಟೈಂ ಕೆಲಸದ ಸಂಪಾದನೆಯಿಂದ ಸರಿದೂಗಿಸುವಂತೆ ನನ್ನ ಸ್ವಾಭಿಮಾನಿ ಮನಸ್ಸು ಹೇಳುತ್ತಿತ್ತು.

ನನ್ನ ಪಕ್ಕದ ಮನೆಯ ಹುಡುಗ ಬೆಳಿಗ್ಗೆ ಎದ್ದು ದಿನಪತ್ರಿಕೆ ಹಂಚಲು ಹೋಗುತ್ತಿದ್ದ. ಅವನಿಗೆ ನಾನು ಬರುತ್ತೇನೆ ನಿನ್ನ ಜೊತೆ ಕರೆದುಕೊಂಡು ಹೋಗ್ತೀಯ ಎಂದೆ. ಆಯ್ತು ಬಾ ಎಂದು ಅವರ ಓನರ್ ಬಳಿ ನನ್ನನ್ನು ಕರೆದೊಯ್ದ. ಆ ಓನರ್ ಒಂದು ಏರಿಯಾದ ೫-೬ ರಸ್ತೆಗಳಲ್ಲಿರುವ ಸುಮಾರು ಐವತ್ತು ಮನೆಗಳನ್ನು ತೋರಿಸಿ ಪ್ರತಿದಿನ ಆ ಮನೆಗಳಿಗೆ ದಿನಪತ್ರಿಕೆ ಹಂಚುವ ಕೆಲಸ ಕೊಟ್ಟರು.

ಎಲ್ಲಾ ಸರಿ, ಆದರೆ ಪತ್ರಿಕೆ ಹಂಚಲು ಸೈಕಲ್ ಬೇಕಲ್ಲ. ಏನು ಮಾಡುವುದು? ನನ್ನ ತಂದೆಗೆ ಸೈಕಲ್ಲು ಕೊಡಿಸುವಷ್ಟು ಚೈತನ್ಯವಿರಲಿಲ್ಲ. ನನ್ನ ಗೆಳೆಯನ ಬಳಿ ಮತ್ತೊಂದು ಸೈಕಲ್ ಇತ್ತು. ಆ ಸೈಕಲನ್ನು ನಾನು ತಿಂಗಳಿಗೆ ೨೦ ರೂಪಾಯಿ ಬಾಡಿಗೆ ಎಂದು ನಿಗದಿಪಡಿಸಿಕೊಂಡು ನನ್ನ ಜೀವನದ ಮೊದಲನೆ ಕೆಲಸವನ್ನು ಬೀಟ್ ಬಾಯ್ ಆಗಿ ಪ್ರಾರಂಭಿಸಿದೆ. ಆಗ ನನಗೆ ಮೊದಲ ತಿಂಗಳ ಸಂಬಳ ಅಂತ ಬಂದಿದ್ದು ೪೦ ರೂಪಾಯಿ.

ಅದರಲ್ಲಿ ಸೈಕಲ್ ಬಾಡಿಗೆ ಅಂತ ೨೦ ರೂಪಾಯಿ ಹೋಗಿಬಿಡುತ್ತಿತ್ತು. ಉಳಿದ ೨೦ ರೂಪಾಯಿಯನ್ನು ನಾನು ನನ್ನ ತಿಂಗಳು ಪೂರ್ತಿ ಖರ್ಚಿಗಾಗಿ ಇಟ್ಟುಕೊಳ್ಳುತ್ತಿದ್ದೆ. ಅಲ್ಲಿಂದ ಸಾಗಿದ ಈ ದಾರಿ ೬ ವರ್ಷಗಳ ನಂತರ ಬೀಟ್ ಆಗಿ ಪಡೆದಿದ್ದ ಅನುಭವ, ಈ ವೃತ್ತಿಯ ಲೆಕ್ಕಚಾರ, ಲಾಭ-ನಷ್ಟಗಳು ನಿದಾನವಾಗಿ ತಿಳಿಯತೊಡಗಿತು. ಆಷ್ಟು ಹೊತ್ತಿಗೆ ನನ್ನ ಬಿ.ಕಾಂ ಪದವಿ ಮುಗಿದಿತ್ತು. ಮುಂದೆ ಓದುವುದೊ ಇಲ್ಲ ಯಾವುದಾದರೂ ಉದ್ಯೋಗ ಹುಡುಕುವುದೋ ಎನ್ನುವ ಗೊಂದಲದಲ್ಲಿದ್ದವನಿಗೆ ಒಳ್ಳೇ ಉದ್ಯೋಗ ಸಿಗುವವರೆಗೆ ಸ್ವಲ್ಪ ಉಳಿಸಿಟ್ಟ ಹಣದಲ್ಲಿ ನಾನೇ ಏಜೆನ್ಸಿ ತೆಗೆದುಕೊಂಡು ನಡೆಸಿದರೆ ತಾತ್ಕಾಲಿಕವಾಗಿ ಜೀವನಾಧಾರವಾಗುತ್ತದೆ ಅನ್ನಿಸಿತ್ತು.

ಆಗ ತೆಗೆದುಕೊಂಡ ತೀರ್ಮಾನದಿಂದಾಗಿ, ಹಾಗೂ ಯಾರ ಕೈ ಕೆಳಗೂ ಕೆಲಸಮಾಡದೇ ನಾನೆ ಸ್ವಂತ ಏನಾದರೂ ಮಾಡಬೇಕೆನ್ನುವ ನನ್ನ ಹಂಬಲದಿಂದಾಗಿ ಇದೇ ಮುಖ್ಯ ಜೀವನಾಧಾರದ ಕೆಲಸವಾಗಿಬಿಟ್ಟಿತ್ತು. ಒಂದೆರಡು ಸರ್ಕಾರಿ ಉದ್ಯೋಗಗಳು , ಖಾಸಗಿ ಕೆಲಸಗಳು ಸಿಕ್ಕರೂ ಬೇಡವೆಂದ ಕಾರಣಕ್ಕೆ ಮನೆಯವರಿಂದ ಬೈಸಿಕೊಂಡರೂ ನನಗಿಷ್ಟವಾದ ರೀತಿ ಬದುಕಬಹುದಲ್ಲ ಎಂದು ಖುಷಿಯಿತ್ತು.

ಈ ವೃತ್ತಿಯಲ್ಲಿ ಇಲ್ಲಿಯವರೆಗೆ ಬಂದ ದಾರಿಯಲ್ಲಿ ಆದ ಅನುಭವಗಳು ಸಾವಿರಾರು. ನಡುವೆ ನಡೆದ ತರಲೆ ತಾಪತ್ರಯಗಳು ಕಷ್ಟ-ಕೋಟಲೆಗಳು, ಚಿಕ್ಕ ಚಿಕ್ಕ ಸಂತೋಷದ ಸಂಗತಿಗಳು, ನೋವು, ತಮಾಷೆಗಳು ಎಲ್ಲಾ ಅನುಭವಿಸಿದ ನನಗೆ ನಮ್ಮ ಮುಂಜಾವಿನ ಬದುಕಿನಲ್ಲಿ ನಡೆದ ಕೆಲವು ವಿಭಿನ್ನ ಛಟನೆಗಳನ್ನು, ದೃಶ್ಯಾವಳಿಗಳನ್ನು, ನಿಮಗೆ ತೋರಿಸಬಯಸುತ್ತೇನೆ. ಇದಲ್ಲದೇ ಹವ್ಯಾಸ ಹಾಗೂ ವೃತ್ತಿಯಾಗಿ ಸ್ವೀಕರಿಸಿದ ಛಾಯಾಗ್ರಹಣ ಕಲೆಯು ನನಗೆ ಪ್ರಪಂಚವನ್ನು ಬೇರೊಂದು ರೀತಿಯಲ್ಲಿ ನೋಡುವ ಕಲೆಯನ್ನು ಕಲಿಸಿಕೊಟ್ಟಿತು.

ನಿಮಗೆ ಗೊತ್ತಿರುವಂತೆ ಬೆಳಿಗ್ಗೆ ಯಾರೋ ಒಬ್ಬ ಹುಡುಗ ನಿಮ್ಮ ಮನೆಗೆ ನಿಮಗೆ ಬೇಕಾದಂತ ಪೇಪರ್ ಹಾಕಿಹೋಗುತ್ತಾನೆ. ನಂತರ ತಿಂಗಳಿಗೊಮ್ಮೆ ಯಾರೋ ಒಬ್ಬ ಏಜೆಂಟ್ ಅಥವ ವಿತರಕ[ವೆಂಡರ್ ಎನ್ನುವುದು ನಮ್ಮ ವೃತ್ತಿಯ ನಿಜವಾದ ಹೆಸರು] ನಿಮ್ಮ ಮನೆಗೆ ಬಂದು ಹಣ ವಸೂಲಿ ಮಾಡುತ್ತಾನೆ. ಇದು ಬಿಟ್ಟರೆ ಯಾವುದೋ ರಸ್ತೆ ಬದಿಯ ಪೆಟ್ಟಿಗೆ ಆಂಗಡಿಗಳಲ್ಲಿ ಅಥವಾ ಬೆಳಗಿನ ಸಮಯ ಫುಟ್ ಪಾತಿನಲ್ಲಿ ಮಾರುವ ದಿನಪತ್ರಿಕೆಗಳು ನಿಮಗೆ ಕಾಣಸಿಗುಬಹುದು.

ಇದೆಲ್ಲವನ್ನೂ ಬಿಟ್ಟು ಈ ನಮ್ಮ ಸಣ್ಣ ಸಂತೆಯಲ್ಲಿ ನೀವೆಂದೂ ಕಾಣದ ಹೊಸ ಹೊಸ ದೃಶ್ಯಾವಳಿಯನ್ನು ಚಿತ್ರಗಳನ್ನು ಕಟ್ಟಿಕೊಡಲು ಪ್ರಯತ್ನಿಸುತ್ತೇನೆ. ಈ ಧೀರ್ಘಾವಧಿಯಲ್ಲಿ ಆದ ಎಲ್ಲಾ ಅನುಭವಗಳನ್ನು ಹೇಳಲು ಸಾಧ್ಯವಾಗದಿದ್ದರೂ ಕೆಲವು ತುಣುಕುಗಳನ್ನಾದರೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಮತೊಂದು ವಿಚಾರ ನಿಮಗೇ ಹೇಳಲೇಬೇಕು. ನನ್ನ ಈ ಲೇಖನಗಳಲ್ಲಿ ಪತ್ರಿಕೆ, ದಿನಪತ್ರಿಕೆ, ಪೇಪರು, ಬೀಟ್ ಬಾಯ್ಸ್, ಏಜೆಂಟ್, ವಿತರಕ, ಗಿರಾಕಿಗಳು, ಗ್ರಾಹಕರು, ವೃತ್ತಿಭಾಂಧವ ಸಪ್ಲಿಮೆಂಟರಿಗಳು, ಪಾಂಪ್ಲೆಟ್ಸ್ ಇತ್ಯಾದಿ ಪದಗಳೆಲ್ಲಾ ಅಲ್ಲಲ್ಲಿ ರಸ್ತೆಯ ಆಂಪ್ಸ್ ಗಳಂತೆ ಸ್ವಲ್ಪ ಜಾಸ್ತಿಯಾಗಿಯೇ ಬರುವುದರಿಂದ ನಿಮ್ಮ ಓದುವ ಓಟದ ವೇಗಕ್ಕೆ ಅಲ್ಲಲ್ಲಿ ಆಡ್ಡಿಯುಂಟು ಮಾಡಬಹುದು. ಆದರೇನು ಮಾಡಲಿ ನಾನು ಹೇಳಬಯಸಿರುವುದು ಇದೇ ವಿಚಾರವಾದ್ದರಿಂದ, ನೀವು ಸಹಿಸಿಕೊಳ್ಳುತ್ತೀರೆಂದುಕೊಳ್ಳುತ್ತೇನೆ.

ಶಿವು.ಕೆ

13 comments:

Santhosh Rao said...

ತುಂಬಾ ಚೆನ್ನಾಗಿ ಬರೆದಿದ್ದೀರ ..ಇನ್ನು ಸ್ವಲ್ಪ ಬರೀ ಬಹುದಿತ್ತೇನೋ !!

shivu.k said...

Thanks. ಇದೊಂದು ಪೀಠಿಕೆ ಆಷ್ಟೆ.
ನನ್ನ ಬಗ್ಗೆ ನಾನು ಬರೆಯುತ್ತಿರುವ ಲೇಖನಗಳ ಬಗ್ಗೆ ಇಷ್ಟು ಸಾಕು ಅನ್ನಿಸ್ತು.

ಮುಖ್ಯ ವಸ್ತು ಇರೋದು ಅದರ ಮುಂದಿನ ಉಳಿದ ಲೇಖನಗಳಲ್ಲಿ. ದಯವಿಟ್ಟು ಓದಿ. enjoy ಮಾಡ್ತೀರ.
ಈ ವಸ್ತುವಿನ ಬಗ್ಗೆ ಇನ್ನೂ ಬರೆಯುತ್ತಿದ್ದೇನೆ. ಮುಂದೆ ಪೋಸ್ಟ್ ಮಾಡುತ್ತೇನೆ.

Ittigecement said...

REALY YOUR BLOG IS DIFFERENT!! KEEP IT UP...

sunaath said...

ಬಹಳ ಇಷ್ಟವಾಯಿತು.
ನಿಮಗೊಂದು ಗುಟ್ಟು(!) ಹೇಳ್ತೀನಿ.
ಧಾರವಾಡದಲ್ಲಿ ಪೇಪರ ಹಂಚುತ್ತಿದ್ದ ಹುಡುಗನೊಬ್ಬ, ೨೦ ವರ್ಷಗಳ ಬಳಿಕ, finance ಕಂಪನಿಯ ಮಾಲಿಕರಾಗಿದ್ದಾರೆ.
ಅದು ಅವರ ಶ್ರದ್ಧೆ ಹಾಗು ಪರಿಶ್ರಮದ ಫಲವಾಗಿರಬಹುದು.

shivu.k said...

ಸುನೀತ್ ಸಾರ್ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಈ ವಿಚಾರದಲ್ಲಿ ಮತ್ತಷ್ಟು enjoy ಮಾಡಲು ಉಳಿದ ಲೇಖನಗಳನ್ನು ಓದಿ ಅದರಲ್ಲೂ ನನ್ನ ಮೆಚ್ಚಿನ ಬರಹವಾದ "ನಾಯಿಗಳು ಸಾರ್ ನಾಯಿಗಳು" ಓದಿ. ನಿಜಕ್ಕೂ ನಿಮಗೆ ವಿಭಿನ್ನ ಅನುಭವ ಅನ್ನಿಸಬಹುದು. ನಂತರ ಅದರ ಕಾಮೆಂಟ್ ಬರೆಯುವುದನ್ನು ಮರೆಯಬೇಡಿ. ಇನ್ನೂ ಇದರ ಮುಂದುವರಿದ ಲೇಖನಗಳನ್ನು ಬರೆಯುತ್ತಿದ್ದೇನೆ.

bhadra said...

ಕಷ್ಟಕರವಾದ ಜೀವನ ಪರಿಯನ್ನು ಬಹಳ ಹೃದಯಂಗಮವಾಗಿ ನಿರೂಪಿಸಿದ್ದೀರಿ - ಹೇಳ್ತಾರೆ! ಅನುಭವಿಸಿದವರು ಮಾತ್ರ ಬರಹದ ಮೂಲಕ ಓದುಗರ ಮನವನ್ನು ತಟ್ಟಬಹುದು. ಮನದ ಚಿಂತನೆದ ಬರಹದಲ್ಲಿ ಅಷ್ಟೊಂದು ಸೂಕ್ಷ್ಮತೆ, ನಾಟುವಿಕೆ ಬರುವುದಿಲ್ಲ. ಹುಂ! ಇಂತಹ ಜೀವನವನ್ನೂ ನಾನು ಕಂಡದ್ದಾಯ್ತು. ಮರೆಯಲಾಗದ, ಮರೆಯಬಾರದ ಜೀವನ ಸತ್ಯ.

ನಿಮ್ಮ ಬರಹ ಮತ್ತು ಕೈ ಚಳಕ ನನ್ನ ಹೃದಯ ತಟ್ಟಿದೆ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

jomon varghese said...

ಚೆಂದದ ಬರಹ. ನನ್ನ ಗೆಳೆಯನೊಬ್ಬ ಹುಬ್ಬಳ್ಳಿಯಲ್ಲಿ ಪೇಪರ್ ಏಜೆಂಟ್ ಇದ್ದಾನೆ. ಏಳೆಂಟು ವರ್ಷದಿಂದ ಅದೇ ಕೆಲಸ ಮಾಡುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ಒಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೇ ನನ್ನನ್ನು ಎಬ್ಬಿಸಿಕೊಂಡು ಸಂಯಕ್ತಕರ್ನಾಟಕ ಆಫೀಸಿಗೆ ಕರೆದುಕೊಂಡು ಹೋಗಿದ್ದ.ಡೆಲಿವರಿ ಹುಡುಗರ ಬಗ್ಗೆ, ಅವರ ಜೀವನ ಪ್ರೀತಿಯ ಬಗ್ಗೆ ಕನ್ನಡಪ್ರಭಕ್ಕೊಂದು ಲೇಖನ ಬರೆದಿದ್ದೆ. ಪ್ರಕಟವಾಗಿತ್ತು. ಈಗ ಅದೆಲ್ಲಾ ನೆನಪಾಗುತ್ತಿದೆ. ಬರೆಯುತ್ತಲಿರಿ...

sunaath said...

ಶಿವು,
”ನಾಯಿಗಳು ಸಾರ್..” ತುಂಬಾ ಚೆನ್ನಾಗಿದೆ. ನಾಯಿಗಳ ವರ್ತನೆ ಸಹ ಮನುಷ್ಯರ ವರ್ತನೆಗೆ ಹತ್ತಿರವಾಗಿರುವದನ್ನು ತೋರಿಸುತ್ತದೆ. ಒಳ್ಳೆಯ insight ಇರೋ ಲೇಖನ.

ಬಾಲು said...

chennagide.... font chur dodda madidre odoke innu sukha aagutte ansutte.

ರಾಘು ತೆಳಗಡಿ said...

".........ಹೇಳಬಯಸಿರುವುದು ಇದೇ ವಿಚಾರವಾದ್ದರಿಂದ, ನೀವು ಸಹಿಸಿಕೊಳ್ಳುತ್ತೀರೆಂದುಕೊಳ್ಳುತ್ತೇನೆ", ಹೇಯ್ ಶಿವೂ ಕಂಡಿತ ನಾವು ಸಹಿಸಿಕೊಲ್ಲೋದ್ರ ಜೊತೆಗೆ ನಿಮ್ಮ ಬರವಣಿಗೆಗೆ ಕಾಯ್ತಾ ಇರ್ತಿವಿ. ಚೆನ್ನಾಗಿ ಬರದಿದ್ರ ಪೀಠಿಕೆ. ಬರೀತಾ ಇರಿ. ಒಳ್ಳೆದಾಗಲಿ.

shivu.k said...

ಬಾಲು ಸರ್, ನಿಮ್ಮ ಕೋರಿಕೆ ಮೇರೆಗೆ font ದೊಡ್ಡದು ಮಾಡಿದ್ದೀನಿ.[ನನಗದು ಗೊತ್ತೆ ಆಗಿರಲಿಲ್ಲ] ಬರ್ತಾ ಇರಿ. ಮುಂದಿನ ಲೇಖನಗಳನ್ನು ಓದಿ ಇಷ್ಟವಾಗಬಹುದು. ಪ್ರತಿಕ್ರಿಯಿಸಿ. ಧನ್ಯವಾದಗಳು.

ಶಿವು.ಕೆ

ರಾಘು ಸಾರ್,
ನಾನು ಖಂಡಿತ ಸಹಿಸಿಕೊಳ್ಳುತ್ತೇನೆ. ಬರೀತಿರಿ. ಹಾಗು ನನ್ನ ಬ್ಲಾಗಿಗೆ ಮತ್ತೆ ಮತ್ತೆ ಬರ್ತಾ ಇರಿ. ಇನ್ನು ಈ ವಿಚಾರವಾಗಿ ಮುಂದಿನ ಲೇಖನಗಳನ್ನು ಬರೆಯುತ್ತಿದ್ದೇನೆ. ಮುಗಿದ ನಂತರ ಬ್ಲಾಗಿಗೆ ಹಾಕುತ್ತೇನೆ. thanks.
ಶಿವು.ಕೆ

ಚಿತ್ರಾಕರ್ಕೇರಾ, ದೋಳ್ಪಾಡಿ said...

ಶಿವಣ್ಣ,
"ಬದುಕಿನಲ್ಲಿ ನಾವು ಸಾಕಷ್ಟು ಘಟನೆಗಳಿಗೆ, ನೋವು-ನಲಿವುಗಳಿಗೆ ಸಾಕ್ಷಿಯಾಗುತ್ತೇವೆ. ಇವೆಲ್ಲವೂ ಬದುಕಿನ ದಾರಿಗೆ ಪೂರಕ ಸಾಮಾಗ್ರಿಗಳು"..ಸುಖ ಎನ್ನುವುದು ಹೋಗಿ ಸೇರುವ ನಿಲ್ದಾಣವಲ್ಲ...ಪ್ರಯಾಣದ ದಾರಿಯೇ ಸುಖ ಯಾರದ್ದೋ ಮಾತು. ಶಿವಣ್ಣ ಬದುಕು-ಭಾವಗಳನ್ನು ತೆರೆದಿಟ್ಟಿರಿ.ಬರಹ ತುಂಬಾ ಇಷ್ಟವಾಯಿತು. ಇದೇ ನಾನು ಹೇಳಿದ ಪೇಪರ್ ಹುಡುಗನ ಕಥೆ. ಮಾತ್ರವಲ್ಲ ಹಲವರ ಬದುಕು ಕೂಡ ಹೌದು..ಥ್ಯಾಂಕ್ಯೂ ಅಣ್ಣ,
-ಚಿತ್ರಾ

shivu.k said...

ಚಿತ್ರಾ,
ನಿನ್ನ ಕಾಮೆಂಟ್ ಓದಿ ಖುಷಿಯಾಯಿತು. ನಿನ್ನ ನನಗನ್ನಿಸುತ್ತೆ ನೀನು ಈ ವಯಸ್ಸಿಗೆ ತೂಕವಾಗಿ ಬರೆಯುತ್ತೀಯ ಮುಂದೆ ದೊಡ್ಡ ತತ್ವಜ್ಞಾನಿಯಾಗಬಹುದು.[ತಮಾಷೆ ಮಾಡಿದೆ] ಮತ್ತೊಮ್ಮೆ ಥ್ಯಾಂಕ್ಸ್. ಉಳಿದ ಲೇಖನಗಳನ್ನು ಓದಿ ನನ್ನಂಥ ಪಕೀರನನ್ನು ಪಾಮರನನ್ನಾಗಿಸಬೇಕಾಗಿ ವಿನಂತಿ.