Monday, December 15, 2008

ಹಾವೂ ಸಾಯಬಾರದು...ಕೋಲು ಮುರಿಯಬಾರದು...

ಅವತ್ತು ಮುಂಜಾನೆ ಖುಷಿಯಲ್ಲಿದ್ದೆ. ಇಂಥ ಚಳಿಗಾಲದಲ್ಲೂ ಬೇಗ ಬಂದು ತಮ್ಮ ತಮ್ಮ ಬೀಟುಗಳನ್ನು ಸೈಕಲ್ಲಿಗೇರಿಸಿಕೊಂಡು ಹೊರಟರಲ್ಲ ! ಅವತ್ತಿನ ಕೆಲಸ ಬೇಗ ಮುಗಿಯಿತಲ್ಲ ಅಂತ! ಸ್ವಲ್ಪ ಹೊತ್ತು ಅಲ್ಲೇ ಕುಳಿತು ಒಂದು ಸುತ್ತು ಎಲ್ಲಾ ಪೇಪರುಗಳ ಹೆಡ್‌ಲೈನ್ಸ್ ನೋಡುತ್ತಿದ್ದೆ.

ಒಂದರ್ಧ ಗಂಟೆ ಕಳೆದಿರಬಹುದು. ನನ್ನ ಮೊಬೈಲ್ ಫೋನು ರಿಂಗಾಯಿತು. "ತತ್, ನೆಮ್ಮದಿಯಾಗಿ ಪೇಪರ್ ಓದೊದಕ್ಕೂ ಬಿಡೋದಿಲ್ವಲ್ಲ ಈ ಫೋನು" ಅಂದು ಕೊಂಡು ನೋಡಿದರೆ ಚೆನ್ನಾಗಿ ಗೊತ್ತಿರುವ ಗ್ರಾಹಕನ ನಂಬರ್.

"ಹಲೋ ಹೇಳಿ" ಅಂದೆ.

"ಶಿವು ನಾನು ಕಣ್ರೀ.... ಸಂತೋಷ್ ಗೊತ್ತಾಯ್ತಾ.......

ನಾನು ಸ್ವಲ್ಪ ಯೋಚಿಸಿ, " ಗೊತ್ತಾಯ್ತು ಹೇಳಿ ಸಾರ್"

"ನೋಡ್ರಿ ಶಿವು. ನಿಮ್ಮ ಪೇಪರ್ ಹಾಕೊ ಹುಡುಗ ನನ್ನ ಹೊಸ ಚಪ್ಪಲಿಯನ್ನು ತಗೊಂಡು ಹೋಗಿಬಿಟ್ಟಿದ್ದಾನೆ. ಅದರ ಬೆಲೆ ೮೫೦ ರೂಪಾಯಿ ಕಣ್ರೀ.... ದಯವಿಟ್ಟು ಅವನು ಬಂದರೆ ಸ್ವಲ್ಪ ಬಂದರೆ ನೋಡ್ರೀ...."

ಅವರ ಮಾತು ಕೇಳಿ ನನಗೆ ಶಾಕ್!

ಇದೇನಪ್ಪ ಇದು ಬೆಳಿಗ್ಗೆ ಬೆಳಿಗ್ಗೆ ಇಲ್ಲದ "ತರಲೆ ತಾಪತ್ರಯ" ಅಂದುಕೊಂಡೆ ಬೇಸರದಿಂದ.

ಮರುಕ್ಷಣ ಸಾವರಿಸಿಕೊಂಡು,

"ನೋಡಿ ಸಾರ್ ನಮ್ಮ ಹುಡುಗ ಅಂತೋನಲ್ಲ, ನೀವೇನಾದ್ರು ಕನ್‌ಪ್ಯೂಸ್ ಆದ್ರಾ ನೋಡಿ "

ಹೀಗೆ ಇಬ್ಬರ ನಡುವೆ ಕೆಲವು ಮಾತುಕತೆ ನಡೆಯಿತು. ಕೊನೆಗೆ ಆತ ಖಚಿತವಾಗಿ ಸಾಕ್ಷಿ ಸಮೇತ ಹೇಳಿದ ಮೇಲೆ ನಾನು ನಂಬಲೇ ಬೇಕಾಯಿತು.

"ರ್ರೀ......ಶಿವು, ನನಗೆ ಬೆಳಿಗ್ಗೆ ಎದ್ದು ನಿಮ್ಮ ಹುಡುಗನ ಮೇಲೆ ಕಂಪ್ಲೆಂಟು ಹೇಳೋದು ಬಿಟ್ಟು ಬೇರೆ ಕೆಲಸ ಇಲ್ಲ ಆಂದುಕೊಂಡಿರೇನ್ರೀ..... ನೀವೆ ಬಂದು ಇಲ್ಲಿ ನೋಡಿ ಬೇಕಾದ್ರೆ, ನೀಟಾಗಿ ಅವನ ಹಳೇ ಚಪ್ಪಲಿ ಬಿಟ್ಟು ನಮ್ಮ ಹೊಸ ಚಪ್ಪಲಿ ಹಾಕ್ಕೊಂಡು ಹೋಗಿದ್ದಾನೆ" ಸ್ವಲ್ಪ ತಡೆದು ,

"ನಿಮ್ಮ ಆ ಹುಡುಗ ಬಂದ್ರೆ ಅವನ್ನ ನನ್ನ ಬಳಿ ಕಳಿಸ್ರೀ.......ನಾನು ಏನು ಮಾಡೊಲ್ಲ, ನಮ್ಮ ಚಪ್ಪಲಿ ಬಿಟ್ಟು ಹೋದ್ರೆ ಸಾಕು" ಎಂದ.

"ಸರಿ ಸಾರ್ ನೋಡ್ತೀನಿ...." ಎಂದಾಗಲೇ ಅವನು ಫೋನ್ ಕಟ್ ಆದದ್ದು.

ಹೀಗೇನು ಮಾಡುವುದು ? ಮತ್ತೆ ಪೇಪರ್ ಓದುವ ಮೂಡ್ ಇಲ್ಲ. ನನ್ನೊಳಗೆ ಇಲ್ಲದ ತಳಮಳಗಳು ಶುರುವಾದವು.

ನಮ್ಮ ಹುಡುಗ ನರಸಿಂಹ ಚಪ್ಪಲಿ ಕದ್ದಿದ್ದು ಸತ್ಯವಾದರೆ ಆ ಗಿರಾಕಿ ನನ್ನ ಕಡೆಯಿಂದ ಪೇಪರ್ ತರಿಸುವುದು ನಿಲ್ಲಿಸುತ್ತಾನೆ. ಜೊತೆಯಲ್ಲಿ ಇಂಥ ಹುಡುಗನಿಂದಾಗಿ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ ! ಆ ಗಿರಾಕಿ ಒರಟನಾದರೆ ಪೋಲಿಸ್........... ಕಂಪ್ಲೆಂಟು......... ಅದು ಇನ್ನೂ ಭಯವಾಯಿತು.

ನಂತರ ಆ ಹುಡುಗನನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ. ಆಷ್ಟಕ್ಕೂ ಮೀರಿ ನರಸಿಂಹನನ್ನೇ ಇಟ್ಟುಕೊಂಡರೆ ಅವನ ಕಳ್ಳತನಕ್ಕೆ ನಾನೇ ಸಪೋರ್ಟ್ ಮಾಡಿದಂತಾಗಿ ಇನ್ನಷ್ಟು ಇಂತ ಕೆಲಸಗಳಿಂದಾಗಿ ನಾನು ಕೆಲವು ಗಿರಾಕಿಗಳನ್ನು ಕಳೆದುಕೊಳ್ಳಬೇಕಾಗುತ್ತದಲ್ಲ!

ಮತ್ತೆ ನರಸಿಂಹನನ್ನು ತೆಗೆದುಹಾಕಿದರೆ........ ಮೊದಲೇ ನನಗೆ ಬೀಟು ಹುಡುಗರ ಕೊರತೆಯಿರುವುದರಿಂದ ಮುಂದೆ ನನಗೆ ಈ ದಿನಪತ್ರಿಕೆ ವಿತರಣೆ ಕೆಲಸ ಇನ್ನಷ್ಟು ತೊಂದರೆಗೊಳಗಾಗುವುದು ಖಂಡಿತ.

ಈಗೇನು ಮಾಡುವುದು ? ತಲೆನೋವು ಶುರುವಾಯಿತು.

ಆ ನರಸಿಂಹ ವಾಪಸು ಬರಲಿ..... ಮುಂದೇನಾಗುತ್ತದೊ ನೋಡೋಣ ಎಂದುಕೊಂಡು ಸುಮ್ಮನಾದೆ. ನನ್ನ ಇನ್ನೊಬ್ಬ ಹುಡುಗ ಮಾದೇಶನನ್ನು ಕರೆದು ನಡೆದ ವಿಷಯವನ್ನು ವಿವರಿಸಿ, "ಅವನು ಬಂದ ತಕ್ಷಣ ನಿನ್ನ ಜೊತೆ ಕಳುಹಿಸುತ್ತೇನೆ. ಆ ಕಷ್ಟಮರ್ ಮನೆಗೆ ಕರೆದು ಹೋಗು ಎಂದು ಹೇಳಿ ಅವನ ಕೈಗೆ ನನ್ನ ಸ್ಕೂಟಿಯ ಕೀ ಕೊಟ್ಟೆ.

ಆಗೋ ಬಂದ ನರಸಿಂಹ. ನನ್ನ ಕಣ್ಣು ನೇರವಾಗಿ ಅವನ ಪಾದದ ಕಡೆಗೆ........ಸಂಶಯವೇ ಇಲ್ಲ..........ಕಷ್ಟಮರ್ ಹೇಳಿದಂತೆ ಬ್ರೌನ್ ಕಲರಿನ ಹೊಸ ಚಪ್ಪಲಿ ಇವನ ಕಾಲಿನಲ್ಲೇ ಇದೆ!!.

ಈ ವಿಚಾರದಲ್ಲಿ ಹಾವು ಸಾಯಬಾರದು ಕೋಲು ಮುರಿಯಬಾರದು. ಅಂದರೆ ನನಗೆ ಗಿರಾಕಿಯೂ ಉಳಿಯಬೇಕು, ಈ ಬೀಟ್ ಹಾಕುವ ನರಸಿಂಹನನ್ನು ಉಳಿಸಿಕೊಳ್ಳಬೇಕಲ್ಲ ? ಏನು ಮಾಡೋದು ಕೊನೆಗೊಂದು ಐಡಿಯಾ ಹೊಳೆಯಿತು. ಮೊದಲು ಸರಳವಾಗಿ ಮಾತಾಡಿಸಬೇಕು.

"ಲೋ ನರಸಿಂಹ ಎಲ್ಲ ಸರಿಯಾಗಿ ಮುಗಿಯಿತೇನೊ " ಇದು ನನ್ನ ಪ್ರತಿನಿತ್ಯದ ಮಾತು.

"ಹೂಂ.. ಸಾರ್......" ನರಸಿಂಹನದೂ ಕೂಡ ನಿತ್ಯದ ಉತ್ತರ.

ಈಗ ನೇರ ಬಾಣ ಬಿಡಬೇಕು ಅಂದುಕೊಂಡು,

"ನೋಡು ನರಸಿಂಹ ನಿನ್ನ ಮೇಲೊಂದು ಕಂಪ್ಲೆಂಟು ಬಂದಿದೆ. ನೀನು ಗಿರಾಕಿಯ ಮನೆಯಿಂದ ಚಪ್ಪಲಿ ಹಾಕ್ಕೋಂಡು[ಕದ್ದು ಅಂತ ಹೇಳಲಾಗದೆ] ಬಂದಿದ್ದೀಯ ಅಂತ ಫೋನ್ ಮಾಡಿದ್ರೂ, ಅದಕ್ಕೆ ನೀನು ಅವರ ಮನೆಗೆ ಇವನ ಜೊತೆ ಮತ್ತೊಮ್ಮೆ ಹೋಗಿ "ನನಗೇನು ಗೊತ್ತಿಲ್ಲ ಎಂದು ಹೇಳಿಬಿಡು ಹೋಗು" ಅವನಿಗೆ ಮಾತನಾಡಲು ಅವಕಾಶ ಕೊಡದೆ ಒಂದೇ ಉಸುರಿಗೆ ಹೇಳಿದೆ.

"ಸಾರ್..... ನಾನು......ಇದು.....ನಾನು ಹೊಸದು ಹೋದ ವಾರ ತಗೊಂಡೆ ಸಾರ್....೪೦೦ ರೂಪಾಯಿ...." ಬಾಣ ಗುರಿ ಮುಟ್ಟಿತ್ತು.

" ಸರಿನಪ್ಪ ನೀನು ತಗೊಂಡಿಲ್ಲವೆಂದ ಮೇಲೆ ನಿನಗ್ಯಾಕೆ ಚಿಂತೆ, ಹೋಗು ದೈರ್ಯವಾಗಿ ನಾನು ಅಂತವನಲ್ಲ ಎಂದು ಹೇಳೀ ಬಾ" ಎಂದು ಅವನು ಮರುಮಾತಾಡಲು ಅವಕಾಶ ಕೊಡದೆ ಮತ್ತೊಬ್ಬ ಹುಡುಗ ಮಾದೇಶನ ಜೊತೆ ಕಳುಹಿಸಿದ್ದೆ.

ಗಿರಾಕಿ ಬಾಗಿಲಲ್ಲಿ ಕಾಯುತ್ತಿದ್ದ. ನರಸಿಂಹನನ್ನು ನೋಡಿದ ಕೂಡಲೇ

"ಹೆಚ್ಚು ಮಾತಾಡದೆ ಕಾಲಲ್ಲಿರುವ ನಮ್ಮ ಚಪ್ಪಲಿ ಬಿಟ್ಟು ಹೋಗು"

ಈ ಹುಡುಗ "ಇಲ್ಲಾ ಸಾರ್, ನಾನು ಹೋದ ವಾರ.............." ಮಾತಾಡಲೆತ್ನಿಸಿದ.

"ಸುಮ್ಮನೆ ಬಿಟ್ಟು ಹೋಗು, ಇಲ್ಲದಿದ್ದಲ್ಲಿ ಪೋಲಿಸ್‌ಗೆ ಕಂಪ್ಲೆಂಟ್ ಕೊಡಬೇಕಾಗುತ್ತೆ."

ನರಸಿಂಹ ಮರುಮಾತಾಡಲಾಗದೆ ಆ ಹೊಸ ಚಪ್ಪಲಿಯನ್ನು ಬಿಟ್ಟು ಬರಿಕಾಲಲ್ಲಿ ವಾಪಸ್ ನನ್ನ ಬಳಿ ಬಂದ.

"ಸಾರ್ ಏನ್ ಸಾರ್ ಬೆಳಿಗ್ಗೆನೇ ಇದು ತಲೆನೋವು, ನಾನು ಮನೆಗೆ ಹೋದರೆ ಚಪ್ಪಲಿ ಎಲ್ಲಿ ಅಂತ ನಮ್ಮನೆಯಲ್ಲಿ ಕೇಳಿ ಬೈಯ್ತಾರಲ್ಲಾ " ?

ತನ್ನ ತಪ್ಪನ್ನು ಮುಚ್ಚಿಹಾಕಲು ನರಸಿಂಹನ ಪ್ರಯತ್ನ.

"ನೋಡು ನರಸಿಂಹ ನೀನು ಬೆಳಿಗ್ಗೆ ಎದ್ದಾಗ ಯಾರ ಮುಖ ನೋಡಿದ್ಯೋ ಗೊತ್ತಿಲ್ಲ. ಇದು ಇಷ್ಟಕ್ಕೆ ಮುಗಿಯಿತಲ್ಲ ಅಂತ ಖುಷಿಪಡು. ಆ ಕಸ್ಟಮರು ಒಳ್ಳೆಯವನು. ಅದಕ್ಕೆ ಸುಮ್ಮನೆ ಕಳುಹಿಸಿದ. ಬೇರೆಯವನಾಗಿದ್ದರೆ ಪೋಲಿಸ್........ಕಂಪ್ಲೆಂಟು..........ನನ್ನ ಮಾತು ಮುಂದುವರಿಸುತ್ತಾ ಅವನ ಮುಖ ನೋಡಿದೆ.

ಮುಖದಲ್ಲಿ ಭಯದ ಸೂಚನೆಗಳು ಆವರಿಸುತ್ತಿದ್ದವು.

" ಹೋಗಲಿ ಬಿಡು. ತಗೋ ಈ ೩೦ ರೂಪಾಯಿ. ಮನೆಗೆ ಹೋಗುತ್ತಾ ದಾರಿಯಲ್ಲಿರುವ ಆಂಗಡಿಯಲ್ಲಿ ಹವಾಯಿ ಚಪ್ಪಲಿ ತಗೋ ಸದ್ಯಕ್ಕೆ. ಮುಂದಿನ ತಿಂಗಳ ಸಂಬಳಕ್ಕೆ ಮತ್ತೆ ಅಂತದ್ದೇ ತಗೊಳ್ಳುವಿಯಂತೆ....."

ಅವನು ಮಾತಾಡಲು ಅವಕಾಶ ನೀಡದೆ ಸಮಾಧಾನ ಮಾಡುವ ರೀತಿಯಲ್ಲಿ ತಿಪ್ಪೆ ಸಾರಿಸಿದೆ. ಮರು ಮಾತಾಡದೆ ಅವನು ಹೊರಟು ಹೋದ.

"ಶಿವು ಥ್ಯಾಂಕ್ಸ್ ಕಣ್ರೀ..... ನನ್ನ ಹೊಸ ಚಪ್ಪಲಿ ಹೋಯ್ತು ಅಂದುಕೊಂಡಿದ್ದೆ. ವಾಪಸ್ ಸಿಕ್ಕಿತಲ್ಲ ಅಷ್ಟೇ ಸಾಕು. ಇಂಥ ಹುಡುಗರ ಬಗ್ಗೆ ನೀವು ತುಂಬಾ ಹುಷಾರಾಗಿರಬೇಕು" ಕಷ್ಟಮರ್ ಸಂತೋಷ್‌ರವರಿಂದ ಮತ್ತೆ ಫೋನು.

"ಹೌದು ಸಾರ್, ನೋಡಿ ಹುಡುಗರು ಎಂಥ ಕೆಲಸಗಳನ್ನು ಮಾಡಿಬಿಡ್ತಾರೆ, ಇದು ಗೊತ್ತಾದರೂ ನಾವು ಅವರನ್ನು ಈ ಪೇಪರ್ ಕೆಲಸದಿಂದ ತೆಗೆದುಹಾಕೊಕ್ಕಾಗಲ್ಲ.....ಏಕೆಂದರೆ ಬೇರೆ ಹುಡುಗರು ತಕ್ಷಣ ಸಿಗುವುದಿಲ್ಲವಲ್ಲ ಸಾರ್, ನಮಗೆ ತುಂಬಾ ಲೇಬರ್ ಪ್ರಾಬ್ಲಂ ಇದೆ"

"ಸರಿ ಶಿವು ಆಯ್ತು" ಆತ ಫೋನಿಟ್ಟ.

ನನಗೆ ಈಗ ಸಮಾಧಾನವಾಗಿತ್ತು. ಆ ಕಷ್ಟಮರು ಉಳಿದುಕೊಂಡ. ಈ ಹುಡುಗನನ್ನು ಸದ್ಯಕ್ಕೆ ಉಳಿಸಿಕೊಂಡಂತೆ ಆಯ್ತು. ಆದರೂ ಈ ಹುಡುಗನನ್ನು ನಂಬುವಂತಿಲ್ಲ. ನಾಳೆಯಿಂದಲೇ ಹೊಸ ಹುಡುಗನನ್ನು ಹುಡುಕಬೇಕು. ಸಿಕ್ಕಿದ ಮೇಲೆ ಇವನನ್ನು ತೆಗೆದುಹಾಕಿದರಾಯಿತು ಎಂದುಕೊಂಡೆ.

ಮರುದಿನ ಮತ್ತೆ ಎಂದಿನಂತೆ ಸೈಕಲ್ಲೇರಿ ಬಂದ ನರಸಿಂಹ ತನ್ನ ಪೇಪರ್ ಬೀಟನ್ನು ತೆಗೆದುಕೊಂಡು ಹೋದ. ನನ್ನ ಮತ್ತು ಮಾದೇಶನ ಕಣ್ಣುಗಳು ಮಾತ್ರ ಆ ಸಮಯದಲ್ಲಿ ನರಸಿಂಹನ ಕಾಲಿನ ಕಡೆ ನೆಟ್ಟಿದ್ದವು. ಅವನು ಚಪ್ಪಲಿ ಹಾಕಿರಲಿಲ್ಲ. ಅವನು ಹೋದ ಮೇಲೆ ನಾವಿಬ್ಬರು ಮುಸಿಮುಸಿ ನಕ್ಕಿದ್ದವು. ಬೀಟ್ ಮುಗಿಸಿ ಬಂದ ನರಸಿಂಹ ಅದೇ ಮನೆಯ ಬಾಗಿಲಲ್ಲಿ ಬಿಟ್ಟಿದ್ದ ತನ್ನ ಹಳೇ ಚಪ್ಪಲಿ ಹಾಕಿಕೊಂಡು ಬಂದಿದ್ದನ್ನು ನೋಡಿ ನಾನು ಮಾದೇಶನಿಗೆ ಕಣ್ಸನ್ನೆ ಮಾಡಿದೆ. ಅದನ್ನು ಗಮನಿಸಿದ ಮಾದೇಶ "ನಾನೊಬ್ಬ ಕಳ್ಳನೂ ನಾನೊಬ್ಬ ಸುಳ್ಳನೂ ಬಲುಮೋಸಗಾರನು ಸರಿಯೇನು " ಎಂದು ಜೋರಾಗಿ ಹಾಡು ಹೇಳಲಾರಂಭಿಸಿದ.

ಆಗೂ ಹೀಗೂ ಒಂದು ತಿಂಗಳು ಕಳೆಯಿತು. ಹೊಸ ಹುಡುಗ ಆನಂದನನ್ನು ಆ ಬೀಟಿಗೆ ಕಳುಹಿಸಿ ನರಸಿಂಹನನ್ನು ಮನೆಗೆ ಕಳುಹಿಸಿದ್ದೆ.

ಒಂದು ವಾರದ ನಂತರ ಆದೇ ಕಷ್ಟಮರ್ ಸಂತೋಷ್‌ರವರಿಂದ ಫೋನ್ ಬಂತು.

" ಹಲೋ ಶಿವು, ಹೊಸ ಹುಡುಗ ಬಂದಿದ್ದಾನೆ. ಇವನು ಹೇಗೆ? ಅವನ ತರಾನಾ ಎಲ್ಲಾ ಬೇರೆ ತರಾನ...." ?

ಯಾಕ್ ಸಾರ್ ಏನಾದ್ರು ಮತ್ತೆ ಅದೇ ತರ ಇವನು ಏನಾದ್ರು........." ನನಗೆ ಮತ್ತೆ ದಿಗಿಲು ಶುರುವಾಗುತ್ತಿತ್ತು. ಆಷ್ಟರಲ್ಲಿ

"ಇನ್ನು ಹಾಗೇನು ಹಾಗಿಲ್ಲ. ಸುಮ್ಮನೆ ಕೇಳಿದೆ.. ಆಷ್ಟೇ.."

ಸಾರ್, ನೀವೊಂದು ಕೆಲ್ಸ ಮಾಡಿ, ಮತ್ತೊಂದು ಜೊತೆ ಹೊಸದಾದ ಚಪ್ಪಲಿಯನ್ನೋ ಶೂಗಳನ್ನೋ ಬಾಗಿಲ ಹೊರಗಿಟ್ಟು ನೋಡಿ " ಎಂದು ನಕ್ಕಿದ್ದೆ.
ನನ್ನ ಮಾತು ಕೇಳಿ ಸಂತೋಷ್ ಕೂಡ ಜೋರಾಗಿ ನಕ್ಕಿದ್ದರು.

21 comments:

ಅಂತರ್ವಾಣಿ said...

ಶಿವಣ್ಣ
ಒಳ್ಳೇ ಉಪಾಯ ಮಾಡಿದ್ರಿ.. :)
ಅವರು ಬೇಕು ಅಂತ ಮಾಡೊದಿಲ್ಲ.. ಬಡತನ ಹಾಗೆ ಮಾಡುಸುತ್ತೆ ಅಲ್ವಾ?

shivu.k said...

ಜಯಶಂಕರ್,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಮಾತು ನಿಜ ಬಡತನ ಇದೆಲ್ಲವನ್ನು ಮಾಡಿಸುತ್ತೆ. ಅದರೆ ಅದನ್ನೆ ಮುಂದುವರಿಸಲು ಅವಕಾಶ ಕೊಡಬಾರದಲ್ವ?

NilGiri said...

ಕಸ್ಟಮರ್ ದೇ ತಪ್ಪು. ಅಷ್ಟು ಬೆಲೆ ಬಾಳುತ್ತೆ ಚಪ್ಪಲಿಗಳು ಅನ್ನುವವರು ಹೊರಗೆ ಯಾಕೆ ಬಿಡಬೇಕು? ಕದಿಯಬೇಕು ಅನ್ನಿಸುವವರಿಗೆ ಅವರೇ ದಾರಿ ತೋರಿಸಿಕೊಟ್ಟ ಹಾಗೆ ಅಲ್ಲವೇ?

shivu.k said...

ಗಿರಿಜಕ್ಕಾ,
ನಿಮ್ಮ ಮಾತು ಸರಿ. ಆದರೆ ಆದನ್ನು ನಾನು ಅವರಿಗೆ ಹೇಳಿಲಿಕ್ಕಾಗುವುದಿಲ್ಲ. ಹೇಳಿದರೆ ಆ ಕಷ್ಟಮರ್ ಈತ ನನಗೇನು ಹೇಳುವುದು ಎಂದು ನನ್ನಿಂದ ಪೇಪರ್ ತೆಗೆದುಕೊಳ್ಳದಿದ್ದರೆ ? ನನಗೆ ನಷ್ಟವಾಗುತ್ತದೆಲ್ಲವೇ !

ಸುಧೇಶ್ ಶೆಟ್ಟಿ said...

ಎಷ್ಟೆಲ್ಲಾ ತಲೆ ಓಡಿಸಬೇಕಲ್ಲಾ ಹಾವು ಸಾಯದಿರಲು ಮತ್ತು ಕೋಲು ಮುರಿಯದಿರಲು. ತು೦ಬಾ ಚಾಣಾಕ್ಷರು ನೀವು:)

ಬರಹ ಎ೦ದಿನ೦ತೆ ಇಷ್ಟವಾಯಿತು ಅ೦ತ ನಾನು ಹೇಳುವುದಿಲ್ಲ:)

ಬಾಲು said...

e case na chennagi handle madidri.... nivu yaake raajakeeyakke barabaaradu?
athlage vote beelabeku, nimgu kushi aagabeku haage handle mado chaka chakyathe nimagide!! enanthiri?

shivu.k said...

ಸುಧೇಶ್,
ನೀವಂದುಕೊಂಡಷ್ಟು ಬುದ್ಧಿವಂತಿಕೆ ಬೇಕಿಲ್ಲ . ನಮಗೆ ಆ ಸಮಯದಲ್ಲಿ ಆಗುವ ಅನುಭವಗಳು ಹೇಗೆ ಎದುರಿಸಬೇಕು ಅನ್ನುವುದನ್ನು ಸಂದರ್ಭವೇ ಕಲಿಸಿಕೊಡುತ್ತವೆ ಅಲ್ಲವೇ !

ಬಾಲು ಸಾರ್,
ನನ್ನ ಕೆಲಸದಲ್ಲಿ ಇನ್ನೂ ಇಂಥಾ ಅನೇಕ ಘಟನೆಗಳನ್ನು ನಿಭಾಯಿಸಿದ್ದೇನೆ. ಅವುಗಳನ್ನು ಇವು ಒಂದು. [ಮುಂದೆ ಅವುಗಳ ಬಗ್ಗೆ ಬರೆಯುತ್ತೇನೆ ಅವುಗಳಲ್ಲಿ ಪ್ರಮುಖವಾದದ್ದು ಮೊಬೈಲ್ ಕಳ್ಳತನ.]ಇಷ್ಟಕ್ಕೆ ನಾನು ರಾಜಕೀಯ ಸೇರಬೇಕೆಂದು ನೀವು ಹೇಳಿದರೆ ಹೇಗೆ ಸಾರ್? ನಾನು ಈಗ ಇವೆನ್ನೆಲ್ಲಾ ಅನುಭವಿಸುತ್ತಾ, enjoy ಮಾಡುತ್ತಾ ಇದ್ದೇನೆ. ನನ್ನನೂ ರಾಜಕೀಯಕ್ಕೆ ಸೇರಿಸಿ ನನ್ನ ನೆಮ್ಮದಿ ಕೆಡಿಸುವ ಪ್ಲಾನ್ ಇದೆಯೋ ನಿಮಗೆ. ಅದು ನಮ್ಮಂತವರಿಗಲ್ಲ. ಇಷ್ಟಕ್ಕೂ ಇವೆಲ್ಲಾ ನಾವು ಮಾಡುವ ಕೆಲಸದ ಸಂದರ್ಭದಲ್ಲಿ ಕಲಿಸುವ ಪಾಠಗಳು ಅಲ್ಲವೇ!

sunaath said...

ಆತ ಕಳ್ಳನೇ ಆದರೂ ಸಹ, ಅವನಿಗಾಗಿ ಮರುಕ ಹುಟ್ಟುತ್ತದೆ.
ನಿಮ್ಮ dilemmaಕ್ಕಾಗಿ ನಿಮ್ಮ ಬಗೆಗೂ ಸಹ!

shivu.k said...

ಸುನಾಥ್ ಸಾರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಚಿತ್ರಾ ಸಂತೋಷ್ said...

"ಹಾವು ಸಾಯಲಿಲ್ಲ..ಕೋಲು ಮುರಿಯಲಿಲ್ಲ.." ಹಾಗಾಗಿ ಶಿವಣ್ಣನ ತಲೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸೋಣ.
-ಚಿತ್ರಾ

ತೇಜಸ್ವಿನಿ ಹೆಗಡೆ said...

ನಿಮ್ಮೊಂದಿಗೆ ನಡೆದ ನಿಜ ಘಟನೆಯೊಂದನ್ನು ತುಂಬಾ ಸುಂದರವಾಗಿ ಓದುಸಿಕೊಂಡು ಹೋಗುವಂತೆ ವಿವರಿಸಿದ್ದೀರಿ. ಹಾಸ್ಯದ ಜೊತೆಗೆ ಬದುಕಿನ ಕ್ಲಿಷ್ಟತೆಯನ್ನೂ ಬರಹದಲ್ಲಿ ನೋಡಬಹುದು. ತುಂಬಾ ಇಷ್ಟವಾಯಿತು.

Ittigecement said...

ಶಿವು..ಸರ್..

ಹಾಸ್ಯದ ಜೊತೆಗೆ ವಾಸ್ತವದ ಕಟು ಸತ್ಯ...

ಚೆನ್ನಾಗಿ ಬರೆದಿದ್ದೀರಿ....
ಧನ್ಯವಾದಗಳು...

shivu.k said...

ಚಿತ್ರಾ,
ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.
ನನ್ನ ಹೆಸರು ಗಿನ್ನಿಸ್ ದಾಖಲೆಗೆ ಸೇರಿಸಲು ಆಗೋಲ್ಲ ಯಾಕಂದ್ರೆ ಅಲ್ಲೂ cost cutting !

ತೇಜಸ್ವಿನಿ ಹೆಗಡೆ ಮೇಡಮ್, ಪ್ರಕಾಶ ಸಾರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ...

ಹರೀಶ ಮಾಂಬಾಡಿ said...

ನಿಮ್ಮ ಜಡ್ಜ್ ಮೆಂಟ್ ಸರಿಯಾಗಿದೆ

shivu.k said...

ಹರೀಶ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

ಮಹೇಶ್ ಪುಚ್ಚಪ್ಪಾಡಿ said...

ಚೆನ್ನಾಗಿ ಉಪಾಯ ಮಾಡಿದಿರಿ...

shivu.k said...

ಮಹೇಶಣ್ಣ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

Anonymous said...

ಚೆನ್ನಾಗ್ ಬರ್ದಿದೀರಾ..
ಆದ್ರೆ ಒಂದೇ ಒಂದು ಸಣ್ಣ ಡೌಟು! ಈ ಗಾದೇಲಿ ಮುಂಚೆ ಹಾವು ಸಾಯ್ಬೇಕು ಅಂತ ಏನಾದ್ರೂ ಇತ್ತಾ? ಹಾವು ಸಾಯ್ಲಿಲ್ಲ ಅಂದ್ರೆ ಕೋಲಿದ್ದು ಏನು ಪ್ರಯೋಜನ?

Harisha - ಹರೀಶ said...

ಹಾವೂ ಸಾಯ್ಬೇಕು, ಕೋಲೂ ಮುರೀಬಾರದು ಅಂತ ಕೇಳಿದ ನೆನಪು...

shivu.k said...

ಹರೀಶ್, ಜ್ಯೋತಿಯವರೆ,
ಇದು ಹೊಸ ರೀತಿಯ ಗಾದೆ. ಅಂದರೆ ಎಲ್ಲವನ್ನು ಉಳಿಸಿಕೊಳ್ಳೂವ ಪ್ರಯತ್ನ.

ದಿನಕರ ಮೊಗೇರ said...

ನಿಮ್ಮ ಉಪಾಯ ತುಂಬಾ ಚೆನ್ನಾಗಿತ್ತು.....