Thursday, November 6, 2008

ಭ್ರಮಾಲೋಕದಲ್ಲಿ.

ವಾರದ ಏಳು ದಿನಗಳಲ್ಲಿ ಸೋಮವಾರ, ಮಂಗಳವಾರ, ಮತ್ತು ಗುರುವಾರ ದಿನಪತ್ರಿಕೆಗಳಲ್ಲಿ ಉಳಿದ ದಿನಗಳಿಗಿಂತ ಕಡಿಮೆ ಸಪ್ಲಿಮೆಂಟರಿ ಬರುವುದರಿಂದ ಸೇರಿಸುವುದು ಸುಲಬ. ಅದು ಹುಡುಗರಿಗೂ ಗೊತ್ತಿರುವುದರಿಂದ ಅವತ್ತು ಅವರು ಬೇಗ ಬಂದು, ಇರುವ ಕಡಿಮೆ ಕೆಲಸದಲ್ಲಿ ನಮಗೆ ಸಹಾಯಮಾಡಿ ಬಲು ದೊಡ್ಡ ಉಪಕಾರ ಮಾಡಿದೆವೆಂದು ಪೋಸು ಕೊಡುತ್ತಾರೆ.

ಇನ್ನಿತರ ದಿನಗಳಲ್ಲಿ ಸಪ್ಲಿಮೆಂಟರಿ ಹೆಚ್ಚಾಗಿ ಬರುತ್ತದೆ ಅಂತ ಅವರಿಗೆ ಗೊತ್ತಾಗಿ ಬೇಗ ಹೋದರೆ ಅದನ್ನೆಲ್ಲಾ ಹಾಕುವ ಕೆಲಸ ಪೂರ್ತಿ ನಮಗೇ ಹಚ್ಚಿಬಿಡುತ್ತಾರೆ ಅಂತ ಅವರಿಗೆ ಗೊತ್ತು.

ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ? ನಾವು ಏಜೆಂಟುಗಳೇ ಸಪ್ಲಿಮೆಂಟರಿ ಹಾಕಿ ಮುಗಿಸಿದ ಮೇಲೆ ಹೋದರೆ ಆಗ ಸುಲಭವಾಗಿ ನಮ್ಮ ಬೀಟ್ ಪೇಪರುಗಗಳನ್ನು ತಗೊಂಡು ಹೋಗಬಹುದು ಎನ್ನುವುದು ಲೆಕ್ಕಾಚಾರ. ಅದರಲ್ಲೂ ಶನಿವಾರ, ಭಾನುವಾರಗಳಂದು ಈ ರೀತಿ ಕಳ್ಳಬೀಳುತ್ತಾರೆ.

ಯಾಕ್ರೋ ಲೇಟಾಗಿ ಬರ್ತೀರಾ" ಎಂದು ಕೇಳಿದರೆ

ನೀವೊಂದು ಸುಮ್ಮನಿರಿ, ಇವತ್ತು ವಾರಕ್ಕೊಂದು ಭಾನುವಾರ ನಮ್ಮ ಗಿರಾಕಿಗಳೆಲ್ಲಾ ನೆಮ್ಮದಿಯಾಗಿ ಮಲಗಿರುತ್ತಾರೆ. ಎದ್ದೇಳೋದೆ ೮ ಗಂಟೆ-೯ ಗಂಟೆ ಆದಮೇಲೆ. ನಾವು ಪೇಪರನ್ನ ಅವರ ಬಾಗಿಲಿಗೆ ಬಿಸಾಕಿ ಶಬ್ದ ಮಾಡಿ, ಅವರಿಗೆ ಡಿಸ್ಟರ್ಬ್ ಮಾಡೋದು ಬೇಡ, ಆರಾಮವಾಗಿ ಹಾಕೋಣ ಬಿಡಿ ಬಾಸ್" ಎಂದು ಅಪರೂಪಕೊಮ್ಮೆ ನಮ್ಮ ಗ್ರಾಹಕರ ಪರವಾಗಿ ಮಾತಾಡಿದಾಗ ನಾವೆ ಬೆರಗಾಗಿ ಬೆಡಬೇಕು.

ಅವತ್ತು. ಮಂಗಳವಾರ. ಕೆಲಸ ಬೇಗ ಮುಗಿದಿತ್ತು. ಎಲ್ಲಾ ಏಜೆಂಟರ ಹುಡುಗರು ಅಂದು ಬೆಳಿಗ್ಗೆ ‍೬ ಗಂಟೆಗೆ ಮೊದಲೇ ಪೇಪರುಗಳನ್ನು ಸೈಕಲ್ಲಿಗೇರಿಸಿಕೊಂಡು ಹೋಗಿದ್ದರು. ನಾನು ಮತ್ತು ರಂಗನಾಥ ಮಾಮೂಲಿನಂತೆ ನಮ್ಮ ಪ್ರತಿದಿನದ ಅಡ್ಡವಾದ ಶ್ರೀಸಾಗರ್ ಹೋಟಲಿನಲ್ಲಿ ಕಾಫಿ ಕುಡಿಯುತ್ತಾ, ಅವತ್ತಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆವು. ಲೋಕಾಭಿರಾಮವಾಗಿ ಅವತ್ತಿನ ಪತ್ರಿಕೆಯಲ್ಲಿ ಹೆಚ್ಚಾಗಿ ಕಳ್ಳತನದ ವಿಚಾರವೇ ಬಂದಿರುವುದರ ಬಗ್ಗೆ ಹರಟುತ್ತಿರುವಾಗ ನಮ್ಮ ವೃತ್ತಿಭಾಂಧವ ಬಾಲ್ಡಿ ಮಂಜ ಬಂದ.

ಅವನಿಗೆ ಮದುವೆಗೆ ಮೊದಲೇ ತಲೆಯ ಮುಂದಿನ ಅರ್ಧ ಭಾಗ ಕೂದಲು ಉದುರಿ ಮರಗಿಡಗಳಿಲ್ಲದ ರಾಮನಗರದ ಹೆಬ್ಬಂಡೆಗಳ ಹಾಗೆ ಮುಂಭಾಗ ಹಾಗೂ ಅಕ್ಕ ಪಕ್ಕ ಪೂರ್ತಿ ಬೋಳಾಗಿತ್ತು. ಹಿಂಭಾಗ ಮಾತ್ರ ಸ್ವಲ್ಪ ಕೂದಲಿದ್ದುದರಿಂದ ನಾವೆಲ್ಲಾ ಬಾಲ್ಡಿ ಮಂಜ ಅಂತಲೇ ಆಡ್ಡ ಹೆಸರು ಕರೆಯುವುದು ರೂಢಿ.

ಯಾವಾಗಲು ತನ್ನ ಮೋಟರು ಬೈಕಿನಲ್ಲಿ ಬರುತ್ತಿದ್ದವನು, ಇವತ್ತು ನಡೆದುಕೊಂಡು ಬರುತ್ತಿದ್ದಾನಲ್ಲ ಅನ್ನಿಸಿ ಇಬ್ಬರೂ ಅದನ್ನೇ ಮಾತಾಡಿಕೊಂಡೆವು.

"ಮಂಜ ಕಾಫಿ ಕುಡಿತಿಯೇನೋ?" ಮುಖದಲ್ಲಿ ಆತ್ಮೀಯತೆ ನಟಿಸುತ್ತಾ ರಂಗ ಕೇಳಿದ.

"ಬೇಡ ಕಣೋ ಈಗ ಆಯ್ತು, ಆದಿತ್ಯ ಹೋಟಲಿನಲ್ಲಿ ಕುಡಿದು ಬಂದೆ." ಬಾಲ್ಡಿ ಮಂಜನ ಉತ್ತರ. ಈ ಮಾತು ಅವನಿಗೆ ಪ್ರತಿದಿನದ ಬಾಯಿಪಾಠ. ಹಾಗಂತ ಕೊಡಿಸಿದರೇ ಕುಡಿದೇ ಕುಡಿಯುತ್ತಾನೆ.

"ಪರ್ವಾಗಿಲ್ಲ ಇಲ್ಲೊಂದು ಸ್ವಲ್ಪ ಕುಡಿಯೋ" ನಾನು ಮತ್ತಷ್ಟು ಅವನ ಕಡೆಗೆ ಕಾಳಜಿ ತೋರಿಸುವವನಂತೆ.

ಮತ್ತೊಂದು ಸುತ್ತು ಕಾಫಿ ಬಂತು. ಬಾಲ್ಡಿ ಮಂಜ ಯಾಕೋ ಮಂಕಾಗಿದ್ದಂತೆ ಕಂಡ.

ನಮ್ಮ ಚಟುವಟಿಕೆಯ ಸಮಯದಲ್ಲಿ ಯಾರಾದರೂ ಡಲ್ಲಾಗಿದ್ದರೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಆ ದಿನ ಬೀಟ್ ಹುಡುಗರು ಬರದೇ ಸರಿಯಾಗಿ ಕೈ ಕೊಟ್ಟು ಎಲ್ಲಾ ಕೆಲಸ ನಮ್ಮ ತಲೆ ಮೇಲೆ ಬಿದ್ದಿದೆಯಲ್ಲ ಅಂತಲೋ, ಅಥವ ಅವತ್ತಿನ ಕೆಲಸ ನಿಭಾಯಿಸಲು ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದ್ದಾಗ ಅವರ ಮುಖದ ಭಾವನೆಗಳು ಕೋಪ ಅಥವ ಚಿಂತೆಗೆ ಬದಲಾಗಿರುತ್ತವೆ.

ನನಗೆ ಹುಡುಗರು ತಪ್ಪಿಸಿಕೊಂಡಾಗ ಚಿಂತೆಗಿಂತ ಕೋಪವೇ ಹೆಚ್ಚಾಗಿ ಬರುವುದುಂಟು. ನನ್ನ ಮುಖ ನೋಡಿದವರು ಆ ಸಮಯದಲ್ಲಿ " ಯಾಕೋ ಹುಡುಗ್ರೂ ಬಂದಿಲ್ವಾ?" ಎಷ್ಟು ಜನ ಅಂತ ಪ್ರಶ್ನಿಸುತ್ತಾರೆ. ಅದೇ ರೀತಿ ಮಂಜ,ಸುರೇಶ, ಮಣಿ ರಂಗನಾಥ ಇನ್ನೂ ಕೆಲವರ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿರುತ್ತವೆ. ಆಗಲೂ ಇದೇ ಕಾರಣವನ್ನೇ ಅವರಿಗೂ ನಾವು ಕೇಳುವುದು. ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ.

ಇಲ್ಲೂ ಮಂಜನ ಮುಖದಲ್ಲಿ ಚಿಂತೆ ಅವರಿಸಿರುವುದನ್ನು ಕಂಡು

"ಯಾಕೋ ಹುಡುಗ್ರೂ ಬಂದಿಲ್ವಾ? ಇಲ್ಲಾ ಇಂಡೆಂಟು ಕಟ್ಟಿಲ್ವಾ" ರಂಗ ಕೇಳಿದ.

ಅದ್ಯಾವುದಕ್ಕೂ ಇವತ್ತು ತೊಂದರೆ ಆಗಿಲ್ಲವೋ" ಬಾಲ್ಡಿ ಮಂಜ ಬೇಸರದ ಮುಖದಲ್ಲೇ ಹೇಳಿದ.

'ಮತ್ಯಾಕೊ ಮುಖ ಆಂಗೆ ಮಾಡಿಕೊಂಡಿದ್ದೀಯಾ? ಮನೆಯಲ್ಲಿ ಏನಾದರೂ ತೊಂದರೆನಾ?' ನಾನು ಕೇಳಿದೆ.

"ಏನು ಇಲ್ವೋ"

ಮತ್ಯಾಕೆ ಇಂಗಿದ್ದೀಯಾ ಬೆಳಿಗ್ಗೆ ಬೆಳಿಗ್ಗೆ"

ನಮ್ಮ ಹುಡುಗ ಗೋಫಿ ಕೈಯಲ್ಲಿ ನನ್ನ ಬೈಕ್ ಕೊಟ್ಟು "ಒಬ್ಬ ಕಸ್ಟಮರ್ ಆರ್ಜೆಂಟ್ ಮಾಡುತ್ತಾರೆ ಹೋಗಿ ಅವರ ಮನೆಗೆ ಪೇಪರ್ ಹಾಕಿ ಬಾ ಅಂತ ಕಳಿಸಿದ್ದೆ. ಇನ್ನೂ ಬಂದಿಲ್ಲ ಕಣೋ"

"ಅಯ್ಯೋ ಅದಕ್ಯಾಕೆ ಚಿಂತೆ ಮಾಡ್ತೀಯಾ ಬರ್ತಾನೆ ಬಿಡು"

" ಅದಲ್ಲ ಕಣೋ, ಅವನು ಹೋಗಿ ಒಂದು ಗಂಟೆ ಆಯ್ತು"

"ಆ ಕಷ್ಟಮರ್ ಮನೆ ದೂರ ಏನೋ?'

ಹೇ ಇಲ್ಲಾ ಕಣೋ ಇಲ್ಲೇ ಕುಮಾರಪಾರ್ಕಲ್ಲಿ".

"ಹತ್ತಿರದ ಕುಮಾರ ಪಾರ್ಕಲ್ಲಿ ಒಂದು ಪೇಪರ ಹಾಕಿ ಬರೋದಕ್ಕೆ ಒಂದು ಗಂಟೆ ಬೇಕೇನೋ, ಐದೇ ನಿಮಿಷ ಸಾಕಪ್ಪ"

ಆದೇ ಕಣೋ ನನಗೂ ಚಿಂತೆ ಆಗಿರೋದು, ಐದು ನಿಮಿಷದ ಕೆಲಸಕ್ಕೆ ಒಂದು ಗಂಟೆಯಾದ್ರು ಬರಲಿಲ್ಲವಲ್ಲ!

ನಾವು ಮೂವರು ಈ ವಿಚಾರ ಮಾತಾಡುತ್ತಿರುವಾಗಲೇ ಮಂಜನ ಇನ್ನಿಬ್ಬರು ಹುಡುಗರು ಬೀಟ್ ಮುಗಿಸಿ ಅಲ್ಲಿಗೆ ಬಂದರು. ತಕ್ಷಣ

"ಲೋ ನಿಮ್ಮ ಪ್ರೆಂಡು ಗೋಪಿನೇನಾದ್ರು ನೋಡಿದ್ರೇನೋ?'

"ಇಲ್ಲಾ ಯಾಕಣ್ಣ?"

ಒಂದು ಪೇಪರ್ ಹಾಕಿ ಬರಲಿಕ್ಕೆ ನಿಮ್ಮ ಓನರ್ ಬೈಕ್ ಕೊಟ್ಟು ಕಳಿಸಿದ್ರೆ ಇನ್ನೂ ಬಂದಿಲ್ಲ ಕಣೋ, ಹೋಗಿ ಒಂದು ಗಂಟೆ ಮೇಲಾಯ್ತು.

ಇಬ್ಬರು ಹುಡುಗರು ಮುಖ ಮುಖ ನೋಡಿಕೊಂಡರು. ನಂತರ

ಆಣ್ಣಾ ಅವನ ಕೈಲಿ ಯಾಕಣ್ಣ ಗಾಡಿ ಕೊಟ್ರೀ?

ಯಾಕ್ರೋ ಏನಾಯ್ತು?"

ಅವನು ಸರಿ ಇಲ್ಲಣ್ಣಾ, ಯಾರಾದ್ರು ಅವನಿಗೆ ಬೈಕ್ ಕೊಟ್ರೆ ಆಷ್ಟೇ ಮುಗೀತು. ಇರೋ ಪೆಟ್ರೋಲೆಲ್ಲಾ
ಖಾಲಿಯಾಗೋವರೆಗೂ ವಾಪಸು ಬರೋಲ್ಲ.

ಆ ಹುಡುಗರ ಮಾತು ಕೇಳಿ ರಂಗ ಮತ್ತು ನನಗೂ ಇದು ನಿದಾನವಾಗಿ ಗಂಭೀರ ರೂಪ ಪಡೆದುಕೊಳ್ಳುತ್ತಿರುವ ವಿಚಾರವೆನಿಸಿತ್ತು. ಆ ಹೋಟಲಿಂದ ಹೊರಬಂದು ನಮ್ಮ ಮಾತುಕತೆ ಮುಂದುವರಿಯುತ್ತಿದ್ದಾಗ ನನ್ನ ಇಬ್ಬರೂ ಹುಡುಗರು, ರಂಗನ ಹುಡುಗರು ಅಲ್ಲಿಗೆ ಬಂದರು. ಅವರಿಗೂ ಮತ್ತೊಮ್ಮೆ ಎಲ್ಲಾ ವಿಚಾರ ತಿಳಿಸಿದ ಮೇಲೆ ಅವರಲ್ಲೇ ಗುಸು ಗುಸು ಪ್ರಾರಂಭವಾಯಿತು.

"ರ್ರೀ ನೀವು ಅವನಿಗೆ ಗಾಡಿ ಕೊಡಬಾರದಿತ್ತು.! ನನ್ನ ಬೀಟ್ ಹುಡುಗ ಮಾದೇಶ ಹೇಳಿದ ಮಾತಿಗೆ ಬಾಲ್ಡಿ ಮಂಜನ ಮುಖದಲ್ಲಿ ಮತ್ತಷ್ಟು ಆತಂಕ ಹೆಚ್ಚಾಯಿತು.

ಇದ್ಯಾಕೋ ಇಲ್ಲದ ವಿಕೋಪಕ್ಕೆ ಹೋಗುತ್ತದೆ ಅಂತ ನನಗನ್ನಿಸಿ ಗೋಪಿಯ ಆಪ್ತಗೆಳೆಯನಾದ ನಾಣಿಗೆ " ನೀನು ಗೋಪಿಗೆ ಕ್ಲೋಸ್ ಪ್ರಂಡ್ ಅಲ್ಲವೇನೋ?" ಅವನ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು. ನೀನೇ ಹೇಳು." ಕೇಳಿದೆ.

ಆಣ್ಣಾ ಅವನು ಮೊದಲು ಕ್ಲೋಸ್ ಪ್ರಂಢು ಆಗಿದ್ದ. ಇವಾಗ ಅವನು ತುಂಬಾ ಕೆಟ್ಟು ಹೋಗಿದ್ದಾನೆ, ಸಿಗರೇಟು ಸೇದ್ತಾನೆ, ಡ್ರಿಂಕ್ಸ್ ಮಾಡ್ತಾನೆ ತುಂಬಾ ಕೆಟ್ಟುಹೋಗಿದ್ದಾನೆ. ಅವಾಗಿಂದ ನನಗೂ ಅವನಿಗೂ ಆಷ್ಟಕಷ್ಟೇ"

ನಾಣಿ ಗೋಪಿಯ ಇತ್ತೀಚಿನ ಕ್ಯಾರೆಕ್ಟರ್ ಸರ್ಟಿಫಿಕೇಟು ಕೊಡುವುದರ ಜೊತೆಗೆ ತಾನು ಒಳ್ಳೇ ಹುಡುಗ ಅಂತಲೂ ಪರೋಕ್ಷವಾಗಿ ತಿಳಿಸಿ ಈ ವಿಚಾರದಲ್ಲಿ ಜಾರಿಕೊಂಡುಬಿಟ್ಟ.

"ಅಯ್ಯೋ ಹೋದವಾರ ಯಾರದೋ ಬೈಕ್ ತಗೊಂಡು ಕುಣಿಗಲ್ಲಿಗೆ ಹೋಗಿಬಿಟ್ಟಿದ್ದನಂತೆ ವಾಪಸು ಬಂದಾಗ ಮದ್ಯಾಹ್ನ ಆಗಿತ್ತು." ಮಾದೇಶ ನಾಣಿಯ ಮಾತಿನ ಪರವಾಗಿ ಪರೋಕ್ಷವಾಗಿ ಈ ರೀತಿ ಹೇಳಿ ಗೋಪಿ ವಿರುದ್ಧ ಪ್ರಬಲ ಸಾಕ್ಷಿ ನೀಡಿದ.

ರಂಗನಿಗೆ ಈ ಹುಡುಗರ ಮಾತು ಕೇಳಿ ನಿದಾನವಾಗಿ ಗೋಪಿಯ ಮೇಲೆ ಸಂಶಯ ಬರತೊಡಗಿತು. ಬೈಕನ್ನೇನಾದರೂ ಕದ್ದು ತಗೊಂಡುಹೋಗಿ ಯಾರಿಗಾದ್ರೂ ಗುಜರಿಯವರಿಗೆ ಕೊಟ್ಟು ಬಿಟ್ರೆ, ಅದರ ಪಾರ್ಟುಗಳನ್ನೆಲ್ಲಾ ಬೇರೆ ಬೇರೆ ಮಾಡಿ ಮಾರಿಬಿಡ್ತಾರೆ. ಯಾರಿಗೂ ಗೊತ್ತಾಗೋದೆ ಇಲ್ಲ. ರಂಗನ ಈ ರೀತಿಯ ಅಲೋಚನೆಗೆ ಅವತ್ತಿನ ಪೇಪರಿನ ತುಂಬಾ ಬಂದಿರುವ ಬರೀ ಕಳ್ಳತನದ ವಿಷಯಗಳು ಅವನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಾರಂಭಿಸಿದವು.

ನನಗೂ ಇದೇ ರೀತಿಯ ಹಳೆಯ ಘಟನೆಗಳು ನೆನಪಾಗತೊಡಗಿದವು. ನನ್ನ ಸ್ಕೂಟಿಯನ್ನು ನಮ್ಮ ಹುಡುಗರು ೫ ನಿಮಿಷ ಎಂದು ಹೇಳಿ ತೆಗೆದುಕೊಂಡು ಹೋಗಿ ಮರೆತು ಅವರ ಮನೆಗೆ ಹೋಗಿ ಅರ್‍ಆಮವಾಗಿ ಇದ್ದು ಬಿಡುವುದು, ಅಥವಾ ಅವರ ಮನೆಯ ಕೆಲಸಕ್ಕೆ ಅಂತ ಬಳಸುವುದು, ಗೆಳೆಯರು ಸಿಕ್ಕಾಗ ಹೀರೊಗಳಂತೆ ಮೈಮರೆತು ಎಲ್ಲೋ ಹರಟೆಹೊಡೆಯುತ್ತಾ ನಿಂತುಬಿಡುವುದು, ಇವರೆಲ್ಲರ ವಯಸ್ಸು ೧೬-೨೦ ರವರೆಗೆ ಇರುವುದರಿಂದ ಅವರವರ ಓನರುಗಳ ಟೂ ವೀಲರುಗಳು, ಮೋಟರ್ ಬೈಕನ್ನು ಐದೇ ನಿಮಿಷದಲ್ಲಿ ಬರುತ್ತೇನೆ ಎಂದು ಕೇಳಿ ಪಡೆದುಕೊಂಡು ಎಲ್ಲರೂ ಒಟ್ಟಾಗಿ ಕಾಲೇಜು ಹುಡುಗಿಯರ ನೋಡುತ್ತಾ ನಿಲ್ಲುವುದು, ನಾವೆಲ್ಲಾ ಇವರು ಎಲ್ಲಿ ಹೋದರು ಅಂತ ಚಿಂತೆಗೊಳಗಾಗುವುದು, ಇವೆಲ್ಲಾ ನೆನಪಾಗಿ, ಮಂಜನಿಗೆ ಇದೆಲ್ಲಾ ಹೇಳಿ ಈ ರೀತಿ ಏನಾದ್ರೂ ಆಗಿರಬಹುದು ನೋಡು" ಎಂದೆ.

"ಸಾರ್ ನೀವೊಂದು ಅವನಿಗೆ ಕಾಲೇಜಿನ ಮುಂದೆ ನಿಲ್ಲೋ ಸೋಕಿ ಇಲ್ಲ, ಯಾಕಂದ್ರೇ ಅವನು ಸೇರೋ ಹುಡುಗ್ರಾ ಸಹವಾಸ ಸರಿಯಿಲ್ಲ. ಎಲ್ಲಾ ಕೆಟ್ಟ ಕೆಲಸ ಕಲಿತಿದ್ದಾನೆ ಗೊತ್ತಾ! ನಾಣಿ ಖಚಿತವಾಗಿ ನೋಡಿರುವವನಂತೆ ಹೇಳಿದ.

"ನೀನು ಸುಮ್ಮನಿರೋ" ಎಂದು ಅವನ ಬಾಯಿ ಮುಚ್ಚಿಸಿ "ರಂಗ ನಿನ್ನ ಗಾಡಿನ ಇವನ ಕೈಯಲ್ಲಿ ಕಳಿಸು ಗೋಪಿ ಮನೆಗೆ ಹೋಗಿ ನೋಡಿಕೊಂಡು ಬರಲಿ, ರವಿ ನೀನು ನನ್ನ ಗಾಡಿ ತಗೊಂಡು ಹೋಗಿ ಕಾಲೇಜು, ಅಕ್ಕ ಪಕ್ಕ ಹೋಟಲ್ ಎಲ್ಲಾ ನೋಡಿಕೊಂಡು ಬಾ, ಮಾದೇಶ ನೀನು ನಿನ್ನ ಸೈಕಲ್ಲಲ್ಲಿ ಅವನು ಪೇಪರ್ ಹಾಕಿಲಿಕ್ಕೆ ಹೋಗಿದ್ದಾನಲ್ಲ ಆ ಆಪಾರ್ಟುಮೆಂಟು ಒಳಗೆ ನೋಡಿ ಬಾ ಮೂವರನ್ನು ಕಳುಹಿಸಿದೆವು.

ಆಷ್ಟರಲ್ಲಿ ಈ ವಿಚಾರ ದೊಡ್ಡದಾಗಿ ಮೊಬೈಲು ಫೋನು ಮುಖಾಂತರ ಎಲ್ಲಾ ಏಜೆಂಟರಿಗೂ, ಬೀಟ್ ಬಾಯ್ಸುಗಳಿಗೂ ಹರಡಿತ್ತು. ಮತ್ತಷ್ಟು ನಮ್ಮ ಗೆಳೆಯರು ಕೆಲವು ಹೊರಗಿನವರು ಅಲ್ಲಿಸೇರಲಾರಂಭಿಸಿದರು. ಕೆಲವರು ಬಾಲ್ಡಿ ಮಂಜನಿಗೆ ಫೋನ್ ಮಾಡಿ ಈ ವಿಚಾರವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಅವನಿಗೆ ಮತ್ತಷ್ಟು ದಿಗಿಲು ಹುಟ್ಟಿಸಿದರು.

ಮಂಜ ಈ ವಿಚಾರದಲ್ಲಿ ಅದೆಷ್ಟು ಭಾವುಕನಾದನೆಂದರೆ, "ತನ್ನ ಮೋಟರ್ ಬೈಕನ್ನು ಗೋಪಿ ಕದ್ದುಕೊಂಡು ಹೋಗಿಬಿಟ್ಟಿದ್ದಾನೆ. ಮುಂದೆ ಅವನು ಯಾರಿಗೂ ಕಾಣುವುದಿಲ್ಲ ಅನಂತರ ಯಾರಿಗೋ ಗುಜರಿಯವರಿಗೆ ಮಾರಿಬಿಡುತ್ತಾನೆ. ತೆಗೆದುಕೊಂಡವರು ನಂತರ ಅವರು ಅರ್ಧಗಂಟೆಯಲ್ಲಿ ಒಬ್ಬ ಬೈಕಿನ ಎಲ್ಲಾ ಭಾಗಗಳನ್ನು ಬಿಡಿ ಬಿಡಿ ಮಾಡಿದ ಮೇಲೆ ಯಾರ್ಯಾರೋ ಬಂದು ದುಡ್ಡು ಕೊಟ್ಟು ತಮಗೆ ಬೇಕಾದ ಭಾಗಗಳನ್ನು ತಗೊಂಡು ಹೋದಂತೆ ಸಿನಿಮಾ ರೀತಿಯ ದೃಶ್ಯಗಳು ಕಾಣಲಾರಂಭಿಸಿದವು.

ಹತ್ತು ನಿಮಿಷ ಕಳೆಯಿತು. ನಾವು ಗೋಪಿಯನ್ನು ಹುಡುಕಿಕೊಂಡು ಬರಲು ಕಳುಹಿಸಿದ್ದ ಎಲ್ಲಾ ಹುಡುಗರು ಅವನು ಸಿಗಲಿಲ್ಲವೆಂದು ವಾಪಸ್ಸು ಬಂದರು. ಮಾದೇಶನೂ ಅಪಾರ್ಟುಮೆಂಟಿನ ಪಾರ್ಕಿಂಗ್ ಜಾಗದಲ್ಲಿ ಯಾವ ಮಂಜನ ಬೈಕು ಕಾಣಲಿಲ್ಲವೆಂದು ಹೇಳಿದ.

"ಮಂಜು ನೀನು ಈಗಲೆ ಇನ್ಸೂರೆನ್ಸಿಗೆ ಕ್ಲೈಮ್ ಮಾಡು, ಈ ವಿಚಾರದಲ್ಲಿ ತಡ ಮಾಡಬೇಡ!"
ಹತ್ತಿರದಲ್ಲೇ ನಿಂತಿದ್ದ ಸುರೇಶ ತನ್ನ ಆಮೂಲ್ಯ ಸಲಹೆ ಕೊಟ್ಟ.

"ಹೌದು ಗುಡ್ ಐಡಿಯಾ!" ಸುರೇಶನ ಪಕ್ಕದಲ್ಲಿದ್ದ ಲೋಕಿ ಆಶ್ಚರ್ಯಚಕಿತನಾಗಿ ಹೇಳಿದ.

" ಮಂಜು ಆಕ್ಷಿಡೆಂಟ್ ರಿಲೀಫ್ ಫಂಡ್ ಮಾಡಿಸಿದ್ದಾನಾ?" ಯಾರೋ ಕೇಳಿದರು.

"ಹೇ ಅವನು ಅದನ್ನು ಮಾಡಿಸಿದ್ರು ಅದು ಮಂಜುಗೆ ಆಕ್ಷಿಡೆಂಟ್ ಆದ್ರೆ ಮಾತ್ರ ಕೊಡೋದು, ಯಾಕೆಂದ್ರೆ ಅವನು ಫಸ್ಟ್ ಪಾರ್ಟಿ, ಅವನ ಹುಡುಗ ಗೋಪಿ ಯಾರೊ ಥರ್ಡ್ ಪಾರ್ಟಿಯಾಗ್ತಾನಾದ್ದರಿಂದ ಈ ಐಡಿಯಾ ವರ್ಕ್ ಹೌಟ್ ಆಗೊಲ್ಲ" ಮತ್ತೊಬ್ಬರು ಕೇಳಿದವನಿಗೆ ಸಮಾಧಾನದ ಉತ್ತರ ನೀಡಿದರು.

"ಪೋಲಿಸ್ ಕಂಪ್ಲೆಂಟ್ ಕೊಟ್ಟರೆ ಹೇಗೆ?" ಮತ್ತೊಬ್ಬನ ಮಾತು

"ಹೌದು ಕರೆಕ್ಟ್!" ಮಗದೊಬ್ಬನಿಗೆ ಜ್ಜಾನೋದಯವಾಯಿತು.

"ಹೇ ಹೋಗೊ ಅದೆಲ್ಲಾ ವೇಷ್ಟು"

"ಯಾಕೋ? "

"ಮತ್ತೇನು, ಇವನು ಹೋಗಿ ಕಂಪ್ಲೆಂಟು ಕೊಟ್ಟರೂ ಅವರು ಆಯ್ತು ಹೇಳಿ ಕಳಿಸುತ್ತೀವಿ ಅಂತಾರೆ ಆಷ್ಟೇ"

ಮತ್ತೇನು ಮಾಡುವುದು? ಎಲ್ಲರೂ ತಮ್ಮ ತಮ್ಮ ಆಲೋಚನೆಯಲ್ಲಿ ಮುಳುಗಿದರು. ನನಗೂ ಇದೇ ರೀತಿಯ ನಾನ ಯೋಚನೆಗಳು ತಲೆಯಲ್ಲಿ ಹರಿದಾಡಿದವು.

ಮಂಜನಂತೂ ಎಲ್ಲಾರ ಮಾತುಗಳನ್ನೂ ಕೇಳಿ ಅವರು ಹೇಳಿದ್ದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ಮತ್ತಷ್ಟು ತನ್ನ ಮೋಟರು ಬೈಕು ತನ್ನ ಕಣ್ಣಳತೆಯಿಂದ ನಿದಾನವಾಗಿ ದೂರ ಸಾಗಿ ಶೂನ್ಯದಲ್ಲಿ ಮರೆಯಾಗಿ ಹೋಗುತ್ತಿರುವಂತೆ ಮತ್ತೆಂದು ತನ್ನ ಕೈಗೆ ಸಿಗುವುದಿಲ್ಲವೆನ್ನುವುದನ್ನು ಗಾಢವಾಗಿ ಕಲ್ಪಿಸಿಕೊಳ್ಳತೊಡಗಿದ.

ಆಷ್ಟು ಹೊತ್ತಿಗಾಗಲೇ ನಾವೆಲ್ಲರೂ ಸೇರಿ ೨ ಗಂಟೆ ಕಳೆದಿತ್ತು.

"ಗೋಪಿ ಹತ್ರ ಮೊಬೈಲ್ ಫೋನಿದ್ರೆ ಅವನಿಗೆ ಫೋನ್ ಮಾಡಿ" ಯಾರೊ ಐಡಿಯಾ ಕೊಟ್ಟ.

ಅರೇರೆ... ಹೌದಲ್ವ! ನಮಗೆ ಇದು ಹೊಳೆಯಲಿಲ್ಲವಲ್ಲ" ಎಲ್ಲರಿಗೂ ಅನ್ನಿಸಿತು. ಐಡಿಯಾ ಕೊಟ್ಟವನನ್ನು ಹೊಗಳಿದರು. ಈ ಮಾತು ಕೇಳಿ ಮಂಜನ ಮುಖ ಸ್ವಲ್ಪ ಗೆಲುವಾಯಿತು. ತನ್ನ ಮೊಬೈಲಿಂದ ಗೋಪಿಗೆ ಪೋನ್ ಮಾಡಿದ.

ಆ ಕಡೆಯಿಂದ ಸ್ವಿಚ್ ಆಫ್!!

ಯಾರೋ ಕೊಟ್ಟ ಐಡಿಯಾದ ಪಠಾಕಿ ಟುಸ್ಸಾಗಿತ್ತು.

ಎಲ್ಲರೂ ಕೊನೆಗೆ ತಮ್ಮದೇ ಬೈಕು ಕಳೆದುಹೋಯಿತೇನೋ ಎಂಬಂತೆ ಶೋಕದ ಕಳೆಹೊತ್ತು ಒಬ್ಬರಿಗೊಬ್ಬರೂ ಸಾಂತ್ವಾನ ಹೇಳುತ್ತಾ ಕೊನೆಯಲ್ಲಿ ಬಾಲ್ಡಿ ಮಂಜನಿಗೆ ಸಾಂತ್ವಾನ ಹೇಳಿ ವಿಷಾದ ಭಾವವನ್ನು ಮುಖದಲ್ಲಿ ನಟಿಸುತ್ತಾ ಗಂಭೀರವದನರಾಗಿ ಒಬ್ಬೊಬ್ಬರಾಗಿ ಜಾಗ ಕಾಲಿ ಮಾಡಿದರು.

ಕೊನೆಗೆ ಉಳಿದಿದ್ದು ಮಂಜ ನಾನು ಮತ್ತು ರಂಗ.
ನಾವಿಬ್ಬರೂ ಕೊನೆಯದಾಗಿ ಮಂಜನಿಗೆ ಸಮಾಧಾನ ಹೇಳುತ್ತಾ ಚಿಂತೆ ಮಾಡಬೇಡ ಹೋಗಿದ್ದು ಗಾಡಿ ತಾನೆ, ಜೀವವೇನು ಹೋಗಿಲ್ಲವಲ್ಲ. ನೀನು ಚೆನ್ನಾಗಿದ್ರೆ ಇಂಥ ನೂರು ಬೈಕ್ ತಗೋಬಹುದು, ಇನ್ನು ವಯಸ್ಸಿನ ಹುಡುಗ ನೀನು ಹೆದರಬೇಡವೆಂದು ಹೇಳಿ ಅವನ ಯವ್ವೌನವನ್ನು ನೆನಪಿಸಿ {ನಮಗೆ ಅವನಿಗಿಂತ ಹೆಚ್ಚಾಗಿ ಜೀವನಾನುಭವವಿದೆ ಎಂದು ನಟಿಸಿ} ಚಿಂತೆಯನ್ನು ಮರೆತು ಹೊಸ ಹುಮ್ಮಸ್ಸು ತುಂಬಿ ಅವನನ್ನು ಕಳುಹಿಸಿಕೊಟ್ಟೆವು.

ಮರುದಿನ ನಮಗೆಲ್ಲಾ ಆಶ್ಚರ್ಯ ಕಾದಿತ್ತು.

ಹಿಂದಿನ ದಿನದ ಚರ್ಚೆಗಳೆಲ್ಲವನ್ನೂ ಸಗಣಿಯಿಂದ ಸಾರಿಸಿ, ನಂತರ ಕಸಪೊರಕೆಯಿಂದ ಗುಡಿಸಿ ಹೊರಗೆಸೆಯುವಂತೆ ಬಾಲ್ಡಿ ಮಂಜ ನಾವೆಲ್ಲರೂ ಕಳುವಾಯಿತೆಂದುಕೊಂಡ ಬೈಕಿನಲ್ಲಿ ಬಂದಿದ್ದ. ನಿನ್ನೆಯಲ್ಲಾ ಅಷ್ಟೊಂದು ಗೊಂದಲ ಆತಂಕ ಸೃಷ್ಟಿಸಿದ್ದ ಹುಡುಗ ಗೋಪಿಯು ಅಲ್ಲೇ ಅವನ ಪಕ್ಕದಲ್ಲಿ ಕುಳಿತು ಸಪ್ಲಿಮೆಂಟರಿ ಹಾಕುತ್ತಿದ್ದಾನೆ!!

ಕೊನೆಗೆ ನಿಜವಾಗಿ ನಡೆದದ್ದು ಏನೆಂದರೇ, ಬೆಳಿಗೆ ೬ ಗಂಟೆಗೆ ಗೋಪಿ ಅವನ್ ಓನರ್ ಬಾಲ್ಡಿಮಂಜ ಹೇಳಿದಂತೆ ಕುಮಾರಪಾರ್ಕಿನಲ್ಲಿರುವ ಆಪಾರ್ಟುಮೆಂಟಿಗೆ ಒಂದು ಪೇಪರ್ ಹಾಕಲು ಹೋಗಿದ್ದಾನೆ. ಆಪಾರ್ಟುಮೆಂಟಿನಲ್ಲಿ ಲಿಫ್ಟ್ ಒಳಗೆ ಹೋಗಿ ಐದನೇ ಮಹಡಿಯ ಬಟನ್ ಒತ್ತಿದ್ದಾನೆ. ಮೇಲೆ ಹೋಗುತ್ತಿದ್ದ ಲಿಫ್ಟ್ ತಕ್ಷಣ ಕರೆಂಟು ಹೋದ ಪರಿಣಾಮ ೩ ಮತ್ತು ೪ ನೇ ಮಹಡಿಯ ಮದ್ಯೆ ನಿಂತುಬಿಡಬೇಕೆ!. ಮತ್ತೊಂದು ವಿಷಯವೆನೆಂದರೆ ಸರ್ವ ಸಾಮಾನ್ಯವಾಗಿ ಆಪಾರ್ಟುಮೆಂಟುಗಳಲ್ಲಿ ಲಿಫ್ಟು ವ್ಯವಸ್ಥೆಗೆ ಜನರೇಟರ್ ಇಟ್ಟಿರುತ್ತಾರೆ. ಇಲ್ಲಿ ಗೋಪಿಯ ದುರಾದೃಷ್ಟಕ್ಕೇ ಅದು ಹೊಸ ಆಪಾರ್ಟುಮೆಂಟು ಆಗಿದ್ದರಿಂದ ಇನ್ನೂ ಜನರೇಟರ್ ವ್ಯವಸ್ಥೆ ಮಾಡಿರಲಿಲ್ಲವಂತೆ. ಆ ತಕ್ಷಣ ಗಲಿಬಿಲಿಗೊಂಡ ಗೋಪಿ ಏನು ಮಾಡೋದು ತಿಳಿಯದೆ ಹೋದನಂತೆ. ಮೊಬೈಲಿಂದ ಫೋನ್ ಮಾಡೋಣವೆಂದರೇ ಅವನ ಲಡಕಾಶಿ ಫೋನ್ ಹಿಂದಿನ ದಿನ ಬ್ಯಾಟರಿ ಚಾರ್ಜ್ ಮಾಡಿಲ್ಲದ ಕಾರಣ ಡೆಡ್ ಆಗಿಬಿಟ್ಟಿದೆ!. ಎಲ್ಲಾ ವಿಷಯದಲ್ಲೂ ಅತಿ ಬುದ್ಧಿವಂತಿಕೆ ತೋರಿಸುತ್ತಿದ್ದ ಗೋಪಿಗೆ ಆ ಕ್ಷಣದಲ್ಲಿ ಏನು ತಿಳಿಯದೆ ಕೊನೆಗೆ ಜೋರಾಗಿ ಕಿರುಚಿದ್ದಾನೆ. ಮೊದಲೇ ಹೊಸ ಆಪಾರ್ಟುಮೆಂಟು ಅಲ್ಲೊಂದು ಇಲ್ಲೊಂದು ಪ್ಲಾಟುಗಳಿಗೆ ಮಾತ್ರ ಜನ ವಸತಿಗೆ ಬಂದಿದ್ದಾರೆ. ಜೊತೆಗೆ ಪ್ಲಾಟುಗಳಲ್ಲಿ ಎದುರುಮನೆಯವರಿಗೋ ಅಥವಾ ಪಕ್ಕದ ಮನೆಯವರಿಗೋ ಏನಾದರೂ ತೊಂದರೆಯಾದರೂ ಗಮನಿಸುವುದಿಲ್ಲ. ಪಕ್ಕದಲ್ಲಿ ಭೂಕಂಪವಾದರೆ ಅಥವ ಎದುರುಮನೆಯಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದು ಇವರಿಗೆ ತಿಳಿಯುವುದು ಮರುದಿನ ಪೇಪರ್ ನ್ಯೂಸಿನಲ್ಲೋ ಅಥವಾ ಸಂಜೆ ಟಿ.ವಿ. ನ್ಯೂಸ್ ನಲ್ಲಿ ನೋಡಿದಾಗ ಮಾತ್ರ. ಅಂತದ್ದರಲ್ಲಿ ಇವನು ಕೂಗಿದರೆ, ಕಿರುಚಿದರೆ ಬಂದು ನೋಡುತ್ತಾರೆಯೇ? ಕೊನೆಗೆ ಗೋಪಿಗೆ ಇನ್ನು ಕರೆಂಟು ಬರುವವರೆಗೂ ನಾನಿಲ್ಲಿ ಬಂಧಿಯಾಗಿರುವುದು ಖಚಿತವೆನಿಸಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ವಿದ್ಯುತ್ ಕೇಳಬೇಕೆ! ಲೋಡ್ ಸೆಡ್ಡಿಂಗ್ ಅನ್ನೋ ಹೆಸರಿನಲ್ಲಿ ಯಾವಾಗ ಬೇಕೋ ಆವಾಗ ವಿದ್ಯುತ್ ತೆಗೆದುಹಾಕುತ್ತಾರೆ.

ಅವತ್ತು ೨ ಗಂಟೆಗಿಂತ ಹೆಚ್ಚಾಗಿ ಕರೆಂಟು ಇರಲಿಲ್ಲವಾದ್ದರಿಂದ ಗೋಪಿಗೆ ಜೈಲಿನಲ್ಲಿದ್ದೇನೆ ಎನ್ನುವ ಭ್ರಮೆಗೆ ಒಳಗಾಗಿ ಮಂಕಾಗಿ ಹೆದರೆಕೆಗೆ ಅಲ್ಲೇ ನಿದ್ದೆ ಮಾಡಿದ್ದಾನೆ. ಎಚ್ಚರವಾದಾಗ ಕರೆಂಟು ಬಂದು ಲಿಫ್ಟ್ ಕೆಳಹೋಗುವುದು ಅರಿವಾಗಿದೆ. ಕೊನೆಗೆ ಅವನು ಲಿಫ್ಟಿನಲ್ಲಿ ೨ ಗಂಟೆ ಬಂದಿಯಾಗಿದ್ದು ಪ್ಲಾಟಿನವರಿಗೆಲ್ಲಾ ಗೊತ್ತಾಗಿ ಆಶ್ಚರ್ಯವಾಯಿತಂತೆ!

ಈ ಮಧ್ಯೆ ಹುಡುಗ ಗೋಪಿ ಲಿಫ್ಟಿನಲ್ಲಿ ಸಿಕ್ಕಿಹಾಕಿಕೊಂಡನಲ್ಲ ಅದೇ ಸಮಯಕ್ಕೆ ಆ ಪ್ಲಾಟಿನ ವಾಚ್ ಮೆನ್ ಗೋಪಿ ತಂದಿದ್ದ ಟೂ ವೀಲರನ್ನು ಅದೇ ಫ್ಲಾಟಿನವರ ಕಾರಿಗೆ ದಾರಿ ಮಾಡಿ ಕೊಡಲು ತೆಗೆದು ಪಕ್ಕಕ್ಕೆ ಕಾಣದ ಜಾಗಕ್ಕೆ ನಿಲ್ಲಿಸಿದ್ದಾನೆ ಬೇರೆ ಹುಡುಗರು ಇಲ್ಲಿ ಬಂದು ನೋಡಿದಾಗ ಬೈಕ್ ಕಾಣಸಿದದಿರುವುದು ನೋಡಿ ಗೋಪಿ ಇಲ್ಲಿಲ್ಲವೆಂದುಕೊಂಡು ಹೋಗಿದ್ದಾರೆ.

ಅಲ್ಲಿಂದ ಹೊರಬಂದರೂ ಅವನಿಗೆ ಆ ಭ್ರಮೆಯಿಂದ ಹೊರಬರಲಿಕ್ಕೆ ಸುಮಾರು ಹೊತ್ತೇ ಆಗಿದೆ. ನಂತರ ಪಬ್ಲಿಕ್ ಕಾಯಿನ್ ಬೂತಿನಿಂದ ತನ್ನ ಬಾಲ್ಡಿ ಮಂಜನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ. ಬೈಕನ್ನು ತನ್ನ ಓನರಿಗೆ ತಲುಪಿಸಿ ಮೇಲೆ ಅವನಿಗೆ ಯಾವುದೋ ಹುಲಿ ಗುಹೆಯಿಂದ ಹೊರಬಂದಂತೆ ಅನ್ನಿಸಿತಂತೆ.

ಇದು ಯಾವುದು ತಿಳಿಯದೆ ಹಿಂದಿನ ದಿನ ನಾನು ಸೇರಿದಂತೆ ರಂಗ, ಅವನ ಹುಡುಗರು ಸೇರಿದಂತೆ ಎಲ್ಲರೂ ಗೋಪಿಯ ಹಿಂದಿನ ತರಲೆ ಆಟ, ಬೇಜವಾಬ್ದಾರಿ ಗುಣ, ಸ್ವಲ್ಪ ಹುಡುಗು ಬುದ್ದಿಯ ಸ್ವಭಾವಕ್ಕೆ ತಾಳೆ ಹಾಕಿ, ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಆ ಸಮಯದಲ್ಲಿ ಪ್ರತಿಯೊಬ್ಬರೂ ಆಡಿದ ಮಾತುಗಳ ಪ್ರಭಾವಕ್ಕೆ ಸಿಲುಕಿ, ಒಂದು ರೀತಿಯ ಸಮೂಹ ಸನ್ನಿಗೆ ಒಳಗಾಗಿ ಗೋಪಿಯ ವಿರುದ್ಧದ ಭ್ರಮೆಗೊಳಗಾಗಿದ್ದು ನಿಜ.
ಶಿವು.ಕೆ.

19 comments:

ರಾಜೇಶ್ ನಾಯ್ಕ said...

ಪಾಪ ಗೋಪಿ!

Ittigecement said...

ಶಿವು ಸರ್..ಮನ ಮುಟ್ಟುವಂತೆ ಬರೆದಿದ್ದೀರಿ. ನಾನೂ ಇಂತಹ ಒಂದು ಪ್ರಸಂಗದಲ್ಲಿ ಗೋಪಿಯಾಗಿದ್ದೆ. ಹಾಗೆ ಕೆಲಸಕೂಡ ಕಳೆದು ಕೊಳ್ಳುವ ಪರಿಸ್ಥಿತಿ ಬಂದಿತ್ತು. ಬಹಳ ಬೇಸರ ಅಗುತ್ತದೆ. ನಮ್ಮ ಪ್ರಾಮಾಣಿಕತೆ ನಾವೇ ಸಾಬೀತು ಪಡಿಸುವ ಸಂದರ್ಭ ಯಾರಿಗೂ ಬರಬಾರದು. ತುಂಬಾ ಚೆನ್ನಾಗಿ ಬರೆದಿದ್ದೀರಿ..

ಸುಧೇಶ್ ಶೆಟ್ಟಿ said...

ಶಿವು ಅವರೇ...
ತು೦ಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮದು ಆತ್ಮೀಯವಾದ ಶೈಲಿ. ಇ೦ತಹ ಅನುಭವಗಳನ್ನು ನಮ್ಮೊ೦ದಿಗೆ ಹೀಗೆ ಹ೦ಚಿಕೊಳ್ಳುತ್ತಿರಿ.

ಇ೦ಡೆ೦ಟ್ ಕಟ್ಟುವುದು ಅ೦ದರೇನು?

shivu.k said...

ರಾಜೇಶ್ ನಾಯ್ಕ ಸಾರ್, ಪ್ರಕಾಶ್ ಹೆಗಡೆ ಸಾರ್, ಮತ್ತು ಸುಧೇಶ್ ಶೆಟ್ಟಿ ಸಾರ್,
ನಿಮ್ಮೆಲ್ಲರ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಈ ವಿಷಯದ ಮತ್ತಷ್ಟು ಲೇಖನಗಳನ್ನು ಬರೆಯುತ್ತಿದ್ದೇನೆ. ಮುಂದಿನ ಬಾರಿ ಬ್ಲಾಗಿಗೆ ಹಾಕುತ್ತೇನೆ. ಆಗಲೂ ಹೀಗೆ ಬಂದು ಪ್ರತಿಕ್ರಿಯಿಸುತ್ತೀರೆಂದು ಬಯಸುತ್ತೇನೆ.
ಸುಧೇಶ್ ಸಾರ್, ನಾವು ನಾಳೆ ಬೆಳಿಗ್ಗೆ ನಿಮ್ಮ ಮನೆಗಳಿಗೆಲ್ಲಾ ದಿನಪತ್ರಿಕೆ ಕಳುಹಿಸಬೇಕೆಂದರೆ ಇವತ್ತು ಎಲ್ಲಾ ದಿನಪತ್ರಿಕೆಗಳ ಕಛೇರಿಗೆ ಹೋಗಿ , ನಮಗೆ ನಾಳೆ ಎಷ್ಟು ಪತ್ರಿಕೆಗಳು ಬೇಕೋ ಅಷ್ಟು ಹಣವನ್ನು ಮುಂಗಡವಾಗಿ ಕಟ್ಟಬೇಕು ಇದಕ್ಕೆ ಇಂಡೆಂಟ್ ಕಟ್ಟುವುದು ಅನ್ನುತ್ತಾರೆ.

ಪಲ್ಲವಿ ಎಸ್‌. said...

ಸೊಗಸಾದ ಬರಹ ಶಿವು,

ಓದಿದ ನಂತರ ನಂಗೊಂಚೂರು ಪಾಪಪ್ರಜ್ಞೆ ಕಾಡಿದ್ದು ಸುಳ್ಳಲ್ಲ. ಎಷ್ಟೋ ಸಾರಿ ನಾನು ಕೂಡಾ ಪೇಪರ್‌ ಏಜೆಂಟರ ಮೇಲೆ, ಹಂಚುವ ಹುಡುಗರ ಮೇಲೆ ಎಗರಾಡಿದ್ದೇನೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ, ದುಡ್ಡು ಪಡೆಯಲು ಮಾತ್ರ ಬಂದುಬಿಡುತ್ತೀರಿ ಅಂತ ಬೈದಿದ್ದೇನೆ. ಆದರೆ, ಈ ವೃತ್ತಿಯ ಹಿಂದೆ ಇಷ್ಟೆಲ್ಲ ಸಮಸ್ಯೆಗಳಿರುತ್ತವೆ ಎಂಬುದು ನಿಮ್ಮ ಬರಹ ಓದಿದ ನಂತರವಷ್ಟೇ ಗೊತ್ತಾಯಿತು. ನಿಮ್ಮ ಮೂಲಕ ಅವರಿಗೆಲ್ಲ ನಾನು ಕ್ಷಮೆ ಕೇಳುತ್ತೇನೆ. ಇನ್ನೊಮ್ಮೆ ಖಂಡಿತ ಅವರನ್ನು ಬೈಯಲು ಹೋಗುವುದಿಲ್ಲ. ಪ್ರಾಮಿಸ್‌.

ಚೆಂದದ ಬರಹ. ನಿಮ್ಮ ಅನುಭವದ ಇನ್ನಷ್ಟು ಘಟನೆಗಳು ಹೊರಬರಲಿ. ಚಿತ್ರ ಸಹಿತ ಆಗಿದ್ದರೆ ಇನ್ನೂ ಉತ್ತಮ.

- ಪಲ್ಲವಿ ಎಸ್‌.

sunaath said...

ಶಿವು,
ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ಹೋಗುವ ಸುಂದರ ಲೇಖನ. ಹಾಗಂತ narrationದಲ್ಲಿ ಅವಸರವಿಲ್ಲ.
ಒಂದು ಸುಂದರ ಪತ್ತೇದಾರಿ ಕತೆಯನ್ನು ಓದಿದ ಅನುಭವವಾಗುತ್ತದೆ.

shivu.k said...

ಸುನಾಥ್ ಸಾರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹೀಗೆ ಬರುತ್ತಿರಿ. ನೀವು ಬಂದಾಗ ನಿರಾಸೆಗೊಳಿಸಲಾರೆನೆಂದು ಭರವಸೆಯನ್ನು ಕೊಡುತ್ತೇನೆ.

ಹರೀಶ ಮಾಂಬಾಡಿ said...

ಹಲವು ಬಾರಿ ಪೇಪರ್ ಸರಿಯಾದ ಸಮಯಕ್ಕೆ ಬಾರದೇ ಇದ್ದಾಗ ಕೋಪಿಸಿದ್ದುಂಟು...ಆದರೆ ಹಂಚುವ ಹುಡುಗರ ಮುಖ ಕಂಡಾಗ ಅದು ತಣ್ಣಗಾಗುತ್ತದೆ. ಪೇಪರ್ ಬಂಡಲ್ ಜೊತೆಯೇ ದಿನಾ ಮನೆಗೆ ಬರುವ ನನಗೆ ಅದರ ಕಷ್ಟ, ಕೊರತೆ ಗೊತ್ತು ಸ್ವಾಮಿ..
ನಿಮ್ಮ ಬರೆಹ ಚೆನ್ನಾಗಿದೆ..

ಅಪ್ರಮೇಯ..... said...

ಚೆನ್ನಾಗಿದೆ ... ಹೀಗೆ ಮುಂದುವರಿಸಿ :)




ಹಾಗೆ ನಿಮ್ಮ ಬ್ಲಾಗ್ಗ್ ಲಿಂಕ್ ಅನ್ನು ಅನುಮತಿ ಇಲ್ಲದೆ ನನ್ನ ಬ್ಲಾಗ್ ನಲ್ಲಿ ಸೇರಿಸಿಕೊಂಡಿದ್ದಕ್ಕೆ....ಕ್ಷಮಿಸಿ :)

ಚಿತ್ರಾ ಸಂತೋಷ್ said...

ಶಿವಣ್ಣ...ಮಂಜಣ್ಣನ ಕೂದಲು ಹೋಗಿದ್ದಕ್ಕೆ ತಮಾಷೆ ಯಾಕ್ ಮಾಡ್ತೀರಾ? ಅಂದಹಾಗೆ ಪೇಪರ್ ವಿಷಯದಲ್ಲಿ ನಾನಂತೂ ಪಕ್ಕಾ. ನನಗೆ ಬೆಳಿಗ್ಗೆ 8.30ಗೆ ಆಫೀಸ್ಗೆ ಬಂದಾಗ ನಮ್ಮ ಸೆಕ್ಯೂರಿಟಿ ಪೇಪರ್ ತಂದಿಡದಿದ್ರೆ..ದಬಾಯಿಸಿ ಬಿಡ್ತೀನಿ. ಬೆಳಿಗ್ಗೆ ಬೇಗ ಬಂದು ಪೇಪರ್ ಓದದೆ ಬೇರೆ ಕೆಲ್ಸ ಮಾಡಕ್ಕೇ ಆಗಲ್ಲ. ಭಾನುವಾರ ರಜಾದಿನ ಆದ್ರೂ 6.30 ಗೆ ದ್ದು ಪೇಪರ್ ಓದೋ ಚಾಳಿ ನಂಗೆ..ಒಳ್ಳೆ ಬರಹ.
-ಚಿತ್ರಾ

Harisha - ಹರೀಶ said...

ಶಿವು, ನನಗೂ ಒಳ್ಳೆ ಸಸ್ಪೆನ್ಸ್ ಸ್ಟೋರಿ ಓದಿದ ಅನುಭವವಾಯಿತು.. ಚೆಂದದ ನಿರೂಪಣೆ

shivu.k said...

ಹರೀಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Unknown said...

Hi friend,

i too doing blogging in a blogspot.com in kannada, is it any option is there where i can write directly in kannada.. coz whenever i post a post typed in nudi, it will not work in some systems..
is it any option is there

http://santhvana.blogspot.com

Harisha - ಹರೀಶ said...

ರಾಜ್, ಈ ಪುಟವನ್ನು ಉಪಯೋಗಿಸಿ. ಇದಕ್ಕೆ ಇಂಟರ್ನೆಟ್ ಅವಶ್ಯ.

ನೀವು ನಿಮ್ಮ ಕಂಪ್ಯೂಟರ್‍ನಲ್ಲಿಯೇ ಬರೆಯುವುದಾದರೆ ಬರಹ ಉಪಯೋಗಿಸಿ.

Annapoorna Daithota said...

ಬಹಳ ಕೌತುಕವಾಗಿದೆ.
ಎಷ್ಟು ಅಂದ್ರೆ, ಪತ್ತೆದಾರಿ ಕಥೆ ಓದ್ಬೇಕಾದ್ರೆ, ಕೊನೆ ಹೇಗಾಗುತ್ತೆ ಅಂತ ಮೊದ್ಲು ಓದಿದ್ರೆ ಹೇಗೆ ಅನ್ನೋ ತವಕ ಕಾಡುತ್ತಲ್ಲಾ, ಹಾಗಿತ್ತು :)

ಹಳ್ಳಿ ಬಸವ said...

Tumba chennagi baradiddeeri sir

ಜಲನಯನ said...

ನಲ್ಮೆಯ ಶಿವು,
ಈ ಮಧ್ಯೆ ಬ್ಲಾಗಿಸುತ್ತಿಲ್ಲವೇ,,,??
ನಿಮ್ಮ ಬ್ಲಾಗನ್ನು ಮೃದುಮನಸ್ಸಿನ ಮೂಲಕ ಗಮನಿಸಿದೆ, ಚೆನ್ನಾಗಿ ಬ್ಲಾಗಿಸುತ್ತೀರ....ಆದ್ರೆ..ಈಮಧ್ಯೆ....ಏನಾಯ್ತು..?
ಬೆಂಗಳೂರಿಗೆ ನಿಮ್ಮ ಮೂಲಕ ನಮ್ಮ ಕನೆಕ್ಶನ್ ಇರುತ್ತೆ ಬ್ಲಾಗಿಸುತ್ತಿರಿ...
ನಾನೂ ಬೆಂಗಳೂರು ಜಿಲ್ಲೆಯವನೇ (ಹೊಸಕೋಟೆಯ ನಂದಗುಡಿ ಬಳಿ ನನ್ನ ಹುಟ್ಟೂರು).
ಡಾ. ಆಜಾದ್ (ಈಗ ಕುವೈತಿನಲ್ಲಿ)

basu kannur said...

katha vastu nirupane tumba chennagi moodi bandide

basu kannur

jaya shetty said...

Reka chitragalu chennagide and nayiya adikaprasangatanavu ,,,,,,,,,,,,,