Saturday, December 20, 2008

ಟ್ರಿಣ್....ಟ್ರಿಣ್....ಟ್ರಿಣ್.......

ನನ್ನಾಕೆಯ ಮೊಬೈಲ್ ಬೆಳಗಿನ ಜಾವ ನಾಲ್ಕು ಗಂಟೆಗೆ ಅಲರಾಂ ಸದ್ದು ಮಾಡಿದಾಗ ನಿರೀಕ್ಷೆಯಂತೆ ಎಚ್ಚರವಾಯಿತು.

ಅರೆರೆ......ಇಷ್ಟು ಸುಲಭವಾಗಿ ಅಂತ ಗಾಡನಿದ್ರೆಯನ್ನು ನಿರಾಕರಿಸಿ ಎದ್ದುಬಿಟ್ಟೆ ಎಂದುಕೊಳ್ಳಬೇಡಿ. ಅದು ನನಗೂ ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿನಿತ್ಯ ಕಷ್ಟದ ಹಿಂಸೆಯ ಕೆಲಸ. ಆದರೇನು ಮಾಡುವುದು ನಾನು ಪ್ರತಿದಿನ ಮುಂಜಾವಿನಲ್ಲಿ ನನ್ನ ಕಾಯಕವಾದ ದಿನಪತ್ರಿಕೆ ವಿತರಣೆಗೆ ಹೋಗಲೇಬೇಕಲ್ಲ.!

ಅದಕ್ಕೆಂದೆ ನಾನು ಒಂದು ವಿಭಿನ್ನ ತಂತ್ರ ಕಂಡುಕೊಂಡಿದ್ದೇನೆ. ನನ್ನ ಮೊಬೈಲಿನಲ್ಲಿ ಬೆಳಗಿನ ಮೂರು ಗಂಟೆಗೆ ಅಲರಾಂ ಇಟ್ಟುಕೊಂಡು ನನ್ನ ಮಡದಿಯ ಮೊಬೈಲಿನಲ್ಲಿ ೪ ಗಂಟೆಗೆ ಅಲರಾಂ ಇಟ್ಟುಕೊಳ್ಳುತ್ತೇನೆ, ಅದು ನಂಬಿಕಸ್ತನಂತೆ ತಪ್ಪದೇ ಅಲರಾಂ ಹೊಡೆದು ನನ್ನನ್ನು ಎಚ್ಚರಗೊಳಿಸುತ್ತದೆ ಎನ್ನುವ ನಂಬಿಕೆ.

ಮೊದಲು ನನ್ನ ಮೊಬೈಲ್ ಮೂರು ಗಂಟೆಗೆ ಅಲರಾಂ ಹೊಡೆದಾಗ ನಿಜವಾಗಿ ಅವಾಗಲೇ ಸರಿಯಾದ ಗಾಢನಿದ್ರೆ. ಎದ್ದು ನನ್ನ ಮೊಬೈಲ್ ಆಲರಾಂ ಬಂದ್ ಮಾಡಿ ಮತ್ತೆ ಮಲಗುತ್ತೇನೆ. ಈಗ ಮೂರು ಗಂಟೆಯಿಂದ ನಾಲ್ಕು ಗಂಟೆಗೆ ಗಾಢನಿದ್ರೆಯ ಬದಲಾಗಿ ಸರಳ ನಿದ್ರೆ ಮಾಡುತ್ತೇನೆ.[ಮಾಡುತ್ತೇನೆ ಅಂದು ಕೊಳ್ಳುತ್ತೇನೆ.] ನಂತರ ನನ್ನಾಕೆಯ ಮೊಬೈಲ್ ನಾಲ್ಕು ಗಂಟೆಗೆ ಅಲಾರಾಂ ಹೊಡೆದಾಗ ಸರಳ ನಿದ್ರೆಯಲ್ಲಿರುವ ನನಗೆ ಎಚ್ಚರಗೊಳ್ಳುವುದು ಸುಲಭ.

ನಮಗೆ ಗಾಢನಿದ್ರೆ ಎಂದು ತಿಳಿಯುವುದು ಯಾವಾಗ ?

ಮೂರು ಗಂಟೆಗೆ ಹೊಡೆದ ಅಲಾರಾಂನಿಂದಾಗಿ ಗಾಢನಿದ್ರೆಯಿಂದ ಎದ್ದು ಎಂಥ ಗಾಢನಿದ್ರೆ ಎಂದುಕೊಂಡು ಹತ್ತೇ ಸೆಕೆಂಡುಗಳಲ್ಲಿ ಅಲಾರಾಂ ಬಂದ್ ಮಾಡಿ ಮತ್ತೆ ನಿದ್ರೆ ಹೋಗುವ ಸುಖ ! ಆಹಾ!! ಅದನ್ನು ಅನುಭವಿಸಿಯೋ ತೀರಬೇಕು.[ನಮಗೆ ಗಾಢನಿದ್ರೆ ಎಂದು ಅರಿವಾಗುವುದು ಯಾವಾಗ ? ನಾವು ಅಂಥ ನಿದ್ರೆಯಿಂದ ಎಚ್ಚರಗೊಂಡು ಮತ್ತೆ ಮಲಗಿದಾಗಲೇ ಅಲ್ಲವೆ ?] ]

ಬೇಕಾದರೆ ನೀವು ಈ ಪ್ರಯೋಗ ಮಾಡಬಹುದು.

ಬೆಳಗಿನ ಜಾವ ೭ ಗಂಟೆಗೋ ಅಥವಾ ೮ ಗಂಟೆವರೆಗೆ ಪೂರ್ತಿ ನಿದ್ರೆ ಮಾಡಿ ಎದ್ದುಬಿಟ್ಟರೆ ಏನು ಮಜಾ? ನಮಗೆ ನಿಜವಾದ ಗಾಢನಿದ್ರೆ ಯಾವ ಸಮಯದಲ್ಲಿತ್ತು ಎಂದು ತಿಳಿಯುವುದು ಹೇಗೆ ? ಅದಕ್ಕಾಗಿಯೇ ೩ ಗಂಟೆಗೋ, ನಾಲ್ಕು ಗಂಟೆಗೋ ಆಲಾರಾಂ ಹೊಡೆಸಿ ಎಚ್ಚರವಾಗಿ "ಎಂಥಾ ಗಾಢನಿದ್ರೆ" ಎಂದುಕೊಂಡು ಮತ್ತೆ ಮಲಗುವುದಿದೆಯಲ್ಲ ಅದು ನನ್ನಂತೆ ಅನುಭವಿಸಿದವರಿಗೆ ಗೊತ್ತು ಅದೆಂಥ ಸ್ವರ್ಗ ಸುಖ ಎಂದು.

ನಂತರ ಹಾಸಿಗೆಯಿಂದ ಮೇಲೆದ್ದು ಕೈಕಾಲು ಮುಖ ತೊಳೆದು ರೆಡಿಯಾಗಿ ಮೊದಲು ನನ್ನ ಸಹಾಯಕರಿಬ್ಬರಿಗೆ ಫೋನ್ ಮಾಡುತ್ತೇನೆ. ನಾನು ಫೋನ್ ಮಾಡಿದಾಗ ಅವರ ಮೊಬೈಲಿನಲ್ಲಿ ನನ್ನ ನಂಬರ್ ಮತ್ತು ಹೆಸರು ಬರುವುದು ಸಹಜ.

ಮೊದಲನೆಯವನಿಗೆ ರಿಂಗ್ ಮಾಡಿದಾಗ ಅವನ ಮೊಬೈಲ್ ರಿಂಗ್ ಟೋನ್

"ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.......

ಹಾಡೋಣ ನಾನು ನೀನು ಕುಚ್ಚಿ ಕುಚ್ಚಿ.........

ಹಾಡಿನ ಮಧುರ ಪಲ್ಲವಿ ಕಿವಿಗೆ ಬಿದ್ದು ನನಗೂ ಇನ್ನೊಂದಷ್ಟು ಹೊತ್ತು ಗುಬ್ಬಚ್ಚಿಯ ಹಾಗೆ ಗೂಡಿನಲ್ಲಿ ಮಲಗೋಣ ಎನಿಸಿ ಹಾಗೇ ಕಲ್ಪನಾ ಲೋಕದಲ್ಲಿ ತೇಲುತ್ತೇನೆ. ಮರುಕ್ಷಣವೇ ಎಚ್ಚೆತ್ತು ವಾಸ್ತವಕ್ಕೆ ಬಂದು ಕಾಯಕದ ಕರೆ ಬಂದಂತಾಗುತ್ತದೆ.

ಐದು ನಿಮಿಷ ಕಳೆದು ಮತ್ತೊಬ್ಬನಿಗೆ ರಿಂಗ್ ಮಾಡಿದಾಗ

"ಕನಸು ಕೇಳಲೆಂತೋ.........

ಮನಸು ಮಾಯವೆಂತೋ........

ಆಹಾ ಒಂಥರಾ..ತರಾ.....

ಹೇಳೊಲೊಂತರಾ....ತರಾ.....

ಕೇಳಲೊಂತರಾ....ತರಾ.....

ಮತ್ತೊಂದು ಮಧುರ ಹಾಡಿನ ಪಲ್ಲವಿ ಕಿವಿಗೆ ಇಂಪೆನಿಸಿ ಆ ತಂಪು ವಾತಾವರಣದಲ್ಲಿ ಕನಸಿನ ಲೋಕಕ್ಕೆ ಇಳಿಯಬೇಕೆನಿಸಿ ಮತ್ತೆ ಸಣ್ಣ ನಿದ್ರೆಗೆ ಜಾರಬೇಕೆನಿಸುತ್ತದೆ.

ಈ ರೀತಿಯಲ್ಲಾ ಆ ಬೆಳಗಿನ ಜಾವ ಅನ್ನಿಸುವುದಕ್ಕೆ ಅವರಿಗೆ ಧನ್ಯವಾದ ಹೇಳಬೇಕೆನಿಸುತ್ತದೆ. ಆದರೆ ಕೆಲವೊಮ್ಮೆ ಅವರಿಬ್ಬರ ಮೊಬೈಲುಗಳಿಂದ

" ದಿ ಏರ್‌ಟೆಲ್ ನಂಬರ್ ಯೂ ಆರ್ ಟ್ರೈಯಿಂಗ್ ಟು ರೀಚ್ ಇಸ್ ಟೆಂಪರೆರಿಲಿ ಔಟ್ ಆಫ್ ಸರ್ವೀಸ್" ಅಂತಲೋ ಅಥವಾ

"ನೀವು ಕರೆ ಮಾಡಿರುವ ಚಂದದಾರರು ಸ್ವಿಚ್ ಆಪ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಪ್ರಯತ್ನಿಸಿ"

ಎಂದು ಕೇಳಿಸಿದಾಗ ಮಗ್ಗುಲಿಗೆ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ಕಾರಣ ಯಾರ ಮೊಬೈಲಿನಿಂದ ಈ ಕರೆ ಕೇಳಿಸುವುದೋ ಆತ ಇಂದು ಬರುವುದಿಲ್ಲವೆಂದು ನಾನು ಅರ್ಥೈಸಿಕೊಳ್ಳುವಾಗ ಆ ತಂಪು ವಾತಾವರಣವೆಲ್ಲಾ ಬಿಸಿಯಾಗುತ್ತಿದೆಯೆನಿಸಿ, ಆತನ ಮೇಲೆ ಸಿಟ್ಟು ಬಂದು ಮೈ ಪಚಿಕೊಳ್ಳುವಂತಾಗುತ್ತದೆ.

ಇದೆಲ್ಲಾ ಮೊಬೈಲ್ ಆಟ ಮುಗಿಯುವ ಹೊತ್ತಿಗೆ ಸಮಯ ೪-೩೦ ಆಗಿರುತ್ತದೆ.[ಈಗ ಎಲ್ಲಾ ಕಡೆ ಮೊಬೈಲು ದರ್ ಕಾಡಿಮೆ ಇರುವುದರಿಂದ ನಮ್ಮೆಲಾ ಬೀಟ್ ಬಾಯ್ಸ್ ಮೊಬೈಲ್ ಇಟ್ಟಿದ್ದಾರೆ. ಮತ್ತು ಈ ಮೊಬೈಲ್ ಕರೆಗಳ ಆಟ ನನ್ನೊಬ್ಬನಿಗೆ ಸೀಮಿತವಾಗಿಲ್ಲ. ಎಲ್ಲಾ ದಿನಪತ್ರಿಕೆ ವಿತರಕರಿಗೂ ಇದು ಪ್ರತಿದಿನದ ಕತೆ].

ಆ ಕ್ಷಣ ವಾಸ್ತವಕ್ಕೆ ಬಂದು ನಾನು ಸ್ವೆಟರ್ ಹಾಕಿಕೊಂಡು ಹೊರಡಲು ಸಿದ್ದನಾಗುತ್ತೇನೆ. ನನ್ನ ಸ್ಕೂಟಿ ಏರಿ ನನ್ನ ದಿನಪತ್ರಿಕೆ ವಿತರಣೆ ಸ್ಥಳ ತಲುಪುವ ಹೊತ್ತಿಗೆ ೫ ನಿಮಿಷ ಬೇಕಾಗುತ್ತದೆ. ಆ ಐದು ನಿಮಿಷಗಳಲ್ಲಿ

"ಓಂ ಭೂಃರ್ಭುವಸ್ವಃ
ತತ್ಸವಿತೂರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್" ಗಾಯತ್ರಿ ಮಂತ್ರ ಅಥವಾ

"ತ್ರ್ಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿವರ್ಧನಂ
ಉರ್ವಾರುಕಮಿವ ಬಂಧರ್ನಾ
ಮೃತ್ಯೋರ್ಮುಕ್ಷೀಯ ಮಾಮೃತಾತ್ " ಮೃತ್ಯುಂಜಯ ಮಂತ್ರವನ್ನು ಮನಸ್ಸಿನಲ್ಲಿಯೇ ೯ ಸಲ ಹೇಳಿಕೊಂಡು ಸಾಗುತ್ತೇನೆ.

ಸಹಾಯಕರ ಮೊಬೈಲ್ ಸ್ವಿಚ್ ಆಪ್ ಅಗಿದ್ದ ದಿನ ಎಲ್ಲಾ ಕೆಲಸ ನಾನೇ ಮಾಡಬೇಕಲ್ಲ ಎಂಬ ಭಾವನೆ ಸಿಟ್ಟಿನ ಮೂಲಕ ನುಗ್ಗಿ ಬಂದು ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ ಎರಡಕ್ಕೂ ಜಾಗವಿಲ್ಲದೆ ಅವರನ್ನು ಮನಸ್ಸಿನಲ್ಲಿಯೇ ಬೈದುಕೊಳ್ಳುವ ಮಂತ್ರ ನನಗರಿವಿಲ್ಲದೇ ಬಂದುಬಿಡುತ್ತದೆ. ಹಾಗು ಅದು ೯ ಸಲಕ್ಕಿಂತ ಹೆಚ್ಚಾಗಿರುತ್ತದೆ.

ಇಷ್ಟೆಲ್ಲಾ ಕತೆ ಮುಗಿದು ನನ್ನ ದಿನಪತ್ರಿಕೆ ವಿತರಣೆ ಸ್ಥಳ ತಲುಪುವ ಹೊತ್ತಿಗೆ "ಅರೆರೆ....ಆಗಲೇ ೪-೪೫ ಆಗಿಹೋಯಿತಲ್ಲ ಎನಿಸಿ ಮುಂದಿನ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ.

ಇದರ ನಂತರದ ಚಟುವಟಿಕೆಗಳು ಮುಂದಿನ ಬಾರಿ ಹಾಕುತ್ತೇನೆ.

ಶಿವು.

27 comments:

sunaath said...

ಒಳ್ಳೆ ಉಪಾಯ ಹೇಳಿಕೊಟ್ಟಿರಿ, ಶಿವು.
ನಾನು ಕಣ್ಣು ಮುಚ್ಚಿದ ತಕ್ಷಣ ನನ್ನ ನಿದ್ದೆ ಪ್ರಾರಂಭವಾಗುತ್ತದೆ.
ನೀವು ಹೇಳಿದಂತೆ, ಗಾಢನಿದ್ದೆಯ ಸಮಯವನ್ನು ಇನ್ನು ಪರೀಕ್ಷಿಸಬಹುದು. ಧನ್ಯವಾದಗಳು.

ಪೇಪರ ಹಂಚಿಗರ ನಿತ್ಯಕಲಾಪಗಳನ್ನು ವಿನೋದಪೂರ್ಣವಾಗಿ ನಮಗೆಲ್ಲ ತಿಳಿಸುತ್ತ ಇದ್ದೀರಿ. ಇದರಿಂದ ನಮಗೊಂದು ಒಳನೋಟ ಸಿಗುತ್ತಿದೆ.

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಚಂದದ ಲೇಖನ ಯಾವತ್ತಿನ ಹಾಗೆ.
ಆದರೂ ನೀವು ಒಂದು ತಾಸು ನಿದ್ರೆಯನ್ನು ಹಾಳುಮಾಡಿಕೊಂಡದ್ದಲ್ಲದೇ ಬೇರೆಯವರಿಗೂ ಇದೇ ಉಪಾಯವನ್ನು ಹೇಳಿಕೊಡುವುದು ಅಷ್ಟು ಇಷ್ಟವಾಗಲಿಲ್ಲ.[ತಮಾಷೆಗೆ ಹೇಳಿದೆ]

ನಮ್ಮನೆಯಲ್ಲೂ ಇದೇ ಕಥೆ. 7:30 ಕ್ಕೆ ಏಳುವ ಸಲುವಾಗಿ 7:15ಕ್ಕೆ ಅಲಾರ್ಮ್ ಇಟ್ಟುಕೊಂಡಿರುತ್ತಾರೆ. ಕೊನೆಗೂ ಏಳುವುದು ನಾನು ಹೋಗಿ ನಿದ್ದೆಯಿಂದೆಬ್ಬಿಸಿದ ನಂತರವೇ.

ಆದರೆ ನಮ್ಮೆಜಮಾನರ ನಿದ್ರೆಯ ಒಂದು ವಿಶೇಷತೆಯ ಬಗ್ಗೆ ಇನ್ನೊಮ್ಮೆ ನನ್ನ ಬ್ಲಾಗ್ ಅಲ್ಲಿಯೇ ಬರೆಯುತ್ತೇನೆ.

shivu.k said...

ಸುನಾಥ್ ಸಾರ್,

ಇದು ಉಪಾಯವೇನಲ್ಲ ಸಾರ್, ಇದು ನನ್ನ ದಿನನಿತ್ಯದ ಕರ್ಮಕಾಂಡ. ನಿಮಗೆ ಇದು ಹೊಸತಾಗಿ ರುಚಿಯೆನಿಸಬಹುದು[ಒಂದು ದಿನ ಸಿಹಿ ಓಕೆ. ಪ್ರತಿದಿನ ಅದೇ ಆದರೆ ಅದು ಕರ್ಮಕಾಂಡವೇ ಸರಿ]ಮತ್ತು ದೂರದ ಬೆಟ್ಟ ನುಣ್ಣಗೆ. ಪ್ರಯತ್ನಿಸಿ ನಿಮಗೆ ಒಳ್ಳೆಯದಾಗಲಿ.....ಹೀಗೆ ಬರುತ್ತಿರಿ....

shivu.k said...

ಶಾಂತಲಾ ಮೇಡಮ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನನಗೂ ಖಂಡಿತ ಒಂದು ತಾಸು ನಿದ್ರೆಯನ್ನು ಹಾಳು ಮಾಡಿಕೊಳ್ಳಲಿಕ್ಕೆ ಇಷ್ಟವಿಲ್ಲ. ಆದರೇನು ಮಾಡುವುದು ? ನನ್ನ ಕೆಲಸವೇ ಅಂಥದ್ದು. ಅದಕ್ಕೆ ನಾನೇ ಈ ಪರಿಹಾರವನ್ನು ಕಂಡುಕೊಂಡಿದ್ದೇನೆಯೇ ಹೊರತು ಬೇರೆಯವರು ಇದನ್ನು ಅನುಸರಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲವೆಂದು ನಾನೆ ಹೇಳುತ್ತೇನೆ.[ಬೇಕೆಂದರೇ ನನ್ನಂತೆ ದಿನಪತ್ರಿಕೆ ವಿತರಣೇ ಕೆಲಸಕ್ಕೆ ಬಂದಾಗ ಯೋಚಿಸಬಹುದು].

ವಿ.ರಾ.ಹೆ. said...

ಚೆನ್ನಾಗಿದೆ ..ನನಗಂತೂ ಆ ಹೊತ್ತು ಇನ್ನೂ ಮಧ್ಯರಾತ್ರಿ!

ಅಂತರ್ವಾಣಿ said...

ಶಿವಣ್ಣ,
ನಿಮ್ಮಂಥ ದಿನಪತ್ರಿಕೆ ವಿತರಕರ ಜೀವನ ಹೇಗಿರುತ್ತದೆ ಅಂತ ತಿಳಿಸಿದ್ದೀರ. ಹೀಗೆ ಮುಂದುವರೆಸಿ.

ಬೆಳಿಗ್ಗೆ ಅಲಾರಂ ಇಲ್ಲದಿದ್ದರೂ ನಿಮಗೆ ಅಭ್ಯಾಸದಿಂದ ಎಚ್ಚರವಾಗಬೇಕಲ್ಲಾ?

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...

ನೀವು ನಾನು ಬರೆದದ್ದನ್ನು ಅನ್ಯಥ ಭಾವಿಸದಿರಿ. ನಿಮ್ಮ ಈ ಕಥೆ ಓದಿದಾಗ ಇದು ಬರಿಯ ನಿಮ್ಮ ಮನೆ ಕಥೆ ಮಾತ್ರವಾಗಿ ಕಾಣಿಸುವುದಿಲ್ಲ. ಏಕೆಂದರೆ ಬೆಳಿಗ್ಗೆ ಏಳುವ ವಿಚಾರದಂಥಹ ವಿಚಾರಗಳು ಎಲ್ಲರ ಮನೆಯಲ್ಲೂ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಜರುಗೇ ಜರುಗುವ ಕಾರ್ಯಕ್ರಮ. ನಿಮಗೆ ಅದನ್ನು ಬಣ್ಣಿಸುವ ಕಲೆ ಒಲಿದಿದೆ, ಎಲ್ಲರಿಗೂ ಅದು ಸಾಧ್ಯವಾಗದೆ ನಾವು ಸುಮ್ಮನಿದ್ದೇವೆ ಅಷ್ಟೆ :-)

ಅವರವರ ವೃತ್ತಿಗೆ ಸರಿಯಾಗಿ ಅವರವರ ದಿನಚರಿ ಹೊಂದಿಕೊಂಡಿರುತ್ತದೆ. ನಮಗೆ ಸೂರ್ಯ ಮುಳುಗಿದರೆ ಸಂಜೆ, ಸೂರ್ಯ ಹುಟ್ಟಿದರೆ ಬೆಳಗು ಅನ್ನುವುದಾದರೂ ಇದೆ. ಇನ್ನು ಕೆಲವರಿಗೆ ಸೂರ್ಯ ಹುಟ್ಟಿದ್ದು, ಮುಳುಗಿದ್ದೂ ಯಾವುದೂ ಸಂಬಂಧವಿರದ ವೃತ್ತಿ (ವಿದೇಶಿ ಕಂಪೆನಿಗಳಿಗೆ ಭಾರತದಿಂದಲೇ ಸೇವೆ ಸಲ್ಲಿಸುವವರ ಬಗ್ಗೆ ನಿಮಗೂ ಗೊತ್ತಿರಬಹುದು). ಎರಡು ದಿನಕ್ಕೊಮ್ಮೆ ಬರೀ ಒಂದು ತಾಸು ನಿದ್ರೆ ಮಾಡುವಂಥಹ ಅನಿವಾರ್ಯತೆಯವರನ್ನು ನೋಡಿ ನಾನು ಪಶ್ಚಾತ್ತಾಪ ಪಟ್ಟಿದ್ದಿದೆ.

ಈ ನಿದ್ದೆಯಿಂದ ಎಚ್ಚೆತ್ತುಕೊಳ್ಳುವ ವಿಚಾರವಿದೆಯಲ್ಲ ಅದರ ಬಗ್ಗೆ ಇಲ್ಲಿ ಬರೆಯಲು ಹೋದರೆ ತುಂಬ ಉದ್ದ ಪುರಾಣವಾದೀತೆಂಬ ಕಾರಣಕ್ಕೆ ನನ್ನ ಬ್ಲಾಗಿನಲ್ಲಿಯೇ ಬರೆಯುತ್ತೇನೆಂದು ಹೇಳಿದೆ ಅಷ್ಟೆ. (ಆ ಬಗ್ಗೆ ಬರೆಯಬೇಕಂತ ತುಂಬ ಮೊದಲಿಂದ ಯೋಜನೆಯಿದ್ದಿದ್ದು ಅದಕ್ಕಿನ್ನೂ ಮುಹೂರ್ತ ಸಿಕ್ಕಿಲ್ಲ, ಸ್ವಂತ ಅನುಭವಗಳನ್ನು ಬರೆಯುವ ಶೈಲಿ ನನಗೆ ಒಲಿದಿಲ್ಲ ಬಿಡಿ. ಕಟ್ಟು ಕಥೆಗಳ ಬೇಕಾದರೆ ಬರೆದಿಟ್ಟೇನು :-)ತುಂಬ ಚೆನ್ನಾಗಿ ಬರೆಯುತ್ತೀರಿ. ಪ್ರಕಾಶ್ ಹೆಗಡೆಯವರ ಬ್ಲಾಗಿನಲ್ಲಿ ನೀವು ಕ್ಲಿಕ್ಕಿಸಿದ ಫೋಟೋಗಳನ್ನು ನೋಡಿದೆ, ಅದಕ್ಕಾಗಿ ನಿಮಗೆ ಧನ್ಯವಾದ.
ತುಂಬ ಚೆನ್ನಾಗಿ ಬರೆಯುತ್ತೀರಿ. ಎಲ್ಲ ಇನ್ನಷ್ಟು ಒಳಿತಾಗಲಿ.

Lakshmi Shashidhar Chaitanya said...

ಹೆ ಹೆ...ನನಗಂತೂ ಅಲಾರಂ ಹೊಡೆಯೋದೇ ಕೇಳ್ಸೋದಿಲ್ಲ..ಅದಕ್ಕೆ ನಾನು ಅಲಾರಂ ಇಟ್ಟುಕೊಳ್ಳುವುದೂ ಇಲ್ಲ.

ತುಂಬಾ ಚೆನ್ನಾಗಿ ಬರ್ದಿದೀರಿ.

Ittigecement said...

ಶಿವು ಸರ್...

ನನಗೆ ಬೆಳಿಗ್ಗೆ ಏಳುವದು ಸಮಸ್ಯೆಯೆ ಅಲ್ಲ...
ಕೆಲಸವಿದ್ದರೆ..ಬೆಳಿಗ್ಗೆ ಏಳ ಬೇಕೆಂಬ ವಿಚಾರ ಇದ್ದರೆ....
ಸರಿಯಾಗಿ ಅದೇ ಸಮಯಕ್ಕೆ ಎಚ್ಚರವಾಗುತ್ತದೆ..
ಮೊದಲಿನಿಂದಲೂ ನನಗೆ ಕಡಿಮೆ ನಿದ್ರೆ..
ಲೇಖನ ಚೆನ್ನಾಗಿದೆ...
ಬರುತ್ತಲಿರಲಿ ನಿಮ್ಮ ಅನುಭವಗಳು..

Pramod P T said...

ಅದಕ್ಕೆ ಶೀವು..ನೀವಿಷ್ಟೊಂದು ಆಕ್ಟೀವ್ ಆಗಿರೋದು.
ಚೆನ್ನಾಗಿ ಬರೆದಿದ್ದೀರಿ.

ಪ್ರಮೋದ್

shivu.k said...

ವಿಕಾಶ್ ಹೆಗಡೆಯವರೆ,
ಪ್ರತಿಕ್ರಿಯಿಸಿದ್ದಕ್ಕೆ thanks.

shivu.k said...

ಜಯಶಂಕರ್,

ಪ್ರತಿಕ್ರಿಯಿಸಿದ್ದಕ್ಕೆ thanks....

ನನಗೆ ಅಲಾರಾಂ ಇಲ್ಲದೆಯೂ ಎಚ್ಚರವಾಗುತ್ತೆ. ಆದ್ರೆ ಅಲಾರಾಂ ಬೇಕಿರುವುದು ಸೇಫ್ಟಿಗಾಗಿ ! ಎಂದಾದರು ಎಚ್ಚರವಾಗದಿದ್ದರೆ ಇರಲಿ ಎಂದು !

shivu.k said...

ಪ್ರಕಾಶ್ ಸಾರ್,

ನೀವೇಳುವುದು ಸರಿ. ಕೆಲಸವಿದೆ ಎಂದಾಗ ಜವಾಬ್ದಾರಿ ಹೆಚ್ಚಾಗುತ್ತದೆ. ನಿಮಗೆ ನಿದ್ರೆ ಕಡಿಮೆಯಾಗಿದೆಯೆಂಬ ಚಿಂತೆ ಬೇಡ. ಅದು ಚಟುವಟಿಕೆಯಿಂದಿರುವ ಲಕ್ಷಣ. ನಾನು ರಾತ್ರಿ ೧೧ ಗಂಟೆಗೆ ಮಲಗಿ ಮುಂಜಾನೆ ೪ ಗಂಟೆಗೆ ಏಳುತ್ತೇನೆ. ನನಗೆ ಇದಕ್ಕೆ ಸ್ಪೂರ್ತಿ ಡಾ: ಅಬ್ದುಲ್ ಕಲಾಂ. ಅವರು ಈ ವಯಸ್ಸಿನಲ್ಲೂ ನಾಲ್ಕೇ ಗಂಟೆ ನಿದ್ರೆ ಮಾಡೋದು. ಅವರಿಗೆ ಅದು ಸಾಧ್ಯವಿರುವಾಗ ನಮ್ಮಂಥ ಯುವಕರಿಗೆ ಸಾಧ್ಯವಿಲ್ಲವೇ.! ಹೇಳಿ !

shivu.k said...

ಪ್ರಮೋದ್
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.


ಲಕ್ಷ್ಮಿ ಮೇಡಮ್,

ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಬೆಳಿಗ್ಗೆ ಏಳುವುದಕ್ಕೆ ಅಲರಾಂ ಬೇಡ ! ಮನಸ್ಸಿನಲ್ಲಿ ಇಷ್ಟು ಗಂಟೆಗೆ ಏಳಬೇಕೆಂದು ಅಂದುಕೊಂಡು ಮಲಗಿದರೆ ಸಾಕು ಬೆಳಿಗ್ಗೆ ನೀವಂದುಕೊಂಡ ಸಮಯಕ್ಕೆ ಎಚ್ಚರವಾಗುತ್ತದೆ.! ಪ್ರಯತ್ನಿಸಿ !

shivu.k said...

ಶಾಂತಲ ಮೇಡಮ್,

ನೀವು ಮತ್ತೆ ಬಂದು ಪ್ರತಿಕ್ರಿಯಿಸಿದ್ದಕ್ಕೆ thanks. ನಿದ್ರೆಯ ವಿಚಾರದಲ್ಲಿ ನಾನು ಕಡಿಮೆ ನಿದ್ರೆ ಮಾಡಿದರೂ, B.P.O ಮತ್ತು ಕಾಲ್ ಸೆಂಟರುಗಳಲ್ಲಿ ನನಗಿಂತ ಕಡಿಮೆ ನಿದ್ರೆ ಮಾಡುತ್ತಾರಲ್ಲ. ಅವರಿಗಿಂತ ದೇವರು ನನಗೆ ಹೆಚ್ಚು ನಿದ್ರೆಯನ್ನು ಕೊಟ್ಟಿದ್ದಾನೆ ಮತ್ತು ಆಕ್ಟೀವ್‌ನೆಸ್ ಕೊಟ್ಟಿದ್ದಾನೆಂದು ನನಗೆ ತೃಪ್ತಿ ಇದೆ.

ಇನ್ನು ಪ್ರಕಾಶ್ ಹೆಗಡೆಯವರ ಬ್ಲಾಗಿನಲ್ಲಿ ಮರಳು-ಮಣ್ಣು ವಿಚಾರದಲ್ಲಿ ನನ್ನದೇನು ಹೆಗ್ಗ್ಗಳಿಕೆ ಇಲ್ಲ. ನನಂಥ ಹತ್ತಾರು ಜನ ಫೋಟೊ ತೆಗೆಯಬಹುದು. ಆದರೆ ಅಲ್ಲಿ ಆಗಿರುವ ಮೋಸವನ್ನು ಗಮನಿಸುವುದು, ಅದಕ್ಕೆ ಪ್ರತಿಕ್ರಿಯಿಸುವುದು ಎಷ್ಟು ಜನಕ್ಕೆ ಗೊತ್ತು ? ಅ ಕೆಲಸವನ್ನು ಅವರು ಮಾಡಿದ್ದಾರೆ. ಅದರ ಕೆಲಸಕ್ಕೆ ನನ್ನ ಕೈ ಜೋಡಿಸಿದ್ದೇನೆ ಆಷ್ಟೇ. ನಾವು ಬ್ಲಾಗಿಗರು ನಾವು ಒಬ್ಬರಿಗೊಬ್ಬರು ಬರೆದಿದ್ದನ್ನು ಓದಿ ಪರಸ್ಪರ ಬೆನ್ನು ತಟ್ಟಿಕೊಳ್ಳುವುದರ ಜೊತೆಗೆ ಇಂಥ ಕೆಲಸಗಳಾಗಬೇಕು. ಅದನ್ನು ಮಾಡುವವರ ಜೊತೆ ನಾವಿರಬೇಕು ಇದು ನನ್ನ ಅಭಿಪ್ರಾಯ. ನೀವೇನಂತೀರಿ !

NilGiri said...
This comment has been removed by the author.
NilGiri said...

ಬೆಳಿಗ್ಗೆ ನಾಲ್ಕು ಗಂಟೆನಾ?! ಪ್ರಪಂಚ ತಲೆ ಮೇಲೆ ಬಿದ್ರೂ ನಾನು ಎದ್ದೇಳಲ್ಲಾ! ರಾತ್ರಿ ಎಷ್ಟರವರೆಗೂ ಬೇಕಿದ್ರೆ ಎಚ್ಚರವಿರಬಲ್ಲೆ, ಬೆಳಿಗ್ಗೆ ಮಾತ್ರ ಚಾನ್ಸೇ ಇಲ್ಲ!

ಪಾಪ ಅನ್ಸುತ್ತೆ ಶಿವು, ನಮ್ಗೆಲ್ಲಾ ಬೆಳಿಗ್ಗೆನೇ ಪೇಪರ್ ತಂದುಕೊಡಲು ನೀವು ಎಷ್ಟು ಬೇಗ ಏಳ್ತೀರ ಅಲ್ವ. ದಿನಾ ಹೀಗೆ ಎದ್ದೇಳ್ತಾ ಇರಿ :)

ಸುಧೇಶ್ ಶೆಟ್ಟಿ said...

ನಾನು ಮಲಗುವುದೇ ಎರಡು ಗ೦ಟೆಗೆ. ಇನ್ನು ನನ್ನು ಗಾಢನಿದ್ರೆ ಬಹುಶ: ೭ ಗ೦ಟೆಗೆ ಇರಬಹುದೇನೋ... ಅಷ್ಟು ಹೊತ್ತಿಗೆ ನಿಮ್ಮ ಕೆಲಸ ಮುಗಿದಿರಬಹುದು.
ಬೆಳಗ್ಗೆ ಬೇಗ ಏಳುವ ನೀವೆ ಗಟ್ಟಿಗರು. ನಾನು ರಾತ್ರಿ ಎಷ್ಟು ಗ೦ಟೆಯವರೆಗೆ ಬೇಕಾದರೂ ಎದ್ದಿರಬಲ್ಲೆ. ಆದರೆ ಬೆಳಗ್ಗೆ ಬೇಗ ಏಳುವುದು..... ಅ೦ತ ಕೆಟ್ಟಬುದ್ದಿ ನನಗಿಲ್ಲಪ್ಪ...

ಎ೦ದಿನ೦ತೆ ಲೇಖನ ಚೆನ್ನಾಗಿತ್ತು ಮತ್ತು ಮು೦ದಿನ ಚಟುವಟಿಕೆಗಳಿಗೆ ಕಾಯುತ್ತಿದ್ದೇನೆ.

- ಸುಧೇಶ್

shivu.k said...

ಗಿರಿಜಕ್ಕ,
ನೀವೇಕೆ ಬೇಗ ಏಳಬೇಕು ನಾವಿರುವಾಗ ? ದೇವರು ಎಲ್ಲರಿಗೂ ಒಂದೊಂದು ಟೈಮ್ ಸೆಟ್ ಮಾಡಿಬಿಟ್ಟಿದ್ದಾನೆ ಎಲ್ಲಾ ವಿಚಾರದಲ್ಲೂ ! ನಿಮ್ಮ ಆಶೀರ್ವಾದ ಹೀಗೆ ಇರಲಿ.

shivu.k said...

ಸುಧೇಶ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಕಾಯುವಿಕೆಯನ್ನು ನಾನು ನಿರಾಸೆಗೊಳಿಸುವುದಿಲ್ಲ.

ಚಿತ್ರಾ ಸಂತೋಷ್ said...

ಶಿವಣ್ಣ...(:)..ಆಲಾರಂ ಇಟ್ಟುಕೋಬಾರದು..ನಾವಾಗಿಯೇ ಏಳಬೇಕು. ನಂಗಂತೂ ಆರುಗಂಟೆಗೆ ಪಕ್ಕಾ ಎಚ್ಚರಿಕೆಯಾಗುತ್ತೆ. ಭಾನುವಾರನೂ ಆರು ಗಂಟೆಗೆ ಎದ್ದು ತಮ್ಮನನ್ನು ಎಬ್ಬಿಸಿ ಕಿರಿಕಿರಿ ಕೊಡ್ತೀನಿ. ನಿದ್ದೆ ಮಾಡೋರಿಗೆ ಉಪದ್ರ ಮಾಡೋದು ನಂಗಿಷ್ಟ.
-ತುಂಬುಪ್ರೀತಿ,
ಚಿತ್ರಾ

shivu.k said...

ಚಿತ್ರಾ ,

ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್.
ಅಲರಾಂ ವಿಚಾರದಲ್ಲಿ ನಿನ್ನ ಅಭಿಪ್ರಾಯ ಸರಿಯಾಗಿದೆ. ಆದರೆ ಅದಕ್ಕಾಗಿ ನೀನು ಬೇಗ ಎದ್ದೆ ಎಂದು ನಿನ್ನ ತಮ್ಮನನ್ನು ಎಬ್ಬಿಸುವುದು ಯಾವ ನ್ಯಾಯ ? ಈ ವಿಚಾರದಲ್ಲಿ ದೇವರು ನಿನಗೆ ಒಳ್ಳೆಯ ಬುದ್ಧಿ ಕೊಡಲಿ !

Parisarapremi said...

ಅಲ್ಲಾ, ಬೆಳಿಗ್ಗೆ ಎದ್ದೇಳೋದ್ ಇರಲಿ, ಎದ್ದ ತಕ್ಷಣ ನೀವು ಕೇಳೋ ಹಾಡುಗಳ ಬಗ್ಗೆ ಕಲ್ಪಿಸಿಕೊಳ್ಳುವುದೇ ಕರ್ಮಕಾಂಡ ಬಿಡಿ... :-D

shivu.k said...

ಪರಿಸರ ಪ್ರೇಮಿಗಳೇ,

ನಿಮ್ಮ ಮಾತಿನಂತೆ ನನಗೆ ಆಗುತ್ತಿದೆಯಲ್ಲಾ ಸಾರ್,?

Harisha - ಹರೀಶ said...

ಪ್ರತಿಯೊಬ್ಬರಿಗೂ ಏಳೋ ಕಷ್ಟ ಇದ್ದಿದ್ದೇ.. ನನ್ನಂಥ ಸೂರ್ಯವಂಶದವರಿಗೆ ಈ ಕಷ್ಟ ಇನ್ನೂ ಹೆಚ್ಚು.. :-(

>> ಮನಸ್ಸಿನಲ್ಲಿ ಇಷ್ಟು ಗಂಟೆಗೆ ಏಳಬೇಕೆಂದು ಅಂದುಕೊಂಡು ಮಲಗಿದರೆ ಸಾಕು ಬೆಳಿಗ್ಗೆ ನೀವಂದುಕೊಂಡ ಸಮಯಕ್ಕೆ ಎಚ್ಚರವಾಗುತ್ತದೆ

ಸರಿಯಾಗಿ ಹೇಳಿದ್ದೀರಿ! ನಮ್ಮ ಮನಸ್ಸಿಗಿಂತ ನಿಖರವಾದ ಗಡಿಯಾರ ಇನ್ನೊಂದಿಲ್ಲ!!

ಅಂದ ಹಾಗೆ ...
ಉರ್ವಾರುಕಮಿವ ಬಂಧರ್ನಾ ಅಂತ ಬರ್ದಿದೀರಿ.
ಉರ್ವಾರುಕಮಿವ ಬಂಧನಾತ್ ಆಗ್ಬೇಕು..

shivu.k said...

ಹರೀಶ್
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಆಗಿರುವ ತಪ್ಪಾಗಿರುವ ಆಕ್ಷರಗಳನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್. ಅದನ್ನು ಸರಿಪಡಿಸಲೆತ್ನಿಸುತ್ತೇನೆ.
ಶಿವು.

ಬಾಲು said...

alla nimma idea eno chennagide, beligge 4 ke elalu 3 ge alarm ittu, amele matte ondu koli nidde madodu... olleya plan ne sari.

aadare nanna karma kanda andre, work pressure, e tension ninda rathre nidde barolla, recession bhaya... totaly karma kanda aagide. adakkagi nimma blog ge ittichege baralu aagira lilla.

nimma lekha na chennagide. nimage kushi aagi, beligge nalku gante ge ecchara aagali antha haaraisuve. ( idu shaapa na antha nange confuse aagtha ide!! )