ಪ್ರತಿಯೊಂದು ಕೆಲಸಕ್ಕೂ ನೆನಪಿಟ್ಟುಕೊಳ್ಳುವುದು ಅಥವ ಗುರುತಿಟ್ಟುಕೊಳ್ಳುವುದು ಅಂತ ಇದ್ದೇ ಇರುತ್ತದೆ. ಉದಾಹರಣೆಗೆ ಅಡುಗೆಮನೆಯಲ್ಲಿ ಯಾವ ಯಾವ ಮಸಾಲೆ, ಮೆಣಸು, ಉಪ್ಪು, ಸಕ್ಕರೆ ಇತರೆ ವಸ್ತುಗಳು ಯಾವ ಯಾವ ಬಾಕ್ಸಿನಲ್ಲಿರುತ್ತವೆ ಅಂತ ಗುರುತಿಸಿಟ್ಟುಕೊಳ್ಳುವುದು, ಹಾಗೆ ಕಂಪ್ಯೂಟರಿನಲ್ಲಿ ಇರುವ ದಾಖಲೆಗಳು ಯಾವ ಯಾವ ಫೋಲ್ಡರಿನಲ್ಲಿ ಇರುತ್ತವೆ ಎನ್ನುವುದನ್ನು ನೆನಪಿಸಿಕೊಳ್ಳುವುದು.
ಇದೇ ರೀತಿ ನಮ್ಮ ದಿನಪತ್ರಿಕೆ ವಿತರಣೆ ಕೆಲಸದಲ್ಲೂ ಒಂದು ಏರಿಯಾದಲ್ಲಿರುವ ಅನೇಕ ರಸ್ತೆಗಳು, ಆ ರಸ್ತೆಗಳಲ್ಲಿ ನಾವು ಪ್ರತಿದಿನ ದಿನಪತ್ರಿಕೆ ಹಾಕುವ ಮನೆಗಳನ್ನು ನಾವು ಏಜೆಂಟರು ಮತ್ತು ನಮ್ಮ ಬೀಟ್ ಹುಡುಗರು ನೆನಪಿಟ್ಟುಕೊಳ್ಳಬೇಕು. ಇದನ್ನು ನಾವು ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ.
ಈ ರೀತಿ ನಮ್ಮ ಗ್ರಾಹಕರ ಮನೆಗಳನ್ನು ನಾವು ಗುರುತಿಟ್ಟುಕೊಂಡು ಹೋಗಿ ಪ್ರತಿತಿಂಗಳು ಹಣ ವಸೂಲಿ ಮಾಡುವ ರೀತಿ ನೀತಿಗಳು, ನಮ್ಮ ಹುಡುಗರು ಮನೆಗಳನ್ನು ಗುರುತಿಟ್ಟುಕೊಳ್ಳುವ ವಿಧಾನ, ಅದಕ್ಕೇ ಅವರ್‍ಎ ನಾಮಕರಣ ಮಾಡಿಕೊಂಡ ಅಡ್ಡ ಹೆಸರುಗಳು, ತಮಾಷೆ ಪದಗಳು, ಆ ಕ್ಷಣಕ್ಕೆ ಬಲು ಮೋಜೆನಿಸಿದರೂ ಅದು ನನಗೂ ಮತ್ತು ನನ್ನ ಬೀಟ್ ಹುಡುಗರಿಗೂ ತುಂಬಾ ಮುಖ್ಯವಾಗಿರುತ್ತದೆ. ಮತ್ತು ಸುಲಭವೂ ಆಗಿರುತ್ತದೆ.
ಈ ವಿಚಾರವಾಗಿ ನಮ್ಮಲ್ಲಿ ನಡೆಯುವ ಮಾತುಕತೆ ಸನ್ನಿವೇಶಗಳಲ್ಲಿ ಕೆಲವನ್ನು ನಾನಿಲ್ಲಿ ಪ್ರತಿಬಿಂಬಿಸಲು ಪ್ರಯತ್ನಿಸುತ್ತೇನೆ.
ಆತ ತಮಿಳು ಹುಡುಗ ಸೇಬು. [ಅದು ಅಡ್ಡ ಹೆಸರು, ನಿಜ ಹೆಸರು ಶರತ್ ಅಂತ. ಶರತ್ ಅಂತ ಕೂಗಿದಾಗ ತಿರುಗಿನೋಡದೆ ಸೇಬು ಎಂದಾಗ ಚಕ್ಕನೆ ತಿರುಗುವಷ್ಟು ಒವರ್ ಟೇಕ್ ಮಾಡಿದೆ ಅವನ ಅಡ್ಡ ಹೆಸರು]. ಒಂದು ದಿನ ಯಾವುದೋ ಒಂದು ಮನೆಗೆ ಪತ್ರಿಕೆ ಹಾಕದೆ ತಪ್ಪಿಸಿದ್ದ. ಎಂದಿನಂತೆ ಆ ಗ್ರಾಹಕ ನನಗೆ ಫೋನ್ ಮಾಡಿ ನಮ್ಮ ಮನೆಗೆ ಇವತ್ತಿನ ಪೇಪರ್ ಬಂದಿಲ್ಲವೆಂದು ಹೇಳಿದರು. ಮರುದಿನ ಇವನು ಬಂದಾಗ ನಾನು ಕೇಳಿದೆ.
"ಹೇ ಸೇಬು, ಗಣೇಶ ದೇವಸ್ಥಾನದ ರಸ್ತೆಯಲ್ಲಿರೋ ಅಜ್ಜಿ ಮನೆಗೆ ಯಾಕೋ ನಿನ್ನೆ ಕನ್ನಡಪ್ರಭ ಹಾಕಲಿಲ್ಲ ? " ತುಸು ಕೋಪಗೊಂಡವನಂತೆ ನನ್ನ ಪ್ರಶ್ನೆ.
ತಕ್ಷಣ ಅವನಿಗೆ ಗಾಬರಿಯಾದರೂ ಅವನ ಮುಖದಲ್ಲಿ ಅದನ್ನು ತೋರಗೊಡದೆ "ಯಾವ ಮನೆ ಸಾರ್".
"ಆದೇ ಕಣೋ ಅಜ್ಜಿ ಮನೆ"
"ಯಾವುದು ಅಜ್ಜಿ ಮನೆ ಸಾರ್? "
ಅವನಿಗೆ ಇದನ್ನು ಗುರುತಿಸಲು ಏನು ಮಾಡುವುದು?
ನಮ್ಮಲ್ಲಿ ಒಂದು ಪದ್ದತಿ ಇದೆ. ನಮಗೆ ಬೇಕಾದ ಮನೆ ಬಹುಶಃ ಐದನೆಯದು ಆಗಿದ್ದರೆ ಅದರ ಹಿಂದಿನ ಮನೆಗಳ ಗುರುತುಗಳನ್ನು ಹೇಳಿಕೊಂಡು ಅವನಿಗೆ ಒಂದೊಂದಾಗಿ ನೆನಪಿಸುತ್ತಾ ಹೇಳಿಕೊಂಡು ಬರಬೇಕು. ಹಾಗೆ ನಾನು ಅವನಿಗೆ ಕೇಳಿದೆ.
ನಿನಗೆ ಆರನೇ ಮನೆ ಗೊತ್ತಿಲ್ಲವೇನೊ?
ಇಲ್ಲಾ ಸಾರ್,
ಸರಿ ಮೊದಲನೆ ಮನೆ ಹೇಳು ?
ಅವನು ಮನಸಿನಲ್ಲೇ ನೆನೆಸಿಕೊಂಡು, ಕನ್ನಡದಲ್ಲಿ ಮಗ್ಗಿ ಹೇಳುವಂತೆ ಗೊಣಗತೊಡಗಿದ.
ಪ್ರಜಾವಾಣಿ, ನಂತರ ನಾಯಿಮನೆ, ೩ನೇ ಮಹಡಿ ಟೈಮ್ಸ್ , ದೊಡ್ಡ ಗೇಟು ಕನ್ನಡಪ್ರಭ, ಹಸುಮನೆ, ಕಾವ್ಯ ಮನೆ...... ಸಾರ್ ಅದು ಕಾವ್ಯ ಮನೆ"
ಯಾವ ಕಾವ್ಯನೋ ?
ಅದೇ ಸಾರ್ ಹಸು ಮನೆ ಆದಮೇಲೆ ಸಿಗೋ ಮನೆ"
ಲೋ ಅದು ಅಜ್ಜಿ ಮನೆ ಅಲ್ಲವೇನೋ,
ಇಲ್ಲ ಸಾರ್, ಅದು ಕಾವ್ಯ ಮನೆ.
ಯಾರದು ಕಾವ್ಯ ?
ಕಾವ್ಯ ಆ ಮನೆ ಹುಡುಗಿ ಸಾರ್, ದಿನಾ ಆ ಹುಡುಗಿ ಕಾಲೇಜಿಗೆ ಹೊರಡೋದು ನಾನು ಪೇಪರ್ ಹಾಕೊ ಸಮಯದಲ್ಲೇ ಸಾರ್,
ನಿನಗೇಗೊ ಗೊತ್ತು ? ಆ ಹುಡುಗಿ ಹೆಸರು ಕಾವ್ಯ ಅಂತ ?
ಇದೇನ್ ಸಾರ್ ನೀವು ಹೀಗೆ ಕೇಳ್ತೀರಾ ? ಆ ಮನೆ ಕಾಂಪೊಂಡಲ್ಲಿ ಬರೆದಿದೆಯಲ್ಲ ! ಅದಲ್ಲದೇ ಅವರಮ್ಮ ಪ್ರತಿದಿನಾ ಆ ಹುಡುಗಿ ಹೊರಡೋ ಅವಸರದಲ್ಲಿ ಏನಾದರೂ ಬಿಟ್ಟು ಹೋಗುವಾಗ ಅವರಮ್ಮ " ಹೇ ಕಾವ್ಯ ಪೆನ್ನು ಬಿಟ್ಟಿದ್ದಿಯಲ್ಲೇ, ಬುಕ್ ಬಿಟ್ಟಿದ್ದಿಯಲ್ಲೇ" ಎಂದು ಕೂಗಿ ಹೇಳ್ತಾರೆ. ಅದರಿಂದ ನನಗೆ ಗೊತ್ತಾಯ್ತು ಅವಳ ಹೆಸರು ಕಾವ್ಯ ಅಂತ ! ಅಂತ ಹೇಳಿ ಹಲ್ಲು ಕಿರಿದ.
ಎಲಾ ಫಟಿಂಗನೇ ಎಷ್ಟು ಚೆನ್ನಾಗಿ ಎಲ್ಲಾ ಗಮನಿಸಿದ್ದಾನೆ ! ನಾನೇ ಒಂದು ದಿನವೂ ಆ ಹುಡುಗಿಯನ್ನು ನೋಡಿಲ್ಲ. ನಾನು ಹಣ ವಸೂಲಿಗೆ ಹೋದಾಗ ಆ ಮನೆಯ ವಯಸ್ಸಾದ ಅಜ್ಜಿ ಬಂದು ದುಡ್ಡು ಕೊಡುತ್ತಿದ್ದರು. ಆ ಕಾರಣಕ್ಕಾಗಿ ನಾನು ಅಜ್ಜಿ ಮನೆ ಎಂದು ಗುರುತಿಟ್ಟುಕೊಂಡಿದ್ದೆ. ಆದರೆ ಇವನಿಗೆ ಅಜ್ಜಿಮನೆಯೆಂದರೆ ಗೊತ್ತಾಗಲಿಲ್ಲವಲ್ಲ ! ಆ ಮನೆಯಲ್ಲಿ ಕಾಲೇಜಿಗೆ ಹೋಗುವ ಸುಂದರ ಹುಡುಗಿ ಕಾವ್ಯ ಇರುವಾಗ ಇವನಿಗೆ ಅಜ್ಜಿ ಏಕೆ ಬೇಕು ?
ಹೀಗೆ ನಾವು ಮನೆಯನ್ನು ಗುರುತಿಟ್ಟುಕೊಳ್ಳುವ ವಿಧಾನಗಳು ಚಾಲ್ತಿಯಲ್ಲಿರುತ್ತವೆ. ಇನ್ನು ಕೆಲವು ಬಲು ಮೋಜೆನಿಸುತ್ತವೆ.
ಮಂಜ ಅವತ್ತು ಬೇಗ ಬಂದಿದ್ದ ನನ್ನ ಒತ್ತಡಕ್ಕೆ. ಅವನು ಎದ್ದ ತಕ್ಷಣ ಟಾಯ್ಲೆಟ್ಟಿಗೆ ಹೋಗಬೇಕೆನ್ನುವುದು ಅವನ ಅಭ್ಯಾಸ. ಜೊತೆಗೆ ಅವನಿಗೆ ಅದು ಸಮಸ್ಯೆಯೂ ಕೂಡ. ಅವನು ಲೇಟಾಗಿ ಬಂದಾಗ ಯಾಕೋ ಲೇಟು ಅಂದರೆ " ಇಲ್ಲಾರಿ ನಾನು ಬೇಗನೆ ಎದ್ದಿದ್ದೆ. ಆದರೆ ಟಾಯ್ಲೆಟ್ಟಿಗೆ ಅವಸರವಾಯ್ತು. ಅಲ್ಲಿ ಕೂತವನು ಅಲ್ಲೇ ನಿದ್ದೆ ಮಾಡಿಬಿಟ್ಟಿದ್ದೆ" ಎಂದು ಹೇಳುತ್ತಿದ್ದ.
ಅವತ್ತು ಬೇಗ ಬಂದವನು "ರ್ರೀ ನನಗೆ ಬೇಗ ಬೀಟ್ ಪೇಪರ್ ಜೋಡಿಸಿಕೊಡಿ" ಅಂದ. ಯಾಕೋ ಅಂದೆ. ಅವನು "ಆ ತಾತ ಕಾಯ್ತಾ ಇರ್ತಾರೆ ಅಮೇಲೆ ಆನೆ ಗೇಟು, ಬ್ರೀಗೇಡ್ ಲಿಂಕ್ಸ್ ಕಾಂಪ್ಲೆಕ್ಸಿನಲ್ಲಿ ಅಜ್ಜಿ, ಬೆಕ್ಕು ಹೌಸ್[ ಆ ಮನೆಯಲ್ಲಿ ಮರಿಗಳ ಸಮೇತ ೧೨ ಬೆಕ್ಕುಗಳ ಸಂಸಾರವಿದೆ]ನಲ್ಲಿ ಮುಸ್ಲಿಮ್, ನಂತರ ಎಸ್.ಎಲ್. ಆಪಾರ್ಟ್‌ಮೆಂಟಿನಲ್ಲಿ ಮಲೆಯಾಳಿ ಅಂಟಿ, ಭೂತ ಬಂಗ್ಲೆ[ಹಳೇ ಕಾಲದ ಮನೆಗೆ ನಾವಿಟ್ಟ ಹೆಸರು]ಯಲ್ಲಿ ವಾತನ ಗಡ್ಡದ ಬುಡ್ಡ. ಶ್ರೀಪುರಂನಲ್ಲಿ ಪುರಿ ಮೂಟೆ ಆಂಟಿ, ಇವರೆಲ್ಲರೂ ಬೇಗ ಪೇಪರ್ ಕೇಳ್ತಾರೆ, ಇದೆಲ್ಲದಕ್ಕಿಂತ ಮೊದಲು ಅರ್ಜೆಂಟ್ ಅಪಾರ್ಟ್‌ಮೆಂಟ್[ಅದಕ್ಕೂ ನಾವಿಟ್ಟ ಹೆಸರು. ಪೂರ್ತಿ ಅಪಾರ್ಟ್‌ಮೆಂಟಿನವರೆಲ್ಲಾ ಬೆಳಿಗ್ಗೆ ಆರು ಗಂಟೆಗೆ ಎದ್ದು ಪೇಪರಿಗಾಗಿ ಕಾಯುತ್ತಾರೆ]ನಲ್ಲಿ ಮೊದಲ ಮಹಡಿಯ ಬಲಬಾಗದ ಬಾಗಿಲಲ್ಲಿ ಆರ್ಜೆಂಟ್ ಆಂಟಿ ಮತ್ತು ಅಂಕಲ್ ಕಾಯುತ್ತಿರುತ್ತಾರೆ. ಅವರಿಗೆಲ್ಲಾ ಅರ್ಜೆಂಟಾಗಿ ಪೇಪರ್ ಹಾಕಿ ನಾನು ಮನೆಗೆ ಹೋಗಿ ಅರ್ಜೆಂಟಾಗಿ ಟಾಯ್ಲೆಟ್ಟಿಗೆ ಹೋಗಬೇಕು, ಬೇಗ ಕೊಡಿ" ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದ್ದ. ಅವನ ಮಾತನ್ನು ಕೇಳಿ ನಾನು ಸೇರಿದಂತೆ ಉಳಿದ ಹುಡುಗರೆಲ್ಲಾ ಚೆನ್ನಾಗಿ ನಕ್ಕಿದ್ದೆವು.
ಒಂದಷ್ಟು ದಿವಸ ಈ ವಿಚಾರದಲ್ಲಿ ಅವನನ್ನು ಚೆನ್ನಾಗಿ ಗೇಲಿ ಮಾಡಿದ್ದೆವು. ಇಷ್ಟೆಲ್ಲಾ ಅಡ್ಡ ಹೆಸರಿನಲ್ಲಿ ಗುರುತಿಟ್ಟುಕೊಳ್ಳುವ ಮಂಜನಿಗೆ "ಮಚ್ಚುಕೊಟ್ಟೈ" [ಮಚ್ಚು ಕೊಟ್ಟೈ ಅಂದರೆ ತಮಿಳುಭಾಷೆಯಲ್ಲಿ ಸಿಪ್ಪೆ ಬಿಡಿಸಿದ ಅವರೆ ಕಾಯಿ] ಅಂತ ಆಡ್ಡ ಹೆಸರಿದೆ !
ಸೇಬುವಿನಂತೆ[ಶರತ್] ವಯಸ್ಸಾದವರನ್ನು ಬಿಟ್ಟು ಹುಡುಗಿಯರ ಮನೆಗಳನ್ನು ಗುರುತಿಟ್ಟುಕೊಳ್ಳುವಂತ ಹುಡುಗರು ಎಲ್ಲಾ ವಿತರಣಾ ಕೇಂದ್ರದಲ್ಲೂ ಹೆಚ್ಚಿಗೆ ಇರುತ್ತಾರೆ.
ನಾವು ಕೆಲವು ಬಾರಿ ನಮ್ಮ ಒಂದು ಬಡಾವಣೆಯ ಗಿರಾಕಿಗಳ ಮನೆಗಳು ದೂರವಿದ್ದರೆ ನಮಗೆ ಹತ್ತಿರವಿರುವ ಗಿರಾಕಿಗಳನ್ನು ಇತರ ವೃತ್ತಿಭಾಂದವರ ಜೊತೆ ಬದಲಿಸಿಕೊಳ್ಳುತ್ತೇವೆ. ಇದರಿಂದ ಇಬ್ಬರಿಗೂ ಅನುಕೂಲವಾಗುತ್ತದೆ. ನಮ್ಮ ದೂರದ ಗಿರಾಕಿಗಳು ಅವರಿಗೆ ಹತ್ತಿರ, ಹಾಗೂ ಅವರ ದೂರದ ಗಿರಾಕಿಗಳು ನಮಗೆ ಹತ್ತಿರ ಸಿಗುವಂತಾಗುತ್ತಾರೆ.
ಇಂಥ ಬದಲಾವಣೆಯ ಕೆಲಸದಲ್ಲಿ ತೊಡಗಿದ್ದ ನಾನು ಬಾಲ್ಡಿ ಮಂಜ ಇಬ್ಬರೂ ಕೂತು ಒಂದೊಂದು ಕಾಲಿ ಪೇಪರಿನಲ್ಲಿ ನಮ್ಮ ಗಿರಾಕಿಗಳ ಪಟ್ಟಿ ಮಾಡತೊಡಗಿದೆವು. ನಮ್ಮ ಭಾಷೆಯಲ್ಲಿ ಅವು ೧೦ ಮನೆಗಳಿದ್ದರೆ
೧. ಟೈಮ್ಸ್ - ಮೊದಲ ಮಹಡಿ.
೨. ಕನ್ನಡಪ್ರಭ- ಕಾರ್ನರ್ ಮನೆ
೩. ಪ್ರಜಾವಾನಿ - ಬ್ಲಾಕ್ ಗೇಟು
೪. ಡೆಕ್ಕನ್ - ಆಪಾರ್ಟ್‌ಮೆಂಟಿನ ಮೂರನೆ ಮಹಡಿ
೫. ಟೈಮ್ಸ್ - ಅಜ್ಜಿ ಮನೆ......
ಹೀಗೆ ಮುಂದುವರಿಯುತ್ತದೆ. ನಂತರ ಅವನ ಗಿರಾಕಿಗಳನ್ನು ನಮ್ಮ ಹುಡುಗರಿಗೆ ಹಾಗೂ ನನ್ನ ಗಿರಾಕಿಗಳನ್ನು ಅವನ ಹುಡುಗರಿಗೆ ತೋರಿಸಿದ ನಂತರ ಹುಡುಗರು ಅವರಿಗಷ್ಟ ಬಂದಂತೆ ಆ ಮನೆಗಳಿಗೆ ಆಡ್ಡ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ.
ಮುಂದೆ ನಮಗಲ್ಲದಿದ್ದರೂ ಅವರಿಗಾಗಿ ನಾವು ಬದಲಾಯಿಸಿಕೊಂಡ ಗಿರಾಕಿಗಳ ಮನೆಗಳನೆಲ್ಲಾ ಆಡ್ಡ ಹೆಸರುಗಳಿಗೆ ಬದಲಿಸಿಕೊಡಬೇಕು. ಈ ಮೂಲಕ ನಾವು ಬಹು [ಅಡ್ಡ ಹೆಸರಿನ] ಭಾಷಾ ತಜ್ಞರಾಗಬೇಕು !
ನಂತರ ಹೊಸ ಹಾಗೂ ಹಳೆಯ ಗಿರಾಕಿಗಳ ಪೇಪರುಗಳನ್ನು ಜೋಡಿಸಿ ಕಳಿಸಿದರೆ ಈ ರೀತಿ ಅಡ್ಡ ಹೆಸರು ಇಡುವುದರಲ್ಲಿ ಪ್ರವೀಣನಾದ ಚಂದ್ರ ರನ್ನ ಬೀಟಿನ ಒಂದು ಆಪಾರ್ಟ್‌ಮೆಂಟಿನಲ್ಲಿ ಹೊಸ ಗಿರಾಕಿಗಳಿಗೆಲ್ಲಾ ಹಾಕಿ ಅವರ ಪಕ್ಕದ ಮನೆಗಳಾದ ಹಳೆಯ ಗಿರಾಕಿಗೆ ಹಾಕದೆ ಮರೆತು ಬಂದಿದ್ದ ಭೂಪ !
ನಮ್ಮ ಹುಡುಗರು ಪ್ರತಿದಿನ ಒಂದಾದರೂ ಮನೆಗೆ ದಿನಪತ್ರಿಕೆ ತಪ್ಪಿಸುತ್ತಿರುತ್ತಾರೆ. "ಯಾಕೊ ಹೀಗೆ ಮರೆತುಹೋಗುತ್ತೀಯ ಅವರೇನು ಹೊಸಬರಲ್ಲವಲ್ಲ, ಹಳಬರಿಗೆ ಈ ರೀತಿ ತಪ್ಪಿಸುತ್ತೀಯಲ್ಲೋ" ಅಂದರೆ "ಮರೆತುಹೋಯ್ತು" ಅಂತಾರೆ.
ಅದ್ಯಾಗೋ ಸಾಧ್ಯ, ನೀನು ಊಟ ಮಾಡೋದು ಮರೆಯೊಲ್ಲ ತಾನೆ, ಹಾಗೆ ಇಲ್ಲೂ ನೀನು ಹಾಕೊ ಗಿರಾಕಿಗಳ ಮನೆಯನ್ನು ಹೇಗೆ ಮರೀತೀಯೋ ಎಂದು ಕೇಳಿದರೆ ಉತ್ತರ ನೀಡದೆ ನಗುತ್ತಾರೆ.
ನಿಜವಾಗಿ ಅವನು ತಪ್ಪಿಸಬಾರದೆಂದುಕೊಂಡರೂ ಒಂದೇ ಮನೆಗೆ ಅಗಾಗ ತಪ್ಪಿಸುತ್ತಿದ್ದರೆ ಆ ಮನೆಗೆ ಅಡ್ಡ ಹೆಸರಿಟ್ಟಿರುವುದಿಲ್ಲ. ಇದೇ ಕಾರಣಕ್ಕೆ ಆ ಹುಡುಗನಿಗೆ ಅದು ಚೆನ್ನಾಗಿ ಮನದಟ್ಟಾಗುವುದಿಲ್ಲ.
ದಿನತಂತಿ ಎಣಿಸಿಕೊಡುವ ಭಗಿನಾಳ ಶೆಟ್ಟಿಯಂತೂ "ಮಗ್ಗಿರಾಜ"ನೆಂದೇ ಪ್ರಸಿದ್ಧಿ. ಶೆಟ್ಟರೇ ೨೦ ದಿನ ತಂತಿ ಕೊಡಿ ಎಂದರೆ ಸಾಕು. "ಐದೊಂದಲ ಐದು, ಐದ್ ಎರಡ್ಲಾ ಹತ್ತು.......ಐದು ಮೂರ್ಲ ಹದಿನೈದು, ಐದು ನಾಲ್ಕಲಿ ಇಪ್ಪತ್ತು" ಹೀಗೆ ಎಣಿಸುತ್ತಾನೆ. ದುಡ್ಡು ಕೊಡಬೇಕಾದರೂ ಪಡೆಯಬೇಕಾದರೂ ಎರಡೊಂದಲಿ ಎರಡು............ಶುರುವಾಗುತ್ತದೆ.
ಶೆಟ್ಟರೆ ಒಂದು ಕ್ಯಾಲಿಕ್‌ಲೇಟರ್ ಇಟ್ಟುಕೊಳ್ಳೀ ಎಂದರೆ ಸಾಕು. ಆತನಿಗೆ ಸರ್ರನೇ ಕೋಪ ಬಂದು ಬಿಡುತ್ತದೆ. ಎದುರಿಗೆ ನಿಂತಿದ್ದವನನ್ನು ದುರ್ವಾಸ ಮುನಿಯಂತೆ ದಿಟ್ಟಿಸಿ "ನಾನು ಈ ಕೆಲಸದಲ್ಲಿ ನಲವತ್ತು ವರ್ಷದಿಂದ ಇದ್ದೀನಿ. ಒಂದು ದಿನ ಕೂಡ ಲೆಕ್ಕ ತಪ್ಪಿಲ್ಲ. ಇಲ್ಲಿ ಇರೋ ಯಾರನ್ನಾದ್ರೂ ಕೇಳಿಕೊಂಡು ಬಂದುಬಿಡು ನಾನೇನಾದ್ರು ಲೆಕ್ಕ ತಪ್ಪು ಹೇಳಿದ್ರೆ, ನೀನು ಕೇಳಿದ್ದು ಕೊಟ್ಟು ಬಿಡ್ತೀನಿ. ನಾನು ಈ ಲೈನಿಗೆ ಬಂದಾಗ ನೀನು ಹುಟ್ಟೇ ಇರಲಿಲ್ಲ. ನಿನ್ನ ವಯಸ್ಸಿಗಿಂತ ಜಾಸ್ತಿ ಸರ್ವಿಸ್ ನನಗೆ ಈ ಕೆಲಸದಲ್ಲಿ ಆಗಿದೆ.
ಅವತ್ತಿನಿಂದ ಕ್ಯಾಲಿಕ್‌ಲೇಟರ್ ಉಪಯೋಗಿಸಲಿಲ್ಲ ಗೊತ್ತಾ ! ಅದೆಲ್ಲಾ ನಿನ್ನಂತೋರಿಗೆ" ಮುಂಗೋಪಿಯು, ಸಂಪ್ರದಾಯವಾದಿಯೂ ಆದ ಶೆಟ್ಟಿ ಹೀಗೆ ಒಂದೇ ಸಮನೆ ದಬಾಯಿಸುತ್ತಿದ್ದ.
ನಮ್ಮಲ್ಲಿ ಯಾರಾದರೂ ಲೆಕ್ಕಚಾರದಲ್ಲಿ ತಪ್ಪು ಮಾಡಿದಾಗ "ಹೋಗು ಮಗ್ಗಿ ರಾಜನ ಹತ್ತಿರ ಮಗ್ಗಿ ಕಲಿತುಕೊಂಡು ಬಾ ಸರಿಯಾಗುತ್ತೀಯಾ " ಎಂದು ರೇಗಿಸುತ್ತಿದ್ದವು.
ಅವತ್ತೊಂದು ದಿನ ಬೆಳಗಿನ ಜಾವದಲ್ಲೇ ಈ ಮಗ್ಗಿರಾಜನ ೫೦ ಪೇಪರುಗಳಿರುವ ನಾಲ್ಕು ಬಂಡಲುಗಳು ಕಳುವಾಗಿಬಿಟ್ಟಿದ್ದವು. ಇದು ದೊಡ್ಡ ಸುದ್ಧಿಯಾಗಿಬಿಟ್ಟಿತ್ತು. ನಾವೆಲ್ಲಾ ಆತನಿಗೆ ಸಮಾಧಾನ ಮಾಡಲು, ಸಂತೈಸಲು ಆತ್ಮೀಯವಾಗಿ ಎಷ್ಟು ಹೋಗಿದೆ ಎಂದರೆ "ಐವತ್ತೊಂದು ಐವತ್ತು, ಐವತ್ತೆರಡಲಿ ನೂರು, ಐವತ್ತು ಮೂರ್ಲಿ ನೂರೈವತ್ತು, ಐವತ್ತು ನಾಲ್ಕಲಿ ಇನ್ನೂರು ಎನ್ನಬೇಕೆ !
ಇಷ್ಟಕ್ಕೆ ಮುಗಿಯುವುದಿಲ್ಲ ಈ ಅಡ್ಡ ಹೆಸರಿನ ಕತೆ. ಗಿರಾಕಿಗಳಿಗೆ ಮತ್ತು ಅವರ ಮನೆಗಳಿಗೆ ಇಟ್ಟಿರುವ ಅಡ್ಡ ಹೆಸರುಗಳು ಒಂದು ತೂಕವಾದರೆ ನಾವು ವೆಂಡರ್‌ಗಳು, ಹುಡುಗರು ಒಬ್ಬರಿಗೊಬ್ಬರು ಇಟ್ಟುಕೊಂಡಿರುವ ಅಡ್ಡ ಹೆಸರುಗಳು ಮತ್ತೊಂದು ತೂಕ. ಈ ವಿಚಾರದಲ್ಲೂ ನಾವು ಪಕ್ಕ ವೃತ್ತಿಪರರೆಂದೇ ಹೇಳಬಹುದು.
ನನ್ನ ಬಳಿ ಇರುವ ಹುಡುಗರಲ್ಲಿ ಬೆಳಿಗ್ಗೆ ಎದ್ದು ಬಂದು ಎಲ್ಲಾ ಕೆಲಸ ಮುಗಿದು ಒಂದೆರಡು ಗಂಟೆ ಕಳೆದರೂ ಕುಂಬಕರ್ಣನಂತೆ ನಿದ್ರೆ ಮೂಡಿನಲ್ಲಿರುವ ವೇಲು ಮುರುಗನ್ ಎನ್ನುವ "ನಿದ್ರಾ ರಾಜ", ಯಾವಾಗಲು ಮೂಗಿನ ಮೇಲೆ ಕೋಪವಿರುವ ಸುದೀರ್ ಎನ್ನುವ "ಷಾರ್ಟ್ ಟೆಂಪರ್", ಹೇಳದೆ ಕೇಳದೆ ರಜಾ ಹಾಕುವ ಸಿದ್ದ "ಚಕ್ಕರ್ ಮಲ್ಲ", ತೂಕ ಹಾಕಿದರೆ ೪೦ ಕೆಜಿ ತೂಗುವ ೬ ಆಡಿ ಎತ್ತರದ ಆನಂದ್ ಎನ್ನುವ "ಸ್ಟ್ರಾಂಗ್ ಮ್ಯಾನ್" ಪೇಪರ್ ಕೆಲಸ ಮುಗಿದ ತಕ್ಷಣ ಕಾಲೇಜಿನ ಹುಡುಗಿಯರನ್ನು ನೋಡಲು ಹಾ ತೊರೆಯುವ ಮಾದೇಶನೆಂಬ "ರೋಮಿಯೋ". ಸದಾ ಹಲ್ಲು ಗಿಂಜುತ್ತಾ ಬರುವ ಜಿಪುಣ ಇಂದರ್ ಎಂಬ "ಮಾರ್ವಾಡಿ" ಸಪ್ಲಿಮೆಂಟರಿ ಹಾಕದೆ ಕದ್ದು ಹೋಗಿ ಸಿಗರೇಟು ಸೇದುವ ಆಶೋಕ ಎಂಬ "ಸೋಂಬೈರಿ" ಇದ್ದಾರೆ.
ಇನ್ನು ಇತರ ವೃತ್ತಿ ಭಾಂದವರ ಹುಡುಗರ ಹೆಸರುಗಳು ಅವರವರ ಗುಣಗಳಿಗೆ ತಕ್ಕಂತೆ ಅಡ್ಡ ಹೆಸರು ಸದಾ ಚಾಲ್ತಿಯಲ್ಲಿರುತ್ತವೆ.
ಈ ವಿಚಾರದಲ್ಲಿ ನಾವು ತಪ್ಪಿಸಿಕೊಳ್ಳುವ ಆಗಿಲ್ಲ. ಸದಾ ಕಾಲ ಮತ್ತಿನಲ್ಲಿರುವ ಕೆ.ಸಿ.ರಾಜನಿಗೆ "ನೈಂಟಿ", ತಮಿಳು ಏಜೆಂಟ್ ಶರವಣನ್‌ಗೆ "ಕಾಟ್", ಈ ವೃತ್ತಿ ಜೊತೆಗೆ ಬಡ್ಡಿ ವ್ಯವಹಾರ ಮಾಡುವ ಬಾಲಕೃಷ್ಣನಿಗೆ "ಮೀಟರ್", ಚಿಕ್ಕ ಅಂಗಡಿ ಇಟ್ಟುಕೊಂಡು ಚಿಲ್ಲರೆ ಸಾಮಾನು ಜೊತೆಗೆ ದಿನಪತ್ರಿಕೆ ಮಾರುವ ನೂರಕ್ಕೂ ಹೆಚ್ಚು ಕೆಜಿ ತೂಗುವ ಗಿಡ್ಡ ಆಕಾರದ ಶಾಮಪ್ಪನಿಗೆ " ಉಪ್ಪಿನ ಮೂಟೆ". ಅಂತಲೂ, ಸದಾ ಸಿಗರೇಟು ಸೇದುತ್ತಾ ಹಿಂದೂ ದಿನಪತ್ರಿಕೆಯ ಇತರೆ ಪತ್ರಿಕೆಗಳನ್ನು ಸರಿಯಾಗಿ ಎಣಿಸಿಕೊಡುವ ೬೦ ವರ್ಷದ ರಾಧಕೃಷ್ಣರಿಗೆ "ಮಿ. ಕುಚೇಲನ್" ಅಂತಲೂ, ಕೆಲವೊಮ್ಮೆ ಗಡಿಬಿಡಿಯಿಂದಲೋ ಕೋಪದಿಂದಲೋ, ಕಡಿಮೆ ಎಣಿಸಿಕೊಟ್ಟುಬಿಟ್ಟರೆ "ತಾತ" ಅಂತಲೂ, ನಲವತ್ತು ವರ್ಷ ದಾಟಿದರೂ ಮದುವೆಯಾಗದ ಕೃಷ್ಣನಿಗೆ "ಬ್ಯಾಚುಲರ್", ರೇಸ್‌ಕೋರ್ಸಿನಲ್ಲಿ ಕೆಲಸ ಮಾಡುವ ಸುರೇಶನಿಗೆ "ಪಂಟರ್" ಇನ್ನೊಬ್ಬ ಕೆ. ಟಿ. ಕುಮಾರನಿಗೆ "ಜಾಕಿ" ಅಂತಲೂ, ಹಾಗೂ ಮತ್ತೊಬ್ಬ ರಮೇಶ್ ಎಣ್ಣೆ ಅಂಗಡಿ ಯಲ್ಲಿ ಕೆಲಸಮಾಡುವುದರಿಂದ ಆತನಿಗೆ "ಆಯಿಲ್ ರಾಜ" ಹೀಗೆ ಇನ್ನೂ ಅನೇಕ ಅಡ್ಡ ಹೆಸರುಗಳು ಬೆಳಗಿನ ಈ ನಮ್ಮ ಚಟುವಟಿಕೆಯಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ.
ಹಾಗೆ ನಾನು ಫೋಟೊಗ್ರಾಪರ್ ಕೂಡ ಆಗಿರುವುದರಿಂದ ನನ್ನನ್ನೂ "ಫೋಟೊದವನು" ಅಂತಲೇ ಅಡ್ಡ ಹೆಸರು ಚಾಲ್ತಿಯಾಗಿ ಜೊತೆಗೆ ಬ್ರಾಂಡೆಡ್ ನೇಮುಗಳಾದ "ಓಸಿ ರಾಜ, ಓಳು ಮುನಿಸ್ವಾಮಿ, ಟೆನ್ಷನ್ ಮ್ಯಾನ್, ಕಂಜೂಸ್, ಮುಂತಾದ ಅಡ್ಡ ಹೆಸರುಗಳು ಎಲ್ಲಾ ವಿತರಣಾ ಕೇಂದ್ರಗಳಲ್ಲಿ ಶೇಕಡವಾರು ಲೆಕ್ಕ ಅಧಿಕವಾಗಿ ಇದ್ದೇ ಇರುತ್ತಾರೆ.
ಕಪ್ಪು ಬಣ್ಣದವನಿಗೆ ಕರಿಯಾ ಎಂದರೆ ಸಿಟ್ಟಾಗುತ್ತಾನೆಂದು ಅದನ್ನೇ ಮತ್ತಷ್ಟು ಮೇಲ್ದರ್ಜೆಗೇರಿಸಿ "ಬ್ಲಾಕಿ" ಅಂತಲೂ ಕರೆದಾಗ ಮುಖವರಳಿಸಿ ಓಗೊಡುವ ನನ್ನ ಗೆಳೆಯನ ಬೀಟ್ ಹುಡುಗ, ಹೀಗೆ ಅಡ್ಡ ಹೆಸರು ನಿರಂತರವಾಗಿ ಸಾಗುತ್ತದೆ. ಈ ಪ್ರತಿಯೊಂದು ಅಡ್ಡ ಹೆಸರಿನ ಹಿಂದೆ ಅದನ್ನು ಕರೆಸಿಕೊಂಡವರು ಹೆಸರಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆನ್ನುವುದು ಸತ್ಯ.
ಅಶ್ಲೀಲ ಪದಗಳ, ಏ ಸರ್ಟಿಫಿಕೇಟು, ಮರ್ಮಾಂಗಗಳ ತತ್ಸಮಾನ ಪದಗಳು, ಅವಾಚ್ಯ, ಪೋಲಿ ಹೆಸರುಗಳು ಅಡ್ಡ ಹೆಸರುಗಳಾಗಿ ಇಲ್ಲಿ ಬಹು ಚಾಲ್ತಿಯಲ್ಲಿರುತ್ತವೆ.
ಕೊನೆಯದಾಗಿ ಹಾಗೂ ಅತಿ ಮುಖ್ಯವಾಗಿ, ಬ್ಲೇಡ್, ಅನಾಸಿನ್, ಮೆಂಟಲ್ ಈ ಮೂರು ಬಹು ಮುಖ್ಯ ಬ್ರಾಂಡೆಡ್ ಅಡ್ಡ ಹೆಸರುಗಳನ್ನು ಹೊಂದಿರುವ ಪ್ರತಿಭಾವಂತರು ಎಲ್ಲಾ ವಿತರಣ ಕೇಂದ್ರಗಳಲ್ಲೂ ಸದಾ ಕಾಲ ಚಾಲ್ತಿಯಲ್ಲಿದ್ದೆ ಇರುತ್ತಾರೆ.
ಶಿವು.ಕೆ
Subscribe to:
Post Comments (Atom)
23 comments:
ಸುದೀರ್ಘ ಲೇಖನವಾದರೂ ಸಲೀಸಾಗಿ ಓದಿಸಿಕೊಂಡು ಹೋಯಿತು.. ನನಗೂ ಅಡ್ಡ ಹೆಸರಿಡುವ ಚಾಳಿಯಿದೆ. ಅದೇ ಕಾರಣಕ್ಕೆ ಶಾಲೆಯಲ್ಲಿ ಸುಮಾರು ಬಾರಿ ಏಟು ತಿಂದಿದ್ದೇನೆ :(
ನಿಮ್ಮ ಲೇಖನ ಎಲ್ಲವನ್ನೂ ನೆನಪಿಸಿತು.
ಅಷ್ಟೇ ಅಲ್ಲದೆ ಪೇಪರಿನ ಹುಡುಗರು ಅಷ್ಟೊಂದು ಮನೆಗಳನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆ ಎಂಬ ಕುತೂಹಲ ನನಗೂ ಇತ್ತು.. ಈ ಬರಹ ಆ ಗುಟ್ಟನ್ನು ರಟ್ಟು ಮಾಡಿದೆ..
ಹರೀಶ್,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಇನ್ನೂ ಕುತೂಹಲಕಾರಿಯಾದ ಬರಹಗಳಲ್ಲಿ ನಮ್ಮ ವೃತ್ತಿಯ ಇನ್ನಷ್ಟು ಗುಟ್ಟು, ಸಿಟ್ಟು, ಮಜಾ, ಸಜಾ, ನೋವು ನಲಿವು ಇತ್ಯಾದಿಗಳನ್ನು ಓದಲು ಹೀಗೆ ಬರುತ್ತಿರಿ..........
ಶಿವು ಅವರೆ...
ಅಡ್ಡ ಹೆಸರಿಡುವ ಕೆಲಸ ನಂಗ್ಯಾಕೋ ಒಗ್ಗುವುದಿಲ್ಲ, ಆದರೂ ಹೀಗೆ ನೋವಾಗದ ರೀತಿಯಲ್ಲಿ ನಗಿಸುವ ಇಂಥಹ ಅಡ್ಡಹೆಸರುಗಳು ನನಗೆ ತುಂಬ ಇಷ್ಟವಾಗುತ್ತವೆ. ಬೆಂಗಳೂರಿನಲ್ಲಿ ಚಿಕ್ಕಪ್ಪನವರ ಕಿರಾಣಿ ಅಂಗಡಿಯ ಗಿರಾಕಿಗಳು ಕಿರಾಣಿವಸ್ತುಗಳ ಲಿಸ್ಟ್ ಕೊಟ್ಟು ಹೋಗಿಬಿಟ್ಟಿರುತ್ತಾರೆ. ಅವನ್ನೆಲ್ಲ ಅಂಗಡಿಯ ಹುಡುಗರು ಆಯಾಮನೆಗಳಿಗೆ ತಲುಪಿಸುವಾಗ ಚಿಕ್ಕಮ್ಮ ಕೆಲವು ಮನೆಗಳ ಗುರುತುಗಳನ್ನ ಹೀಗೆಯೇ ಅಡ್ಡಹೆಸರುಗಳಿಂದ ಗುರುತಿಸಲು ಸಹಾಯವಾಗುವಂತೆ ಹುಡುಗರಿಗೆ ಹೇಳಿ ಕಳುಹಿಸುತ್ತಾರೆ. ಒಮ್ಮೆ ಅಂಗಡಿಯ ಹುಡುಗನೊಬ್ಬ(ಹೊಸಬ, ಹದಿನೈದು ಹದಿನಾರು ವರ್ಷದವನು) ಆಂಟಿಯೊಬ್ಬರ ಅಡ್ಡಹೆಸರನ್ನೇ ಅವರ ಹೆಸರೆಂದು ತಿಳಿದುಕೊಂಡು ಅವರ ಮನೆಗೆ ಹೋಗಿ ಅವರ ಸೊಸೆಯ ಹತ್ತಿರವೇ ‘ಅವರಿದ್ದಾರಾ?(ಅಡ್ಡಹೆಸರಿನಿಂದ)’ಅಂತ ಕೇಳಿ ಆ ಆಂಟಿ ಮನೆಗೆ ಬಂದ ತಕ್ಷಣ ಸೊಸೆಯಿಂದ ವಿಷಯ ಗೊತ್ತಾಗಿ ನೇರ ಅಂಗಡಿಗೆ ಬಂದು ಹುಡುಗನನ್ನ ಚೆನ್ನಾಗಿ ಥಳಿಸಿಬಿಟ್ಟಿದ್ದರು ಪಾಪ. ಆಮೇಲೆ ಚಿಕ್ಕಮ್ಮ ‘ಹೊಸ ಹುಡುಗ, ನಿಮ್ಮ ಹೆಸರು ಗೊತ್ತಿಲ್ಲ ಪಾಪ’ ಅಂತೆಲ್ಲ ಹೇಳಿ ಆ ಹುಡುಗನನ್ನ ಆಂಟಿಯ ಬೈಗುಳಗಳಿಂದ ತಪ್ಪಿಸಿದ್ದರು(ತಪ್ಪಿಸಿಕೊಂಡಿದ್ದರು). ಆ ಆಂಟಿ ಆಚೆ ಹೋದ್ಮೇಲೆ ಎಲ್ಲರಿಗೂ ನಗು ಬಂದಿದ್ರು ನಗಲಿಲ್ಲ, ಅಂಗಡಿಯ ಹುಡುಗನ್ನ ಚಿಕ್ಕಮ್ಮನೂ ಬೈದ್ರು, ‘ಅಡ್ಡಹೆಸ್ರು ಕಣೋ, ಮನೆ ಯಾವ್ದು ಅಂತ ಗೊತ್ತಾಗ್ಲಿ ಅಂತ ಇಟ್ಕೊಂಡಿರೋದು, ಹಾಗೆಲ್ಲ ಅವರ ಮುಂದೇನೇ ಹೇಳ್ಬಾರ್ದು’ ಅಂತ ಟ್ರೈನಿಂಗ್ ಕೊಟ್ಟಿದ್ದರು :-)ಆಮೇಲೆ ಹುಡುಗ ನಕ್ಕ.
ಪಾಪ, ನೆನಸ್ಕೊಂಡ್ರೆ ನಂಗೆ ಈಗ್ಲೂ ಬೇಜಾರಾಗತ್ತೆ.
ಸೊಗಸಾಗಿ ಬರೆದಿದ್ದೀರಿ, ಸಲೀಸಾಗಿ ಓದಿಸಿಕೊಂಡುಹೋಯಿತು. ಓದುವಾಗ ನಗುವೊಂದು ಅರಳಿಕೊಂಡಿದ್ದು ಇನ್ನೂ ಹಾಗೆಯೇ ಉಳಿದುಕೊಂಡಿದೆ.
ಶಿವು ಅವ್ರೆ,
ತಮಾಷೆಯಾಗಿದೆ ನಿಮ್ಮ ಬರಹ. ಸಧ್ಯ!! ನನಗೆ ಯಾವುದೇ ಅಡ್ಡ ಹೆಸರಿಲ್ಲ. ಓದಿಸಿಕೊಂಡು ಹೋಯಿತು ಬರಹ.
ಚೆನ್ನಾಗಿದೆ.... ತಮಾಷೆಯಾಗಿ ಕೂಡಾ ಇದೆ....
ಮೊದಲು ನಮ್ಮ ಪೇಪರ್ ಹುಡುಗನಿಗೆ ಕೇಳಬೇಕು...ನಮ್ಮ ಮನೆಯ ಗುರುತು ಏನು ಅಂತಾ?? ಹೀ...ಹೀ...ಹೀ...ಹೀ...ಹೀ...
ಶಾಂತಲಾ ಮೇಡಮ್, ಶರತ್ಚಂದ್ರ, ಅಪ್ರಮೇಯ, ನಿಮಗೆಲ್ಲರಿಗೂ ಪ್ರತಿಕ್ರಿಯಿಸಿದ್ದಕ್ಕೆ thanks.
ಶಾಂತಲಾ ಮೇಡಮ್,
ಆಡ್ಡ ಹೆಸರಿನ ಬಗ್ಗೆ ನಿಮ್ಮ ಅನುಭವದ ಸುದೀರ್ಘ ಪ್ರತಿಕ್ರಿಯೆ ನೀಡಿದ್ದೀರಿ ಓದಿದಾಗ ಬಲು ಮಜ ಬಂತು. ಹೀಗೆ ಬರುತ್ತಿರಿ..
ಅಪ್ರಮೇಯ,
ನಿಮ್ಮ ಮನೆಯ ಗುರುತು ಏನು ಅಂತ ಪೇಪರ್ ಹುಡುಗನ್ನ ಕೇಳಿದ್ರ ? ನಂತರ ನನಗೂ ಹೇಳಿ.
ಶಿವು ಸರ್..
ನನ್ನ ವ್ರತ್ತಿಯಲ್ಲಿ ಪೆಯ್ಮೆಂಟ್ ಸರಿಯಾಗಿ ಕೊಡದ ಮಾಲಿಕರಿಗೆ ಕೆಲವೊಮ್ಮೆ ಅಡ್ಡ ಹೆಸರು ಇಡುವದುಂಟು.
ನಿಮ್ಮ ವ್ರತ್ತಿ ಅನುಭವ , ಅದರಲ್ಲಿ ನಿಮ್ಮ ಸಾಹಿತ್ಯಕ ಗುಣ ಎಲ್ಲವೂ ಮೆಚ್ಚುಗೆಯಾಗುತ್ತದೆ..
ಅಭಿನಂದನೆಗಳು...
ವ್ರತ್ತಿಜೀವನ, ಶಾಲಾ ಕಾಲೇಜುಗಳಲ್ಲಿ ಅಡ್ದಹೆಸರುಗಳ ಮಜಾನೇ ಬೇರೆ. ಯಾರಿಗೂ ನೋವುಂಟಾಗದ ಅಡ್ದಹೆಸರನ್ನು ಇಡಿಸಿಕೊಂಡವರೂ ಪ್ರೋತ್ಸಾಹಿಸುತ್ತಾರೆ..
ಶಿವು, ಇಷ್ಟು ದಿನ ನಿಮ್ಮ ಈ ಬ್ಲಾಗು ಗಮನಿಸಿರಲಿಲ್ಲ.
ಮಜವಾದ ಅಡ್ಡಹೆಸರು ಇಡದೇ ಹೋದರೆ ತುಂಬಾ ಹೆಸರುಗಳನ್ನು ನೆನಪಿಸಿಕೊಳ್ಳುವುದೇ ಕಷ್ಟ ಅಲ್ಲವೆ? ಗೆಳೆಯರು ನನಗೆ ಪ್ರೀತಿಯಿಂದ ಇಟ್ಟ ಅಡ್ಡಹೆಸರುಗಳೆಲ್ಲ ನೆನಪಾದವು.
ರಂಜಿತ್,
ನೀವು ನನ್ನ ಬರವಣಿಗೆಯ ಈ ಬ್ಲಾಗಿಗೆ ಬಂದದ್ದು ತುಂಬಾ ಖುಷಿಯಾಯಿತು. ನನ್ನ ವೃತ್ತಿಯ ಜೀವನದ ಅನುಭವಗಳ ಬಗ್ಗೆ ಬರೆಯುತ್ತಿರುವ ಲೇಖನಗಳನ್ನು ಈ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ. ಮುಂದೆ ಇದನ್ನು ಪುಸ್ತಕ ರೂಪದಲ್ಲಿ ಹೊರತರುವ ಆಲೋಚನೆಯೂ ಇದೆ. ನೀವು ಇನ್ನೂ ಉಳಿದ ಲೇಖನಗಳನ್ನು ಓದಿದರೆ ಮತ್ತಷ್ಟು ವಿಭಿನ್ನ, ನಿಮಗರಿವಿಲ್ಲದ ಅನೇಕ ವಿಚಾರಗಳು ನನ್ನ ಉಳಿದ ಲೇಖನಗಳಲ್ಲಿ ಸಿಗಬಹುದು ನಿಮಗೂ ಖುಷಿ ಎನಿಸಬಹುದು. ಬಿಡುವು ಮಾಡಿಕೊಂಡು ನನ್ನ ಉಳಿದ ಲೇಖನಗಳನ್ನು ಓದಿ ಅಭಿಪ್ರಾಯ ತಿಳಿಸಿ. ಅದು ನನ್ನ ಮುಂದಿನ ಯೋಜನೆಗೆ ಸಹಾಯಕವಾಗುತ್ತದೆ.
ಶಿವೂ ಅವರೇ, ಸೂಪರ್ ಆಗಿತ್ತು ನಿಮ್ಮ ಬರಹ. ನನ್ನ ಅಡ್ಡ ಹೆಸರು ಏನು ಎ೦ದು ತಿಳಿದುಕೊಳ್ಳಬೇಕು ಎ೦ಬ ಕುತೂಹಲ ಬ೦ದಿದೆ. ಆದರೆ ನನಗೆ ಪೇಪರ್ ತ೦ದುಕೊಡುವ ಹುಡುಗನನ್ನು ನಾನು ಇದುವರೆಗೂ ನೋಡಿಲ್ಲ. ನಾನು ಏಳುವ ಹೊತ್ತಿಗೆ ಆತ ಪೇಪರ್ ಹಾಕಿ ಹೋಗಿ ಆಗಿರುತ್ತದೆ.
ನಿಮ್ಮ ಬರಹಗಳು ಓದುವ ಮೊದಲು ತುಂಬಾ ದೀರ್ಘವಾದ ಬರಹಗಳು ಅ೦ತ ಅನಿಸಿದರೂ ಓದುತ್ತಾ ಹೋದ ಹಾಗೆ ಬರಹ ಮುಗಿದಿದ್ದೆ ಗೊತಾಗೋಲ್ಲ.
ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?
ರೀ ಫೋಟೊದವರೆ , ಚೆನ್ನಾಗಿದೆರಿ, ನಂಗೆ ಕಾಲೆಜ್,ಜ್ಹಾಪಿಸ್ಕೊಂಡೆ
ಪ್ರಕಾಶ್ ಸಾರ್, ಹರೀಶ್,ಸುದೇಶ್
ನೀವೆಲ್ಲರೂ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.
ಮೋಹನ್ ಸಾರ್,
ನೀವು ಕೂಡ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು. ನೀವು ನನ್ನ ಛಾಯಾಕನ್ನಡಿ ನೋಡಿ ನನ್ನನ್ನು ಫೋಟೋದವನೆಂದುಕೊಂಡಿದ್ದೀರಿ. ನನ್ನ ಮೂಲ ವೃತ್ತಿ ದಿನಪತ್ರಿಕೆ ವಿತರಣೆ. ನಂತರ ಮಾಡುವುದು ಫೋಟೋಗ್ರಫಿ. ನನ್ನ ವೃತ್ತಿಯ ಮತ್ತಷ್ಟು ನಿಮಗೆ ಗೊತ್ತಿಲ್ಲದ ಹೊಸ ತಿಳಿದುಕೊಳ್ಳಬೇಕೆಂದರೆ ಇದೇ ಬ್ಲಾಗಿನ ಉಳಿದ ಲೇಖನಗಳನ್ನು ಓದಿ ಖುಷಿ ಪಡುತ್ತೀರೆಂದುಕೊಳ್ಳುತ್ತೇನೆ.
ತುಂಬಾ ಚೆನ್ನಾಗಿದೆ :)
ಹೀಗೇ ಹಾಲಿನ ಹುಡುಗರೂ ಗುರುತಿಟ್ಟುಕೊಳ್ಳುತ್ತಾರೆ ಅಲ್ವಾ :)
ನಾನು ಕೂಪನ್ ಬೇಕಾದಾಗೆಲ್ಲಾ, ‘ಮನೆ ನಂಬರ್ ಇಷ್ಟು, ಅದೇ.... ಆ ಚೌಲ್ಟ್ರಿ ಹತ್ರ’ ಅಂತ ಜ್ನಾಪಿಸ್ತೀನಿ.
ಹಳೇ ಮನೆಲಿರೋವಾಗ ಇದು ‘ನಾಯಿ ಮನೆ’ ಆಗಿತ್ತು, ಈಗ ಬಡ್ತಿ ಸಿಕ್ಕಿದೆ :D
ಶ್ರೀಯುತ ಮೋಹನ್ ಬಹುಶಃ ನಿಮ್ಮ ಅಡ್ಡ ಹೆಸ್ರು ಹೇಳಿರ್ಬೇಕು - ‘ಫೋಟೋದವನು’ ಅಂತ :)
chennagide shivu avare.. :)
ಅನ್ನಪೂರ್ಣ ಮೇಡಮ್ ಸಾರ್, ಬಾಲು ಸಾರ್,
ಪ್ರತಿಕ್ರಿಯಿಸಿದ್ದಕ್ಕೆ thanks. ಹೀಗೆ ಬರುತ್ತಿರಿ.
ಶಿವು ಅವರೆ,
ನಕ್ಕು ನಕ್ಕು ಸಾಕಾಯಿತು..
ಅಡ್ಡ ಹೆಸರುಗಳು ಎಲ್ಲಾರು ಉಪಯೋಗಿಸುತ್ತಾರೆ. ನಮ್ಮ ಮನೆಯವರು ಇಟ್ಟಿರುವ ಕೆಲವು ಅಡ್ಡ ಹೆಸರು ಹೇಳುತ್ತೀನಿ:
ಚಾಪೆ ಮನೆಯವರೆ, Board, Kodak, ಹೊಸ ಬ್ರಾಹ್ಮಣ, ನಾಯಿ ಮನೆ, Stove, ಮೂಲಂಗಿ ಇತ್ಯಾದಿಗಳು.
ನಮ್ಮ ಪೇಪರ್ ಹಾಕುವವನಿಗೆ ನಮ್ಮ ಮನೆಗೆ ಅಡ್ಡ ಹೆಸರು ಇಟ್ಟಿಲ್ಲ ಅನಿಸುತ್ತೆ. ಕೆಲವೊಂದಿ ದಿನ ಹಾಕುವುದೇ ಇಲ್ಲ.
ಜಯಶಂಕರ್,
ನಿಮ್ಮ ಪ್ರತಿಕ್ರಿಯೆಗೆ thanks. ನಮ್ಮ ನಿತ್ಯದ ಕೆಲಸದಲ್ಲಿ ದಿನವೂ ನಗುತ್ತೇವೆ. ನಿಮ್ಮ ಮನೆಗೊಂದು ಅಡ್ಡ ಹೆಸರನ್ನು ನೀವೆ ಇಟ್ಟು ನಿಮ್ಮ ಹುಡುಗನಿಗೆ ಹೇಳಿಬಿಡಿ. ಅಮೇಲೆ ನೋಡಿ ಆ ಹುಡುಗ ನಿಮ್ಮ ಮನೆಗೆ ಒಂದು ದಿನವಾದರೂ ತಪ್ಪಿಸುತ್ತಾನ ನೋಡಿ ?
ನಮ್ಮ ಮನೆಗೆ ಪೇಪರ್ ಹಾಕುವವರಿಗೆ, ನಮ್ಮ ಮನೆ ಗುರುತಿಟ್ಟುಕೊಳ್ಳಲು ಹೇಳಬೇಕು.ಒಂದಿನ ಹಿಂದೂ, ಒಂದಿನ indian express ಹಾಕಿದ್ರೆ, ಇನ್ನೊಂದಿನ ಕನ್ನಡ ಬಾರದ ಪಕ್ಕದ ಮನೆಗೆ ನಮ್ಮ ಮನೆಗೆ ಹಾಕಬೇಕಾದ ವಿಜಯ ಕರ್ನಾಟಕ ಹಾಕಿ ಹೋಗುತ್ತಾರೆ! ವಿಜಯ ಕರ್ನಾಟಕ ಬರತ್ತೆ ಅಂತ ಇವತ್ತು ಕಾದ್ರೆ, ಮಲಯಾಳಂ ಮನೋರಮಾ ಹಾಕಿ ಹೋಗಿದ್ದಾರೆ!
ಶಿವು ಅವರೆ,
ನಿಮ್ಮ ಈ ಲೇಖನದಲ್ಲಿ ನಿಮ್ಮ ದೈನಂದಿನ ವೃತ್ತಿ ಜೀವನದ ತುಂಬಾ ರಸವತ್ತಾಗಿ ನವಿರಾದ ಹಾಸ್ಯದಲ್ಲಿ ವರ್ಣಿಸಿದ್ದೀರಾ..ಸರಳವಾಗಿ ಓದಿಸಿಕೊಂಡು ಹೋಯಿತು..
ಧನ್ಯವಾದಗಳು..
ನಮ್ಮ ಉತ್ತರ ಕರ್ಣಾಟಕದ ನಿಜವಾದ ’ಅಡ್ಡಹೆಸರುಗಳನ್ನು’ ನೀವು ಕೇಳಿದರೆ ಎನಂತೀರೊ? ಅದರ ಮೇಲೆನೇ ನೀವು ಒಂದು ದೊಡ್ಡ ಲೇಖನಾನೇ ಬರಿಬಹುದು:)
ನಿಮ್ಮ ಬ್ಲಾಗ್ನ ಎಲ್ಲಾ ಲೇಖನಗಳನ್ನ ಸೇರಿಸಿ ಒಂದು ಪುಸ್ತಕ ಏಕೆ ಬಿಡುಗಡೆ ಮಾಡಬಾರದು?
-ಬಸವರಾಜ ಯಾದವಾಡ
ಲೇಖನ ತುಂಬಾ ಧೀರ್ಘವಾಗಿದ್ದರೂ ತುಂಬಾ ಸೊಗಸಾಗಿತ್ತು. ಇನ್ನಷ್ಟು ಹಾಸ್ಯಮಯ ಲೇಖನಗಳು ತಮ್ಮಿಂದ ಹೊರಬರಲಿ.
ಧನ್ಯವಾದಗಳು.
Post a Comment